ಮಹಾರಾಷ್ಟ್ರದ 21 ವರ್ಷದ ಯುವತಿಯನ್ನು ಹಣ ನೀಡಿ ಖರೀದಿಸಿದ್ದ ಮಧ್ಯಪ್ರದೇಶದ ಉಜ್ಜಯಿನಿ ನಗರದ ದಂಪತಿ ಆಕೆಯನ್ನು ಹಲವು ತಿಂಗಳು ಬಂಧಿಸಿ, ಅತ್ಯಾಚಾರ ನಡೆಸಿ, ಬಲವಂತವಾಗಿ ಮಗುವನ್ನು ಹೆರುವಂತೆ ಮಾಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಯುವತಿಯನ್ನು 16 ತಿಂಗಳ ಕಾಲ ಸೆರೆಯಲ್ಲಿಟ್ಟು ಅತ್ಯಾಚಾರ ಎಸಗಿ ಮಗುವಿಗೆ ಜನ್ಮ ನೀಡುವಂತೆ ಮಾಡಿದ ಆರೋಪದ ಮೇಲೆ ಗ್ರಾಮವೊಂದರ ಮಾಜಿ ಉಪ ಸರಪಂಚ್ ರಾಜಪಾಲ್ ಸಿಂಗ್ (38) ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸತ್ಯೇಂದ್ರ ಶುಕ್ಲಾ ತಿಳಿಸಿದ್ದಾರೆ.
ಮಹಾರಾಷ್ಟ್ರದ ನಾಗ್ಪುರ ನಿವಾಸಿಯಾಗಿರುವ ಯುವತಿ ದೇವಾಸ್ ಗೇಟ್ ಬಸ್ ನಿಲ್ದಾಣದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ನವೆಂಬರ್ 6 ರಂದು ಆರೋಪಿ ರಾಜಪಾಲ್ ಸಿಂಗ್ ಆಕೆಯನ್ನು ಬಸ್ ನಿಲ್ದಾಣದ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಎಸೆದಿದ್ದರು. ಪ್ರಜ್ಞೆ ಮರಳಿದ ನಂತರ ಆಕೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಘವೇಶ್ವರ ಭಾರತೀ ಅತ್ಯಾಚಾರ ಪ್ರಕರಣ: ವಿಚಾರಣೆಯಿಂದ ಹಿಂದೆ ಸರಿದ ಹೈಕೋರ್ಟ್ ನ್ಯಾಯಮೂರ್ತಿ
16 ತಿಂಗಳ ಹಿಂದೆ ಮಹಿಳೆಯೊಬ್ಬರ ಸಹಾಯದಿಂದ ಸಂತ್ರಸ್ತ ಯುವತಿಯನ್ನು ರಾಜಪಾಲ್ ಸಿಂಗ್ ಖರೀದಿಸಿ ಉಜ್ಜಯಿನಿಗೆ ಕರೆತಂದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಕರಣದಲ್ಲಿ ದಂಪತಿ ಸೇರಿ ವೀರೇಂದ್ರ, ಕೃಷ್ಣ ಪಾಲ್ ಮತ್ತು ಅರ್ಜುನ್ ಎಂಬುವವರ ವಿರುದ್ಧವು ಕೇಸ್ ದಾಖಲಾಗಿದೆ.
ರಾಜಪಾಲ್ ಸಿಂಗ್ ದಂಪತಿ ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡಿದ್ದರಿಂದ, ಅವರ ಪತ್ನಿ ಚಂದ್ರಕಾಂತಾ (26) ಜೊತೆಗೂಡಿ, ಸಂತ್ರಸ್ತೆಯನ್ನು ಸೆರೆಯಲ್ಲಿಟ್ಟುಕೊಂಡು, ಮಗುವಿಗಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಸಂತ್ರಸ್ತೆ ಅಕ್ಟೋಬರ್ 25 ರಂದು ಮಗುವಿಗೆ ಜನ್ಮ ನೀಡಿದ ನಂತರ, ನವೆಂಬರ್ 6 ರಂದು ಆಕೆಯನ್ನು ಬಸ್ ನಿಲ್ದಾಣದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಸೆಕ್ಷನ್ 370 (ಮಾನವ ಕಳ್ಳಸಾಗಣೆ) 376 (ಅತ್ಯಾಚಾರ), 376 ಎ, ಐಪಿಸಿಯ 377 (ಅಸ್ವಾಭಾವಿಕ ಲೈಂಗಿಕತೆ), 365 (ಅಪಹರಣ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸತ್ಯೇಂದ್ರ ಶುಕ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್: 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ


