ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ ಕೊರೊನಾ ನಿರ್ವಹಣೆ ಟೀಕಿಸಿದ್ದ ಮತ್ತು ಕೇಂದ್ರವು “ಜೈವಿಕ ಶಸ್ತ್ರಾಸ್ತ್ರ” ವನ್ನು ಬಳಸಿದೆ ಎಂದು ಆರೋಪಿಸಿದ್ದ ಲಕ್ಷದ್ವೀಪ ಚಲನಚಿತ್ರ ನಿರ್ಮಾಪಕಿ ಆಯೆಷಾ ಸುಲ್ತಾನಾ ವಿರುದ್ಧ ದೇಶದ್ರೋಹ ಮತ್ತು ದ್ವೇಷದ ಭಾಷಣ ಪ್ರಕರಣ ದಾಖಲಾಗಿದೆ.
ಕೊರೊನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಬಿಜೆಪಿ ಮುಖಂಡರ ದೂರಿನ ಅನ್ವಯ ನಿರ್ಮಾಪಕಿ ಆಯೆಷಾ ಸುಲ್ತಾನಾ ವಿರುದ್ಧ ಲಕ್ಷದ್ವೀಪ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.
ನಿರ್ಮಾಪಕಿ ಆಯೆಷಾ ಸುಲ್ತಾನಾ, ಪ್ರಾದೇಶಿಕ ಚಾನೆಲ್‌ನಲ್ಲಿ ಸುದ್ದಿ ಚರ್ಚೆಯ ಸಂದರ್ಭದಲ್ಲಿ, ಕೊರೊನಾ ನಿಯಂತ್ರಣಕ್ಕೆ ಪ್ರಫುಲ್ ಪಟೇಲ್ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಟೀಕಿಸಿದ್ದರು. ಕೇಂದ್ರವು ಲಕ್ಷದ್ವೀಪದ ವಿರುದ್ಧ “ಜೈವಿಕ ಶಸ್ತ್ರಾಸ್ತ್ರ” ವನ್ನು ಬಳಸಿದೆ ಎಂದು ಆರೋಪಿಸಿದ್ದರು.
“ಲಕ್ಷದ್ವೀಪದಲ್ಲಿ ಕೊರೊನಾ ಪ್ರಕರಣಗಳು ಶೂನ್ಯವಾಗಿದ್ದವು. ಈಗ ಪ್ರತಿದಿನ 100 ಪ್ರಕರಣಗಳನ್ನು ವರದಿ ಮಾಡುತ್ತಿದೆ. ಕೇಂದ್ರ ಸರ್ಕಾರವು “ಜೈವಿಕ ಶಸ್ತ್ರಾಸ್ತ್ರ” ಬಳಸುತ್ತಿದೆ ಎಂದು ನಾನು ಇದನ್ನು ಸ್ಪಷ್ಟವಾಗಿ ಹೇಳಬಲ್ಲೆ” ಎಂದು ಅವರು ಮಲಯಾಳಂನಲ್ಲಿ ಹೇಳಿದ್ದರು.
ಇದನ್ನೂ ಓದಿ: ಲಸಿಕೆಗಾಗಿ ಆನ್‌ಲೈನ್ ನೋಂದಣಿ: ಇಂಟರ್‌ನೆಟ್ ಇಲ್ಲದವರಿಗೂ ಬದುಕುವ ಹಕ್ಕಿದೆ ಎಂದ ರಾಹುಲ್ ಗಾಂಧಿ
ಆಯೆಷಾ ಹೇಳಿಕೆಯಿಂದಾಗಿ ಬಿಜೆಪಿ ಕಾರ್ಯಕರ್ತರು ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದರು. ಬಿಜೆಪಿಯ ಲಕ್ಷದ್ವೀಪ ಮುಖ್ಯಸ್ಥ ಸಿ.ಅಬ್ದುಲ್ ಖಾದರ್ ಹಾಜಿ ದೇಹ ವಿರೋಧಿ ಹೇಳಿಕೆಗಳಿಂದ ಕೇಂದ್ರ ಸರ್ಕಾರಕ್ಕೆ ಕಳಂಕ ತಂದಿದ್ದಾರೆ” ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ನಿರ್ಮಾಪಕಿ ಆಯೆಷಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಮತ್ತು 153 ಬಿ (ದ್ವೇಷಪೂರಿತ ಭಾಷಣ) ಅಡಿಯಲ್ಲಿ ಕವರತ್ತಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣ ದಾಖಲಾಗಿರುವ ಬಗ್ಗೆ ಚಿತ್ರನಿರ್ಮಾಪಕಿ ಆಯೆಷಾ ಫೇಸ್‌ಬುಕ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ಸಮರ್ಥಿಸಿಕೊಂಡಿದ್ದಾರೆ. “ಅವರು ನನ್ನ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದಾರೆ, ಆದರೆ, ಸತ್ಯವು ಗೆಲ್ಲುತ್ತದೆ ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಲಕ್ಷದ್ವೀಪದ ಬಿಜೆಪಿ ಕಾರ್ಯಕರ್ತರೊಬ್ಬರು ಪ್ರಕರಣ ದಾಖಲಿಸಿದ್ದಾರೆ. ನಾನು ಹುಟ್ಟಿದ ಭೂಮಿಗಾಗಿ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ. ನಾವು ಯಾರಿಗೂ ಹೆದರುವುದಿಲ್ಲ. ನನ್ನ ಧ್ವನಿ ಈಗ ಮತ್ತಷ್ಟು ಜೋರಾಗಿರುತ್ತದೆ” ಎಂದು ಬರೆದಿದ್ದಾರೆ.
ಆಯೆಷಾ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ “ದೇಶದ್ರೋಹ” ಪದವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಲಕ್ಷದ್ವೀಪದಲ್ಲಿ ಸರ್ಕಾರ ಜಾರಿಗೆ ತರಲು ಹೊರಟಿರುವ 3 ಹೊಸ ಪ್ರವಾಸೋದ್ಯಮ ಯೋಜನೆಗಳನ್ನು ವಿರೋಧಿಸಿ ಲಕ್ಷದ್ವೀಪ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ವಿಭಿನ್ನ ಪ್ರತಿಭಟನೆಗಳಿಗೆ ಲಕ್ಷದ್ವೀಪ ಸಾಕ್ಷಿಯಾಗುತ್ತಿದೆ.
ಇದನ್ನೂ ಓದಿ: ಹೊಸ ಪ್ರವಾಸೋದ್ಯಮ ನೀತಿ ವಿರೋಧಿಸಿ ಲಕ್ಷದ್ವೀಪ ನಿವಾಸಿಗಳಿಂದ ಉಪವಾಸ ಸತ್ಯಾಗ್ರಹ


