ಲಖಿಂಪುರ್ ಖೇರಿ ರೈತರ ಹತ್ಯಾಕಾಂಡ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನವೆಂಬರ್ 15 ಕ್ಕೆ ಮುಂದೂಡಲಾಗಿದೆ. ಉತ್ತರ ಪ್ರದೇಶ ಸರ್ಕಾರದ ಮನವಿಯ ಮೇರೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಮುಂದಿನ ವಾರಕ್ಕೆ ಪ್ರಕರಣವನ್ನು ಮುಂದೂಡಿದೆ.
ಉತ್ತರ ಪ್ರದೇಶ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ನ್ಯಾಯಾಲಯದಿಂದ ಕಾಲಾವಕಾಶ ಕೋರಿ, ಸೋಮವಾರದವರೆಗೆ ನಮಗೆ ಸಮಯ ಕೊಡಿ, ನಾವು ಪ್ರಕರಣದಲ್ಲಿ ಕೆಲಸ ಮಾಡುತ್ತಿದ್ದೇವೆ. ಅದನ್ನು ಬಹುತೇಕ ಪೂರ್ಣಗೊಳಿಸಿದ್ದೇವೆ ಎಂದು ಪೀಠಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಿಐಎಲ್ ಅನ್ನು ನವೆಂಬರ್ 15 ಕ್ಕೆ ಮುಂದೂಡಲಾಗಿದೆ.
ನವೆಂಬರ್ 8 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿರುವ ವರದಿ ಬಗ್ಗೆ ನಾವು ನಿರೀಕ್ಷಿಸಿದಂತೆ ತನಿಖೆ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಕಳೆದ ಮೂರು ಬಾರಿಯ ವಿಚಾರಣೆಯಲ್ಲಿಯೂ ಯುಪಿ ಸರ್ಕಾರದ ತನಿಖೆ, ವರದಿ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸುತ್ತಿದೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಯುಪಿ ಸರ್ಕಾರದ ಬಗ್ಗೆ ಅಸಮಾಧಾನ, ಸ್ವತಂತ್ರ ಮೇಲ್ವಿಚಾರಣೆಗೆ ಸುಪ್ರೀಂ ಒಲವು
ಪ್ರಕರಣದಲ್ಲಿ ಸ್ವತಂತ್ರ ಮೇಲ್ವಿಚಾರಣೆಗೆ ಆದೇಶಿಸುವುದಾಗಿ ತಿಳಿಸಿದ್ದ ನ್ಯಾಯಪೀಠವು, “ಎರಡು ಎಫ್‌ಐಆರ್‌ಗಳ ಸಾಕ್ಷ್ಯಗಳನ್ನು ಪ್ರತ್ಯೇಕವಾಗಿ ದಾಖಲಿಸಬೇಕು. ಹೀಗಾಗಿ ದಿನನಿತ್ಯದ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ಬೇರೆ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರನ್ನು ನೇಮಿಸಲು ನಾವು ಒಲವು ತೋರುತ್ತೇವೆ. ನಿಮ್ಮ ರಾಜ್ಯ ಸರ್ಕಾರದ ನ್ಯಾಯಾಧೀಶರು ನಮಗೆ ಬೇಡ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿ ರಂಜೀತ್ ಸಿಂಗ್ ಅಥವಾ ನ್ಯಾಯಮೂರ್ತಿ ರಾಕೇಶ್ ಕುಮಾರ್ ಬಗ್ಗೆ ಯೋಚಿಸುತ್ತೇವೆ” ಎಂದು ನ. 8 ರಂದು ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿತ್ತು.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಆಶಿಶ್ ಮಿಶ್ರಾ, ಅಂಕಿತ್ ದಾಸ್ ಗನ್‌ಗಳಿಂದ ಗುಂಡು ಹಾರಿಸಲಾಗಿದೆ- ಪ್ರಯೋಗಾಲಯದ ವರದಿ


