ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ 24 ವರ್ಷದ ಯುವತಿಯೊಬ್ಬರ ಕೂದಲು ಕತ್ತರಿಸಿ, ನರ್ಮದಾ ನದಿಯಲ್ಲಿ ಸ್ನಾನ ಮಾಡಿಸಿ ‘ಶುದ್ಧೀಕರಣ’ ಮಾಡಿರುವ ಘಟನೆ ವರದಿಯಾಗಿದೆ.
ಆಕೆಯ ಕುಟುಂಬವು ‘ಶುದ್ಧೀಕರಣ’ ಆಚರಣೆಯ ಸಮಯದಲ್ಲಿ ಯುವತಿಯ ತಲೆ ಕೂದಲನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಆಗಸ್ಟ್‌ನಲ್ಲಿ ಸಂಭವಿಸಿದ್ದು, ರಕ್ಷಣೆ ಕೋರಿ ಈ ದಂಪತಿ ಪೊಲೀಸ್ ಠಾಣೆಗೆ ದೂರು ನೀಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. ಅವರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣದ ತನಿಖೆ ನಡೆಸಲಾಗುತ್ತದೆ ಎಂದು ಬೆತುಲ್‌ನ ಪೊಲೀಸ್ ವರಿಷ್ಠಾಧಿಕಾರಿ ಸಿಮಲಾ ಪ್ರಸಾದ್ ಹೇಳಿದ್ದಾರೆ.
ಮದುವೆಯಾಗಿರುವ ವ್ಯಕ್ತಿಯನ್ನು ಬಿಟ್ಟು ತಮ್ಮದೆ ಸಮುದಾಯದ ವ್ಯಕ್ತಿಯನ್ನು ಮರುಮದುವೆಯಾಗುವಂತೆ ಯುವತಿಯ ಕುಟುಂಬವು ಒತ್ತಾಯಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ಇದನ್ನೂ ಓದಿ: ಮಂಡ್ಯದಲ್ಲಿ ಅಮಾನವೀಯ ಜಾತಿ ದೌರ್ಜನ್ಯ: ದಲಿತ ಯುವಕನ ಮೇಲೆ ಹಲ್ಲೆ, ಹಸುವಿಗೆ ಕಟ್ಟಿ ಮೆರವಣಿಗೆ
ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿರುವ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಪೊಲೀಸರು ಯುವತಿಯ ಪೋಷಕರು ಸೇರಿದಂತೆ ಕುಟುಂಬದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ, ಈವರೆಗೆ ಯಾರನ್ನು ಬಂಧಿಸಿಲ್ಲ.
ಯುವತಿಯ ದೂರಿನ ಪ್ರಕಾರ, ಆಕೆ ಹಿಂದುಳಿದ ವರ್ಗಕ್ಕೆ (OBC) ಸೇರಿದ್ದಾರೆ. ಮಾರ್ಚ್ 11, 2020 ರಂದು ಆಕೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ 27 ವರ್ಷದ ಯುವಕನನ್ನು ರಹಸ್ಯವಾಗಿ ವಿವಾಹವಾಗಿದ್ದು, ಆಕೆಯ ಕುಟುಂಬಕ್ಕೆ ಈ ವಿಷಯ ಡಿಸೆಂಬರ್‌ನಲ್ಲಿ ತಿಳಿದಿದೆ. ಬಳಿಕ ಆಕೆ ಆ ವ್ಯಕ್ತಿಯೊಂದಿಗೆ ವಾಸಿಸಲು ಆರಂಭಿಸಿದ್ದಾಗಿ ಆಕೆ ತಿಳಿಸಿದ್ದಾರೆ.
ಈ ವರ್ಷ ಜನವರಿ 10 ರಂದು ಯುವತಿಯ ತಂದೆ ಮಗಳು ಕಾಣೆಯಾಗಿದ್ದಾರೆ ಎಂದು ದೂರು ಸಲ್ಲಿಸಿದ್ದರು. ದೂರಿನ ಪ್ರಕಾರ ಪೊಲೀಸರು ಆಕೆಯನ್ನು ಪತ್ತೆ ಮಾಡಿ ಪೋಷಕರ ಬಳಿಗೆ ಕರೆದೊಯ್ದಿದ್ದಾರೆ. ಆಗಸ್ಟ್‌ನಲ್ಲಿ ಯುವತಿಯ ಕುಟುಂಬದವರು ಆಕೆಯನ್ನು ನರ್ಮದಾ ನದಿಯ ಸೇಥನಿ ಘಾಟ್‌ಗೆ ಶುದ್ಧೀಕರಣ ಆಚರಣೆಗಾಗಿ ಕರೆದೊಯ್ದರು ಎಂದು ಹೇಳಿದ್ದಾರೆ.
“ನನಗೆ ಈ ಆಚರಣೆಯ ಬಗ್ಗೆ ತಿಳಿದಿರಲಿಲ್ಲ. ನಂತರ ನನ್ನ ಕುಟುಂಬ ಸದಸ್ಯರು ದಲಿತರನ್ನು ಮದುವೆಯಾಗಿದ್ದಕ್ಕಾಗಿ ನನ್ನನ್ನು ಶುದ್ಧೀಕರಣ ಮಾಡಲಾಗಿದೆ ಎಂದು ಹೇಳಿದರು” ಎಂದು ಯುವತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಈಗ, ನನ್ನ ಸಮುದಾಯದ ವ್ಯಕ್ತಿಯನ್ನು ಮರುಮದುವೆ ಮಾಡಿಕೊಳ್ಳಬೇಕೆಂದು ಕುಟುಂಬದವರು ಬಯಸುತ್ತಿದ್ದಾರೆ. ಹೀಗಾಗಿ ಅಕ್ಟೋಬರ್ 28 ರಂದು ನಾನು ಪೊಲೀಸ್ ದೂರು ನೀಡಲು ಹಾಸ್ಟೆಲ್‌ನಿಂದ ಬೆತುಲ್‌ಗೆ ಬಂದಿದ್ದೇನೆ” ಎಂದು ಯುವತಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಕೋರ್ಟ್‌ಗೆ ಶರಣಾದ RSS ಮುಖಂಡ


