ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಲಾಗಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಅರೆಭಾಷೆ ಗೌಡ ಸಮುದಾಯದ ಅಪ್ಪಚ್ಚು ರಂಜನ್ ಅವರದ್ದೇ ಪಾರಮ್ಯ. ಆರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ, ಐದು ಬಾರಿ ಗೆದ್ದಿರುವ ಹಾಲಿ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮಂಥರ್ ಗೌಡ ಸವಾಲೆಸೆಯುವ ಎಲ್ಲ ಸೂಚನೆಗಳನ್ನು ನೀಡಿದ್ದಾರೆ.
ಕೊಡುಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಸತತವಾಗಿ ಗೆಲ್ಲುತ್ತಾ ಬಂದಿದೆ. ಕೊಡವ ಸಮುದಾಯ ಹೆಚ್ಚಿರುವ ವಿರಾಜಪೇಟೆಯಲ್ಲಿ ಅರೆಭಾಷೆ ಗೌಡ ಸಮುದಾಯದ ಕೆ.ಜಿ.ಬೋಪಯ್ಯ, ಗೌಡರು ಹೆಚ್ಚಿರುವ ಮಡಿಕೇರಿ ಕ್ಷೇತ್ರದಲ್ಲಿ ಕೊಡವ ಸಮುದಾಯದ ಅಪ್ಪಚ್ಚು ರಂಜನ್ ಸತತವಾಗಿ ಗೆಲ್ಲುತ್ತಾ ಬಂದಿದ್ದಾರೆ.
ಗೌಡ ಸಮುದಾಯದ (ಒಕ್ಕಲಿಗ, ಅರೆಭಾಷೆ ಗೌಡ ಸೇರಿ) 51126 ಮತದಾರರು ಇದ್ದಾರೆ. ಉಳಿದಂತೆ ಲಿಂಗಾಯತ 24219, ಪ.ಪಂಗಡ 3456, ಕುರುಬ 6849, ಮುಸ್ಲಿಂ 23554, ಕ್ರೈಸ್ತ 9464, ಬ್ರಾಹ್ಮಣ 3258, ಕೊಡವ ಹಾಗೂ ಕೊಡವ ಭಾಷಿಕ 24856, ಮಲಯಾಳಿ 15624, ತಮಿಳು 6038, ಬಿಲ್ಲವ 1962, ಬಂಟ್ಸ್ 3264, ವಿಶ್ವಕರ್ಮ 3542, ಮಡಿವಾಳ 1503, ದೇವಾಂಗ ಶೆಟ್ಟಿ 4865, ಸವಿತಾ ಸಮಾಜ 1256, ನಾಯಕ್ 563, ಜೈನರು 253, ಇತರೆ ಸಮುದಾಯಗಳ 1735 ಮತದಾರರು ಇದ್ದಾರೆಂದು ಹಿಂದಿನ ಅಂಕಿ-ಅಂಶಗಳು ಹೇಳುತ್ತವೆ. ಜಾತಿ ಲೆಕ್ಕಾಚಾರಗಳು ಇಲ್ಲಿ ವರ್ಕೌಟ್ ಆಗಲ್ಲ, ಹಿಂದುತ್ವವೇ ಪ್ರಧಾನವಾಗುತ್ತದೆ ಎಂದು ಹೇಳಿದರೂ ಅಷ್ಟು ಸುಲಭವಾಗಿ ಜಾತಿ ಸಮೀಕರಣವನ್ನು ತೆಗೆದು ಹಾಕಲೂ ಆಗಲ್ಲ.
ಹಿಂದುತ್ವ ಪ್ರಯೋಗಶಾಲೆಗಳಲ್ಲಿ ಒಂದಾದ ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಮಂಥರ್ ಗೌಡ ಅವರು ಹೊರಗಿನಿಂದ ಬಂದವರು. ಅರಕಲಗೂಡು ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಎ.ಮಂಜು ಅವರ ಪುತ್ರ ಮಂಥರ್ ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿದ್ದಾರೆ. ಅಪ್ಪ ಒಂದು ಪಕ್ಷ, ಮಗ ಒಂದು ಪಕ್ಷದಲ್ಲಿದ್ದಾರೆಂಬುದು ನಕರಾತ್ಮಕವಾಗಿ ಕಂಡರೂ ಮಂಥರ್ ಮಡಿಕೇರಿಯಲ್ಲಿ ಮ್ಯಾಜಿಕ್ ಮಾಡಬಲ್ಲ ಅಭ್ಯರ್ಥಿ ಎಂದು ಹೇಳಲಾಗುತ್ತಿದೆ. “ನಾನು ಹೊರಗಿನ ಬಂದವನಲ್ಲ. ನನ್ನ ಪತ್ನಿ ಕೊಡಗಿನವರು. ನಾನು ಹತ್ತಾರು ವರ್ಷಗಳಿಂದ ಇಲ್ಲೇ ನೆಲೆಸಿದ್ದು, ಜನರೊಂದಿಗೆ ಕೆಲಸ ಮಾಡುತ್ತಿದ್ದೇನೆ” ಎಂದು ಮಂಥರ್ ಹೇಳಿಕೊಳ್ಳುತ್ತಿದ್ದಾರೆ.
ಕಳೆದೆರಡು ವರ್ಷಗಳಿಂದ ಮಡಿಕೇರಿ ಭಾಗದಲ್ಲಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಂಥರ್ ಪ್ರವರ್ಧಮಾನಕ್ಕೆ ಬಂದರು. ಪಕ್ಷವನ್ನು ಸಂಘಟಿಸುವಲ್ಲಿ ಸಕ್ರಿಯವಾಗಿದ್ದಾರೆ. ಇಂತಹ ಮಂಥರ್, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆಗಳು ನಡೆದಾಗ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಕೇವಲ 102 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಅಪ್ಪಚ್ಚು ರಂಜನ್ ಅವರ ಸಹೋದರ ಸುಜಾ ಕುಶಾಲಪ್ಪ ಗೆದ್ದಿದ್ದರು. ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಮೇಲೆ ತಮ್ಮ ಪ್ರಾಬಲ್ಯವನ್ನು ಮಂಥರ್ ಹೊಂದಿದ್ದರಿಂದ ಎಂಎಲ್ಎ ಟಿಕೆಟ್ ಕೂಡ ದೊರಕಿದೆ.
ಆದರೆ ಅಪ್ಪಚ್ಚು ರಂಜನ್ ಕೊಡಗಿನವರೇ ಆಗಿದ್ದು, ತಾನು ಸ್ಥಳೀಯನೆಂಬ ಪ್ಲೇಕಾರ್ಡ್ ಬಳಸುತ್ತಿದ್ದಾರೆ. ಅದನ್ನೇ ಪ್ರಬಲ ಅಸ್ತ್ರವಾಗಿ ಉಪಯೋಗಿಸಿ ಕ್ಷೇತ್ರದ ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ. ಅಪ್ಪಚ್ಚು ರಂಜನ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿ ಪ್ರತಿ ಚುನಾವಣೆಯಲ್ಲಿ ಎದುರಾಗುತ್ತಿದ್ದದ್ದು ಹಿರಿಯ ರಾಜಕಾರಣಿ, ಮಾಜಿ ಸಚಿವ ಬಿ.ಎ.ಜೀವಿಜಯ. ಜನತಾ ಪರಿವಾರದ ಮೂಲಕ ರಾಜಕಾರಣಕ್ಕೆ ಬಂದ ಜೀವಿಜಯ ಅವರು ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರನ್ನು ಸೋಲಿಸಿದ ಹೆಗ್ಗಳಿಕೆ ಉಳ್ಳವರು. ಕ್ಷೇತ್ರ ಪುನರ್ ವಿಂಗಡನೆ ಆಗುವವರೆಗೂ ಸೋಮವಾರಪೇಟೆ ವಿಧಾನಸಭಾ ಕ್ಷೇತ್ರವಿತ್ತು. ಅದನ್ನು ಮಡಿಕೇರಿಯೊಂದಿಗೆ ವಿಲೀನಗೊಳಿಸಿದ ನಂತರ ಮತ್ತು ಆ ಮೊದಲಿನಿಂದಲೂ ಅಪ್ಪಚ್ಚ ರಂಜನ್ ಅವರು ಜೀವಿಜಯ ಅವರ ಪ್ರಬಲ ಪೈಪೋಟಿಯನ್ನು ಎದುರಿಸುತ್ತಾ ಬರಬೇಕಾಯಿತು. ಮಡಿಕೇರಿಯಲ್ಲಿ ಇಬ್ಬರ ನಡುವಿನ ಸ್ಪರ್ಧೆ ಸಾಂಪ್ರದಾಯಿಕವಾಗಿತ್ತು.
ಕೊಡಗಿನ ರಾಜಕಾರಣದಲ್ಲಿ ಜೀವಿಜಯ ವರ್ಚಸ್ಸು
1978ರಿಂದಲೂ ರಾಜಕೀಯ ಕಣದಲ್ಲಿರುವ ಜೀವಿಜಯ ಸೋಮವಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ 1983, 1985ರಲ್ಲಿ ಜನತಾ ಪಾರ್ಟಿಯಿಂದ ಆಯ್ಕೆಯಾಗಿದ್ದರು. 1985ರಲ್ಲಿ ಕಾಂಗ್ರೆಸ್ಸಿನ ಆರ್.ಗುಂಡೂರಾವ್ ಅವರನ್ನು ಸೋಲಿಸಿದ್ದರು. 1989ರಲ್ಲಿ ಮೂರನೇ ಸ್ಥಾನಕ್ಕೆ ಕುಸಿದರೆ, 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದರು. ಆಗ ಪ್ರತಿಸ್ಪರ್ಧಿಯಾಗಿದ್ದವರು ಬಿಜೆಪಿಯ ಅಪ್ಪಚ್ಚುರಂಜನ್. 1999ರಲ್ಲಿ ಪಕ್ಷೇತರರಾಗಿ ಕಣಕ್ಕಿಳಿದ ಜೀವಿಜಯ ಅವರು ಎರಡನೇ ಸ್ಥಾನದಲ್ಲೇ ಉಳಿದು ಮತ್ತೆ ರಂಜನ್ ವಿರುದ್ಧ ಸೋಲು ಕಂಡರು. 2004ರಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಪಡೆದು ರಂಜನ್ ಅವರಿಗೆ ಜೀವಿಜಯ ಸೋಲುಣಿಸಿದರು. ಬಳಿಕ ನಡೆದ ಚುನಾವಣೆಗಳಲ್ಲಿ ಜೀವಿಜಯ ಗೆಲುವುಗಳನ್ನು ದಾಖಲಿಸಲಿಲ್ಲ.

ಕ್ಷೇತ್ರ ಪುನರ್ ವಿಂಗಡಣೆಯಾಗಿ ಸೋಮವಾರಪೇಟೆ ಕ್ಷೇತ್ರವನ್ನು ಕೈಬಿಡಲಾಯಿತು. ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ರಂಜನ್- ಜೀವಿಜಯ ಕದನ ಮಡಿಕೇರಿಗೆ ಶಿಫ್ಟ್ ಆಯಿತು. 2008ರಲ್ಲಿ ಮತ್ತೆ ಪ್ರತಿಸ್ಪರ್ಧಿಗಳಾದರು. ಕಾಂಗ್ರೆಸ್ನಿಂದ ಟಿಕೆಟ್ ಪಡೆದಿದ್ದ ಜೀವಿಜಯ ಈ ಚುನಾವಣೆಯಲ್ಲಿ 6585 ಮತಗಳಿಂದ ಸೋತರು. 2013ರ ಚುನಾವಣೆ ವೇಳೆಗೆ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷವನ್ನು ಸೇರಿಕೊಂಡಿದ್ದರು. 2013 ಮತ್ತು 2018- ಎರಡು ಅವಧಿಯಲ್ಲೂ ಜೆಡಿಎಸ್ನಿಂದಲೇ ಸ್ಪರ್ಧಿಸಿದ್ದ ಅವರು ಗೆಲುವು ಪಡೆಯಲೇ ಇಲ್ಲ. 2013ರಲ್ಲಿ 4629 ಮತದಂತರದಲ್ಲಿ ಸೋತರೆ, 2018ರಲ್ಲಿ ಸೋಲಿನ ಅಂತರ 16,015ಕ್ಕೆ ವಿಸ್ತರಣೆಯಾಗಿತ್ತು.
2020ರಲ್ಲಿ ಮರಳಿ ಕಾಂಗ್ರೆಸ್ ಗೂಡಿಗೆ ಜೀವಿಜಯ ಸೇರಿಕೊಂಡರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿದ್ದರು. ಆದರೆ ಸತತ ಸೋಲುಗಳನ್ನು ಕಂಡಿದ್ದ ಜೀವಿಜಯ ಅವರಿಗೆ ಅವಕಾಶ ದೊರಕಲಿಲ್ಲ. ಇದರಿಂದ ಸಿಟ್ಟಿಗೆದ್ದಿರುವ ಅವರು, “ಅಪ್ಪಚ್ಚು ರಂಜನ್ ಅವರನ್ನೇ ಬೆಂಬಲಿಸಿದರೆ ತಪ್ಪೇನು? ಕ್ಷೇತ್ರದ ಹೊರಗಿನಿಂದ ಬಂದವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ” ಎಂದು ಆರೋಪವನ್ನು ಮಾಡಿ, ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ಜೀವಿಜಯ ಅವರ ರಾಜಕಾರಣವನ್ನು ಅಷ್ಟು ಸುಲಭವಾಗಿ ಕಡೆಗಣಿಸಲು ಸಾಧ್ಯವಿಲ್ಲ. ಅವರು ಯಾವುದೇ ಪಕ್ಷದಿಂದ ಸ್ಪರ್ಧಿಸಿದಾಗಲೂ ಅತಿ ಹೆಚ್ಚು ಮತಗಳನ್ನು ಪಡೆದ ಎರಡನೇ ಅಭ್ಯರ್ಥಿಯಾಗಿ ಹೊಮ್ಮಿದ್ದಾರೆಂಬುದು ಗಮನಾರ್ಹ. ಜೀವಿಜಯ ಹೋದಲ್ಲೆಲ್ಲ ಅವರನ್ನು ಹಿಂಬಾಲಿಸುವ ಸಾಂಪ್ರದಾಯಿಕ ಮತಗಳೂ ಅವರ ಜೊತೆಯಲ್ಲಿ ಹೋಗಿವೆ. ಕಾಂಗ್ರೆಸ್ ತೊರೆದು ಜೆಡಿಎಸ್ಸಿಗೆ ಸೇರಿದ್ದಾಗಲೂ ಅವರನ್ನು ಬೆಂಬಲಿಸುವ ಸಂಖ್ಯೆಯೇನೂ ಕಡಿಮೆ ಆಗಲಿಲ್ಲ. ಹೀಗಾಗಿಯೇ 2013, 2018ರ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು.
ಇಂತಹ ಜೀವಿಜಯವರು ಕಣದಲ್ಲಿ ಈ ಬಾರಿ ಇಲ್ಲದೆ ಇರುವುದರಿಂದ ನನಗೆ ಪ್ರತಿಸ್ಪರ್ಧಿಯೇ ಇಲ್ಲ ಎಂದು ರಂಜನ್ ಹೇಳಿಕೊಂಡು ತಿರುಗುತ್ತಿದ್ದಾರೆ. ಆದರೆ ರಣಕಣದ ವಾಸ್ತವಗಳು ಬೇರೆಯೇ ಇವೆ.
ಗೌಡ ಸಮುದಾಯದ ಜೀವಿಜಯ ಅವರೊಂದಿಗೆ ಸಾಂಪ್ರದಾಯಿಕ ಮತಗಳು ಇದ್ದವು. ಅವರು ಎಲ್ಲಿ ಹೋದರೂ ಅವರೊಂದಿಗೆ ಆ ಮತಗಳು ಹೋಗುತ್ತಿದ್ದವು ಎಂಬುದು ಸತ್ಯ. ಆದರೆ ಜೀವಿಜಯ ಅವರು ಹೊಸ ಮುಖಗಳಿಗೆ ಅವಕಾಶ ನೀಡುತ್ತಿಲ್ಲ, ಒಕ್ಕಲಿಗ ಸಮುದಾಯದವರೇ ಆದ ಮಂಥರ್ಗೆ ಅಸಹನೆ ತೋರುತ್ತಿರುವುದು ಸರಿಯಲ್ಲ ಎಂಬ ಆಕ್ಷೇಪಗಳು ಸಮುದಾಯದ ಒಳಗೆ ವ್ಯಕ್ತವಾಗುತ್ತಿವೆ ಎಂದು ಕ್ಷೇತ್ರದ ನಾಡಿಮಿಡಿತ ಬಲ್ಲವರು ಹೇಳುತ್ತಾರೆ.
ಜೀವಿಜಯ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದರೆ, ಅವರ ಪುತ್ರ ಸಂಜಯ್ ಜೀವಿಜಯ ಕಾಂಗ್ರೆಸ್ಸಿನಲ್ಲಿ ಸಕ್ರಿಯವಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿ ಕೆಲಸ ಮಾಡಿರುವ ಸಂಜಯ್ ತಮ್ಮ ತಂದೆಯವರ ಹೇಳಿಕೆಗಳನ್ನು ವಿರೋಧಿಸಿದ್ದಾರೆ. “ನಮ್ಮ ತಂದೆಯವರಿಗೆ ಈಗ 86 ವರ್ಷ ವಯಸ್ಸು, ಏನೋ ಮಾತನಾಡುತ್ತಾರೆ, ಅವರ ಹೇಳಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಅವರನ್ನು ಗೆಲ್ಲಿಸಬೇಕು. ಕಳೆದ ಚುನಾವಣೆಯಲ್ಲಿ ಸೋತಿದ್ದಾಗಲೇ ನಮ್ಮ ತಂದೆಯವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಆದರೆ ಕೆಲವು ತಿಂಗಳ ಹಿಂದೆ ಒಂದಿಷ್ಟು ಮುಖಂಡರು ಇವರನ್ನು ಪ್ರೇರೇಪಿಸಿದ್ದರು. ಹೀಗಾಗಿ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಚುನಾವಣೆ ಎದುರಿಸುವಷ್ಟು ಆರೋಗ್ಯ ಅವರಿಗಿಲ್ಲ, ಬೇಕಾದಷ್ಟು ಹಣವೂ ಇಲ್ಲ. ಹೀಗಾಗಿ ಮಂಥರ್ ಅವರಿಗೆ ಟಿಕೆಟ್ ನೀಡಿದರೆ ಅವರ ಗೆಲುವಿಗಾಗಿ ಕೆಲಸ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಅವರಲ್ಲಿ ನಾನೇ ಹೇಳಿದ್ದೆ” ಎಂದು ಪ್ರಚಾರಕ್ಕಿಳಿದಿದ್ದಾರೆ. ಹೀಗಾಗಿ ಜೀವಿಜಯ ಫ್ಯಾಕ್ಟರ್ ಬಿಜೆಪಿಗೆ ದೊಡ್ಡ ಅನುಕೂಲ ಮಾಡಿಕೊಡುತ್ತದೆ ಎಂದು ಊಹಿಸುವುದೂ ಕಷ್ಟವಾಗುತ್ತದೆ.
ಐದು ಭಾರಿ ಗೆದ್ದು, ಒಂದು ಭಾರಿ ಸೋತಿರುವ ರಂಜನ್ ಏಳನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬ ಆಗ್ರಹ ಬಿಜೆಪಿಯೊಳಗೆ ಕೇಳಿಬಂದಿತ್ತು. ಸಂಘಪರಿವಾರದ ಮುಖಂಡ ಭಾರತೀಶ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ರಂಜನ್ ಕೊನೆಯ ಕ್ಷಣದಲ್ಲಿ ಟಿಕೆಟ್ ಪಡೆಯುವಲ್ಲಿ ಸಫಲರಾದರು. ಭಾರತೀಶ್ ಅವರಿಗೆ ಅಪಾರ ಬೆಂಬಲಿಗರಿದ್ದು, ಆಂತರಿಕವಾಗಿ ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇಷ್ಟು ದೀರ್ಘ ಅವಧಿಯಲ್ಲಿ ಶಾಸಕರಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಕ್ಷೇತ್ರ ಅಭಿವೃದ್ಧಿಯಾಗಿಲ್ಲ, ಜನರ ಒಡನಾಡ ಕಡಿಮೆ ಮಾಡಿಕೊಂಡಿದ್ದಾರೆ, ಕಮಿಷನ್ ಪಡೆಯುತ್ತಾರೆಂಬ ಬೇಸರ ಮತದಾರರಲ್ಲಿ ಇದೆ.
ಜಿಲ್ಲಾಧಿಕಾರಿ ಕಚೇರಿ ಬಳಿ ನಿರ್ಮಿಸಲಾಗಿದ್ದ ತಡೆಗೋಡೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದೆ. ಇದಕ್ಕಾಗಿ ಜಪಾನ್ ತಂತ್ರಜ್ಞಾನ ಬಳಸಿದ್ದೇವೆಂದು ಹೇಳುತ್ತಿದ್ದರು. ಆದರೆ ಕಳಪೆ ಕಾಮಗಾರಿಯಿಂದಾಗಿ ತಡೆಗೋಡೆ ಕುಸಿಯುವಂತಾಗಿದೆ. ಮತ್ತೆ ಮರುನಿರ್ಮಾಣ ಕೆಲಸ ಆಗುತ್ತಿದೆ.
ಇದನ್ನೂ ಓದಿರಿ: ವಿರಾಜಪೇಟೆ: ಕೊಡವ v/s ಅರೆಭಾಷೆಗೌಡ ದಾಳದಲ್ಲಿ ಕಾಂಗ್ರೆಸ್ ಅರಳುವುದೇ?
ಮತ್ತೊಂದೆಡೆ ಯುವಮುಖವಾಗಿ ಹೊಮ್ಮಿರುವ ಮಂಥರ್, ಯುವಜನರೊಂದಿಗೆ ಗುರುತಿಸಿಕೊಂಡಿದ್ದಾರೆ. ಕ್ರೀಡಾ ಪಂದ್ಯಾವಳಿಗಳಿಗೆ ಧನ ಸಹಾಯ ಮಾಡಿ ಯುವಕರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಹಿಂದುತ್ವ ಪ್ರಬಲವಾಗಿರುವ ಈ ಕ್ಷೇತ್ರದಲ್ಲಿ ಟಿಪ್ಪು ವಿವಾದದಂತಹ ವಿಚಾರಗಳನ್ನು ಕೆದಕುವ ಪ್ರಯತ್ನವನ್ನು ಪ್ರತಿಸ್ಪರ್ಧಿಗಳು ಮಾಡುತ್ತಾರೆ. ಆದರೆ ಇಂಥವುಗಳಿಂದ ಮಂಥರ್ ಅಂತರ ಕಾಯ್ದುಕೊಂಡಿದ್ದಾರೆ. ವೈದ್ಯಕೀಯ ವೃತ್ತಿಯ ಹಿನ್ನೆಲೆಯವರಾದ ಮಂಥರ್, ವಿವಾದಾತ್ಮಕ ವಿಚಾರಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತಟಸ್ಥ ನಿಲುವು ತಾಳುತ್ತಾ ಚಾಣಕ್ಷತೆ ಮೆರೆದಿದ್ದಾರೆ. ಆದರೆ ಅಪ್ಪ ಜೆಡಿಎಸ್ನಲ್ಲಿದ್ದು, ಇವರು ಕಾಂಗ್ರೆಸ್ನಲ್ಲಿರುವುದು ಹಿನ್ನಡೆಯಾಗಿ ಕಾಣುತ್ತಿದೆ. “ನಾನು ಕಾಂಗ್ರೆಸ್ಸಿನಲ್ಲಿಯೇ ಉಳಿಯಲಿದ್ದೇನೆ” ಎಂಬ ಮಾತುಗಳನ್ನು ಮಂಥರ್ ಆಡುತ್ತಿದ್ದಾರೆ. ಇದನ್ನು ಎಷ್ಟರ ಮಟ್ಟಿಗೆ ಮತದಾರರು ನಂಬುತ್ತಾರೆಂಬುದು ಸದ್ಯದ ಕುತೂಹಲ.
ಜೆಡಿಎಸ್ನಿಂದ ಕೊಡವ ಸಮುದಾಯದ ನಾಪಂಡ ಮುತ್ತಪ್ಪ ಸ್ಪರ್ಧಿಸಿದ್ದಾರೆ. ಸೋಮವಾರಪೇಟೆ ಭಾಗದಲ್ಲಿ ಜೆಡಿಎಸ್ನ ಸಾಂಪ್ರದಾಯಿಕ ಮತಗಳಿವೆ. ಎಸ್ಡಿಪಿಐನಿಂದ ಅಲ್ಪಸಂಖ್ಯಾತ ಅಭ್ಯರ್ಥಿ ಅಮೀನ್ ಮೋಹಿಸಿನ್ ಕಣದಲ್ಲಿದ್ದಾರೆ. ಜೆಡಿಎಸ್, ಎಸ್ಡಿಪಿಐಗೆ ಹರಿದುಹೋಗಬಲ್ಲ ಮತಗಳನ್ನು ಕಾಂಗ್ರೆಸ್ ತನ್ನತ್ತ ಸೆಳೆಯುವಲ್ಲಿ ಸಫಲವಾದರೆ ಮಂಥರ್ಗೆ ಅನುಕೂಲವಾಗಬಹುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ಬ್ಯಾನ್ ಮಾಡಲಾಗುತ್ತದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿರುವುದರಿಂದಾಗಿ ಹಿಂದುತ್ವದ ಪ್ರಭಾವವಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಕೊಂಚ ಹಿನ್ನಡೆಯೂ ಆಗಬಹುದು. ತಮ್ಮದು ಕೊನೆಯ ಚುನಾವಣೆ ಎಂಬ ದಾಳವನ್ನು ರಂಜನ್ ಉರುಳಿಸಿದ್ದಾರೆ. ಇದು ವರ್ಕೌಟ್ ಆಗುತ್ತದೆಯೋ ಅಥವಾ ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಸೋಲುತ್ತದೆಯೋ ಕಾದು ನೋಡಬೇಕು.


