ಲಖಿಂಪುರ್ ಖೇರಿ ಹತ್ಯಾಕಾಂಡ ವಿರೋಧಿಸಿ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಕರೆ ನೀಡಿದ್ದ ಮಹಾರಾಷ್ಟ್ರ ಬಂದ್ ಹಿನ್ನೆಲೆಯಲ್ಲಿ ಕೆಲವು ಸ್ಥಳಗಳಲ್ಲಿ ಕಲ್ಲು ತೂರಾಟ ನಡೆದ ಬಳಿಕ ಮುಂಬೈನಾದ್ಯಂತ ಬಸ್ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪುಣೆಯ ಎಪಿಎಂಸಿ ಮತ್ತು ನಾಸಿಕ್‌ನ ಈರುಳ್ಳಿ ವ್ಯಾಪಾರ ಮಾರುಕಟ್ಟೆ ಸೇರಿದಂತೆ ರಾಜ್ಯಾದ್ಯಂತ ಹಲವಾರು ಅಂಗಡಿಗಳು ಮತ್ತು ಸಂಸ್ಥೆಗಳು ಒಟ್ಟಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದವು. ಸುಮಾರು 3 ಗಂಟೆ ಬಳಿಕ ಮೊಬೈಲ್ ರಿಪೇರಿಗಾಗಿ ಕೆಲವು ಸಣ್ಣ ಅಂಗಡಿಗಳು, ಬಟ್ಟೆ ಅಂಗಡಿಗಳು ಮತ್ತು ಸಣ್ಣ ಸಣ್ಣ ಹೋಟೆಲ್‌ಗಳು ಭಾಗಶಃ ತೆರೆಯಲ್ಪಟ್ಟಿವೆ.
ಧಾರಾವಿ, ಮಂಕುರ್ಡ್, ಶಿವಾಜಿ ನಗರ, ಚಾರ್ಕೋಪ್, ಓಶಿವರಾ, ದಿಯೊನಾರ್ ಮತ್ತು ಇನಾರ್ಬಿಟ್ ಮಾಲ್ ಬಳಿ ನಿನ್ನೆ ಮಧ್ಯರಾತ್ರಿಯಿಂದ ಇಂದು ಬೆಳಿಗ್ಗೆವರಗೆ ಎಂಟು ಸರ್ಕಾರಿ ಮತ್ತು ಒಂದು ಗುತ್ತಿಗೆ ಪಡೆದ ಬಸ್ ಸೇರಿ ಒಟ್ಟು 9 ಬಸ್‌ಗಳು ಧ್ವಂಸವಾಗಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಲಿಖಿಂಪುರ್: ಪ್ರಧಾನ ಆರೋಪಿ ಆಶಿಶ್ ಮಿಶ್ರಾನಿಗೆ 14 ದಿನಗಳ ನ್ಯಾಯಾಂಗ ಬಂಧನ
ಶಿವಸೇನಾ ಕಾರ್ಯಕರ್ತರು ಮುಂಬೈನಾದ್ಯಂತ ಮತ್ತು ಮಹಾರಾಷ್ಟ್ರದ ಅಹ್ಮದ್ ನಗರ, ಔರಂಗಾಬಾದ್, ಕೊಲ್ಹಾಪುರ, ಸೊಲ್ಲಾಪುರ ಮತ್ತು ನಾಗ್ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಎನ್‌ಸಿಪಿ ನಾಯಕ ಮತ್ತು ಸಚಿವ ನವಾಬ್ ಮಲಿಕ್ ಮುಂಬೈನಲ್ಲಿ ಪಕ್ಷದ ನಾಯಕರ ಜೊತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಕಾರ್ಯಕರ್ತರಿಗೆ ಕಲ್ಲು ತೂರಾಟ ಮತ್ತು ಹಿಂಸಾಚಾರದಲ್ಲಿ ತೊಡಗಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.

ಇನ್ನು ಮಹಾರಾಷ್ಟ್ರ ಬಂದ್ 100% ಯಶಸ್ವಿಯಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ. ಜನರು ತಾವಾಗಿಯೇ ಬಮದು ಹೃದಯಪೂರ್ವಕವಾಗಿ ಬಂದ್‌ನಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದ್ದಾರೆ. ಕಲ್ಲು ತೂರಾಟ, ಹಿಂಸಾಚಾರದ ಕೆಲವು ಘಟನೆಗಳಿಗೆ ಪ್ರತಿಕ್ರಿಯಿಸಿರುವ ಅವರು, “ಪ್ರಪಂಚದಾದ್ಯಂತ ಪ್ರತಿಭಟನೆಯ ಸಮಯದಲ್ಲಿ ಇಂತಹ ಸಣ್ಣ ಘಟನೆಗಳು ನಡೆಯುತ್ತವೆ” ಎಂದಿದ್ದಾರೆ.
लखिमपूर खेरी येथील शेतकऱ्यांना क्रूरपणे गाडीखाली चिरडणाऱ्या आधुनिक जनरल डायर योगी सरकारच्या निषेधार्थ खा. बाळूभाऊ धानोरकर यांच्या नेतृत्वाखाली चंद्रपूर जिल्ह्यात बंद पाळत रॅली काढुन, आंदोलन करण्यात आले.#महाराष्ट्र_बंद #MaharashtraBandh pic.twitter.com/GeN4TcazZV
— Maharashtra Congress (@INCMaharashtra) October 11, 2021
ಬಿಜೆಪಿ ನಾಯಕ, ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್, ಹೈಕೋರ್ಟ್‌ಗೆ ಬಂದ್ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ. “ಈ ಹಿಂದೆ ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್ ಇಂತಹ ಬಂದ್‌ಗಳನ್ನು ನಿಷೇಧಿಸಿ, ಶಿವಸೇನೆಗೆ ದಂಡ ವಿಧಿಸಿತ್ತು. ಈಗಲೂ ಹೈಕೋರ್ಟ್ ಬಂದ್ ಬಗ್ಗೆ ಗಮನ ಹರಿಸಬೇಕು” ಎಂದಿದ್ದಾರೆ.
ಅಕ್ಟೋಬರ್ 03 ರಂದು ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನೆ ಮುಗಿಸಿ ಹಿಂತಿರುಗುತ್ತಿದ್ದ ರೈತರ ಮೇಲೆ, ಒಕ್ಕೂಟ ಸರ್ಕಾರದ ಸಚಿವ ಅಜಯ್ ಮಿಶ್ರಾ ತೇನಿ ಅವರ ಪುತ್ರ ಆಶಿಶ್ ಮಿಶ್ರಾ ಕಾರು ಹರಿಸಿ 4 ರೈತರನ್ನು ಹತ್ಯೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಶಿಶ್ ಮಿಶ್ರಾರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ರಾಜಕಾರಣಿ ಎಂದರೆ ಫಾರ್ಚೂನರ್ ಕಾರನ್ನು ಯಾರ ಮೇಲಾದರೂ ಹರಿಸುವುದಲ್ಲ: ಯುಪಿ ಬಿಜೆಪಿ ಅಧ್ಯಕ್ಷ


