ಪಾಟ್ನಾ-ಟಾಟಾನಗರ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಕನೊಬ್ಬನಿಗೆ ನೀಡಿದ ಪ್ಯಾಕ್ ಮಾಡಿದ ಮೊಸರಿನಲ್ಲಿ ಹುಳುಗಳು ಕಂಡುಬಂದ ನಂತರ ರೈಲ್ವೆ ಇಲಾಖೆ ಮಾರಾಟಗಾರನ ನಡುವಿನ ಒಪ್ಪಂದವನ್ನು ರದ್ದುಗೊಳಿಸಿದ್ದಿ, ಕಂಪನಿಗೆ 50 ಲಕ್ಷ ರೂ. ದಂಡ ವಿಧಿಸಿದೆ.
ಈ ವಿಷಯವನ್ನು ಸರಿಯಾಗಿ ನಿರ್ವಹಿಸದಿದ್ದಕ್ಕಾಗಿ ರೈಲ್ವೆ ಸಚಿವಾಲಯವು ತನ್ನದೇ ಆದ ಕಂಪನಿಯಾದ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಮೇಲೆ 10 ಲಕ್ಷ ರೂ. ದಂಡ ವಿಧಿಸಿದೆ.
ಮಾರ್ಚ್ 15 ರಂದು, ವಂದೇ ಭಾರತ್ ರೈಲಿನಲ್ಲಿದ್ದ ಏಳು ಪ್ರಯಾಣಿಕರ ಗುಂಪಿಗೆ ಊಟದ ಜೊತೆಗೆ ಪ್ರಸಿದ್ಧ ಬ್ರ್ಯಾಂಡ್ನ ಪ್ಯಾಕೇಜ್ ಮಾಡಿದ ಮೊಸರನ್ನು ನೀಡಲಾಯಿತು. ಪ್ಯಾಕೆಟ್ಗಳಲ್ಲಿ ಒಂದನ್ನು ತೆರೆದಾಗ, ಅವರು ಒಳಗೆ ಜೀವಂತ ಹುಳುಗಳನ್ನು ನೋಡಿದ್ದಾರೆ. ಪ್ರಯಾಣಿಕ ರಿತೇಶ್ ಸಿಂಗ್ ತಕ್ಷಣವೇ ತನ್ನ ಎಕ್ಸ್ ಖಾತೆಯಲ್ಲಿ ಸಮಸ್ಯೆ ಕುರಿತು ಧ್ವನಿ ಎತ್ತಿದ್ದಾರೆ. ಐಆರ್ಸಿಟಿಸಿ, ರೈಲ್ವೆ ಸಚಿವರು ಮತ್ತು ಇತರರನ್ನು ಟ್ಯಾಗ್ ಮಾಡಿದ್ದಾರೆ.
ಘಟನೆ ಮತ್ತು ಕ್ರಮ ಕೈಗೊಂಡ ವರದಿಯಲ್ಲಿ, ಐಆರ್ಸಿಟಿಸಿ ತನ್ನ ಮೊಸರು ಪ್ಯಾಕೆಟ್ ಅನ್ನು ಪಾಟ್ನಾದಿಂದ ತರಿಸಿಕೊಳ್ಳಲಾಗಿದೆ ಎಂದು ಕಂಡುಹಿಡಿದಿದೆ. ಅದರ ಉತ್ಪಾದನಾ ದಿನಾಂಕ ಮಾರ್ಚ್ 9, 2026 ಮತ್ತು ಮುಕ್ತಾಯ ದಿನಾಂಕ ಏಪ್ರಿಲ್ 7, 2026 ಆಗಿದೆ.
ಪ್ರಯಾಣಿಕನ ಬಳಿ ಅಧಿಕಾರಿಗಳು ಕ್ಷಮೆಯಾಚಿಸಿದ್ದು, ಅವರಿಗೆ ಒಣ ಹಣ್ಣುಗಳ ಮಿಶ್ರಣ ಮತ್ತು ಕೆಲವು ಸಿಹಿ ತಿನಿಸುಗಳನ್ನು ನೀಡಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
“ನಾವು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದ್ದೇವೆ. ಸ್ಥಳದಲ್ಲಿಯೇ ವಿಷಯವನ್ನು ಪರಿಶೀಲಿಸಲು ವಿನಂತಿಸಿದ್ದೇವೆ. ಆದರೂ, ಅವರು ಟ್ವೀಟ್ ಅನ್ನು ಅಳಿಸಲು ನಿರಾಕರಿಸಿದರು. ವೀಡಿಯೊ ವೈರಲ್ ಆಗಬೇಕು ಮತ್ತು ಟ್ರೆಂಡ್ ಆಗಬೇಕು ಎಂಬ ಉದ್ದೇಶವನ್ನು ವ್ಯಕ್ತಪಡಿಸಿದರು” ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ಮಾರಾಟಗಾರರಾದ ಕೃಷ್ಣ ಎಂಟರ್ಪ್ರೈಸಸ್ಗೆ 25,000 ರೂ. ದಂಡ ವಿಧಿಸಲಾಯಿತು. ಆಹಾರ ನಿರ್ವಹಣೆಯಲ್ಲಿ ನಿರ್ಲಕ್ಷ್ಯಕ್ಕಾಗಿ ಎಚ್ಚರಿಕೆ ನೀಡಲಾಯಿತು. ಸರಿಯಾದ ಕೋಲ್ಡ್ ಚೈನ್ ಅನ್ನು ನಿರ್ವಹಿಸಲು, ಹೆಚ್ಚು ಜಾಗರೂಕರಾಗಿರಲು ಮತ್ತು ಆಹಾರ ಸುರಕ್ಷತಾ ಪ್ರೋಟೋಕಾಲ್ಗಳನ್ನು ಅನುಸರಿಸಲು ಸಂಸ್ಥೆಗೆ ಸೂಚಿಸಲಾಯಿತು.
ಅಧಿಕಾರಿಗಳು ಯ ಕ್ರಮದಿಂದ ಅತೃಪ್ತರಾದ ರೈಲ್ವೆ ಸಚಿವಾಲಯವು ಬುಧವಾರ ಕೃಷ್ಣ ಎಂಟರ್ಪ್ರೈಸಸ್ನ ಒಪ್ಪಂದವನ್ನು ರದ್ದುಗೊಳಿಸುವ ಜೊತೆಗೆ ದಂಡವನ್ನು 25,000 ರೂ.ಗಳಿಂದ 50 ಲಕ್ಷ ರೂ.ಗಳಿಗೆ ಹೆಚ್ಚಿಸುವಂತೆ ನಿರ್ದೇಶಿಸಿದೆ. ಸಚಿವಾಲಯವು ಅಧಿಕಾರಿಗಳು ಐಆರ್ಸಿಟಿಸಿಗೆ 10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
“ಲೋಪದ ತೀವ್ರತೆಯನ್ನು ಪರಿಗಣಿಸಿ, ಸೇವೆಗಳಲ್ಲಿನ ಅಂತಹ ಕೊರತೆಗಾಗಿ ಐಆರ್ಸಿಟಿಸಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಲು ಸಕ್ಷಮ ಪ್ರಾಧಿಕಾರ ನಿರ್ಧರಿಸಿದೆ. ಇದಲ್ಲದೆ, ಭವಿಷ್ಯದಲ್ಲಿ ಅಂತಹ ಯಾವುದೇ ಘಟನೆಯನ್ನು ತಡೆಗಟ್ಟಲು ಆನ್ಬೋರ್ಡ್ ಸೇವೆಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಐಆರ್ಸಿಟಿಸಿಗೆ ಸೂಚಿಸಲಾಗಿದೆ” ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
“ಆಹಾರದ ಗುಣಮಟ್ಟ, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯವು ಅವರ ಪ್ರಮುಖ ಕಾಳಜಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಸಂಬಂಧಪಟ್ಟ ಐಆರ್ಸಿಟಿಸಿ ಮೇಲ್ವಿಚಾರಕರಿಗೆ ನಿರ್ದೇಶನ ನೀಡಬೇಕು” ಎಂದು ಅದು ಹೇಳಿದೆ.
ಸಚಿವಾಲಯವು ತನ್ನ ಎಕ್ಸ್ ಹ್ಯಾಂಡಲ್ನಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿ, “ರೈಲು ಸಂಖ್ಯೆ 21896 (ಪಾಟ್ನಾ-ಟಾಟಾನಗರ ವಂದೇ ಭಾರತ್ ಎಕ್ಸ್ಪ್ರೆಸ್) ನಲ್ಲಿ ಪ್ರಯಾಣಿಕರೊಬ್ಬರು ಮಾರ್ಚ್ 15, 2026 ರಂದು ಎತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ದೂರನ್ನು ಗಂಭೀರವಾಗಿ ಪರಿಗಣಿಸಲಾಗಿದೆ” ಎಂದು ಹೇಳಿದೆ.
“ಕ್ರಮ ಕೈಗೊಳ್ಳಲಾಗಿದೆ – ಐಆರ್ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ, ಸೇವಾ ಪೂರೈಕೆದಾರರಿಗೆ 50 ಲಕ್ಷ ರೂ. ದಂಡ ವಿಧಿಸಲಾಗಿದೆ. ಒಪ್ಪಂದವನ್ನು ರದ್ದುಗೊಳಿಸಲು ಆದೇಶಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಗುಣಮಟ್ಟ ನಮ್ಮ ಪ್ರಮುಖ ಆದ್ಯತೆಯಾಗಿದೆ” ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.


