Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗೋಕಾಕ: ಜಾರಕಿಹೊಳಿಯಿಂದ ’ಕರದಂಟು’ ಕಸಿದುಕೊಳ್ಳಲಾದೀತೆ ಲಕ್ಷ್ಮೀ-ಲಕ್ಷ್ಮಣರ ಪಂಚಮಸಾಲಿ ಪಡೆಗೆ?!

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಗೋಕಾಕ: ಜಾರಕಿಹೊಳಿಯಿಂದ ’ಕರದಂಟು’ ಕಸಿದುಕೊಳ್ಳಲಾದೀತೆ ಲಕ್ಷ್ಮೀ-ಲಕ್ಷ್ಮಣರ ಪಂಚಮಸಾಲಿ ಪಡೆಗೆ?!

- Advertisement -
- Advertisement -

ಘಟಪ್ರಭೆಯ ತಟದಲ್ಲಿ ಪಶ್ಚಿಮಘಟ್ಟಗಳಿಂದ ಸುತ್ತುವರಿದಿರುವ ಗೋಕಾಕ್ ವಿಧಾನಸಭಾ ಕ್ಷೇತ್ರ ರಾಜ್ಯದ ಹೈವೋಲ್ಟೇಜ್ ಅಖಾಡಗಳ ಪೈಕಿ ವಿಭಿನ್ನ ರಣರೋಚಕತೆ-ಕದನ ಕುತೂಹಲ ಕೆರಳಿಸಿದೆ! ಬೆಳಗಾವಿ ಜಿಲ್ಲೆಯ ಜವಾರಿ ಕಸರತ್ತಿನೊಂದಿಗೆ ರಾಜ್ಯಮಟ್ಟದ ಆಪರೇಷನ್ ಕಮಲದ ಕರಿನೆರಳು, ಕೋಲಾಹಲಕ್ಕೆ ಕಾರಣವಾಗಿದ್ದ ಸೆಕ್ಸ್ ಸಿ.ಡಿ ಪ್ರಹಸನ, ಪಂಚಮಸಾಲಿ ಲಿಂಗಾಯತ ಪ್ರತಿಷ್ಠಗಳೆಲ್ಲ ಶಸ್ತ್ರಾಸ್ತ್ರಗಳಾಗಿರುವ ಈ ಸಮರಾಂಗಣ ದಿನಕ್ಕೊಂದು ಆಯಾಮ ಪಡೆದುಕೊಳ್ಳುತ್ತಿದೆ. ಗೋಕಾಕ್ ಚುನಾವಣೆ ಎಂದರೆ ಜನಪರ ಕಾಳಜಿ, ಸಮಷ್ಟಿ ಹಿತ, ಪ್ರಗತಿಯ ಹಂಗಿಲ್ಲದ ವೈಯಕ್ತಿಕ ಅಹಮಿಕೆಯ ಜಿದ್ದಾಜಿದ್ದಿ.

ಆಪರೇಷನ್ ಕಮಲ ಸರಕಾರ-2ರ ರೂವಾರಿಯೆಂದು ಸ್ವಯಂ ಘೋಷಿಸಿಕೊಂಡಿರುವ ರಮೇಶ್ ಜಾರಕಿಹೊಳಿ (ಆರ್‌ಜೆ) ಎರಡೂವರೆ ದಶಕದಿಂದ ಗೋಕಾಕನ್ನು ಆಳುತ್ತಿದ್ದಾರೆ. ಸರಕಾರಗಳ ಉಳಿಸುವ, ಉರುಳಿಸುವ ಛಾತಿಯ ರಾಜ್ಯಮಟ್ಟದ ಮಹತ್ವದ ನಾಯಕ ತಾನೆಂದು ತೋರಿಸಿಕೊಳ್ಳುವ ಆರ್‌ಜೆ ಯಡಿಯೂರಪ್ಪರ ಸಂಪುಟದಲ್ಲಿ ಆಯಕಟ್ಟಿನ ಸ್ಥಾನದಲ್ಲಿದ್ದರು; ಕೆಟ್ಟ ಕಾರಣಕ್ಕಾಗಿ ಮಂತ್ರಿಗಿರಿ ಕಳೆದುಕೊಂಡ ನಂತರವೂ ಸಂಘೀ ಸೂತ್ರಧಾರರಾದಿಯಾಗಿ ಬಿಜೆಪಿಯ ದೊಡ್ಡವರ ಜುಟ್ಟು ಹಿಡಿದು ಆಡಿಸುತ್ತಿದ್ದಾರೆ ಎನ್ನಲಾಗುತ್ತಿದೆ; ಬೆಳಗಾವಿ ಜಿಲ್ಲಾ ರಾಜಕಾರಣವೂ ಆರ್‌ಜೆ ಸುತ್ತಲೇ ಗಿರಕಿಹೊಡೆಯುತ್ತಿದೆ. ಗೋಕಾಕ್‌ನ ದೌರ್ಭಾಗ್ಯವೋ ಏನೋ ಆರ್‌ಜೆಯ ಈ ದೈತ್ಯ ತಾಕತ್ತಿನಿಂದ ಕ್ಷೇತ್ರಕ್ಕೇನೂ ಭಾಗ್ಯ ಬಂದಿಲ್ಲ; ಗೋಕಾಕ್ ನಿರೀಕ್ಷೆಯಷ್ಟು ಉದ್ಧಾರವಾಗಿಲ್ಲ ಎಂಬ ಅಸಮಾಧಾನ ಜನಮನದಲ್ಲಿ ಮಡುಗಟ್ಟಿದೆ.

ಎರಡೂವರೆ ದಶಕದ “ಸಾಧನೆ”!

ಬಿಜೆಪಿಯ ಸಿಎಂಗಳ ಮೇಲಿದ್ದ ಹಿಡಿತದಿಂದಾಗಿ ಆರ್‌ಜೆ ಕೋಟಿಕೋಟಿಗಳ ಲೆಕ್ಕದಲ್ಲೇ ಕ್ಷೇತ್ರಕ್ಕೆ ಕಾಸು ತಂದಿದ್ದಾರೇನೋ ನಿಜ. ಘಟಪ್ರಭಾ ನದಿಯ ಪ್ರವಾಹದಿಂದ ಆಗುವ ಹಾನಿ ತಡೆಯವ ಸಂರಕ್ಷಣಾ ಗೋಡೆಯೊಂದನ್ನು ಕಟ್ಟಿದ್ದು ಬಿಟ್ಟರೆ ಜನರಿಗಾಗಿರುವ ಪ್ರಯೋಜನ ಅಷ್ಟಕ್ಕಷ್ಟೇ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿದೆ. ಕುಡಿಯುವ ನೀರು, ನೈರ್ಮಲ್ಯ, ರಸ್ತೆ, ಶಾಲಾ ಮಕ್ಕಳಿಗೆ ಬಸ್ ಸೌಲಭ್ಯದಂತ ಮೂಲಸೌಕರ್ಯಗಳಿಲ್ಲದ ಹಲವು ಏರಿಯಾಗಳು ಆರ್‌ಜೆ ಸಾಮ್ರಾಜ್ಯದಲ್ಲಿವೆ; ಅರೆಬರೆ, ಕಳಪೆ ಕಾಮಗಾರಿಗಳಾಗಿವೆ; “ಫಾರ್ಟಿ ಪರ್ಸೆಂಟ್”ನ  ಕಂಟ್ರಾಕ್ಟರ್‍ಸ್ ಲಾಬಿಯನ್ನು ಶಾಸಕರು ಪೋಷಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ರೈತರಿಗೆ ಅನಿವಾರ್ಯವಾದ ನೀರಾವರಿ ಯೋಜನೆಗಳಿನ್ನೂ ಅನುಷ್ಠಾನವಾಗಿಲ್ಲ. ಕಬ್ಬು ಬೆಳೆಗಾರರ ಬಿಲ್ ಪಾವತಿ ಸಮಸ್ಯೆ ಪರಿಹಾರವಾಗಿಲ್ಲ. ಮಾಲ್ದನಿ ಹೊಳೆ, ಉಪ್ಪಾರಟ್ಟಿ ಹೊಳೆಯಂಥ ಕಡೆ ಸೇತುವೆಯಿಲ್ಲದೆ ಜನರು ಪರದಾಡುತ್ತಿದ್ದಾರೆ.

ಸಂಕೇಶ್ವರಕ್ಕೆ ಸಂಪರ್ಕ ಕಲ್ಪಿಸುವ ಲೊಳಸೂರು ಬ್ರಿಡ್ಜ್‌ಅನ್ನು ಮೇಲ್ದರ್ಜೆಗೇರಿಸಿಲ್ಲ. ನಾಲ್ಕು ದಶಕದಿಂದ ಗೋಕಾಕ್ ಜಿಲ್ಲಾ ಕೇಂದ್ರಕ್ಕಾಗಿ ಕೂಗೇಳುತ್ತಲೇ ಇದೆ. ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಬೇಕಾಗಿದೆ. ಪ್ರವಾಸಿ ತಾಣಗಳಾದ ತಾಲೂಕಿನ ಎರಡು ಪ್ರಸಿದ್ಧ ಜಲಪಾತಗಳ ಬಳಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಗೋಕಾಕ್ ನಗರ ಎಷ್ಟು ಅಭಿವೃದ್ಧಿ ಆಗಬೇಕಿತ್ತೋ ಅಷ್ಟಾಗಿಲ್ಲವೆಂದು, ಸಂಕಷ್ಟದ ಉದ್ದ ಪಟ್ಟಿಯನ್ನೇ ಮುಂದಿಡುವ ಮತದಾರರು, “ಘಟಪ್ರಭೆಗೆ ನೆರೆ ಬಂದಾಗ ಎಮ್ಮೆಲ್ಲೆ ಸಾಹೇಬ್ರು ಬಿಸ್ಕೀಟ್ ಕುಡ್ಕಾನೂ ಕೊಟ್ಟಿಲ್ರಿ…. ಐದು ವಷದಾಗ ಆಗೂ ಕೆಲ್ಸಾ ಇಪ್ಪತ್ತೈದು ವರ್ಷದಿಂದ ಜಕ್ಕೋಂತ ಬಂದಾರೂ….” ಎಂದು ದೂರುತ್ತಾರೆ. ಕ್ಷೇತ್ರದಲ್ಲಿ ಆರ್‌ಜೆ ಪ್ರೀತಿಯಷ್ಟೇ ದ್ವೇಷವನ್ನೂ ಕಟ್ಟಿಕೊಂಡಿದ್ದಾರೆ. ಜನರಿಗೆ ಜರೂರಿದ್ದಾಗ ಶಾಸಕ ಕೈಗೆಟುಕುವುದಿಲ್ಲ, ಠಾಕುಠೀಕಿನ ದಿಲ್ಲಿ, ಬೆಂಗಳೂರಿನ ರಾಜಕಾರಣ-ಬಾಂಬೈ ಬಿಸ್ನೆಸ್‌ನಲ್ಲಿ ನಿರತರಾಗಿರುತ್ತಾರೆ; ಅವರ ಅಳಿಯ ಅಂಬಿರಾವ್ ದರ್ಬಾರು ಲಂಗುಲಗಾಮಿಲ್ಲದೆ ಸಾಗಿದೆ ಎಂಬಿತ್ಯಾದಿ ಆಕ್ಷೇಪಗಳು ಕ್ಷೇತ್ರದಲ್ಲಿ ಮಾಮೂಲಾಗಿವೆ.

ಕರದಂಟಿನ ಅಸ್ಮಿತೆ

ಗೋಕಾಕ್‌ನ ಒಂದುಕಡೆ ಹಸುರಿನ ಬೆಟ್ಟ ಶ್ರೇಣಿಯಾದರೆ, ಅದಕ್ಕೆ ಸಮಾನಾಂತರವಾಗಿ ಹಬ್ಬಿರುವ ಕಪ್ಪು ಮಣ್ಣಿನ ವಿಶಾಲ ಬಯಲು ಮತ್ತೊಂದೆಡೆ. ಗೋಕಾಕ್ ತಾಲೂಕಿನ ಜೀವನದಿ ಘಟಪ್ರಭೆ 167 ಅಡಿ ಎತ್ತರದಿಂದ ಧುಮುಕಿ ಜಗದ್ವಿಖ್ಯಾತ ಜಲಪಾತ ಸೃಷ್ಟಿಸಿದೆ. ಪ್ರಾಕೃತಿಕ ಬೆಡಗು-ಬಿನ್ನಾಣದ ಗೋಕಾಕದಲ್ಲಿ 43 ಅಡಿ ಎತ್ತರದಿಂದ ಜಾರುವ ಇನ್ನೊಂದು ಜಲಪಾತವೂ ಇದೆ. ಏಷಿಯಾ ಖಂಡದಲ್ಲೇ ಮೊದಲು ಜಲ ವಿದ್ಯುತ್ ಉತ್ಪಾದಿಸಿದ್ದು ಗೋಕಾಕ್ ಜಲಪಾತದಿಂದ. ಸಾಗರದಾಚೆ ಕಂಪು ಸೂಸುತ್ತಿರುವ ಕರಿದ ಖಾದ್ಯ ಬೆಲದ ಸ್ವಾದಿಷ್ಟ “ಕರದಂಟು” ಗೋಕಾಕಿನ ಅಸ್ಮಿತೆ. ವಿಶಿಷ್ಟ ಕಲೆ, ಸಾಹಿತ್ಯ ಮತ್ತು ಜಾನಪದ ಸಂಸ್ಕೃತಿಯ ಗೋಕಾವಿ ಸೀಮೆಗೆ ಸಾಹಿತಿಗಳಾದ ಕೃಷ್ಣಮೂರ್ತಿ ಪುರಾಣಿಕ್, ಬೆಟಗೇರಿ ಕೃಷ್ಣ ಶರ್ಮ, ಬಸವರಾಜ ಕಟ್ಟೀಮನಿ, ಕೆ.ಜಿ.ಕುಂದಣಕಾರ್‌ಗಳ ನಂಟಿದೆ.

ಕರದಂಟು

ಪೂರ್ವ ಇತಿಹಾಸದ ಅವಧಿಯಲ್ಲಿ ಸ್ಥಾಪಿತ “ಅಗ್ರಹಾರ” ಎನ್ನಲಾಗುವ ಗೋಕಾಕ್ ಬುಡಕಟ್ಟು ಮತ್ತು ಕಾಡಿನ ಜನರ ನಾಡು. ಪಂಚಮಸಾಲಿ ಲಿಂಗಾಯತರು ಮತ್ತು ವಾಲ್ಮೀಕಿ (ನಾಯಕ) ಜನಾಂಗದ ಸಾಮಾಜಿಕ, ರಾಜಕೀಯ, ವಾಣಿಜ್ಯಿ ಮತ್ತು ಆರ್ಥಿಕ ಮೇಲಾಟದ ಆಡುಂಬೊಲವೆಂದೇ ಖಾಸಗಿಯಾಗಿ ಪರಿಗಣಿಸಲ್ಪಡುವ ಗೋಕಾವಿಯ ವ್ಯಕ್ತಿ ಪ್ರತಿಷ್ಠೆಯ ರಾಜಕಾರಣ ಮಾತ್ರ ಕರದಂಟಿನ ಸಿಹಿ-ಸವಿಯನ್ನೇ ಕೆಡಿಸುವಷ್ಟು ಕಹಿ-ಖಾರವಾಗಿದೆ ಎಂಬ ಮಾತೊಂದಿದೆ. ಗೋಕಾಕ್ ತಾಲೂಕಿನ ಸಕಲ ವಲಯದಲ್ಲಿ ಮೇಲ್ವರ್ಗದ ಲಿಂಗಾಯತರ ಏಕಸ್ವಾಮ್ಯ ಜಾಸ್ತಿಯಾದರೂ ಕಳೆದ ಎರಡೂವರೆ ದಶಕದಿಂದ “ಬೇಡ ಜನಾಂಗದ ವ್ಯಕ್ತಿ”ಯ ಏಕಚಕ್ರಾಧಿಪತ್ಯ ನಡೆದಿರುವುದು ಪ್ರಜಾಪ್ರಭುತ್ವದ ವೈಚಿತ್ರ್ಯ-ವೈಶಿಷ್ಟ್ಯ ಎಂದು ಕೂಡ ವ್ಯಾಖ್ಯಾನಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಎರಡನೆ ದೊಡ್ಡ ನಗರವಾಗಿರುವ ಗೋಕಾಕ್ ಕೈಗಾರಿಕೆ, ವ್ಯಾಪಾರ ವಹಿವಾಟಿನ ಕೇಂದ್ರ. ಗೋಕಾಕ್ ಫಾಲ್ಸ್ ಪಟ್ಟಣದಲ್ಲಿ ಜವಳಿ ಉದ್ಯಮದಲ್ಲಿ ಪ್ರಸಿದ್ಧವಾಗಿರುವ ಹತ್ತಿ ನೂಲುವ ಗಿರಣಿಯಿದೆ. ಇದು ವಿಶ್ವದಾದ್ಯಂತ ನೂಲು ಸರಬರಾಜು ಮಾಡುತ್ತಿರುವ ಭಾರತದ ಅತಿ ದೊಡ್ಡ ನೂಲು ತಯಾರಕ ಕಾರ್ಖಾನೆ. ದೇಶದ ಅತಿ ದೊಡ್ಡ ಪಿಷ್ಟ ಸಂಸ್ಕರಣಾ ಘಟಕ, ಸಕ್ಕರೆ ಕಾರ್ಖಾನೆ, ಸಿಮೆಂಟ್ ಫ್ಯಾಕ್ಟರಿ, ಗೋವಿನ ಜೋಳ ಸಂಸ್ಕರಣಾ ಘಟಕ ಗೋಕಾಕ್‌ನಲ್ಲಿದೆಯಾದರೂ ಗ್ರಾಮೀಣ ಪ್ರದೇಶದ ಕೃಷಿ ಕಸುಬೇ ಆರ್ಥಿಕತೆಯ ಜೀವಾಳ. ಕಬ್ಬು, ಹತ್ತಿ, ಮೆಕ್ಕೆ ಜೋಳ, ತರಕಾರಿ ಬೆಳೆದು ರೈತಾಪಿ ವರ್ಗ ಬದುಕು ಕಟ್ಟಿಕೊಂಡಿದೆ.

ಕ್ಷೇತ್ರಕಾರಣ

ಹೆಚ್ಚು ರೈತರು ಕಬ್ಬು ಕೃಷಿ ಮಾಡುತ್ತಿರುವ ಗೋಕಾಕ್ ರಾಜಕಾರಣಕ್ಕೆ ಸಕ್ಕರೆ ಹಾಗು ಸಾರಾಯಿ ಲಾಬಿಯೊಂದಿಗೆ ಲಾಗಾಯ್ತಿನಿಂದ ಅಂಟಿದ ನಂಟಿರುವುದು ಎಲ್ಲರಿಗೂ ಗೊತ್ತಿರುವ ರಹಸ್ಯ. ಬೆಳಗಾವಿ ಜಿಲ್ಲೆಯಲ್ಲಿ 22 ಸಕ್ಕರೆ ಕಾರ್ಖಾನೆಗಳಿವೆ; ಆರು ಮಂದಿ ಜಾರಕಿಹೊಳಿ ಅಣ್ಣ-ತಮ್ಮಂದಿರಿಗೆ ಸೇರಿದ ಐದು ಶುಗರ್ ಫ್ಯಾಕ್ಟರಿಗಳಿವೆ. ಲಕ್ಷ್ಮೀ ಹೆಬ್ಬಾಳ್ಕರ್, ಸವದಿ, ಕತ್ತಿ ಖಾನ್‌ದಾನ್ ಸೇರಿದಂತೆ ಮುಂತಾದ ಅತಿರಥ ಮಹಾರಥ ರಾಜಕಾರಣಿಗಳು ಸಕ್ಕರೆ ಉದ್ಯಮಿಗಳಾಗಿದ್ದಾರೆ. ಗೋಕಾಕ್ ರಾಜಕಾರಣ ಒಳಹೊಕ್ಕು ನೋಡಿದರೆ ಇಲ್ಲಿ ಕಳೆದೆರಡು ದಶಕದಿಂದ ಮೇಲ್ವರ್ಗದ ಲಿಂಗಾಯತ್ ವರ್ಸಸ್ ಓಬಿಸಿ ಮೇಲಾಟ ನಾಜೂಕಾಗಿ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ; ಜತೆಗೆ ಹಣ-ಹೆಂಡ-ತೋಳ್ಬಲದ ದಾಳಗಳು ಉರುಳುತ್ತಿರುವುದು ಕಾಣಿಸುತ್ತದೆ.

ಗೋಕಾಕ್ ಅಸೆಂಬ್ಲಿ ಕ್ಷೇತ್ರದ ಚಹರೆ 2008ರಲ್ಲಾದ ಕ್ಷೇತ್ರಗಳ ಪುನರ್ ವಿನ್ಯಾಸ ಪ್ರಕ್ರಿಯೆಯಲ್ಲಿ ಬದಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಗೋಕಾಕ್ ಈಗ ಸಾಮಾನ್ಯ ಕ್ಷೇತ್ರ. ಒಟ್ಟು 2,45,915 ಮತದಾರರಿದ್ದಾರೆ. ಇದರಲ್ಲಿ ಲಿಂಗಾಯತ-75,000, ಪರಿಶಿಷ್ಠ ಪಂಗಡ-40,000, ಮುಸಲ್ಮಾನ್-35,000, ಕುರುಬ-25,000, ಪರಿಶಿಷ್ಠ ಜಾತಿ-19,000, ಉಪ್ಪಾರ-13,000, ಮರಾಠ-12,000 ಮತ್ತು ಇತರ ಸಣ್ಣಪುಟ್ಟ ಜಾತಿಯ 25,000 ಮತದಾರರು ಇರಬಹುದೆಂದು ಅಂದಾಜಿಸಲಾಗಿದೆ. ಕಾಂಗ್ರೆಸ್-ಜನತಾ ಪರಿವಾರದ ಕದನ ಕಣವಾಗಿದ್ದ ಗೋಕಾಕ್‌ನ ರಾಜಕಾರಣದಲ್ಲಿ ಪ್ರತಿಷ್ಠಿತ ಮದ್ಯ-ಸಿನೆಮಾ ಉದ್ಯಮಿಯಾಗಿದ್ದ ಲಕ್ಷ್ಮಣರಾವ್ ಜಾರಕಿಹೊಳಿಯ ಪ್ರಥಮ ಪುತ್ರ ರಮೇಶ್ ಜಾರಕಿಹೊಳಿ (ಆರ್‌ಜೆ) ಪ್ರವರ್ಧಮಾನಕ್ಕೆ ಬರುವ ಹೊತ್ತಿಗೆ (1999) ಬಿಜೆಪಿಯೂ ಬೇರು ಬಿಡಲಾರಂಭಿಸಿತ್ತು. 1951ರಿಂದ ಈವರೆಗೆ ನಡೆದಿರುವ 13 ಸಾರ್ವತ್ರಿಕ ಮತ್ತು 1 ಉಪಚುನಾವಣೆಯಲ್ಲಿ ಕಾಂಗ್ರೆಸ್ 10 ಬಾರಿ, ಜನತಾ ಪರಿವಾರ 3 ಸಲ ಮತ್ತು ಬಿಜೆಪಿ ಒಮ್ಮೆ ಗೆಲುವು ಸಾದಿಸಿವೆ.

“ಮೀಸೆ ಮುತ್ತೇನ್ನವರ್” ಎಂದೇ ಕ್ಷೇತ್ರದಲ್ಲಿ ಗುರುತಿಸಲಾಗುತ್ತಿದ್ದ ಪೊಲೀಸ್ ಕಾನ್‌ಸ್ಟೇಬಲ್ ಎಂ.ಎಲ್.ಮುತ್ತೇನ್ನವರ್ 1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಎಮ್ಮೆಲ್ಲೆಯಾಗಿದ್ದರು. 1985ರಲ್ಲಿ ಈಗಿನ ಬೆಳಗಾವಿ ರಾಜಕಾರಣದ ಕೇಂದ್ರ ಬಿಂದು ಮತ್ತು ಹಲವು ವಿವಾದಗಳಿಂದಲೇ ರಾಜ್ಯಮಟ್ಟದ ರಾಜಕಾರಣದ ಮುಂಚೂಣಿಗೆ ಬಂದಿರುವ ಆರ್‌ಜೆ ಶಾಸಕನಾಗುವ ವಿಫಲ ಪ್ರಯತ್ನ ಮಾಡಿದ್ದರು! 1989ರಲ್ಲಿ ಕಾಂಗ್ರೆಸ್‌ನ ಶಂಕರ ಕರ್ನಿಂಗ್ ಶಾಸಕನಾಗಿದ್ದರು. ಬೇಡರ ಸಮುದಾಯಕ್ಕೆ ಸೇರಿದ ಜಾರಕಿಹೊಳಿ ಮತ್ತು ಕರ್ನಿಂಗ್ ಕುಟುಂಬಗಳ ನಡುವೆ ಸುದೀರ್ಘ ರಾಜಕೀಯ-ವ್ಯಾವಹಾರಿಕ ಗುದುಮುರಿಗೆ ನಡೆದಿತ್ತು. ಈ ಎರಡೂ ತೋಳ್ಬಲದ ಫ್ಯಾಮಿಲಿಯ ಹೆಂಡದ ವ್ಯವಹಾರದ ಸಂಘರ್ಷದಲ್ಲಿ ಗೋಕಾಕ್ ಕೊಲೆ-ರಕ್ತಪಾತವನ್ನೂ ಕಂಡಿದೆ ಎಂದು 1990ರ ದಶಕದ ದ್ವೇಷದ ರಾಜಕಾರಣ ಕಂಡ ಹಿರಿಯರು ಇವತ್ತಿಗೂ ಗಾಬರಿಯಿಂದ ಹೇಳುತ್ತಾರೆ.

ಜಾರಕಿಹೊಳಿ ರಿಪಬ್ಲಿಕ್?!

1994ರಲ್ಲಿ ಶಾಸಕ ಕರ್ನಿಂಗ್‌ರನ್ನು ಸೋಲಿಸುವ ಹಠಕ್ಕೆ ಬಿದ್ದಿದ್ದ ಜಾರಕಿಹೊಳಿ ಪರಿವಾರ ಜನತಾ ದಳದಿಂದ ಚಂದ್ರಶೇಖರ ನಾಯಕರನ್ನು ಅಖಾಡಕ್ಕಿಳಿಸಿ ಗೆಲ್ಲಿಸಿಕೊಂಡಿತ್ತು. 1999ರ ಚುನಾವಣೆ ಎದುರಾಗುವ ವೇಳೆಗೆ ಜಾರಕಿಹೊಳಿ ಸಹೋದರರು ಗೋಕಾಕ್, ಅರಭಾವಿ ತಾಲೂಕುಗಳ ಸುತ್ತಲಿನ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ವಲಯದಲ್ಲಿ ಪ್ರಭಾವಳಿ ಬೆಳೆಸಿಕೊಂಡಿದ್ದರು.

ಲಖನ್ ಜಾರಕಿಹೊಳಿ

ಆರ್‌ಜೆ 1999ರಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡು ಅಖಾಡಕ್ಕೆ ಧುಮುಕಿದರು. ಭರ್ಜರಿ 56,956 ಮತಗಳ ಅಂತರದಿಂದ ಜೆಡಿಯು ಅಭ್ಯರ್ಥಿಯಾಗಿದ್ದ ಶಾಸಕ ಚಂದ್ರಶೇಖರ್ ನಾಯಕ್‌ರನ್ನು ಮಣಿಸಿ ಅಸೆಂಬ್ಲಿಗೆ ಎಂಟ್ರಿ ಪಡೆದರು. ಆ ಬಳಿಕದ 2004, 2008, 2013 ಮತ್ತು 2018ರ ಇಲೆಕ್ಷನ್‌ಗಳಲ್ಲಿ ಕಾಂಗ್ರೆಸ್‌ನಿಂದಲೇ ನಿರಂತರ-ನಿರಾತಂಕವಾಗಿ ಶಾಸಕನಾದರು. ಈ ನಡುವೆ ಅವರ ಸಹೋದರರಾದ ಸತೀಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಬೇರೆಬೇರೆ ಸಂದರ್ಭದಲ್ಲಿ ಬೇರೆಬೇರೆ ಪಕ್ಷದಿಂದ ಎಮ್ಮೆಲ್ಲೆಯಾದರು. ಅಧಿಕಾರ ರಾಜಕಾರಣದ ಪಡಸಾಲೆಗೆ ಬರಲಾಗದ ಆರ್‌ಜೆ ಸೋದರ ಭೀಮ್‌ಶಿ ಜಾರಕಿಹೊಳಿ 2008ರಲ್ಲಿ ಅಣ್ಣನಿಗೆ ಬಿಜೆಪಿ ಉಮೇದುವಾರನಾಗಿ ಸೆಡ್ಡು ಹೊಡೆದಿದ್ದರು.

ಬೆಳಗಾವಿ ಜಿಲ್ಲಾ ರಾಜಕಾರಣದ ಮೇಲೆ ನಿಧಾನಕ್ಕೆ ಹಿಡಿತ ಸಾಧಿಸತೊಡಗಿದ್ದ ಆರ್‌ಜೆ ಬೆಳಗಾವಿ ಗ್ರಾಮೀಣ, ಬೆಳಗಾವಿ ನಗರದ ಎರಡು ಕ್ಷೇತ್ರಗಳು, ಅಥಣಿ ಮುಂತಾದೆಡೆ ತನ್ನ ನಂಬಿಕಸ್ಥರನ್ನು ಶಾಸಕರಾಗಿ ತಯಾರಿಸಿಕೊಳ್ಳಲು ಪ್ರಯತ್ನಸಿದರು! 2018ರಲ್ಲಿ ಆರ್‌ಜೆ ಸಹಕಾರದಿಂದ ಬೆಳಗಾವಿ ಗ್ರಾಮೀಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಶಾಸನಸಭೆಗೆ ಆಯ್ಕೆಯಾದರು. ತನ್ನ ಮರ್ಜಿಯಿಂದ ಶಾಸಕಿಯಾದ ಲಕ್ಷ್ಮೀ ವಿಧೇಯಳಾಗಿಲ್ಲವೆಂದು ತಿರುಗಿಬಿದ್ದರು. ಅಂದಿನ ಬಲಾಢ್ಯ ಮಂತ್ರಿ ಡಿಕೆಶಿ ಮತ್ತು ಸ್ಥಳೀಯ ಪ್ರಭಾವಿ ಪಂಚಮಸಾಲಿ ಲಿಂಗಾಯತರ ಬೆಂಬಲವಿದ್ದ ಲಕ್ಷ್ಮೀಯೂ ಸೇರಿಗೆ ಸವ್ವಾ ಸೇರು ಎಂಬಂತೆ ಸೆಟೆದು ನಿಂತರು. ಬೆಳಗಾವಿ ಜವಾರಿ ರಾಜಕಾರಣ ಮಿತಿಮೀರಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಪತನದ ಕ್ಲೈಮ್ಯಾಕ್ಸ್ ತಲುಪಿದ್ದು ಇತಿಹಾಸ.

ಪಂಚಮಸಾಲಿ ಪಾಶುಪತಾಸ್ತ್ರ!

ಆಪರೇಷನ್ ಕಮಲದ ಪ್ರಮುಖ “ಸರ್ಜನ್” ಆಗಿದ್ದ ಆರ್‌ಜೆ ಹಠಹಿಡಿದು ಡಿಕೆಶಿ ನಿಭಾಯಿಸುತ್ತಿದ್ದ ಆಯಕಟ್ಟಿನ ಜಲಸಂಪನ್ಮೂಲ ಖಾತೆಯನ್ನೇ ಯಡಿಯೂರಪ್ಪ ಸಂಪುಟದಲ್ಲಿ ಪಡೆದುಕೊಂಡರು. 2019ರ ಉಪಚುನಾವಣೆಯಲ್ಲಿ ಕಮಲ ಅಭ್ಯರ್ಥಿಯಾಗಿದ್ದ ಆರ್‌ಜೆಗೆ ಕಾಂಗ್ರೆಸ್ ಪ್ರತಿಸ್ಪಧಿಯಾಗಿದ್ದು ಸಣ್ಣ ಸಹೋದರ ಲಖನ್ ಜಾರಕಿಹೊಳಿ. ತುರುಸು, ಪ್ರತಿರೋಧವಿಲ್ಲದ ಈ ಚುನಾವಣೆಯಲ್ಲಿ ಆರ್‌ಜೆ 29,006 ಮತದಿಂದ ನಿರಾಯಾಸವಾಗಿ ಗೆದ್ದರು. ಕೆಲ ದಿನಗಳಲ್ಲಿ ಲಖನ್ ಸಣ್ಣಣ್ಣ ಸತೀಶ್‌ರ ಕಾಂಗ್ರೆಸ್ ಕ್ಯಾಂಪ್ ಬಿಟ್ಟು ದೊಡ್ಡಣ್ಣ ಆರ್‌ಜೆ ಇರುವ ಆಡಳಿತಾರೂಢ ಪಾರ್ಟಿ ಸೇರಿಕೊಂಡರು. ಇತ್ತೀಚಿಗೆ ಸ್ಥಳೀಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಲಿಂಗಾಯತ ಪ್ರತಿನಿಧಿ ಮಹಾಂತೇಶ್ ಕವಟಗಿಮಠರನ್ನು ಸೋಲಿಸಿ ಲಖನ್‌ರನ್ನು ಆರ್‌ಜೆ ಗೆಲ್ಲಿಸಿಕೊಂಡಿದ್ದರು. ಈ ಮುಖಭಂಗದಿಂದ ಆರೆಸ್ಸೆಸ್ ಸಖ್ಯದ ಸಂಸದ ಈರಣ್ಣ ಕಡಾಡಿಯ ಪಂಚಮಸಾಲಿ ಪಡೆಯ ಕಣ್ಣು ಕೆಂಪಾಗಿಸಿತ್ತು. ಸೆಕ್ಸ್ ಸಿ.ಡಿ ಬಹಿರಂಗವಾದಾಗ ಮುಜುಗರಕ್ಕೀಡಾಗಿದ್ದ ಸಂಘದ “ಸಂಸ್ಕೃತಿ”ವಂತರು ವಿಧಾನಪರಿಷತ್ ಇಲೆಕ್ಷನ್‌ನಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದರೂ ಆರ್‌ಜೆ ತಂಟೆಗೆ ಹೋಗುವ ಧೈರ್ಯ ತೋರಿಸಲಿಲ್ಲ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಬೆಳಗಾವಿ ಗ್ರಾಮೀಣ: “ಕುಂದಾ” ಲಕ್ಷ್ಮೀ ಹೆಬ್ಬಾಳ್ಕರ್‌ಗೋ? ರಮೇಶ್ ಜಾರಕಿಹೊಳಿಗೋ?

ಇದ್ದಕ್ಕಿದ್ದಂತೆ ಬಂಡೇಳುವುದು, ತನಗಾಗದವರ ಮೇಲೆ ಮುರಕೊಂಡು ಬಿದ್ದು ದ್ವೇಷ ಸಾಧಿಸುವುದು ಆರ್‌ಜೆ ಬಲ ಮತ್ತು ದೌರ್ಬಲ್ಯ ಎಂಬ ವಿಶ್ಲೇಷಣೆ ಗೋಕಾವಿಯ ರಾಜಕೀಯ ರಂಗಸಾಲೆಯಲ್ಲಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಏರುತ್ತಿದ್ದಂತೆಯೆ ಜಿಲ್ಲೆಯಲ್ಲಿ ಆರ್‌ಜೆ-ಲಕ್ಷ್ಮೀ ಲಡಾಯಿ ಜೋರಾಯಿತು. ಬಿಜೆಪಿ ಸರಕಾರದಲ್ಲಿ ದಿನಗಳೆದಂತೆ ಪವರ್‌ಫುಲ್ ಆಗಹತ್ತಿದ್ದ ಆರ್‌ಜೆಯದು ಎನ್ನಲಾದ ಸೆಕ್ಸ್ ಸಿ.ಡಿ ಇದ್ದಕ್ಕಿದ್ದಂತೆ ಸಿಡಿಯಿತು. ಆರ್‌ಜೆಯ ಸಚಿವಗಿರಿಗೆ ಸಂಚಕಾರ ಬಂತು!

ಆರ್‌ಜೆ ಸಹ ತನ್ನ ಮಂತ್ರಿ ಸ್ಥಾನ-“ಮಾನ” ಹೋಗಿದ್ದು ಡಿಕೆಶಿ-ಲಕ್ಷ್ಮೀಯ ಜಂಟೀ ಕಾರಸ್ಥಾನದಿಂದ ಎಂದು ಹಲವು ಬಾರಿ-ಹಲವು ಕಡೆ ಹೇಳಿದ್ದಾರೆ; 2023ರ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗು ಡಿಕೆಶಿಯನ್ನು ಸೋಲಿಸಿ ಸೇಡು ತೀರಿಸಿಕೊಳ್ಳುತ್ತೇನೆ ಎಂದು ಗುಡುಗಿದ್ದೂ ಇದೆ. ಡಿಕೆಶಿಯ ದೂರದ ಕನಕಪುರದಲ್ಲಿ ರಾಜಕಾರಣ ಮಾಡುವ ಸಾಮರ್ಥ್ಯವಿಲ್ಲದ ಆರ್‌ಜೆ ಹತ್ತಿರದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣದಲ್ಲಿ “ಆಹುತಿ” ಪಡೆಯುವ ಆಟ ಆರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ಆರ್‌ಜೆ ಲಿಂಗಾಯತ ವಿರೋಧಿ ಎಂಬಂತೆ ಬಿಂಬಿಸಿ ಗೋಕಾಕ್ ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತರ ಒಗ್ಗೂಡಿಸುವ ತಂತ್ರಗಾರಿಕೆ ನಡೆಯಿತು.

ಡಾ.ಮಹಾಂತೇಶ್ ಕಡಾಡಿ

ಪಂಚಮಸಾಲಿ ಮೀಸಲಾತಿ ಹೋರಾಟದ ನೆಪದಲ್ಲಿ ಗೋಕಾಕ್‌ನಲ್ಲಿ ಆರ್‌ಜೆ ಹಣಿಯಲು ಆರೆಂಟು ತಿಂಗಳಿಂದ ಕಾರ್ಯಾಚರಣೆ ನಡೆಯುತ್ತಲೇ ಇತ್ತು; ಪಂಚಮಸಾಲಿ ಫೈರ್‌ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಆರ್‌ಜೆ ಕೋಟೆಯಲ್ಲೆ ನಿಂತು ಅಬ್ಬರಿಸಿದ್ದರು. ಲಕ್ಷ್ಮೀ ಮೇಲಿಂದ ಮೇಲೆ ಗೋಕಾಕ್‌ಗೆ ಭೇಟಿ ಕೊಡುತ್ತ ರಹಸ್ಯ ಸಭೆಗಳನ್ನು ಮಾಡಿದರು ಎಂಬ ಮಾತು ಕೇಳಿಬರುತ್ತಿದೆ. ಅಥಣಿಯಲ್ಲಿ ತನ್ನ ಎದುರಾಳಿ ಮಹೇಶ್ ಕುಮಟಳ್ಳಿಗೆ ಕುಮ್ಮಕ್ಕು ಕೊಡುತ್ತಿದ್ದ ಆರ್‌ಜೆಗೆ ಪಾಠ ಕಲಿಸುವ ಪ್ಲಾನು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಕಿಕೊಂಡಿದ್ದರು. ಅಥಣಿ ಬಿಜೆಪಿ ಟಿಕೆಟ್‌ಗಾಗಿ ಕೊನೆ ಕ್ಷಣದವರೆಗೆ ಸರ್ಕಸ್ ಮಾಡಿದ ಸವದಿ ಅಂತಿಮವಾಗಿ ಆರ್‌ಜೆ ಕೈಮೇಲಾಗುತ್ತಿದ್ದಂತೆಯೆ ಕಾಂಗ್ರೆಸ್ ಸೇರಿಕೊಂಡಿದ್ದಾರೆ; ತಾನು ಗೆಲ್ಲುವುದರ ಜತೆಗೆ ಬಿಜೆಪಿಯಲ್ಲಿ ತನ್ನನ್ನು ಮೂಲೆಗುಂಪು ಮಾಡಿದ್ದ ಆರ್‌ಜೆಯನ್ನು ಗೋಕಾಕ್‌ನಲ್ಲಿ ಸೋಲಿಸುವ ಪಣ ತೊಟ್ಟಿದ್ದಾರೆ.

ಜಾರಕಿಹೊಳಿ ಬ್ರದರ್‍ಸ್ ವರ್ಸಸ್ ಅದರ್‍ಸ್

ಶಸ್ತ್ರ ಸನ್ನದ್ಧವಾಗಿರುವ ಗೋಕಾಕ್ ಯುದ್ಧಭೂಮಿಯಲ್ಲೀಗ ಜಾರಕಿಹೊಳಿ ವಿರೋಧಿಗಳೆಲ್ಲ ಒಂದಾಗಿ ನಿಂತಿದ್ದಾರೆ; ಆರ್‌ಜೆ ಏಕಚಕ್ರಾಧಿಪತ್ಯ ಈ ಬಾರಿ ಕೊನೆಗಾಣಿಸಲೇಬೇಕೆಂದು ವ್ಯೂಹ-ಚಕ್ರವ್ಯೂಹ ಹೆಣೆಯುತ್ತಿದ್ದಾರೆ. ಡಿಕೆಶಿ-ಲಕ್ಷ್ಮೀ ಹೆಬ್ಬಾಳ್ಕರ್-ಲಕ್ಷ್ಮಣ್ ಸವದಿಯಂಥ ಪ್ರತ್ಯಕ್ಷ ವೈರಿಗಳ ತಂಡ ಬಹಿರಂಗ ಸಮರ ಸಾರಿದ್ದರೆ, ಮತ್ತೊಂದು ಮಗ್ಗಲಿಂದ ಬಿಜೆಪಿ ಅಪ್ರತ್ಯಕ್ಷ ಹಿತಶತ್ರು-ಆರೆಸ್ಸೆಸ್ ಶ್ರೇಷ್ಠರ ಕೃಪಾಶೀರ್ವಾದದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯ ಸಂಘ ಪರಿವಾರವೇ ಮುಗಿಬಿದ್ದಿದೆ ಎನ್ನುವ ಸುದ್ದಿಗಳಿವೆ. ಪಂಚಮಸಾಲಿ ಸಮುದಾಯದ ಡಾ.ಮಹಾಂತೇಶ್ ಕಡಾಡಿ ಎಂಬ ’ಅಪರಿಚಿತ’ನನ್ನು ಆರ್‌ಜೆ ಎದುರು ತಂದು ನಿಲ್ಲಿಸಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಈ ಮಹಾಂತೇಶ್ ಕೊನೆಯ ಕ್ಷಣದವರೆಗೂ ಬಿಜೆಪಿ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಆರ್‌ಜೆ ವಿರೋಧಿ ಬಿಜೆಪಿ ಎಂಪಿ ಈರಣ್ಣ ಕಡಾಡಿಯ ಅಣ್ಣನ ಮಗನಾದ ಮಹಾಂತೇಶ್ ರಾಜಕೀಯಕ್ಕೆ ಹೊಸಬ; ಗೋಕಾಕ್‌ನ ದ್ವೇಷಾಸೂಯೆಯ ರಾಜಕಾರಣದ ಸುಳಿಯ ಅರಿವಿಲ್ಲದ ಅನನುಭವಿ ಹುಡುಗ. ತನ್ನ ತಮ್ಮನನ್ನು ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡುವ ಪ್ರಯತ್ನದಲ್ಲಿ ಬಿಜೆಪಿಯ ಈರಣ್ಣ ಕಡಾಡಿ ಪಾತ್ರ ನಿರ್ಣಾಯಕವಾಗಿತ್ತು ಎನ್ನಲಾಗುತ್ತಿದೆ. ಇಲ್ಲಿ ಕಾಂಗ್ರೆಸ್ ಕ್ಯಾಂಡಿಡೇಟ್ ಸಾಂಕೇತಿಕವಷ್ಟೆ; ಜಿದ್ದಾಜಿದ್ದಿ ಏನಿದ್ದರೂ ಒಬಿಸಿಗಳನ್ನು ಸೆಳೆಯಬಲ್ಲ ಹಣಬಲದ ರಣತಂತ್ರದ ಜಾರಕಿಹೊಳಿ ಬ್ರದರ್‍ಸ್ ಮತ್ತು ಆರ್‌ಜೆ ಎದುರು ಹಾಕಿಕೊಂಡಿರುವ ಎಲ್ಲ ಪಕ್ಷ-ಪಂಗಡ ಪ್ರಚಂಡರ ತಂಡದ ನಡುವೆ!

ಆರ್‌ಜೆಯ ಸಾಂಪ್ರದಾಯಿಕ ಎದುರಾಳಿಯಾದ ಅಶೋಕ್ ಪೂಜಾರಿ “ಅಡ್ಜಸ್ಟಮೆಂಟ್” ಮಾಡಿಕೊಂಡು ಹೋರಾಟದ ಕೊನೆ ಹಂತದಲ್ಲಿ ಸುಮ್ಮನಾಗುತ್ತಾರೆಂಬ ಗುಮಾನಿಯಿಂದ ವಿರೋಧಿ ಪಡೆ ಮಹಾಂತೇಶ್ ಕಡಾಡಿಯನ್ನು ತಯಾರು ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಟಿಕೆಟ್ ಸಿಗದೆ ಕೆರಳಿದ್ದ ಪೂಜಾರಿಯನ್ನು ಪಂಚಮಸಾಲಿ ಮುಂದಾಳುಗಳು ಸಮಾಧಾನಪಡಿಸಿ ಪ್ರಚಾರಕ್ಕೆ ಕರೆದೊಯ್ಯುತ್ತಿದ್ದಾರೆ. ಮತ್ತೊಂದು “ಪಂಚಮಸಾಲಿ ಸ್ಟ್ರಾಟಜಿ”ಯಲ್ಲಿ ಆ ಪಂಗಡಕ್ಕೆ ಸೇರಿದ ಜೆಡಿಎಸ್ ಅಭ್ಯರ್ಥಿ ಚಂದನ್ ಗಿಡ್ಡನವರ್ ನಾಮಪತ್ರವನ್ನು ಕಾಂಗ್ರೆಸ್ ಕ್ಯಾಂಡಿಡೇಟ್ ಬೆಂಬಲಾರ್ಥವಾಗಿ ಹಿಂಪಡೆಯುವಂತೆ ನೋಡಿಕೊಳ್ಳಲಾಗಿದೆ. ಕಾಂಗ್ರೆಸ್ ಹುರಿಯಾಳಿಗೆ ಪಂಚಮಸಾಲಿ ಮತ ಏಕಗಂಟಲ್ಲಿ ಬರವಂತಾಗಬೇಕು; ಜತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರಾದ ಮುಸ್ಲಿಮ್ ಮತ್ತು ಸಿದ್ದರಾಮಯ್ಯನವರಿಂದಾಗಿ ಕುರುಬರ ಮತಗಳು ಬಂದರೆ ಆರ್‌ಜೆಯನ್ನು ನಿರಾಯಾಸವಾಗಿ ಹಣಿಯಬಹುದು. ಪಂಚಮಸಾಲಿ ಮತದ ಗಂಟಲ್ಲಿ ಅರ್ಧದಷ್ಟು ಪಡೆದವರು ಗೆಲ್ಲುತ್ತಾರೆ ಎಂಬ ಸರಳ ಅಂಕಗಣಿತ ಕಾಂಗ್ರೆಸ್ ಹುರಿಯಾಳನ್ನು ಗೆಲ್ಲಿಸಲು ಟೊಂಕಕಟ್ಟಿ ನಿಂತವರದಾಗಿದೆ.

ಜಾರಕಿಹೊಳಿಯವರನ್ನು ಮಣಿಸಲಾದೀತೆ?

’ಹಣಾ’ಹಣಿಯಿಂದ ಚುನಾವಣೆಗಳನ್ನು ಗೆಲ್ಲುವ ಕಲೆ ಕರಗತ ಮಾಡಿಕೊಂಡಿರುವ ರಮೇಶ್ ಜಾರಕಿಹೊಳಿಗೆ ’ಪಿಚ್’ ಮೊದಲಿನಷ್ಟು ಅನುಕೂಲಕರವಾಗಿಲ್ಲ. ಆರ್‌ಜೆ ಹಿಂದೆ ಎದುರಿಸಿದ ಚುನಾವಣೆಗಳೆಲ್ಲ ನೀರಸ ಒನ್‌ಸೈಡೆಡ್ ಪಂದ್ಯಾವಳಿಯಂತಾಗಿದ್ದವು. ಆದರೆ ಈ ಬಾರಿಯ ಹೋರಾಟ ನಿಕಟ-ನೇರ-ಕತ್ತು-ಕತ್ತಿನ ಕದನ. ಪಂಚಮಸಾಲಿ ಮತಗಳು ನಿರ್ಣಾಯಕ ಎನ್ನಲಾಗುತ್ತಿದೆಯಾದರೂ ಅಹಿಂದ ಮತಗಳು ಇಲ್ಲಿ ಹೆಚ್ಚಿವೆ. ಕಾಂಗ್ರೆಸ್ ಕ್ಯಾಂಡಿಡೇಟ್‌ನ ಹಿಂದಿರುವ ರಣ ತಂತ್ರಗಾರರು ಪಂಚಮಸಾಲಿ ಮತಗಳ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಯಡಿಯೂರಪ್ಪನವರ ವರ್ಚಸ್ಸು ಲಿಂಗಾಯತರ ಮಧ್ಯೆ ಕುಂದಿರುವುದು ಮತ್ತು ಸ್ಥಳೀಯ ಪಂಚಮಸಾಲಿ ಲೀಡರ್‌ಗಳು ತಿರುಗಿಬಿದ್ದಿರುವುದರಿಂದ ಆರ್‌ಜೆ ಒಬಿಸಿ ಮತ ಕ್ರೋಢೀಕರಣಕ್ಕೆ ಸ್ಕೆಚ್ ಹಾಕಿಕೊಂಡಿದ್ದಾರೆ ಎನ್ನಲಾಗುತ್ತಿದೆ

ಸತತ ಆರು ಬಾರಿ ಗೆಲುವು ಕಂಡಿರುವ ಆರ್‌ಜೆಯವರಿಗೆ ಕ್ಷೇತ್ರದ ನಾಡಿಮಿಡಿತ ಗೊತ್ತಿದೆ. ಕಾಂಗ್ರೆಸ್ ಬಿಟ್ಟರೂ ಅಹಿಂದ ಮತಗಳು ಆರ್‌ಜೆ ಕೈಬಿಟ್ಟಿಲ್ಲ. ಅಳಿಯ ಅಂಬಿರಾವ್ ಮತ್ತು ತಮ್ಮ-ಎಮ್ಮೆಲ್ಸಿ ಲಖನ್ ಜಾರಕಿಹೊಳಿ ಗೆಲುವಿಗೆ ಶತಾಯಗತಾಯ ಹೋರಾಡುತ್ತಿದ್ದಾರೆ. ಪ್ರಖರ ವೈಯಕ್ತಿಕ ವರ್ಚಸ್ಸಿನ ಆರ್‌ಜೆ ಎದುರು ಕಾಂಗ್ರೆಸ್ ಹುರಿಯಾಳು ಸಪ್ಪೆಯಾಗಿ ಕಾಣಿಸುತ್ತಾರೆ. ಹಾಗಂತ ಕಾಂಗ್ರೆಸ್ಸೇನೂ ದುರ್ಬಲವಾಗಿಲ್ಲ; 2019ರ ಉಪಚುನಾವಣೆಯಲ್ಲಿ ನಾಮ್ ಕೆ ವಾಸ್ತೆ ಕ್ಯಾಂಡಿಡೇಟಾಗಿದ್ದ- ತಾನು ಸೋಲಬೇಕು; ಅಣ್ಣ ಗೆದ್ದು ರಾಜ್ಯ ಆಳಬೇಕೆಂಬ ಒಳಾಸೆಯಲ್ಲಿದ್ದ- ಲಖನ್ ಜಾರಕಿಹೊಳಿಗೇ “ಹಸ್ತ” ಚಿನ್ಹೆಯ ಆಕರ್ಷಣೆಯಿಂದಾಗಿ 58,444 ಮತ ಬಂದಿತ್ತು. ಆಗ ಯಡಿಯೂರಪ್ಪರ ದೆಸೆಯಿಂದ ಲಿಂಗಾಯತರು ಸಾರಾಸಗಟಾಗಿ ಬಿಜೆಪಿಗೆ ಓಟು ಮಾಡಿದ್ದರು. ಈ ಬಾರಿ ಲಿಂಗಾಯತರ ಮನಃಸ್ಥಿತಿ ಬದಲಾಗಿದೆ ಎಂಬ ಚರ್ಚೆ ಗೋಕಾವಿಯ ರಾಜಕೀಯ ಕಟ್ಟೆಯಲ್ಲಿ ಜೋರಾಗಿದೆ.

ಅಖಾಡದಲ್ಲಿ ಋಣಾತ್ಮಕ ಆಂಶಗಳೂ ಆರ್‌ಜೆಗೆ ತೊಂದರೆ ಕೊಡುತ್ತಿವೆ. ಸ್ವಪಕ್ಷದವರೇ ಕಾಲೆಳೆಯುತ್ತಿದ್ದಾರೆ. ಪಂಚಮಸಾಲಿ ಅಸ್ತ್ರಕ್ಕೆ ಆರ್‌ಜೆ ತ್ತರಿಸುತ್ತಿದ್ದಾರೆ. ಒಳೇಟಿನ ಆತಂಕ ಹೆಚ್ಚಾಗುತ್ತಿದೆ. ಬಂಡಾಯವೆದ್ದಿದ್ದ ಅಶೋಕ ಪೂಜಾರಿ ಕಣದಿಂದ ಹಿಂದೆ ಸರಿದಿದ್ದು ಕಾಂಗ್ರೆಸ್‌ಗೆ ಪ್ಲಸ್ ಆಗಿದೆ ಎಂದು ಚುನಾವಣಾ “ಹವಾಮಾನ” ಅಂದಾಜಿಸುವ ತಜ್ಞರು ಅಭಿಪ್ರಾಯಪಡುತ್ತಾರೆ.

ರಮೇಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಲಕ್ಷ್ಮಣ ಸವದಿ ತಾವು ಗೆದ್ದು, ವೈರಿಗೆ ಮಣ್ಣು ಮುಕ್ಕಿಸಲು ಹೊಂಚು ಹಾಕಿದ್ದಾರೇನೋ ನಿಜ. ಆದರೆ ಬೆಳಗಾವಿ ಜಿಲ್ಲೆಯಲ್ಲಿರುವ ತರ್ಕವೇ ಬೇರೆ. “ಮೂರೂ ಮಂದಿ ಅವರವ್ರ್ ಊರಾಗ್ ಗೆಲ್ತಾರ್ರಿ; ಯಾರಿಗೂ ಯಾರ್‍ನೂ ಸೊಲ್ಸಾಕಾಗೂದಿಲ್ರಿ” ಅನ್ನುವ ಮಾತು ಕೇಳಿಬರುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರು ಹುದ್ದೆಯಿಂದ ವಜಾ!

0
ದೆಹಲಿ ಮಹಿಳಾ ಆಯೋಗದ 223 ಗುತ್ತಿಗೆ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರು ಹುದ್ದೆಯಿಂದ ವಜಾಗೊಳಿಸಿದ್ದಾರೆ. ಈ ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿದ್ದ ಎಎಪಿಯ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಅವರು...