Homeಕರೋನಾ ತಲ್ಲಣಪತ್ರಿಕೋದ್ಯಮ 2020: ಸ್ವಂತದ್ದೇ ಸ್ವಯ ತಪ್ಪಿದವರ ಊರ ಉಸಾಬರಿ

ಪತ್ರಿಕೋದ್ಯಮ 2020: ಸ್ವಂತದ್ದೇ ಸ್ವಯ ತಪ್ಪಿದವರ ಊರ ಉಸಾಬರಿ

- Advertisement -
- Advertisement -

ಹಿಂದೆಂದೂ ಕಂಡು-ಕೇಳರಿಯದಷ್ಟು ಮಂದಿ ಪತ್ರಕರ್ತರನ್ನು ದೇಶದಾದ್ಯಂತ ಮಾಧ್ಯಮ ಸಂಸ್ಥೆಗಳು ಈ ವರ್ಷ ನಡುನೀರಲ್ಲಿ ಕೈಬಿಟ್ಟವು. ಕಾರಣ? ಕೊರೊನಾ ಜಗನ್ಮಾರಿ.

ಸುಮಾರಿಗೆ ಮಾರ್ಚ್-ಏಪ್ರಿಲ್ ಹೊತ್ತಿಗೆ ಆರಂಭಗೊಂಡ ಈ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಈ ಪ್ರಕ್ರಿಯೆಯಲ್ಲಿ, ಉದ್ಯೋಗ ನಷ್ಟ ಮಾತ್ರವಲ್ಲದೇ ಸೌಕರ್ಯ ನಷ್ಟ, ಸಂಬಳ ನಷ್ಟಗಳೂ ಸಂಭವಿಸಿವೆ. ಕೆಲವು ಪತ್ರಿಕೆಗಳು, ಕೆಲವು ಆವೃತ್ತಿಗಳು ಬಾಗಿಲು ಹಾಕಿವೆ. ಇದು ವಾಸ್ತವ. ಇದು ಈಗ ಕುತೂಹಲಕರ ಸುದ್ದಿಯಾಗಿಯೂ ಉಳಿದಿಲ್ಲ.

PC : Prajavani, (ಎಲ್. ಆದಿಮೂಲಂ)

ನಿಜಕ್ಕೂ ಕುತೂಹಲಕರ ಸುದ್ದಿ ಎಂದರೆ, ಭಾರತೀಯ ಸುದ್ದಿಪತ್ರಿಕೆಗಳ ಸೊಸೈಟಿ (INS) ಅಧ್ಯಕ್ಷ ಎಲ್. ಆದಿಮೂಲಂ ಅವರು ಇದೇ ಡಿಸೆಂಬರ್ ಆದಿಯಲ್ಲಿ ಹೇಳಿಕೆ ನೀಡಿ, ಕಳೆದ 8 ತಿಂಗಳಲ್ಲಿ ಭಾರತೀಯ ಸುದ್ದಿಪತ್ರಿಕೆಗಳಿಗೆ 12,500 ಕೋಟಿ ರೂಗಳ ನಷ್ಟ ಸಂಭವಿಸಿದೆ. ವರ್ಷಾಂತ್ಯಕ್ಕೆ ಇದು 16,000 ಕೋಟಿಯಷ್ಟಾಗಲಿದೆ. ಸರ್ಕಾರ ಮಧ್ಯಪ್ರವೇಶಿಸಿ ಸ್ಟಿಮ್ಯುಲಸ್ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಅಂದರೆ, ಪತ್ರಿಕೆಯ ಮಾಲಿಕವರ್ಗಕ್ಕೆ ತಾವೆಲ್ಲಿದ್ದೇವೆ, ತಮಗೇನು ಬೇಕಿದೆ ಎಂಬುದು ಸ್ಪಷ್ಟವಾಗಿ ಗೊತ್ತಿದೆ, ಬಾಯಿಬಿಟ್ಟು ಕೇಳಿದ್ದಾರೆ!

ಈಗ ಒಂದು ಪ್ರಶ್ನೆ ಕೇಳಿಕೊಳ್ಳಿ

ಭಾರತದಲ್ಲಿ ಕಳೆದ ಎಂಟು ತಿಂಗಳುಗಳಲ್ಲಿ ಕೆಲಸ ಕಳೆದುಕೊಂಡ ಪತ್ರಕರ್ತರ ಸಂಖ್ಯೆ ಎಷ್ಟು? ಎಷ್ಟು ಜನರಿಗೆ ಸಂಬಳ ನಷ್ಟ ಆಗಿದೆ? ಆ ನಷ್ಟವಾದ ಸಂಬಳದ ಒಟ್ಟು ಪ್ರಮಾಣ ಎಷ್ಟು?

ಜಗತ್ತಿಗೆಲ್ಲ ಸುದ್ದಿಕೊಡುವವರು ತಾವೆಂದುಕೊಂಡಿರುವ ಪತ್ರಕರ್ತ ಸಮುದಾಯಕ್ಕೆ, ಸ್ವತಃ ತಮಗೇ ಸಂಭವಿಸಿರುವ ಇಂತಹದೊಂದು ಮರ್ಮಾಘಾತದ ಪ್ರಮಾಣವನ್ನು ಒಂದು ವರ್ಷದ ಸುದೀರ್ಘ ಅವಧಿಯಲ್ಲಿ ಇನ್ನೂ ಅಂದಾಜಿಸಿಕೊಳ್ಳಲು ಸಾಧ್ಯ ಆಗಿಲ್ಲ. ಸುದ್ದಿಮನೆಗಳ ಒಳಗೆ ಇನ್ನೂ ಬಾಕಿ ಉಳಿದುಕೊಂಡಿರುವವರಿಗೆ ತಮ್ಮ ಸಹೋದ್ಯೋಗಿಗಳು ಉದ್ಯೋಗ ಕಳೆದುಕೊಂಡರು, ಅವರು ಹೇಗಿದ್ದಾರೆ ಎಂದು ಇಣುಕಿ ನೋಡಬೇಕೆಂದೂ ಅನ್ನಿಸಲಿಲ್ಲ.

ಇದು ಈವತ್ತಿನ ಭಾರತೀಯ ಪತ್ರಿಕೋದ್ಯಮದ ವಾಸ್ತವ ಸ್ಥಿತಿ. ಹೀಗೆ, ತಮ್ಮದೇ ಸ್ವಯ ತಪ್ಪಿಹೋದವರಿಂದ ಊರ ಉಸಾಬರಿ ಏನು ನಿರೀಕ್ಷಿಸಬಹುದು?

ಅಂತಾರಾಷ್ಟ್ರೀಯ ಸನ್ನಿವೇಶ

ಜಾಗತಿಕವಾಗಿ ಈ ವರ್ಷ, ಸಾಂಪ್ರದಾಯಿಕ ಮಾಧ್ಯಮಗಳು, ನವ ಮಾಧ್ಯಮ ಸೋಷಿಯಲ್ ಮೀಡಿಯಾದ ಎದುರು ಕಳೆದುಕೊಂಡದ್ದನ್ನು ಮರುಗಳಿಸಿಕೊಂಡ ವರ್ಷ ಅನ್ನಿಸುತ್ತದೆ. 2016ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರನ್‌ಅಪ್ – ಅಂತಾರಾಷ್ಟ್ರೀಯವಾಗಿ ಮಾಧ್ಯಮಗಳು ಹಿನ್ನೆಲೆಗೆ ಸರಿದು, ಸೋಷಿಯಲ್ ಮೀಡಿಯಾ ಮತ್ತು ‘ಫೇಕ್ ಸುದ್ದಿಗಳು’ ವಿಜೃಂಭಿಸಿದ ಅವಧಿ. ಆದರೆ, 2020ರ ಅಮೆರಿಕ ಅಧ್ಯಕ್ಷರ ಚುನಾವಣೆಯ ರನ್‌ಅಪ್ ವೇಳೆ, ಸೋಷಿಯಲ್ ಮೀಡಿಯಾಗಳು ತಾವು ಸುಭಗರೆಂದು ಸಾಬೀತುಪಡಿಸಿಕೊಳ್ಳಲು ಸರ್ಕಾರಗಳೆದುರು ಮಂಡಿಯೂರಬೇಕಾಯಿತು ಮತ್ತು ದಮ್ಮು ಕಟ್ಟಿಕೊಂಡೇ ಚುನಾವಣೆಯ ಭಾಗವಾಗಬೇಕಾಯಿತು.

ಕೊರೊನಾ ಜಗನ್ಮಾರಿ ಮತ್ತದರ ಹಿಂದಿನ ಕಾರ್ಪೊರೆಟ್ ಹಿತಾಸಕ್ತಿಗಳನ್ನು ಸಲಹುತ್ತಲೇ, ಕೊರೊನಾ ಜಗನ್ಮಾರಿ ನಿರ್ವಹಣೆಯ ಹೆಸರಲ್ಲೆ ಜಗತ್ತಿನಾದ್ಯಂತ ಪ್ರಜಾತಂತ್ರದ ಹಿತಾಸಕ್ತಿಗಳಿಗೆ ಸವಾಲಾಗಿ ನಿಂತ ಅಮೆರಿಕ ಅಧ್ಯಕ್ಷ ಟ್ರಂಪ್, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ಬ್ರೆಜಿಲ್ ಅಧ್ಯಕ್ಷ ಬೊಲ್ಸನಾರೊ, ಇಸ್ರೇಲ್ ಪ್ರಧಾನಿ ನೆತಾನ್ಯಾಹು, ಟರ್ಕಿ ಅಧ್ಯಕ್ಷ ಎರ್ದೊಗಾನ್, ಪಿಲಿಪೈನ್ಸ್ ಅಧ್ಯಕ್ಷ ದುತರ್ತ್, ಚೀನಾದ ಅಧ್ಯಕ್ಷ ಕ್ಸಿ-ಜಿನ್ಪಿಂಗ್, ರಶ್ಯಾದ ಅಧ್ಯಕ್ಷ ಪುಟಿನ್, ಹಂಗರಿ ಪ್ರಧಾನಿ ವಿಕ್ಟರ್ ಓರ್ಬಾನ್ ಮತ್ತು ಭಾರತದ ಪ್ರಧಾನಿ ಮೋದಿ ಅವರನ್ನು ಅವರವರ ಗಾತ್ರದಲ್ಲಿ ತೋರಿಸುವುದು ಜಾಗತಿಕ ಮಾಧ್ಯಮಗಳಿಗೆ ಸಾಧ್ಯವಾಯಿತು ಎನ್ನುವುದು ಕೂಡ ಮಹತ್ವದ ಬೆಳವಣಿಗೆ.

PC : WBUR

ಅಮೆರಿಕದಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಆಂದೋಲನದ ಸ್ವರೂಪ ತಳೆದದ್ದು, ವರ್ಷವಿಡೀ ಆಸ್ಟ್ರೇಲಿಯ-ಅಮೆರಿಕಗಳನ್ನು ಕಂಗೆಡಿಸಿದ ಕಾಡ್ಗಿಚ್ಚು ಮತ್ತು ಕೊರೊನಾ ಜಗನ್ಮಾರಿ ಈ ವರ್ಷವಿಡೀ ಮಾಧ್ಯಮಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದವು. ಇದೆಲ್ಲದರ ನಡುವೆ 42 ಮಂದಿ ಪತ್ರಕರ್ತರು ಈ ವರ್ಷ ವೃತ್ತಿಗೆ ಆಹುತಿಯಾದರೆ, ಜಗತ್ತಿನ 34 ದೇಶಗಳಲ್ಲಿ 235ಮಂದಿ ಪತ್ರಕರ್ತರು ವೃತ್ತಿನಿಭಾವಣೆಯ ಕಾರಣಕ್ಕಾಗಿ ಜೈಲು ಸೇರಬೇಕಾಯಿತು. ಮೆಕ್ಸಿಕೊದಲ್ಲಿ ಸತತ ನಾಲಕ್ಕನೇ ಬಾರಿಗೆ ಜಗತ್ತಿನಲ್ಲೇ ಅತಿ ಹೆಚ್ಚು ಮಂದಿ ಪತ್ರಕರ್ತರು ಕೊಲೆಯಾದರು (ಈ ವರ್ಷ 13 ಮಂದಿ). ಆ ನಂತರದ ಸ್ಥಾನಗಳು ಕ್ರಮವಾಗಿ ಪಾಕಿಸ್ತಾನ (5), ಮತ್ತು ಅಫ್ಘಾನಿಸ್ತಾನ, ಭಾರತ, ಇರಾಕ್, ನೈಜೀರಿಯಾ (ತಲಾ3) ದೇಶಗಳದು.

ದೇಶದೊಳಗೆ ಏನಾಯ್ತು?

ಭಾರತದೊಳಗೆ ಮಾಧ್ಯಮಗಳ ಪಾಲಿಗೆ ಈ ವರ್ಷ “ಕಳೆದುಕೊಳ್ಳುತ್ತಿರುವ ಸಾಮಾಜಿಕ ಬದ್ಧತೆಯನ್ನು ಮರುಪ್ರಕಟಿಸುವ ಅದ್ಭುತ ಅವಕಾಶವೊಂದನ್ನು ಕೈಚಲ್ಲಿದ ವರ್ಷ” ಎಂದೇ ದಾಖಲಾಗಬೇಕು. ಕೊರೊನಾ ಜಗನ್ಮಾರಿ ಭಾರತವನ್ನು ಪ್ರವೇಶಿಸುವ ಸಂದರ್ಭದಲ್ಲಿ 22 ಮಾರ್ಚ್‌ನಿಂದ 31 ಮೇ ತನಕ ದೇಶದಲ್ಲಿ ಲಾಕ್‌ಡೌನ್ ಮಾಡಿದಾಗ ವರ್ತಿಸಿದ ರೀತಿ ಅಕ್ಷಮ್ಯವಾಗಿತ್ತು. ಅದಕ್ಕೆ ಚಾರ್ಜ್ ಶೀಟ್ ಇಲ್ಲಿದೆ:

* ವರ್ಷಾರಂಭದಲ್ಲಿ ಟ್ರಂಪ್ ಭೇಟಿಯ (ನಮಸ್ತೇ ಟ್ರಂಪ್: ಫೆಬ್ರವರಿ24-25) ತುತ್ತೂರಿ ಮತ್ತು CAA-NRC ಪ್ರತಿಭಟನೆಗಳ ವಿರುದ್ಧ ಸರ್ಕಾರದ ಸಮರ್ಥನೆಯಲ್ಲಿ ತೊಡಗಿದ್ದ ಮಾಧ್ಯಮಗಳಿಗೆ ಜಗತ್ತಿನಾದ್ಯಂತ ಹರಡುತ್ತಿದ್ದ ಕೊರೊನಾ ಭಾರತವನ್ನೂ ಪ್ರವೇಶಿಸಬಹುದೆಂಬ ಪ್ರಜ್ಞೆ ಮೂಡಿರಲಿಲ್ಲ.

PC : Times of India

* ಕೊರೊನಾ ಭಾರತದಲ್ಲಿ ಕಾಣಿಸಿಕೊಂಡಿತೆನ್ನುವಾಗ, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಬದಲು ವುಹಾನ್ ವೈರಸ್, ತಬ್ಲೀಘಿ ವೈರಸ್ ಎಂದು ರಸೋತ್ಪತ್ತಿಯ ಪ್ರಯತ್ನಗಳು ಆರಂಭಗೊಂಡವು.

* ಲಾಕ್‌ಡೌನ್ ಆರಂಭಗೊಂಡು, ದೇಶದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಾಗ, ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ರಸ್ತೆಗಿಳಿದು ಮನೆಯ ಕಡೆ ತೆರಳಲಾರಂಭಿಸಿದಾಗ ಉಂಟಾಗಿರುವ ಸನ್ನಿವೇಶವನ್ನು ಜನರ ಕಣ್ಣಿನಿಂದ ನೋಡುವ ಬದಲು ಸರ್ಕಾರದ ಕಣ್ಣಿನಿಂದ ಕಂಡು, ರಾಜಕೀಯ ರಾಡಿ ಎಬ್ಬಿಸಿದ ಶ್ರೇಯಸ್ಸು ಮಾಧ್ಯಮಗಳಿಗೆ ಸಲ್ಲಬೇಕು. ಇದು ಯಾವ ಹಂತದ ತನಕ ಮುಂದುವರಿಯಿತೆಂದರೆ, ಸ್ವತಃ ಕೇಂದ್ರ ಸರ್ಕಾರ ಕೊರೊನಾ ಸಂಬಂಧಿ ಸುದ್ದಿಗಳ ಪ್ರಕಟಣೆಗೆ ‘ಸೆನ್ಸಾರ್’ ವಿಧಿಸಲು ಸುಪ್ರೀಂ ಕೋರ್ಟಿನ ಅನುಮತಿ ಕೋರಿದಾಗಲೂ ಮಾಧ್ಯಮಗಳು ಅದರ ಪರವಾಗಿ ನಿಂತವು. ಕಡೆಗೆ ಸ್ವತಃ ಸುಪ್ರೀಂಕೋರ್ಟ್ ಅದಕ್ಕೆ ಅನುಮತಿ ನಿರಾಕರಿಸಿತು.

* ಲಾಕ್‌ಡೌನ್ ತಂದಿತ್ತ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹೊಡೆತಗಳಿಂದ ತತ್ತರಿಸಿದ್ದ ಜನ ಪರಿಹಾರಕ್ಕೆಂದು ಕಾತರಿಸುತ್ತಿದ್ದಾಗ, ಹೊಟ್ಟೆಗಿಲ್ಲದೆ ಬವಣೆಪಡುತ್ತಿದ್ದಾಗ ಮಾಧ್ಯಮಗಳ ಕಡೆಯಿಂದ ಅವರಿಗೆ ದೊರೆತದ್ದು ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ 24×7 ಬಣ್ಣನೆ.

* ಸ್ವತಃ ಮಾಧ್ಯಮಗಳೇ ದೇಶದಾದ್ಯಂತ ಸಿಬ್ಬಂದಿ ಕಡಿತ, ಸಂಬಳ ಕಡಿತ, ಆವೃತ್ತಿಗಳ ಮುಚ್ಚುಗಡೆಯಲ್ಲಿ ತೊಡಗಿದಾಗಲೂ ಧ್ವನಿ ಎತ್ತಲು ಮಾಧ್ಯಮಗಳಿಗೆ ಸಾಧ್ಯವಾಗಲಿಲ್ಲ ಮತ್ತು ಅವರೆಲ್ಲಾ ಅನಿವಾರ್ಯ ಎಂದು ಅವರ ಓದುಗರಿಗೂ ಅನ್ನಿಸಲಿಲ್ಲ!

* ಕೊರೊನಾ ನಿರ್ವಹಣೆಯಲ್ಲಿ ಅವ್ಯವಸ್ಥೆ, ಲೆಕ್ಕವಿಲ್ಲದಷ್ಟು ಯು ಟರ್ನ್‌ಗಳು, ಪಿ ಎಂ ಕೇರ್ಸ್ ನಿಗೂಢತೆ, ಸೋಂಕಿತರ-ಸಾವಿನ ಸಂಖ್ಯೆಗಳಲ್ಲಿನ ವ್ಯತ್ಯಾಸ ಇವೆಲ್ಲ ಜನಸಾಮಾನ್ಯರ ಗಮನಕ್ಕೆ ಬಂದರೂ ಮಾಧ್ಯಮಗಳ ಗಮನಕ್ಕೆ ಬರಲಿಲ್ಲ. ಅವರು ಚಪ್ಪಾಳೆ, ಜಾಗಟೆ, ಹೂಮಳೆಗಳ ಗುಂಗಿನಲ್ಲೇ ಉಳಿದರು. ಅಗತ್ಯ ಬಿದ್ದಾಗಲೆಲ್ಲ ಗಡಿ ವಿವಾದ -ಯುದ್ಧೋನ್ಮಾದಗಳನ್ನು ಸೃಷ್ಟಿಸಲಾಯಿತು. ಇದೆಲ್ಲ ಯಾವಮಟ್ಟಕ್ಕೆ ಹೋಯಿತೆಂದರೆ, ಚೀನಾ ರಾಯಭಾರಿಗಳ ಸಂದರ್ಶನ ನಡೆಸಿದ್ದಕ್ಕಾಗಿ PTI ಸುದ್ದಿಸಂಸ್ಥೆಗೆ ಪ್ರಸಾರ ಭಾರತಿ ಕಡೆಯಿಂದ ಕಾರಣ ಕೇಳಿ ನೋಟಿಸು ಹೋಗುವ ಮಟ್ಟಕ್ಕೆ!

* ಕೊರೊನಾ ಜಗನ್ಮಾರಿಯ ನಿರ್ವಹಣೆಯಲ್ಲಿನ ಅವ್ಯವಸ್ಥೆಗಳನ್ನು ಮುಚ್ಚಿಡುವುದಕ್ಕಾಗಿ ದೇಶದಾದ್ಯಂತ ವೃತ್ತಿಪರ ಪತ್ರಕರ್ತರ ಮೇಲೆ ಸರ್ಕಾರದ ದಾಳಿ ನಡೆದಾಗಲೂ ಅದರ ವಿರುದ್ಧ ಧ್ವನಿ ಎತ್ತುವುದು ಸರ್ಕಾರದ ಮಿತ್ರ ಮಾಧ್ಯಮಗಳಿಗೆ ಸಾಧ್ಯ ಆಗಲಿಲ್ಲ. ಆ ಅವಧಿಯಲ್ಲಿ ಸುಮಾರು 55 ಮಂದಿ ಪತ್ರಕರ್ತರನ್ನು ಸರ್ಕಾರ ಒಂದೋ ಬಂಧಿಸಿತು, ಇಲ್ಲವೇ ಅವರ ವಿರುದ್ಧ ಪ್ರಕರಣ ದಾಖಲಿಸಿತು ಅಥವಾ ಬೆದರಿಸಿತು. ಉತ್ತರ ಪ್ರದೇಶ (11), ಜಮ್ಮು ಮತ್ತು ಕಾಶ್ಮೀರ (6), ಹಿಮಾಚಲ ಪ್ರದೇಶ (5) ಇಂತಹ ಘಟನೆಗಳಲ್ಲಿ ಮುಂಚೂಣಿಯಲ್ಲಿದ್ದವು. #ಡಿಯರ್_ಮೀಡಿಯಾಕ್ಕೆ ಇದು ಏನೂ ಅನ್ನಿಸಲಿಲ್ಲ.

* ಕೊರೊನಾ ಜಗನ್ಮಾರಿಯ ಕಾರಣದಿಂದಾಗಿ ಸಂಭವಿಸುತ್ತಿದ್ದ ಸಾವಿರಾರು ಸಾವಿಗೆ ‘ಡಿಗ್ನಿಟಿ’ ತೋರುವ ಬದಲು, ಖಾಸಗಿ ಆಸ್ಪತ್ರೆಗಳ ದುಡ್ಡಿನ ಹಪಾಹಪಿಯನ್ನು ಬಯಲು ಮಾಡುವ ಬದಲು ಸರ್ಕಾರದ ಪ್ಯಾಕೇಜುಗಳ ಪ್ರಚಾರ, ರಾಮಮಂದಿರ ಸ್ಥಾಪನೆಯ ನಿರ್ಧಾರದಂತಹ ಸಂಗತಿಗಳು ಆದ್ಯತೆ ಪಡೆದವು.

PC : Zee News

* ಜನ ಆತಂಕದಲ್ಲಿರುವ ಸನ್ನಿವೇಶದಲ್ಲಿ ಸಂಸತ್ತನ್ನು ಬೈಪಾಸ್ ಮಾಡಿ ಸುಗ್ರೀವಾಜ್ಞೆಗಳ ಮೂಲಕ ಹೊಸ ಹೊಸ ಕಾನೂನುಗಳನ್ನು ಜಾರಿಗೆ ತರುವ ಕೆಲಸವನ್ನು ಸರ್ಕಾರ ಮಾಡಿದಾಗ ಅದನ್ನು ಚರ್ಚೆಯ ಮುನ್ನೆಲೆಗೆ ತರುವ ಬದಲು, ಕೊರೊನಾ ವ್ಯಾಕ್ಸೀನು ಇನ್ನೇನು ಬಂತು ಎಂಬ ಮೊಣಕೈಗೆ ಬೆಲ್ಲ ಉದ್ದುವ ಕೆಲಸದಲ್ಲಿ ಮಾಧ್ಯಮಗಳು ನಿರತರಾದರು.

* ಈಗ ಸ್ವತಃ ರೈತರು ಲಕ್ಷಾಂತರ ಸಂಖ್ಯೆಯಲ್ಲಿ ದಿಲ್ಲಿಗೆ ಬಂದಿಳಿದು ನ್ಯಾಯಕೊಡಿ ಎಂದು ಕೇಳುತ್ತಿರುವಾಗ ಅದಕ್ಕೆ ಸ್ಪಂದಿಸುವ ಬದಲು ಅವರ ಕಾರು, ಅಲ್ಲಿನ ಸವಲತ್ತುಗಳು ಈ ಮಾಧ್ಯಮಗಳಿಗೆ ಕಾಣಿಸುತ್ತಿವೆ. ಅವರನ್ನು ರೈತರ ಸೋಗಿನಲ್ಲಿರುವ ಖಲಿಸ್ಥಾನವಾದಿಗಳು, ನಗರ ನಕ್ಸಲರು ಎಂದು ಜರೆಯಲಾಗುತ್ತಿದೆ.

ಇವು ದೇಶದ ಮಾಧ್ಯಮ ಕದಡಿ ಮಾಡಿಕೊಂಡಿರುವ ರಾಡಿಯ ಮಹಾಸಾಗರದ ಕೇವಲ ಹತ್ತು ಹನಿಗಳು. ಇಂತಹ ನೂರಾರು ಸನ್ನಿವೇಶಗಳನ್ನು ಉದಾಹರಣೆ, ಅಂಕಿಸಂಖ್ಯೆಗಳ ಸಹಿತ ಕೊಡಬಹುದು. ಒಟ್ಟಿನಲ್ಲಿ ಮಾಧ್ಯಮಗಳು ದೇಶದ ಸಾಮಾಜಿಕ ಬದುಕಿಗೆ ಕೈಗನ್ನಡಿಯಾಗಿ, ಮುಂಬರುವ ದಿನಗಳಿಗೆ ದಿಕ್ಸೂಚಿಯಾಗಿ ನಿಲ್ಲಬಲ್ಲವು ಎಂಬ ಜನಸಾಮಾನ್ಯನ ನಿರೀಕ್ಷೆಯನ್ನು ಭಾರತದಲ್ಲಿ ಸ್ವತಃ ಮಾಧ್ಯಮಗಳೇ ತಮ್ಮ ಕಾಲಡಿ ಹೊಸಕಿ ಹಾಕಿದ ವರ್ಷ ಇದು. ಇದಕ್ಕೆಲ್ಲ ಕಿರೀಟ ಇಟ್ಟಂತೆ ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಇಂಡೆಕ್ಸ್‌ನಲ್ಲಿ ಭಾರತದ ಸ್ಥಾನ 2020ರಲ್ಲಿ ಒಟ್ಟು 180 ದೇಶಗಳಲ್ಲಿ 140 ರಿಂದ 142ಕ್ಕೆ ಇಳಿದಿದೆ!

ಕರ್ನಾಟಕದಲ್ಲಿ ಏನ್ ಕತೆ?

ದೇಶದ ಮಾಧ್ಯಮಗಳ ಸಂದರ್ಭದಲ್ಲಿ ಚರ್ಚಿಸಿದ್ದನ್ನೆಲ್ಲವನ್ನೂ ಅದಕ್ಕಿಂತಲೂ ಕೆಟ್ಟದಾಗಿ, ಹಳಸಿದ ಮಸಾಲೆ ಮತ್ತು ಕಳಕು ನೀರು ಬೆರಸಿ ‘ಮುಗ್ಗಿದ’ ಸುದ್ದಿಗಳನ್ನು ಕೊಟ್ಟ ಸಾಧನೆ ಕನ್ನಡ ಮಾಧ್ಯಮಗಳದು. ಕೊರೊನಾ ‘ಮರಣ ಮೃದಂಗ’ದ ನಡುವೆ ತಮ್ಮ ತಾಳ-ತಳ ಎರಡೂ ತಪ್ಪಿಹೋದದ್ದು ಅವರಿಗೆ ಗೊತ್ತಾಗಲೇ ಇಲ್ಲ.

ಸುದ್ದಿಗಳಲ್ಲಿ ಯಾವುದು ಸುಳ್ಳು, ಯಾವುದು ಉತ್ಪ್ರೇಕ್ಷೆ, ಯಾವುದು ಪ್ರಚಾರ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ವೃತ್ತಿಪರರೇ ತುಂಬಿರುವ ಕನ್ನಡಮಾಧ್ಯಮಗಳು ಇಡಿಯ ವರ್ಷ ಲಭ್ಯವಿದ್ದ ಅವಕಾಶವನ್ನು ಹೇಗೆ ವ್ಯರ್ಥಗೊಳಿಸಿಕೊಂಡವು ಎಂಬುದನ್ನು ವಿವರಿಸುವುದಕ್ಕೆ ಈಗ ವರ್ಷದ ಕೊನೆಯಲ್ಲಿ ನಡೆದಿರುವ ಶಾಲೆ ತೆರೆಯುವ ಕುರಿತಾದ ಚರ್ಚೆಯೊಂದೇ ಸಾಕು.

PC : Medical Xpress

ಜಗತ್ತಿನಾದ್ಯಂತ ಶಾಲೆಗಳನ್ನು ಮರುತೆರೆಯುವ ಕುರಿತು ಚರ್ಚೆ ನಡೆಯುತ್ತಿದ್ದು, ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಈ ನಿರ್ಧಾರದ ಪರವಾಗಿದ್ದರೂ, ಕನ್ನಡ ಮಾಧ್ಯಮಗಳು ಎರಡನೇ ಅಲೆ, ಬ್ರಿಟಿಷ್ ವೈರಸ್, ನೈಜೀರಿಯಾ ವೈರಸ್ ಎಂದು ಭಯ ಹುಟ್ಟಿಸುವುದರಲ್ಲಿ ನಿರತವಾಗಿವೆ. ವೈಜ್ಞಾನಿಕ ವಾಸ್ತವಗಳು ಮತ್ತು ಲಭ್ಯ ಅಂಕಿಅಂಶಗಳ ಆಧಾರದಲ್ಲಿ ಜನರ ನಡುವೆ ಭರವಸೆ ಹುಟ್ಟಿಸುವ ಬದಲು, ಶಾಲೆ ತೆರೆಯುವುದಕ್ಕೆ ಜನಮಾನಸದಲ್ಲಿ ಭಾವನಾತ್ಮಕ ವಿರೋಧವನ್ನು ಹುಟ್ಟಿಹಾಕುತ್ತಿರುವ ಕನ್ನಡ ಮಾಧ್ಯಮಗಳು, ತಮ್ಮ ಅಕ್ಷರ ಶತ್ರುತ್ವವನ್ನು ಮತ್ತೆ ಮತ್ತೆ ಸಾಬೀತುಮಾಡುತ್ತಿವೆ.

ಇಷ್ಟನ್ನುಳಿದು, ಕನ್ನಡದ ಮುಖ್ಯವಾಹಿನಿ ಮಾಧ್ಯಮದಲ್ಲಿ ಜನಪರವಾದ, ಪ್ರಾಮಾಣಿಕವಾದ ಯಾವುದಾದರೂ ಸುದ್ದಿಗಳು ಕಾಣಿಸಿಕೊಂಡದ್ದಿದ್ದರೆ, ದಯಮಾಡಿ ಹಂಚಿಕೊಳ್ಳಿ. ನನಗೂ ಓದಿ ಕೃತಾರ್ಥನಾಗುವ ಹಂಬಲ ಇದೆ!

ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ನಿವಾಸಿ. ಉದಯವಾಣಿ ದಿನಪತ್ರಿಕೆಯ ಆರೋಗ್ಯ ಪುರವಣಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅವರು ನಂತರ ಅದರಿಂದ ಹೊರಬಂದು ಸ್ವಂತ ಉದ್ಯಮ ಆರಂಭಿಸಿದ್ದಾರೆ. ನುಣ್ಣನ್ನ ಬೆಟ್ಟ ಅವರ ಮೊದಲ ಪ್ರಕಟಿತ ಕೃತಿ


ಇದನ್ನೂ ಓದಿ: ‘ಗೋ ಕೊರೊನಾ ಗೋ’ ಖ್ಯಾತಿಯ ಕೇಂದ್ರ ಸಚಿವರ ಹೊಸ ಘೋಷಣೆ – ‘ನೋ ಕೊರೊನಾ ನೋ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...