ಲಖಿಂಪುರ್ ಖೇರಿ ಹತ್ಯಾಕಾಂಡ ಪ್ರಕರಣದಲ್ಲಿ ಯಾವುದೇ ಒತ್ತಡದಿಂದ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಸಾಕ್ಷಿ ಸಿಕ್ಕ ಬಳಿಕ ಕ್ರಮ ಕೈಗೊಳ್ಳುತ್ತೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಹೇಳಿದ್ದಾರೆ.
ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಅವರ ಮಗ ಆಶಿಶ್ ಮಿಶ್ರಾರನ್ನು ಬಂಧಿಸುವಂತೆ ಪ್ರತಿಪಕ್ಷಗಳು ಆಗ್ರಹಿಸಿದ ಹಿನ್ನೆಲೆಯಲ್ಲಿ, ಹತ್ಯಾಕಾಂಡ ನಡೆದು ಐದು ದಿನಗಳ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ನಾಲ್ವರು ರೈತರು ಸೇರಿದಂತೆ ಎಂಟು ಜನರು ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ದುರದೃಷ್ಟಕರ ಎಂದಿರುವ ಅವರು, ಸರ್ಕಾರವು ಘಟನೆಯ ವಿವರಗಳನ್ನು ಆಳವಾಗಿ ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.
“ಕಾನೂನು ಪ್ರತಿಯೊಬ್ಬರಿಗೂ ಭದ್ರತೆ ನೀಡುವ ಭರವಸೆ ನೀಡುವಾಗ, ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಯಾವುದೇ ಸ್ಥಾನವಿಲ್ಲ. ಅವರು ಯಾರೇ ಆಗಿರಲಿ ಕಾನೂನು ಕೈಗೆ ತೆಗೆದುಕೊಳ್ಳುವ ಅಗತ್ಯವಿಲ್ಲ” ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಹತ್ಯಾಕಾಂಡ: ಆಶಿಶ್ ಮಿಶ್ರಾ ತಪ್ಪಿಸಿಕೊಳ್ಳಲು ಯುಪಿ ಪೊಲೀಸರೇ ಅನುಕೂಲ ಮಾಡಿಕೊಟ್ಟರು- ಎಸ್‌ಕೆಎಂ
ಈ ಪ್ರಕರಣದಲ್ಲಿ ಸಚಿವರ ಮಗ ಆಶಿಶ್ ಮಿಶ್ರಾ ಅವರನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪಕ್ಕೆ ಉತ್ತರಿಸಿರುವ ಆದಿತ್ಯನಾಥ್, “ಅಂತಹ ಯಾವುದೇ ವಿಡಿಯೋ ಇಲ್ಲ. ನಾವು ದೂರವಾಣಿ ಸಂಖ್ಯೆಗಳನ್ನು ನೀಡಿದ್ದೇವೆ. ಅಂತಹ ಯಾವುದಾದರೂ ಸಾಕ್ಷ್ಯಗಳು ಯಾರ ಬಳಿಯಾದರೂ ಇದ್ದರೇ, ಅವರು ಅದನ್ನು ಅಪ್ಲೋಡ್ ಮಾಡಬಹುದು. ಎಲ್ಲವೂ ಸ್ಪಷ್ಟವಾಗಿದೆ. ಯಾರೊಂದಿಗೂ ಅನ್ಯಾಯವಾಗುವುದಿಲ್ಲ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ. ಆದರೆ, ಯಾವುದೇ ಒತ್ತಡದಿಂದ ಯಾರ ಮೇಲೆಯೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದಿದ್ದಾರೆ.
“ಬಿಜೆಪಿ ಶಾಸಕರಾಗಿರಲಿ, ಪ್ರತಿಪಕ್ಷದ ಶಾಸಕರಾಗಿರಲಿ ಅಥವಾ ಯಾವುದೇ ಹುದ್ದೆಯಲ್ಲಿರುವವರಾಗಿರಲಿ. ನಾವು ಕ್ರಮ ಕೈಗೊಳ್ಳಲು ಎಂದಿಗೂ ಹಿಂಜರಿದಿಲ್ಲ. ಲಖಿಂಪುರ್ ಖೇರಿ ಘಟನೆಯಲ್ಲೂ ಸರ್ಕಾರ ಅದೇ ಕೆಲಸ ಮಾಡುತ್ತಿದೆ. ಸರ್ಕಾರದಿಂದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ)ಮತ್ತು ನ್ಯಾಯಾಂಗ ಆಯೋಗವನ್ನೂ ರಚಿಸಲಾಗಿದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸದ್ಯ ಈ ಪ್ರಕರಣದಲ್ಲಿ ಲುವಕುಶ್ ಮತ್ತು ಆಶಿಶ್ ಪಾಂಡೆ ಎಂಬುವವರನ್ನು ಬಂಧಿಸಲಾಗಿದ್ದು, ಪೊಲೀಸರು ಶುಕ್ರವಾರ ಸಚಿವರ ಪುತ್ರ ಆಶಿಶ್ ಮಿಶ್ರಾಗೆ ಸಮನ್ಸ್ ನೀಡಿದ್ದರೂ, ಅವರು ವಿಚಾರಣೆಗೆ ಹಾಜರಾಗಿಲ್ಲ.
ಇತ್ತ, ಆರೋಪಿಗಳನ್ನು ಇನ್ನು ಬಂಧಿಸಿರದ ಕುರಿತು ರೈತ ಸಂಘಟನೆ ಎಸ್‌ಕೆಎಂ ಆಕ್ರೋಶ ವ್ಯಕ್ತಪಡಿಸಿದೆ. ಘಟನೆ ನಡೆದು ಐದು ದಿನಗಳಾಗಿವೆ. ಆರೋಪಿ ಆಶಿಶ್ ಮಿಶ್ರಾ ರೈತರು ಕೊಲೆಯಾದ ಘಟನೆಯ ಸ್ಥಳದಲ್ಲಿ ಇರದಿದ್ದರೆ, ಬೇರೆ ಎಲ್ಲಿದ್ದರು ಎಂದು ಇದುವರೆಗೂ ಏಕೆ ಸಾಬೀತುಪಡಿಸಿಲ್ಲ ಎಂದು ರೈತರು ಪ್ರಶ್ನಿಸಿದ್ದಾರೆ.
ಲಖಿಂಪುರ್ ಖೇರಿ ಘಟನೆಯಲ್ಲಿ ಆಶಿಶ್ ಮಿಶ್ರಾ ಕೈವಾಡವಿಲ್ಲದಿದ್ದರೆ, ಆತನು ನೇಪಾಳಕ್ಕೆ ಏಕೆ ಓಡಿಹೋಗಿದ್ದಾನೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಶ್ನಿಸಿದೆ.
ಇದನ್ನೂ ಓದಿ: ರೈತರ ಹತ್ಯಾಕಾಂಡ: ಪರಿಹಾರ ನನ್ನ ಮಗನನ್ನು ವಾಪಸ್ ತರುವುದಿಲ್ಲ, ನಮಗೆ ನ್ಯಾಯ ಬೇಕು- ಮೃತರ ತಂದೆ


