ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ರಾಜೀನಾಮೆ ನೀಡಬೇಕು, ಆತನ ಮಗನನ್ನು ತಕ್ಷಣ ಬಂಧಿಸಬೇಕು ಆಗ ನಮಗೆ ನ್ಯಾಯ ಸಿಗುತ್ತದೆ ಎಂಬುದು ಲಖಿಂಪುರ್ ಕೇರಿ ಹತ್ಯಾಕಾಂಡದಲ್ಲಿ ಹತ್ಯೆಗೀಡಾದ 19 ವರ್ಷದ ಲವ್‌ಪ್ರೀತ್ ಸಿಂಗ್ ಅವರ ತಂದೆ ಸತ್ನಾಮ್ ಸಿಂಗ್ ಮನವಿ.
“ಸರ್ಕಾರಗಳು ನೀಡುವ ಪರಿಹಾರವು ನನ್ನ ಮಗನನ್ನು ಮರಳಿ ತರುವುದಿಲ್ಲ. ಆತನನ್ನು ಕೊಲೆ ಮಾಡಿದ ಎಲ್ಲರನ್ನು ಬಂಧಿಸಿದಾಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ. ಸರ್ಕಾರದಿಂದ ಪರಿಹಾರ ಘೋಷಿಸಿದ ಮಾತ್ರಕ್ಕೆ ತನ್ನ ಮಗನ ಹಂತಕರು ಮುಕ್ತವಾಗಿ ತಿರುಗಾಡಲು ಯಾರಾದರೂ ಅನುಮತಿ ನೀಡಬಹುದೇ?” ಎಂದು ಮಗನ ಸಾವಿನಿಂದ ನೊಂದಿರುವ ಸತ್ನಾಮ್ ಸಿಂಗ್ ಪ್ರಶ್ನಿಸಿದ್ದಾರೆ.
ಸತ್ನಾಮ್ ಸಿಂಗ್ ಮತ್ತು ಸತ್ವಿಂದರ್ ಕೌರ್ ಅವರ ಮೂವರು ಮಕ್ಕಳಲ್ಲಿ ಲವ್‌ಪ್ರೀತ್ ಸಿಂಗ್ ಹಿರಿಯರು. “ಲವ್‌ಪ್ರೀತ್ ಸಿಂಗ್ ಅವರ ಒಬ್ಬನೇ ಮಗ. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಕೆನಡಾಕ್ಕೆ ಹೋಗಲು ಅಂತಾರಾಷ್ಟ್ರೀಯ ಇಂಗ್ಲಿಷ್ ಭಾಷಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಅಕ್ಟೋಬರ್ 3 ರಂದು ಕುಟುಂಬದ ಕನಸುಗಳನ್ನು ಕನಸಾಗಿಯೇ ಉಳಿಯುವಂತೆ ಈ ಘಟನೆ ಮಾಡಿದೆ” ಎಂದು ಹಳ್ಳಿಯ ಪ್ರಧಾನ ಸುಖದೇವ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡದ ಆರೋಪಿ ಆಶಿಶ್ ಮಿಶ್ರಾ ನೇಪಾಳಕ್ಕೆ ಪರಾರಿಯಾಗಿದ್ದಾನೆ – ರೈತರ ಆರೋಪ
” ಲವ್‌ಪ್ರೀತ್ ಸಿಂಗ್ ಸರಳ ಮತ್ತು ಸ್ನೇಹಪರ ಹುಡುಗ. ಎಲ್ಲರಿಗೂ ಎಲ್ಲಾ ಸಮಯದಲ್ಲಿಯೂ ಸಹಾಯ ಮಾಡಲು ಸಿದ್ಧರಾಗಿದ್ದರು. ಅವರು ರೈತರ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದರು. ಅಕ್ಟೋಬರ್ 3 ರಂದು, ಹಳ್ಳಿಯ ಇತರ ಕೆಲವು ಯುವಕರೊಂದಿಗೆ ಟಿಕುನಿಯಾ ಪಟ್ಟಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಹೋಗಿದ್ದರು. ಆದರೆ, ಸಚಿವರ ಮಗನ ಕಾರು ಹರಿದು ಕೊಲೆಯಾಗಿದ್ದಾರೆ” ಎಂದು ಹಳ್ಳಿಯ ಪ್ರಧಾನ್ ಮಾಹಿತಿ ನೀಡಿದ್ದಾರೆ.
ಮಗನ ಸಾವಿನ ನಂತರ ಗಂಭೀರ ಸ್ಥಿತಿಯಲ್ಲಿದ್ದ ಲವ್‌ಪ್ರೀತ್ ತಾಯಿಗೆ ಸರಿಯಾದ ವೈದ್ಯಕೀಯ ಆರೈಕೆಯನ್ನು ತಕ್ಷಣವೇ ನೀಡುವಂತೆ ಯುಪಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹಿಂದಿನ ದಿನವೇ ಸೂಚಿಸಿತ್ತು.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಭೇಟಿ ವಿರೋಧಿಸಿ ಭಾನುವಾರ ಲಖಿಂಪುರ್ ಖೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ, ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ರೈತರ ಮೇಲೆ ಕಾರು ಹರಿಸಿ ಹತ್ಯೆ ಮಾಡಿದವರಲ್ಲಿ 19 ವರ್ಷದ ಯುವ ರೈತ ಲವ್‌ಪ್ರೀತ್ ಸಿಂಗ್ ಕೂಡ ಸೇರಿದ್ದಾರೆ. ವೇಗವಾಗಿ ನುಗ್ಗಿದ ಕಾರಿಗೆ ಸಿಲುಕಿ, ಗಂಭೀರವಾಗಿ ಗಾಯಗೊಂಡಿದ್ದವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಈ ವೇಳೆ ಆಸ್ಪತ್ರೆಗೆ ಬರುವಂತೆ ತಮ್ಮ ತಂದೆಗೆ ಕರೆ ಮಾಡಿ ತಿಳಿಸಿದ್ದರು. ಆದರೆ, ಮನೆಯವರು ಲಖಿಂಪುರ್ ಆಸ್ಪತ್ರೆಗೆ ತೆರುವ ವೇಳೆಗೆ ಲವ್‌ಪ್ರೀತ್ ಸಿಂಗ್ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಆಶಿಶ್ ಮಿಶ್ರಾ ತಪ್ಪಿಸಿಕೊಳ್ಳಲು ಯುಪಿ ಪೊಲೀಸರೇ ಅನುಕೂಲ ಮಾಡಿಕೊಟ್ಟರು- ಎಸ್‌ಕೆಎಂ


