Homeಕರೋನಾ ತಲ್ಲಣಲಾಕ್‌ಡೌನ್‌ನ ನೀರವ ಮೌನ ಮತ್ತು ಸಾಂಕ್ರಾಮಿಕದ ಶೋಕ ಗೀತೆ

ಲಾಕ್‌ಡೌನ್‌ನ ನೀರವ ಮೌನ ಮತ್ತು ಸಾಂಕ್ರಾಮಿಕದ ಶೋಕ ಗೀತೆ

ಲಾಕ್‌ಡೌನ್‌ನ ಸ್ಥಬ್ಧ ಜಗತ್ತು ಮತ್ತು ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯ ಶೋಕಗೀತೆ ಮಕ್ಕಳ ಹಂಬಲ ಒತ್ತಾಸೆಗಳಿಗೆ ದೀರ್ಘಕಾಲದ ಪೂರ್ಣ ವಿರಾಮವನ್ನೊತ್ತಿದೆ.

- Advertisement -
- Advertisement -

ಮೂಲ : ವೈರ್‌ : ಪ್ರೊಫೆಸರ್ ಫೀಝಾ ತಬ್ಸುಮ್‌ ಆಝ್ಮಿ,
ಹಿರಿಯ ಸಂಶೋಧಕರು ಮತ್ತು ಪ್ರಾಧ್ಯಾಪಕರು ಅಲಿಘರ್‌ ವಿಶ್ವವಿದ್ಯಾಲಯ
ಅನುವಾದ : ರಾಜೇಶ್‌ ಹೆಬ್ಬಾರ್‌

ಲಾಕ್‌ಡೌನ್‌ ನಮ್ಮ ಸುತ್ತಲಿನ ಪರಿಸರದ ಮಾಲಿನ್ಯವನ್ನು ಒಂದಷ್ಟು ದಿನ ಒಂದಷ್ಟು ಪ್ರಮಾಣದಲ್ಲಿ ಕಡಿಮೆಮಾಡಿರಬಹುದು. ತಿಳಿಯಾದ ಜೀವವಾಯು ಮನೆಯೊಳಗೆ ಕುಳಿತವರಿಗೆ ಹೊಸ ಚೈತನ್ಯವನ್ನು ನೀಡಬಹುದು. ಆದರೆ ಸದಾ ಗಿಜಿಗುಡುವ ಶಬ್ಧಕ್ಕೆ ಒಗ್ಗಿಹೋದ ಜನಕ್ಕೆ ಲಾಕ್‌ಡೌನ್‌ನ ನೀರವ ಮೌನ ಕಂಗೆಡಿಸಿದೆ. ಲಾಕ್‌ಡೌನ್ ಹೊಸದಾದ ಶಬ್ಧವಿಲ್ಲದ ಮಾಲಿನ್ಯ ವ್ಯವಸ್ಥೆಯನ್ನು ಹುಟ್ಟುಹಾಕಿದೆ. ಕಡು ನೀರವ ಮೌನದಲ್ಲಿ ಯಾರ ಕೂಗೂ ನಮಗೀಗ ಕೇಳುತ್ತಿಲ್ಲ.

ಹತ್ತು ವರ್ಷಗಳಿಂದೀಚೆಗೆ ನಮ್ಮ ಬೆಳಗು ಆರಂಭವಾಗುತ್ತಿದ್ದುದು ಶಾಲಾ ವಾನ್‌ ಗಳು ಮನೆ ಮುಂದೆ ಬಂದು ನಿಂತು ಹಾರ್ನ್‌ ಹೊಡೆಯಲು ಆರಂಭಿಸಿದಾಗ. ಮಕ್ಕಳ ಲಗುಬಗೆಯ ಓಡಾಟ, ಅಮ್ಮಾ ಟಿಫಿನ್‌ ಬಾಕ್ಸ್‌, ಸಾಕ್ಸ್‌, ನೋಟ್ಸ್‌, ಬೇಗ ತಿಂಡಿ ಕೊಡಮ್ಮಾ ಎಂಬ ಮುಂಜಾನೆಯ ಆತುರದಿಂದ. ಇಂದು ಶಾಲೆಗಳು ಮುಚ್ಚಿ ಸರಿ ಸುಮಾರು ಒಂದು ವರ್ಷ ಕಳೆದಿದೆ. ಮನೆಯಲ್ಲಿ ಮಕ್ಕಳ ಲಗು ಬಗೆ, ಆತುರ, ಶಾಲೆಯ ಹೊಸ ವಾತಾವರಣಕ್ಕೆ ಓಡಲು ಸಿದ್ಧವಾಗುವ ಹರ್ಷ, ಉತ್ಸಾಹ ಕಾಣೆಯಾಗಿದೆ. ಮಕ್ಕಳ ಹೊಸ ಪ್ರಪಂಚವೊಂದು ಸದ್ದಿಲ್ಲದೇ ಅವಾಸನಗೊಂಡಿದೆ. ಎಳೆಯ ಮನಸುಗಳ ಬೆಳವಣಿಗೆಗೆ ಪೂರಕವಾದ ಕೌತುಕದ ಜಗತ್ತುಗಳು ಕಾಣೆಯಾದದ್ದು ಇಂದಿಗಲ್ಲ ದೀರ್ಘಕಾಲದ ನಂತರ ದೇಶದಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಲಿವೆ ಎಂದು ವೈದ್ಯರು ಮತ್ತು ಮಾನಸಿಕ ತಜ್ಞರು ಅಧ್ಯಯನದಿಂದ ಕಂಡುಕೊಂಡಿದ್ದಾರೆ. ನಾಲ್ಕುಗೋಡೆಗಳ ನಡುವೆ ಬಂಧಿಯಾದ ಎಳೆಯ ಪೀಳಿಗೆ ಬಾಲ್ಯದ ಸರ್ವೇ ಸಾಮಾನ್ಯ ಕೌತಕ, ಪರಿಸರ ಮತ್ತು ಸಮಾಜದೊಂದಿಗಿನ ಒಡನಾಟದಿಂದ ವಂಚಿತವಾಗಿ ಒಂಟಿತನ ಮತ್ತು ಏಕತಾನತೆಯ ನೀರವ ಪರಿಸರಕ್ಕೆ ನಿಧಾನಕ್ಕೆ ಒಗ್ಗಿಕೊಳ್ಳುತ್ತಿದೆ. ಮುಂದೊಂದು ದಿನ ಇದು ಅಂತರ್ಮುಖಿ ಪೀಳಿಗೆಗಳ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ ಎಂದು ಹಲವು ಮಕ್ಕಳಶಾಸ್ತ್ರಜ್ಞರು ಈಗಾಗಲೇ ತಮ್ಮ ಆತಂಕಗಳನ್ನು ಹೊರಹಾಕಿದ್ದಾರೆ.

ಜಗತ್ತಿನಾದ್ಯಂತ ಮಕ್ಕಳು ತಮ್ಮ ಶಾಲೆಗಳಿಗೆ ಹೊರಡಲು ಹಾತೊರೆಯುತ್ತಿದ್ದಾರೆ. ಕಾರಿಡಾರ್‌ ನ ನಗು, ಹರಟೆ, ಕೇಕೆ ಪ್ರತಿನಿತ್ಯದ ದಿನಚರಿಯ ಮೊದಲ ಅಧ್ಯಾಯವಾದ ಗುಡ್‌ಮಾರ್ನಿಂಗ್‌ ಟೀಚರ್‌ ಶಬ್ಧಗಳಿಗಾಗಿ ಇನ್ನಿಲ್ಲದಂತೆ ಹಂಬಲಿಸುತ್ತಿದ್ದಾರೆ. ಲಾಕ್‌ಡೌನ್‌ ನ ಸ್ಥಬ್ಧ ಜಗತ್ತು ಮತ್ತು ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯ ಶೋಕಗೀತೆ ಮಕ್ಕಳ ಹಂಬಲ ಒತ್ತಾಸೆಗಳಿಗೆ ದೀರ್ಘಕಾಲದ ಪೂರ್ಣ ವಿರಾಮವನ್ನೊತ್ತಿದೆ.

ಮಕ್ಕಳ ಕತೆ ಅದಾದರೆ ದೊಡ್ಡವರ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಕೊರೋನಾ ಮೊದಲಿನ ನಮ್ಮ ದಿನಚರಿಯನ್ನೊಮ್ಮೆ ನೆನೆಸಿಕೊಂಡರೆ ನಮ್ಮ ದಿನ ಆರಂಭವಾಗುತ್ತಿದ್ದುದು ಹಾಲಿನವರ ಕೂಗಿನಿಂದಲೋ ತರಕಾರಿಯವರ ದೀರ್ಘ ಸ್ವರಗಳಿಂದಲೋ. ದೇಶದ ಉದ್ದಗಲಕ್ಕೂ ಕೇಳುವ ದೇಶದ ಮುಂಜಾನೆಯ ಅವಿಭಾಜ್ಯ ಅಂಗವಾದ ಈ ಶಬ್ಧಗಳು ಲಾಕ್‌ಡೌನ್‌ ಪ್ರಾರಂಭದಿಂದ ಬಹುತೇಕ ಕೊನೆಯಾಗಿವೆ. ಕೆಲವು ಕಡೆ ಅಲ್ಲಲ್ಲಿ ಆಗಾಗ ಅಷ್ಟು ಇಂಪೆನಿಸದೇ ಕ್ಷೀಣವಾಗಿವೆ. ಲಾಕ್‌ಡೌನ್‌ ನಾವು ಒಗ್ಗಿಕೊಂಡ ಶಬ್ಧ ಜಗತ್ತನ್ನು ಕೊನೆಮಾಡಿ ನೀರವ ಮೌನವನ್ನು ಹುಟ್ಟುಹಾಕಿದೆ. ತರಕಾರಿಯವ ಉದ್ದಕ್ಕೆ ಉಸಿರು ಬಿಡದೇ ಕೂಗುತ್ತಿದ ತರಕಾರಿಯ ಹೆಸರು, ಬೀದಿ ಬದಿ ವ್ಯಾಪಾರಿಯವನ ಬಣ್ಣ ಬಣ್ಣದ ಚೌಕಾಸಿಯ ಮಾತುಗಾರಿಕೆಯ ತಂತ್ರ, ಚಾ ವಾಲಾನ ಗಿಬ್ರಿಶ್‌ ಪದಪುಂಜ ಎಲ್ಲವೂ ಮಾಯವಾಗಿದೆ. ಹಾಗಾದರೇ ಶಬ್ಧಗಳನ್ನೇ ಉಸಿರಾಡುತ್ತಿದ್ದ, ದೀರ್ಘಕಾಲದಿಂದ ಮಾತನ್ನು ಅವಿಭಾಜ್ಯ ಅಂಗವಾಗಿಸಿಕೊಂಡಿದ್ದ ಲಕ್ಷಾಂತರ ಜನ ಇಂದು ಹೊಸ ಲಾಕ್‌ಡೌನ್‌ ನಿಶಭ್ಧಕ್ಕೆ ಹೇಗೆ ಹೊಂದಿಕೊಂಡಿದ್ದಾರೆ? ಇದೆಲ್ಲ ವೈಭವೀಕರಿಸಿದ ನುಡಿಗಟ್ಟುಗಳಂತೆ ತೋರಿದರೂ ಶಬ್ಧ ಪರಂಪರೆಯ, ಮೌಖಿಕ ಪರಂಪರೆಯ ಭಾರತಕ್ಕೆ ತನ್ನ ಮಾತುಗಳನ್ನು ಕಳೆದುಕೊಂಡಾಗ ಉಂಟಾಗುವ ಕಸಿವಿಸಿ ದೀರ್ಘಕಾಲದವರೆಗೂ ಕಾಡದೇ ಇರದು. ಲಾಕ್‌ಡೌನ್‌ ನ ನೀರವ ಮೌನ ದೇಶದ ಜನಜೀವನದ ಅಂತರ್ಗತ ಜೀವಂತಿಕೆ ಉಡುಗುತ್ತಿರುವುದರ ಸಂಕೇತ.

ಕಿವಿಗಡಚಿಕ್ಕುವ ವಾಹನಗಳ ಹಾರ್ನ್‌, ಟ್ರಾಫಿಕ್‌ನ ಕಿರಿಕಿರಿಯ ಗದ್ದಲ, ಬಾಲಿವುಡ್‌ ಹಾಡುಗಳನ್ನು ಜೋರಾಗಿ ಮೊಳಗಿಸುತ್ತ ಬರುವ ಆಟೋರಿಕ್ಷಾ ಎಲ್ಲವೂ ತೀರಾ ಅಪರೂಪ ಅಥವಾ ಅಳಿವಿನಂಚಿಗೆ ತಲುಪಿವೆ. ಮಾರುಕಟ್ಟೆಯಲ್ಲಿ ಜನರ ಲಗುಬಗೆಯ, ಗದ್ದಲದ ಓಡಾಟ ಗದ್ದಲ ಅಸ್ಪಷ್ಟ ಮೌನವಾಗಿ ಬದಲಾಗಿದೆ. ಬೀದಿಯಲ್ಲಿ ಮಕ್ಕಳ ಓಡಾಟ, ಪಾರ್ಕ್‌ ಗಳಲ್ಲಿನ ಕುಣಿತ, ನಲಿತ ಕೇಕೆಗಳ ಜಾಗದಲ್ಲಿ ಕೊನೆಯಿಲ್ಲದ ಮೌನ ಮತ್ತು ಆತಂಕಗಳು ತುಂಬಿವೆ. ಆಗಾಗ ಜಾತ್ರೆ, ಉತ್ಸವ, ಹೊಸ ಹೊಸ ಮಾರಾಟದ ವಸ್ತುಗಳನ್ನು ಲೌಡ್‌ಸ್ಪೀಕರ್‌ ನಲ್ಲಿ ಘೋಷಣೆಗಯ್ಯುತ್ತ ಸಾಗುತ್ತಿದ್ದ ವಾಹನಗಳು ನಿಂತಿವೆ. ಅಪರೂಪಕ್ಕೊಮ್ಮೆ ಕೇಳುತ್ತಿದ್ದ ಆಕಾಶದಲ್ಲಿ ಹಾರುವ ವಿಮಾನದ ಸದ್ದು, ದೂರದಲ್ಲೆಲ್ಲೋ ಕೇಳುವ ರೈಲಿನ ಶಿಳ್ಳೆ, ಐಸ್‌ಕ್ರೀಮ್‌ ಟ್ರಾಲಿಯ ಟ್ರಿಣ್‌ ಟ್ರಿಣ್‌ ಗಂಟೆ, ಆಗೊಮ್ಮೆ ಈಗೊಮ್ಮೆ ಸಿಡಿಯುವ ಪಟಾಕಿ ಸೇರಿ ಜನರ ದಿನನಿತ್ಯದ ಜಂಜಾಟಗಳಿಂದ ಬಿಡುಗಡೆ ಗೊಳಿಸುವಂತೆ ನಿರ್ಮಿಸುತ್ತಿದ್ದ ನಮ್ಮ ಜೀವನದ ಸಣ್ಣ ಖುಷಿಗಳಿಂದು ಮರೀಚಿಕೆಯಾಗಿವೆ. ಮನೆಯ ಕರೆಗಂಟೆಗಳು ಮೊಳಗುವ ಯಾರಾದರೂ ಅತಿಥಿಗಳು ಭೇಟಿನೀಡುವ ದಿನಗಳಿಗಾಗಿ ಜನರು ಆಸೆಗಣ್ಣುಗಳಿಂದ ನೀರಿಕ್ಷೆಯಲ್ಲಿ ತೊಡಗಿದ್ದಾರೆ.

ಕೊರೋನಾ ಸಾಂಕ್ರಾಮಿಕದ ಈ ಸಂದರ್ಭ ಮತ್ತೆ ನಮ್ಮನ್ನು ಹಳೆಯ ಶಬ್ಧಸಹಿತ ಪ್ರಪಂಚವನ್ನು ನೆನೆಯುವಂತೆ ಮಾಡಿದೆ. ಬಹುತೇಕ ಜನರು ನಿಶ್ಯಬ್ಧ ವಾತಾವರಣದಿಂದ ಬೇಸತ್ತು ಕೊರೋನಾ ಪೂರ್ವದ ತಮ್ಮ ದಿನನಿತ್ಯದ ಬ್ಯುಸಿ ದಿನಗಳನ್ನು ಮಿಸ್‌ ಮಾಡಿಕೊಳ್ಳುತ್ತ ಹಳೆಯ ನೆನಪುಗಳನ್ನು ಮೆಲಕು ಹಾಕತೊಡಗಿದ್ದಾರೆ. ಲಾಕ್‌ಡೌನ್‌ ಮತ್ತು ಸಾಂಕ್ರಾಮಿಕ ಎರಡೂ ಒಟ್ಟಿಗೆ ಸೇರಿ ಹೊಸದೊಂದು ಶಬ್ಧ ಪರಿಸರವನ್ನಿಂದು ನಮ್ಮ ಮುಂದೆ ತೆರೆದಿಟ್ಟಿದೆ. ಒಂದಷ್ಟು ಅಂತರವನ್ನು ಲೆಕ್ಕಹಾಕಿ ಸರಿದು ನಿಂತು ಮಾಸ್ಕಿನೊಳಗಿನಿಂದ ಹೊರಡುವ ಮಸುಕಾದನ ಅಸ್ಪಷ್ಟ ಸ್ವರಗಳು, ಕೆಮ್ಮು, ಸೀನು, ಮುಕ್ಕಳಿಸುವ, ಶೀತ ನೆಗಡಿಯ ರಕ್ಷಣೆಗಾಗಿ ಬಳಸುವ ಇನ್‌ಹೇಲರ್‌ ಇವೇ ನಮ್ಮ ದಿನನಿತ್ಯದ ಜೀವನದ ಪರಿಚತ ಶಬ್ಧಗಳಾಗಿ ಕೇಳಿಸುತ್ತಿವೆ.

ದಿನನಿತ್ಯದ ಲಾಕ್‌ಡೌನ್‌ ನಿಶ್ಯಬ್ಧಕ್ಕೆ ರಾತ್ರಿ ಹಗಲೆನ್ನದೇ ಸೈರನ್ನು ಮೊಳಗಿಸುತ್ತ ಓಡಾಡುವ ಆಂಬುಲೆನ್ಸ್‌, ಆಸ್ಪತ್ರೆಯ ಒಳಗಿನ ಗದ್ದಲ, ರೋಗಿಗಳ ನರಳಾಟ, ಮಾನಿಟರ್‌ ನ ಬೀಫಿಂಗ್‌ ಶಬ್ಧ, ಆಕ್ಸಿಜನ್‌ ಲೈನ್‌ ಗಳ ವೈಬ್ರೇಷನ್‌, ವೆಂಟಿಲೇಟರ್‌ಗಳ ಸದ್ದು, ಚೇತರಿಸಿಕೊಂಡ ರೋಗಿಗಳ ಕುಟುಂಬದವರ ನೃತ್ಯ ಹಾಡು ಚಪ್ಪಳೆ, ಕುಣಿತಗಳು ಹೊಸದಾಗಿ ಸೇರ್ಪಡೆಯಾಗಿವೆ.

ಸುದ್ದಿ ಮಾಧ್ಯಮಗಳು ದಿನದ 24 ಘಂಟೆ ಎಡಬಿಡದೇ ಬಿತ್ತರಿಸುವ ನೊಂದವರ ಅಳು, ಆಸ್ಪತ್ರೆಗಳ ನರಕಯಾತನೆಯ ದೃಶ್ಯ, ರೋಗಿಗಳ ನರಳಾಟ ನಮ್ಮ ಮನೆಯ ಒಳಗಡೆ ಕೇಳುವ ಸರ್ವೇ ಸಾಧಾರಣ ಧ್ವನಿಗಳಾಗಿ ಮಾರ್ಪಟ್ಟಿವೆ. ಬ್ರೇಕಿಂಗ್‌ ನ್ಯೂಸ್‌ಗಳನ್ನು, ಬೆಚ್ಚಿ ಬೀಳಿಸುವ ವರದಿಗಳನ್ನು ಅರಚಾಡುತ್ತ ಕಿರುಚಾಡುತ್ತ ನಮ್ಮ ಮುಂದೆ ಬರುವ ರಿಪೋರ್ಟರ್‌ಗಳು ಮತ್ತು ಆಂಕರ್‌ಗಳೇ ನಮ್ಮ ದಿನನಿತ್ಯದ ಸಂಗಾತಿಗಳಾಗಿ ಬದಲಾಗಿದ್ದಾರೆ. ಯಾಕೆ ಕಠಿಣ ನಿರ್ಬಂಧಗಳು? ಯಾಕೆ ಕಠಿಣ ನಿರ್ಭಂಧಗಳಿಲ್ಲ? ಎಂಬ ಚರ್ಚೆ ಮನೆಯೊಳಗಡೆಯ ನಿತ್ಯದ ಕಾರ್ಯಕಲಾಪವಾಗಿದೆ.

ಲಾಕ್‌ಡೌನಿನ ನಿಶ್ಯಭ್ಧ ಮತ್ತು ಕೊರೋನಾ ಸಾಂಕ್ರಾಮಿಕದ ಶೋಕಗೀತೆಗಳ ನಡುವೆ ಸದ್ಯ ಅಂತರ್ಜಾಲವೊಂದೇ ಜನರ ಜೀವನದ ಚೈತನ್ಯವನ್ನು ಕಾದಿಟ್ಟಿರುವ ಮಾಧ್ಯಮ. ಕರೆ, ಸಂದೇಶ, ಜೂಮ್‌ ಮೀಟಿಂಗ್‌ ನ ಬೀಫಿಂಗ್‌, ವಿಡಿಯೋ ಕಾಲ್‌ಗಳು ಜನರ ಬದುಕಿಗೊಂದಿಷ್ಟು ಸಂಪಾದನೆ ಮತ್ತು ಏಕತಾನತೆಯನ್ನು ದೂರಮಾಡುವ ಲವಲವಿಕೆಯನ್ನು ನೀಡಿದೆ. ಪದೇ ಪದೇ ಮಾರ್ಧನಿಸುವ ಆಯ್‌ ಆಮ್‌ ಆಡಿಬಲ್‌ ? ಕಾನ್‌ ಯು ಹಿಯರ್‌ ಮಿ ? ಪದಗಳು ಹೊಸ ಜೀವನ ಪದ್ಧತಿಯ ಅವಿಭಾಜ್ಯ ಅಂಗವಾಗಿವೆ. ಸಂಗಿತ, ಆನ್‌ಲೈನ್‌ ನ ಚಲನ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಮನೆಯೊಳಗಿನ ನಿಶ್ಯಬ್ಧವನ್ನು ಒಡೆದು ಕೆಲಹೊತ್ತು ಜನರಿಗೆ ಹೊಸ ಹುರುಪು ನೀಡುತ್ತಿದೆ.

ನಿಶ್ಯಭ್ದ ಮತ್ತು ನಿಶ್ಯಬ್ಧದೊಳಗಿನ ಶಬ್ಧಗಳು ಕೊರೋನಾ ಸಾಂಕ್ರಾಮಿಕದ ಭೀಕರತೆಯ ಸಂಕೇತವನ್ನು ಸದ್ದಿಲ್ಲದೇ ಪ್ರತಿಬಿಂಬಿಸುತ್ತಿವೆ. ನಿರ್ಜನ ರಸ್ತೆ, ಮುಚ್ಚಿದ ಕೈಗಾರಿಕೆ, ಉದ್ಯಮ, ವ್ಯಾಪಾರ ಸ್ಥಬ್ಧವಾಗಿರುವ ಕಟ್ಟಡ ನಿರ್ಮಾಣ ಎಲ್ಲವೂ ಅಗತ್ಯ ಜೀವನ ಚಟುವಟಿಕೆ ನಿಂತುಹೋಗಿರುವುದರ ಪ್ರತಿಬಿಂಬದಂತೆ ಕಣ್ಣಮುಂದೆ ಕಾಡುತ್ತವೆ. ಜನ ಜೀವನ ಅಸ್ತಿತ್ವದಲ್ಲಿರುವದರ ಸಂಕೇತಗಳಾದ ಈ ಶಬ್ಧಗಳೀಗ ಅಜ್ಞಾತ ನೀರವದೊಳಗೆ ಅಡಗಿ ಕುಳಿತಿವೆ. ಲಾಕ್‌ಡೌನ್‌ ನೀರವತೆ ಪ್ರತಿಯೊಬ್ಬರ ಅಂತರಂಗದ ಗುನುಗಾಗಿ ಮಾರ್ಪಟ್ಟಿದೆ.

ನಾವೆಲ್ಲ ಟ್ರಾಫಿಕ್ಕಿನ ಕಿರಿಕಿರಿಯ ಬಗ್ಗೆ ಎಷ್ಟು ಅಸಮಾಧಾನ ಹೊರಹಾಕಿದರೂ ಅಂತರಂಗದಲ್ಲಿ ವಾಹನಗಳಿಂದ ತುಂಬಿದ ರಸ್ತೆಗಳನ್ನು, ಜನರಿಂದ ತುಂಬಿದ ಬೀದಿಗಳನ್ನು, ಗಿಜಿಗುಡುವ ಮಾರುಕಟ್ಟೆಯನ್ನು, ಜನಸಂದಣಿಯ ಸಿನೆಮಾ ಮಾಲ್‌, ಶಾಪಿಂಗ್ ಮಾಲ್‌ಗಳನ್ನು ಪ್ರೀತಿಸುತ್ತೇವೆ. ನಗರಗಳು ಈ ಸದ್ದಿನಿಂದಲೇ ಬದುಕುವುದು. ನಮ್ಮೆಲ್ಲರ, ದೇಶದ ಆರ್ಥಿಕತೆ ಜೀವಂತವಾಗಿರುವುದು ಇದೇ ವ್ಯಾಪರ ವಹಿವಾಟು, ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳ ಗಿಜಿಗುಡುವ ಜನ ಜಂಗುಳಿಯ ವಾಣಿಜ್ಯ ಸಂಬಂಧಿ ಶಬ್ಧಗಳಿಂದಲೇ. ಆದರೆ ದಿಢೀರನೇ ಬಂದಪ್ಪಳಿಸಿದ ಲಾಕ್‌ಡೌನಿನ ನಿಶ್ಯಬ್ಧ ಇನ್ನಷ್ಟು ತೀವ್ರವಾಗಿ ದೇಶದ ಜನಜೀವನದ ಆಳಕ್ಕಿಳಿಯುತ್ತಿದೆ. ಸುದೀರ್ಘ ಸ್ಥಬ್ಧತೆ ಮತ್ತು ನಿಶ್ಯಬ್ಧತೆ ಜನರ ನೋವಿಗೆ ಸಾಂತ್ವಾನವನ್ನು ನೀಡುವುದಿಲ್ಲ. ಬದಲಾಗಿ ಜನರ ಜೀವನದಲ್ಲಿ ಅದೇ ಹೊಸ ಸಮಸ್ಯೆಯಾಗಿ ಪರಿಣಮಿಸುತ್ತದೆ.

ಪ್ಯಾಂಡಮಿಕ್‌ ಕಲ್ಪಿಸಿದ ಒಂದೇ ಒಂದು ನೆಮ್ಮದಿಯೆಂದರೆ ಅದು ಹಕ್ಕಿಗಳ ಚಿಲಿಪಿಲಿಯ ಕಲರವ. ವಾಹನಗಳ ಓಡಾಟ ಮತ್ತು ಮಾಲಿನ್ಯ ಇಳಿದಿರುವ ಪರಿಣಾಮ ನೂರಾರು ಹಕ್ಕಿಗಳು ಮನೆಯ ಪಕ್ಕದ ಮರದಲ್ಲಿ ಬಂದು ಸೇರಿ ನಮ್ಮ ಮುಂಜಾನೆಯ ನೀರವತೆಗೆ ಒಂದಷ್ಟು ಸಾಂತ್ವನಗೀತೆಯನ್ನು ಹಾಡುತ್ತಿವೆ. ಸಾಮಾಜಿಕ ಜಾಲತಾಣಗಳು ಹೊಸ ಹೊಸ ಹಕ್ಕಿಗಳ ಶಬ್ಧವನ್ನು ಗುರುತಿಸಿರುವುದರ ಕುರಿತಾದ ನೂರಾರು ಪೋಸ್ಟ್‌ಗಳಿಂದ ತುಂಬಿಹೋಗಿವೆ. ಹಡಗುಗಳ ನಿರಂತರ ಓಡಾಟ ಸಾಕಷ್ಟು ಪ್ರಮಾಣದಲ್ಲಿ ಇಳಿದಿರುವುರಿಂದ ಸಮುದ್ರವೂ ಒಂದಷ್ಟು ಶಾಂತವಾಗಿದೆ ಈಗ.

ಕೊರೋನಾ ಸಾಂಕ್ರಾಮಿಕವು ಹಿಂದೆಂದೂ ಕೇಳಿರದ, ಜಗತ್ತು ಸಾಕ್ಷಿಯಾಗಿರದ ಹೊಸ ಮಾದರಿಯ ಶಬ್ಧವ್ಯವಸ್ಥೆಯನ್ನು ಹುಟ್ಟುಹಾಕಿದೆ. ಇದು ನಮ್ಮ ಹೊಸ ಶಬ್ಧತರಂಗ ವ್ಯವಸ್ಥೆಯ ಕುರಿತು ಸಂಶೋಧನೆಗೆ ಅನೇಕರನ್ನು ಪ್ರಚೋದಿಸಿದೆ. ಉತ್ಸಾಹಿ ಸಂಶೋಧಕರು ಸಾಂಕ್ರಾಮಿಕ ಕಾಲದ ವಿಚಿತ್ರ ನಿಶ್ಯಬ್ಧದ ಪರಿಣಾಮಗಳ ಅಧ್ಯಯನದಲ್ಲಿ ತೊಡಗಿದ್ದಾರೆ. ಲಾಕ್‌ಡೌನ್‌ ಕಾಲದ ನೀರವತೆ ಜನರ ಭಾವನಾತ್ಮಕ ಪ್ರತಿಕ್ರಿಯೆಗಳ ಮೇಲೆ ಯಾವ ಪರಿಣಾಮವನ್ನು ಬೀರಿದೆ ? ನಮ್ಮ ಆಲಿಸುವ ರೂಢಿಯ ಮೇಲೆ ದೀರ್ಘಕಾಲದ ಪರಿಣಾಮಗಳನ್ನು ಬೀರಬಹುದೆ ? ಹೀಗೆ ಅನೇಕ ವಿಷಯಗಳ ಕುರಿತು ಸಂಶೋಧಕರು ಸಂಶೋಧನೆಯಲ್ಲಿ ತೊಡಗಿದ್ದಾರೆ.

ಸಿಟೀಸ್‌ ಆಯಂಡ್‌ ಗ್ಲೋಬಲ್‌ ಮೆಮೊರಿ ಎಂಬ ಜಾಗತಿಗ ಧ್ವನಿ ಮುದ್ರಕ ಮತ್ತು ಸಂಗೀತ ಸಂಯೋಜನಾ ಸಂಸ್ಥೆ ಕೊರೋನಾ ಸಾಂಕ್ರಾಮಿಕ ಕಾಲದ ಜಗತ್ತಿನ ಅನೇಕ ನಗರಗಳ ಶಬ್ಧ ಪ್ರಪಂಚವನ್ನು ಸೆರೆಹಿಡಿದು ಅದನ್ನು ವಿನೂತನವಾಗಿ ರೂಪಿಸಿದೆ. ಇತರ ಅನೇಕ ಸಂಶೋಧಕರು ಕೂಡ ಲಾಕ್‌ಡೌನ್‌ ಸಂದರ್ಭದ ಶಬ್ಧ ವೈವಿಧ್ಯತೆಯನ್ನು ಸೆರೆಹಿಡಿದು ಮುಂದಿನ ತಲೆಮಾರುಗಳಿಗಾಗಿ ಸಂರಕ್ಷಿಸುವ ಕೆಲಸದಲ್ಲಿ ತೊಡಗಿದ್ದಾರೆ. ಕೆಲವರು ಯಾವು ಸದ್ದು ಒಂದು ಪ್ರದೇಶವನ್ನು ಸಂಕೇತಿಸುತ್ತದೆ ? ಯಾವ ಸದ್ದು ಒಂದು ಪ್ರದೇಶದ ಜೊತೆ ನಮ್ಮನ್ನು ಭಾವನಾತ್ಮಕವಾಗಿ ಬಂಧಿಸುತ್ತದೆ ಎಂಬ ವಿಷಯದಲ್ಲಿ ಸಂಶೋಧನೆಗೆ ತೊಡಗಿಸಿದೆ. ಲಾಕ್‌ ಡೌನ್‌ ನ ವಿಚಿತ್ರ ನಿಶ್ಯಬ್ಧ ಸಂಶೋಧಕರನ್ನು ಹೊಸ ಹೊಸ ಸಂಶೋಧನೆಗೆ ಇನ್ನಿಲ್ಲದಂತೆ ಪ್ರಚೋದಿಸುತ್ತಿದೆ.

ಪ್ರತಿಯೊಂದು ಸ್ಥಳ, ಪ್ರದೇಶ ತನ್ನದೇ ಆದ ಧ್ವನಿ ತರಂಗಗಳಿಂದ ತನ್ನ ಜೀವಂತಿಕೆಯ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ. ದಿನ ನಿತ್ಯ ಮೊಳಗುವ ಈ ಚಿರಪರಿಚಿತ ವಿವಿಧ ರೀತಿಯ ಸರ್ವೇ ಸಾಮಾನ್ಯ ಶಬ್ಧಗಳು ಅವು ಎಷ್ಟೇ ಕರ್ಕಶವಾಗಿರಲಿ ಅಥವಾ ಇಂಪಾಗಿರಲಿ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿರುವುದಂತೂ ಸತ್ಯ. ಅವು ಜೀವನ ಎಂದಿನಂತೆ ಸುಗಮವಾಗಿ ಸಾಗುತ್ತಿರುವ ಭದ್ರತೆಯ ಭಾವವನ್ನು ನಮ್ಮಲ್ಲಿ ಹುಟ್ಟಿಸುತ್ತವೆ. ಆಲಿಸುವಿಕೆ ಜೀವಿಗಳ ಮೂಲ ಸಂವೇದನೆಗಳಲ್ಲಿ ಒಂದು. ಶಬ್ಧ ಮತ್ತು ಧ್ವನಿಗಳನ್ನು ನಮ್ಮ ಜೀವನಕ್ಕೊಂದು ಲಯಬದ್ಧತೆಯನ್ನು ನೀಡಿ ಜೀವನದ ಅನುಭವಗಳನ್ನು ಕಟ್ಟಿಕೊಡುತ್ತವೆ. ನಮ್ಮ ಜೀವನದ ನೆನಪು ಅನುಭವಗಳನ್ನು ರೂಪಿಸುವ ಮುಂಜಾನೆಯ, ಸಂಜೆಯ, ರಾತ್ರಿಯ ಶಬ್ಧಗಳು ಮರಳುವ ದಿನ ಯಾವಾಗ ಎಂಬ ಪ್ರಶ್ನೆಗೆ ಸದ್ಯಕ್ಕೆ ಯಾರಲ್ಲೂ ಉತ್ತರಗಳಿಲ್ಲ. ಕೊರೋನಾ ಸಾಂಕ್ರಾಮಿಕ ಮುಗಿದಾಗ ಎಂಬುದು ವಾಡಿಕೆ ಉತ್ತರ. ಅದೇ ಅದು ಯಾವಾಗ? ಮತ್ತದಕ್ಕೆ ನಿಶ್ಯಬ್ಧ ಮತ್ತು ಮೌನಗಳೇ ಉತ್ತರ. ಸದ್ಯ ನಮಗೆ ತಿಳಿದಿರುವುದು ಲಾಕ್‌ಡೌನಿನ ನಿಶ್ಯಬ್ಧ ಮತ್ತು ಸಾಂಕ್ರಾಮಿಕದ ಶೋಕ ಗೀತೆ ಮತ್ತೆಂದು ಕೇಳದಿರಲಿ ಎಂಬ ಪ್ರಾರ್ಥನೆಯಷ್ಟೆ…


ಇದನ್ನೂ ಓದಿ: ವಿದೇಶಕ್ಕೆ ತೆರಳುವವರಿಗೆ ಲಸಿಕೆ ಆದ್ಯತೆ: ಕೊವ್ಯಾಕ್ಸಿನ್ ಹಾಕಿಸಿಕೊಂಡವರು ವಿದೇಶಕ್ಕೆ ಹೋಗಲಾಗದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಹಸ್ತಕ್ಷೇಪ ಆರೋಪ; ಬಂಗಾಳ ರಾಜ್ಯಪಾಲ ಆನಂದ ಬೋಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ರಾಜ್ಯದಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರವೇಶಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗುರುವಾರ ಆರೋಪ ಮಾಡಿದೆ. "2024ರ ಲೋಕಸಭೆ...