ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಎಲೆಕ್ಟಿವ್ ಸಬ್ಜೆಕ್ಟ್ ಆಗಿ ಪರಿಚಯಿಸಲು ಮಧ್ಯಪ್ರದೇಶ ಸರ್ಕಾರ ಯೋಜಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ರಾಜ್ಯದ 1,360 ಕಾಲೇಜುಗಳಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
“ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ, ವಿದ್ಯಾರ್ಥಿಗಳು ಆಧುನಿಕ ಶಿಕ್ಷಣವನ್ನು ಪಡೆಯಬೇಕು ಮತ್ತು ಶ್ರೀಮಂತ ಭಾರತೀಯ ಇತಿಹಾಸವನ್ನು ಕಲಿಯಬೇಕು. ಗೀತೆ ಮತ್ತು ರಾಮಾಯಣಗಳು ಕೇವಲ ಧಾರ್ಮಿಕ ಪುಸ್ತಕಗಳಲ್ಲ ಬದಲಾಗಿ ನಮಗೆ ಜೀವನ ಮೌಲ್ಯಗಳನ್ನು ಕಲಿಸುತ್ತವೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಜೀವನದ ಮೌಲ್ಯಗಳನ್ನು ಬೆಳೆಸಲು ಇದನ್ನು ಮಾಡಲಾಗುತ್ತಿದೆ” ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಮೋಹನ್ ಯಾದವ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಠ್ಯಪರಿಷ್ಕರಣೆಯ ಬೇರಡಗಿರುವುದು ’ರಾಷ್ಟ್ರೀಯ ಶಿಕ್ಷಣ ನೀತಿ 2020’ರಲ್ಲಿ
ಮಧ್ಯಪ್ರದೇಶದ ಉನ್ನತ ಶಿಕ್ಷಣ ಇಲಾಖೆಯ ಪಠ್ಯಕ್ರಮ ಸಮಿತಿಯ ಅಧಿಕಾರಿಯೊಬ್ಬರು, “ಭಗವದ್ಗೀತೆಯ ಬೋಧನೆಗಳನ್ನು ಅನುಸರಿಸುತ್ತಾ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಪ್ರಸಿದ್ಧ ವ್ಯಕ್ತಿಗಳಾದ ಅನ್ನಿ ಬೆಸೆಂಟ್ ಅವರ ಉದಾಹರಣೆಗಳನ್ನು ಸಹ ಈ ಎಲೆಕ್ಟಿವ್ ಕೋರ್ಸ್‌ನಲ್ಲಿ ಸೇರಿಸಲಾಗುವುದು” ಎಂದಿದ್ದಾರೆ.
ಜೊತೆಗೆ, “ಇದರಲ್ಲಿ ಕೇವಲ ಶ್ಲೋಕಗಳು ಮತ್ತು ಅವುಗಳ ಅನುವಾದಗಳು ಮಾತ್ರವಲ್ಲ, ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢರನ್ನಾಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರವು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಚಾಣಕ್ಯನ ಕೃತಿಗಳನ್ನು ಐಚ್ಛಿಕ ವಿಷಯವಾಗಿ ಪರಿಚಯಿಸಲು ಯೋಜಿಸುತ್ತಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತದ ರಾಜ್ಯಗಳಾದ ಗುಜರಾತ್ ಮತ್ತು ಕರ್ನಾಟಕದಲ್ಲಿ ಈಗಾಗಲೇ ಭಗವದ್ಗೀತೆಯನ್ನು ಪಠ್ಯಕ್ರಮದ ಭಾಗವಾಗಿ ಪರಿಚಯಿಸುವ ಯೋಜನೆಗಳನ್ನು ಘೋಷಿಸಲಾಗಿದೆ.
ಇತ್ತ ರಾಜ್ಯದಲ್ಲಿ ಈಗಾಗಲೇ ಪಠ್ಯ ಪುಸ್ತಕ ಪರಿಷ್ಕರಣೆ ಭಾರಿ ವಿವಾದಕ್ಕೆ ಒಳಗಾಗಿದೆ. ಹುಡುಕಿದಷ್ಟು ಮತ್ತಷ್ಟೂ ತಪ್ಪುಗಳು, ಹುಳುಕುಗಳು ಕಾಣಿಸುತ್ತಲೇ ಇವೆ. ಹೀಗಾಗಿ ಹಳೆಯ ಪಠ್ಯ ಪುಸ್ತಕಗಳನ್ನೆ ಮಕ್ಕಳಿಗೆ ನೀಡಬೇಕು ಎಂದು ಚಿಂತಕರು, ಸಾಮಾಜಿಕ ಹೋರಾಟಗಾರರು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಪಠ್ಯ ಪುಸ್ತಕದಲ್ಲಿ ‘ಆಡಿಸಿ ನೋಡು ಬೀಳಿಸಿ ನೋಡು’ ಹಾಡು: ಬರೆದವರ ಹೆಸರನ್ನೇ ಬದಲಿಸಿದ ಚಕ್ರತೀರ್ಥ ಸಮಿತಿ!


