Homeಕರ್ನಾಟಕವಿರಾಜಪೇಟೆ: ಕೊಡವ v/s ಅರೆಭಾಷೆಗೌಡ ದಾಳದಲ್ಲಿ ಕಾಂಗ್ರೆಸ್ ಅರಳುವುದೇ?

ವಿರಾಜಪೇಟೆ: ಕೊಡವ v/s ಅರೆಭಾಷೆಗೌಡ ದಾಳದಲ್ಲಿ ಕಾಂಗ್ರೆಸ್ ಅರಳುವುದೇ?

ಹಿಂದುತ್ವದ ಪ್ರಯೋಗ ಶಾಲೆಯಲ್ಲಿ ಜಾತಿ ಅಸ್ಮಿತೆಯನ್ನು ಬಡಿದೆಬ್ಬಿಸಿ ಕಾಂಗ್ರೆಸ್ ಗೆಲುವು ಪಡೆಯಬಹುದೇ?

- Advertisement -
- Advertisement -

ಹಿಂದುತ್ವದ ಪ್ರಯೋಗಶಾಲೆಗಳಲ್ಲಿ ಒಂದಾದ ಕೊಡಗು ಜಿಲ್ಲೆಯಲ್ಲಿ ಚುನಾವಣೆ ಫ್ಯಾಕ್ಟರ್‌ಗಳು ರಾಜ್ಯದ ಇತರ ಕ್ಷೇತ್ರಗಳಿಗಿಂತ ಭಿನ್ನ. ಇಲ್ಲಿ ಜಾತಿಗಿಂತ ಧರ್ಮವನ್ನು ಮುನ್ನೆಲೆಗೆ ತಂದು ರಾಜಕಾರಣ ಮಾಡಿದವರು ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ. ಇಲ್ಲಿನ ವಿರಾಜಪೇಟೆ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕೊಡಗು ಜಿಲ್ಲೆ ಈಗ ಬಿಜೆಪಿಯ ನೆಲೆಯಾಗಿ ಮಾರ್ಪಟ್ಟಿದೆ. ಆದರೆ ಈ ಭಾರಿ ಕಾಂಗ್ರೆಸ್ ಪಕ್ಷವು ವಿರಾಜಪೇಟೆಯಲ್ಲಿ ಪ್ರಬಲ ಕ್ಯಾಂಡಿಡೇಟ್ ಹಾಕಿರುವುದರಿಂದ ಪೈಪೋಟಿ ಏರ್ಪಡುವ ಎಲ್ಲ ಸೂಚನೆಗಳು ದೊರೆತಿವೆ.

ವಿರಾಜಪೇಟೆಯಲ್ಲಿ ಕೊಡವ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಡಿಕೇರಿ ಕ್ಷೇತ್ರದಲ್ಲಿ ಅರೆಭಾಷೆ ಗೌಡ ಸಮುದಾಯದ ಪ್ರಾಬಲ್ಯವಿದೆ. ಆದರೆ ಕೊಡವರು ಹೆಚ್ಚಿರುವಲ್ಲಿ ಅರೆಭಾಷೆ ಗೌಡ ಸಮುದಾಯದ ಕೆ.ಜಿ.ಬೋಪಯ್ಯ, ಗೌಡರು ಹೆಚ್ಚಿರುವಲ್ಲಿ ಕೊಡವ ಸಮುದಾಯದ ಅಪ್ಪಚ್ಚು ರಂಜನ್ ಗೆಲ್ಲುತ್ತಾ ಬಂದಿರುವುದು ಕೊಡಗು ಜಿಲ್ಲೆಯ ವಿಶೇಷ.

ಕೊಡಗು ಜಿಲ್ಲೆಯ ರಾಜಕೀಯದ ಬಗ್ಗೆ ಹೇಳುವಾಗ ಎ.ಕೆ.ಸುಬ್ಬಯ್ಯನವರ ಹೆಸರು ಉಲ್ಲೇಖಿಸದೆ ಇರಲಾಗದು. ದಿಟ್ಟ ಹೋರಾಟಗಳ ಮೂಲಕ, ನೊಂದ ಜನರ ದನಿಯಾಗಿದ್ದ ಸುಬ್ಬಯ್ಯ, ರಾಜ್ಯ ಬಿಜೆಪಿಯ ಮೊದಲ ಅಧ್ಯಕ್ಷರಾಗಿದ್ದವರು. ಹೈಕೋರ್ಟ್ ವಕೀಲರಾಗಿ ಕೆಲಸ ಮಾಡಿದವರು.

ಕರ್ನಾಟಕದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಕಾರಣವಾದವರಲ್ಲಿ ಸುಬ್ಬಯ್ಯ ಒಬ್ಬರು. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕೋಮು ರಾಜಕಾರಣವನ್ನು ಒಪ್ಪದ ಸುಬ್ಬಯ್ಯ ಅವರನ್ನು ಪಕ್ಷದಿಂದ ಹೊರದೂಡಲಾಯಿತು. ಸುಬ್ಬಯ್ಯ ಅವರು ಬರೆದ ‘ಆರ್‌ಎಸ್‌ಎಸ್ ಅಂತರಂಗ’ ಕೃತಿ ಇಂದಿಗೂ ಚರ್ಚೆಯ ವಿಷಯ. ಆರ್‌ಎಸ್‌ಎಸ್‌ ನಡೆಸುವ ಕೋಮು ರಾಜಕಾರಣದ ಅಂತರಾಳವನ್ನು ಬಿಚ್ಚಿಟ್ಟ ಅದ್ವಿತೀಯ ಕೃತಿ ಇದಾಗಿದೆ.

ಇದನ್ನೂ ಓದಿರಿ: ಗುಂಡ್ಲುಪೇಟೆ ಕ್ಷೇತ್ರ ಸಮೀಕ್ಷೆ; ಬಂಡಾಯದ ಬಿಸಿಯಲ್ಲಿ ನಿರಂಜನ್, ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಗಣೇಶ್ ಪ್ರಸಾದ್

1959ರಲ್ಲಿ ನಡೆದ ಚುನಾವಣೆಯಲ್ಲಿ ‘ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿ’ ಅಭ್ಯರ್ಥಿ ಪರ ವಿರಾಜಪೇಟೆಯಲ್ಲಿ ಸುಬ್ಬಯ್ಯ ಕೆಲಸ ಮಾಡಿದ್ದರು. ಮೊದಲ ಬಾರಿಗೆ 1966ರಲ್ಲಿ ಜನಸಂಘದಿಂದ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದರು.

ಅಟಲ್‌ ಬಿಹಾರಿ ವಾಜಪೇಯಿ ಅವರೊಂದಿಗೆ ನಿಕಟ ಬಾಂಧವ್ಯ ಸುಬ್ಬಯ್ಯ ಅವರಿಗೆ ಇತ್ತು. ಸುಬ್ಬಯ್ಯನವರ ನಿವಾಸಕ್ಕೂ ವಾಜಪೇಯಿ ಭೇಟಿ ನೀಡಿದ್ದರು. ಜನಸಂಘದ ಮೂಲಕ ಬೆಳೆದು ಬಂದು ನಂತರ ಬಿಜೆಪಿಗೆ ರಾಜ್ಯದಲ್ಲಿ ಭದ್ರಬುನಾದಿ ಹಾಕಿದ ಕೀರ್ತಿ ಸುಬ್ಬಯ್ಯನವರಿಗೆ ಸಲ್ಲುತ್ತದೆ. ಇವರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ವೇಳೆ 1983ರಲ್ಲಿ ಚುನಾವಣೆ ನಡೆದಿತ್ತು. ಬಿ.ಎಸ್.ಯಡಿಯೂರಪ್ಪ, ವಿ.ಎಸ್.ಆಚಾರ್ಯ ಸೇರಿದಂತೆ 18 ಮಂದಿ ಬಿಜೆಪಿ ಸದಸ್ಯರನ್ನು ಗೆಲ್ಲಿಸಿ ವಿಧಾನಸಭೆಗೆ ಸುಬ್ಬಯ್ಯ ಕಳಿಸಿದ್ದರು. ಅಲ್ಲದೆ ಅವರು ಕೂಡ ನಾಲ್ಕು ಬಾರಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು.

1984ರಲ್ಲಿ ಸುಬ್ಬಯ್ಯ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿತ್ತು. ಅವರ ಉಚ್ಚಾಟನೆ ಬೆಂಬಲಿಗರಿಗೆ ಆಕ್ರೋಶ ತರಿಸಿತ್ತು. 1984ರಲ್ಲಿ ‘ಕನ್ನಡ ನಾಡು’ ಎಂಬ ಪ್ರಾದೇಶಿಕ ಪಕ್ಷ ಕಟ್ಟಿದರು. ಹಣಕಾಸಿನ ಹೊರೆ ಸರಿದೂಗಿಸಲು ಸಾಧ್ಯವಾಗಲಿಲ್ಲ. ನಂತರದಲ್ಲಿ ಕಾಂಗ್ರೆಸ್ ಜೊತೆಗೆ ಹೋದರು. ಇವರ ಹೋರಾಟಗಳಿಗೆ ಕಾಂಗ್ರೆಸ್ ಬಲ ತುಂಬಿತು. ಇಂತಹ ಸುಬ್ಬಯ್ಯನವರ ಪುತ್ರ ಎ.ಎಸ್.ಪೊನ್ನಣ್ಣ ಈ ಭಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿರಾಜಪೇಟೆಯಿಂದ ಸ್ಪರ್ಧಿಸಿದ್ದಾರೆ. ಕೊಡವ ಸಮುದಾಯದವರಾದ ಪೊನ್ನಣ್ಣನವರಿಗೆ ಟಿಕೆಟ್ ಕೊಟ್ಟಿರುವುದರಿಂದ ಈ ಭಾರಿ ಹಿಂದುತ್ವದ ಫ್ಯಾಕ್ಟರ್‌ ಎಷ್ಟು ಕೆಲಸ ಮಾಡುತ್ತದೆ ಎಂಬುದು ಅಳತೆಗೆ ನಿಲುಕುತ್ತಿಲ್ಲ.

ಹೈಕೋರ್ಟ್ ವಕೀಲರಾಗಿರುವ ಪೊನ್ನಣ್ಣ ರಾಜ್ಯ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಕೊಡವ ಸಮುದಾಯ ಅಸ್ಮಿತೆಗಾಗಿಯೂ ಹೋರಾಡಿದ್ದಾರೆ. ಕೊಡವರಿಗಿರುವ ಕೋವಿ ಹಕ್ಕಿನ ಪ್ರಶ್ನೆ ಬಂದಾಗ, ಹೈಕೋರ್ಟ್‌ನಲ್ಲಿ ಹೋರಾಡಿ ಸಫಲರಾಗಿದ್ದಾರೆ. ಕ್ಷೇತ್ರದಲ್ಲಿ ಬಹುದೊಡ್ಡ ಮಟ್ಟದಲ್ಲಿ ಬೆಂಬಲಿಗರನ್ನು ಹೊಂದಿದ್ದು, ಕಳೆದ ಮೂರು ವರ್ಷಗಳಿಂದ ಕ್ಷೇತ್ರದಲ್ಲಿ ನೆಲೆಸಿದ್ದಾರೆ. ಕಷ್ಟವೆಂದು ಬಂದವರಿಗೆ ತಮ್ಮ ಕೈಯಿಂದ ಹಣಕಾಸಿನ ನೆರವು ನೀಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸಂಕೇತ್‌ ಪೂವಯ್ಯ ಈ ಬಾರಿ ಕಾಂಗ್ರೆಸ್‌ ಸೇರಿದ್ದಾರೆ. ಎ.ಎಸ್.ಪೊನ್ನಣ್ಣ ಅವರಿಗೆ ಬಹಿರಂಗವಾಗಿಯೆ ಬೆಂಬಲ ಘೋಷಿಸಿರುವುದು ಒಂದಿಷ್ಟು ಬಲಬಂದಂತಾಗಿದೆ.

ರಾಜ್ಯದ ವಿಧಾನಸಭೆಯ ಸ್ಪೀಕರ್‌ ಆಗಿ ಕೆಲಸ ಮಾಡಿರುವ ಬೋಪಯ್ಯನವರು 2008, 2013, 2018ರಲ್ಲಿ ಹ್ಯಾಟ್ರಿಕ್ ಗೆಲುವನ್ನು ಇಲ್ಲಿ ಪಡೆದಿದ್ದಾರೆ. 2004ರಲ್ಲಿ ಮಡಿಕೇರಿಯಿಂದ ಬೋಪಯ್ಯ ಆಯ್ಕೆಯಾಗಿದ್ದರು. ಈಗಾಗಲೇ ಇಳಿ ವಯಸ್ಸಿನಲ್ಲಿರುವ ಬೋಪಯ್ಯನವರಿಗೆ ಟಿಕೆಟ್ ನೀಡಬಾರದೆಂಬ ಆಗ್ರಹಗಳು ಬಿಜೆಪಿಯೊಳಗೆ ಕೇಳಿಬಂದಿದ್ದವು. ಆದರೆ ಅಂತಿಮ ಕ್ಷಣದಲ್ಲಿ ಬಿಜೆಪಿ ಬೋಪಯ್ಯನವರಿಗೆಯೇ ಮಣೆ ಹಾಕಿತು. 2013ರ ಚುನಾವಣೆಯಲ್ಲಿ ಕೆ.ಜಿ.ಬೋಪಯ್ಯ 3,414 ಮತಗಳಿಂದಷ್ಟೇ ಗೆಲುವು ಸಾಧಿಸಿದ್ದರು. ಆದರೆ, 2018ರಲ್ಲಿ ಗೆಲುವಿನ ಅಂತರವನ್ನು ಅವರು 13,353ಕ್ಕೆ ಹೆಚ್ಚಿಸಿಕೊಂಡಿದ್ದರು. 2013ರಲ್ಲಿ ಬೋಪಯ್ಯನವರ ವಿರುದ್ಧ ಕಾಂಗ್ರೆಸ್ ಕಣಕ್ಕಿಳಿಸಿದ್ದ ಅಭ್ಯರ್ಥಿ ಬಿ.ಟಿ ಪ್ರದೀಪ್ ಮತ್ತು 2018ರ ಸಿ.ಎಸ್.ಅರುಣ್ ಮಾಚಯ್ಯ ಇಬ್ಬರೂ ಕೊಡವ ಸಮುದಾಯದವರು. ಹೀಗಾಗಿ ಅರೆಗೌಡ v/s ಕೊಡವ ದಾಳವನ್ನು ಕಾಂಗ್ರೆಸ್ ಈ ಬಾರಿಯೂ ಉರುಳಿಸಿದೆ. ದಿವಂಗತ ಬಿ.ಟಿ.ಪ್ರದೀಪ್ ಅವರಂತೆಯೇ ಪೊನ್ನಣ್ಣನವರು ಪ್ರಬಲ ಪ್ರತಿಸ್ಪರ್ಧಿಯಾಗಿರುವುದರಿಂದ ಬೋಪಯ್ಯನವರಿಗೆ ಗೆಲುವು ಕಷ್ಟವಾಗಬಹುದು.

ವಿರಾಜಪೇಟೆಯಲ್ಲಿ ಕೊಡವರು ಹೆಚ್ಚಿರುವ ಕಾರಣ ಇಲ್ಲಿ ಕೊಡವರಿಗೆ ಬಿಜೆಪಿ ಟಿಕೆಟ್ ಕೊಡಬೇಕೆಂದು ಅನೇಕರ ಅಪೇಕ್ಷೆಯಾಗಿತ್ತು. ಆದರೆ ಹಿಂದುತ್ವ ಮುಖ್ಯವಾಗಬೇಕೆಂದು ಬಯಸುವವರು ಕೆ.ಜಿ.ಬೋಪಯ್ಯನವರ ಜೊತೆಯಲ್ಲಿದ್ದಾರೆ. ಇಲ್ಲಿ ಧರ್ಮ ರಾಜಕಾರಣವೇ ಮುಖ್ಯವಾಗುತ್ತದೆ. ಹಿಂದೂ v/s ಮುಸ್ಲಿಂ ರಾಜಕಾರಣದ ನೆಲದಲ್ಲಿ ಜಾತಿ ಅಸ್ಮಿತೆಯನ್ನು ಬಡಿದೆಬ್ಬಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.

ಸುಮಾರು 35,000 ಮುಸ್ಲಿಂ, ಕೊಡವ ಸಮುದಾಯದ 1,20,000 ಮತದಾರರಿದ್ದಾರೆಂದು ಅಂದಾಜಿಸಲಾಗಿದೆ. ಜೆಡಿಎಸ್‌ ಅಲ್ಪಸಂಖ್ಯಾತ ಅಭ್ಯರ್ಥಿ ಮನ್ಸೂರ್‌ ಅಲಿ ಅವರನ್ನು ಕಣಕ್ಕಿಳಿಸಿದೆ. ಆದರೆ ಅಂತಹ ಪ್ರಭಾವವೇನೂ ಮನ್ಸೂರ್‌ ಅವರಿಗಿಲ್ಲ. ವಿಶೇಷವೆಂದರೆ ಸೋಷಿಯಲ್ ಡಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಇಲ್ಲಿ ಅಭ್ಯರ್ಥಿ ಹಾಕದೆ ಅಚ್ಚರಿ ಮೂಡಿಸಿದೆ. ರೈತ ಸಂಘದಿಂದ ಮನು ಸೋಮಯ್ಯ ಸ್ಪರ್ಧಿಸಿದ್ದಾರೆ. ಹೀಗಾಗಿ ಪೊನ್ನಣ್ಣ ಅವರ ಬುಟ್ಟಿಯಿಂದ ಮನ್ಸೂರ್‌ ಮತ್ತು ಮನು ಒಂದಿಷ್ಟು ಮತಗಳನ್ನು ಕಸಿಯುತ್ತಾರೆಯೋ ಎಂಬ ಕುತೂಹಲ ಮೂಡಿದೆ.

ಸೌಮ್ಯ ಸ್ವಭಾವದ ಬೋಪಯ್ಯ

ಬಿಜೆಪಿಯ ಇತರ ನಾಯಕರಂತೆ ಬೋಪಯ್ಯ ಯಾರ ವಿರುದ್ಧವೂ ಮಾತನಾಡುವವರಲ್ಲ. ಸೌಮ್ಯ ಸ್ವಭಾವದ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ. ಗುಡ್ಡುಗಾಡು ಪ್ರದೇಶಗಳಲ್ಲಿ ಅವಘಡಗಳು ಸಂಭವಿಸಿದಾಗ ತಮ್ಮ ವಯಸ್ಸಿನ ಲೆಕ್ಕ ಹಾಕದೆ ಬೆಟ್ಟ ಹತ್ತಿ ಇಳಿಯುವಷ್ಟು ಶಕ್ತರಾಗಿರುವ ಇವರು, ಯಾರೇ ಕರೆ ಮಾಡಿದರೂ ಸ್ಪಂದಿಸುತ್ತಾರೆ. ಮಡಿಕೇರಿ ಕ್ಷೇತ್ರದ ಕುಶಾಲನಗರವನ್ನು ಮತ್ತು ವಿರಾಜಪೇಟೆಯ ಪೊನ್ನಂಪೇಟೆಯನ್ನು ತಾಲ್ಲೂಕು ಕೇಂದ್ರಗಳನ್ನಾಗಿ ಮಾಡಬೇಕೆಂಬ ಆಗ್ರಹಗಳಿದ್ದವು. ಕುಶಾಲನಗರಕ್ಕಿಂತ ಮೊದಲೇ ಪೊನ್ನಂಪೇಟೆ ತಾಲ್ಲೂಕು ಘೋಷಣೆಯಾಗಿದ್ದರ ಹಿಂದೆ ಬೋಪಯ್ಯ ಅವರ ವರ್ಚಸ್ಸು ಕೆಲಸ ಮಾಡಿದೆ.

ಕಾಫಿ ತೋಟಗಳಿಗೆ ಕಾಡಾನೆಗಳು ನುಗ್ಗಿ ದಾಂಧಲೆ ಎಬ್ಬಿಸುವುದು ಕ್ಷೇತ್ರದ ಪ್ರಮುಖ ಸಮಸ್ಯೆ. ವನ್ಯಜೀವಿ- ಮಾನವ ಸಂಘರ್ಷದಿಂದ ಕ್ಷೇತ್ರ ನಲುಗಿ ಹೋಗಿದೆ. ಕಾಡಾನೆಗಳು ತೋಟಗಳಿಗೆ ನುಗ್ಗಿ ಅಲ್ಲಿಯೇ ಸಂತಾನೋತ್ಪತಿ ಮಾಡಿ ನೆಲೆಸುವ ಉದಾಹರಣೆಗಳೂ ಇವೆ. ಇದನ್ನು ಬಗೆಹರಿಸುವಲ್ಲಿ ಬೋಪಯ್ಯ ಸಫಲರಾಗಿಲ್ಲ, ರಸ್ತೆಗಳು ದುರುಸ್ತಿಯಾಗಿಲ್ಲ ಎಂಬ ಕೂಗು ಕ್ಷೇತ್ರದಲ್ಲಿದೆ.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ಕೊಡಗು ಜಿಲ್ಲೆಯಲ್ಲಿ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗಲಿಲ್ಲ. ಯಾವುದೇ ಸಮಸ್ಯೆಯಾದರೂ ಮಂಗಳೂರಿಗೋ ಮೈಸೂರಿಗೋ ಹೋಗಬೇಕು. ಇದರಿಂದ ಸಾವುನೋವುಗಳು ಸಂಭವಿಸುತ್ತಿವೆ ಎಂಬ ಬೇಸರ ಕೊಡಗು ಜಿಲ್ಲೆಯಲ್ಲಿದೆ. ಇದನ್ನು ಪೊನ್ನಣ್ಣ ಅವರು ಮುನ್ನೆಲೆಗೆ ತಂದು, ಭರವಸೆ ನೀಡುತ್ತಿದ್ದಾರೆ.

ಪೊನ್ನಣ್ಣನವರ ಪ್ರವೇಶವಾದ ಬಳಿಕ ಕೊಡವ ಪ್ಲೇಕಾರ್ಡ್ ಪ್ರದರ್ಶನವಾಯಿತು. ಬೋಪಯ್ಯನವರು ಕೊಂಚ ವಿಚಲಿತವಾದರು. ಹೀಗಾಗಿಯೇ ಕಟ್ಟರ್‌ ಹಿಂದುತ್ವವಾದಿ, ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪನವರನ್ನು ಚುನಾವಣಾ ಪ್ರಚಾರಕ್ಕೆ ಬೋಪಯ್ಯ ಕರೆತಂದಿದ್ದಾರೆ. ಕೊಡವ ಮುಖವಾಗಿರುವ ಕಾರ್ಯಪ್ಪ, ಹೋದಬಂದಲೆಲ್ಲ ಬೆಂಕಿ ಮತ್ತು ದ್ವೇಷದ ಭಾಷಣ ಮಾಡುತ್ತಾ ಕೋಮು ವಿಭಜನೆಗೆ ಯತ್ನಿಸುತ್ತಿದ್ದಾರೆ. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಾಡುತ್ತಿರುವ ಭಾಷಣದ ಕಾರಣಕ್ಕೆ ಕಾರ್ಯಪ್ಪ ವಿರುದ್ಧ ಪ್ರಕರಣವೂ ದಾಖಲಾಗಿದೆ.

ಇದನ್ನೂ ಓದಿರಿ: ಚುನಾವಣಾ ಪ್ರಚಾರದಲ್ಲಿ ಕೋಮುದ್ವೇಷ ಭಾಷಣ: ಅಡ್ಡಂಡ ಕಾರ್ಯಪ್ಪ ವಿರುದ್ಧ ಎಫ್‌ಐಆರ್‌

ಇದು ಕೊನೆ ಚುನಾವಣೆಯಾದ ಕಾರಣ, ಗೆಲ್ಲಲಿ- ಸೋಲಲಿ ತನಗೇನೂ ನಷ್ಟವಿಲ್ಲ ಎಂಬ ಮನಸ್ಥಿತಿಯನ್ನು ಬೋಪಯ್ಯ ತಾಳಿದಂತೆ ಕಾಣುತ್ತಿದೆ. ಪೊನ್ನಣ್ಣ ಹಣದ ಹೊಳೆ ಹರಿಸಲು ಸಿದ್ಧವಿದ್ದಾರೆ. ಅಲ್ಲದೆ ಅನೇಕರಿಗೆ ಉಚಿತ ಕಾನೂನು ನೆರವು ನೀಡುವ ಮೂಲಕ ಗುರುತಿಸಿಕೊಂಡಿದ್ದಾರೆ. ಇಲ್ಲಿ ಪ್ರಬಲವಾಗಿರುವ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರ ಮೇಲೆ ಅನೇಕ ಪ್ರಕರಣಗಳಿವೆ. ಬಿಜೆಪಿಯ ಬೋಪಯ್ಯ ಆ ಪ್ರಕರಣಗಳನ್ನು ತೆರವು ಮಾಡುವಲ್ಲಿ ಪೂರ್ಣಪ್ರಮಾಣದಲ್ಲಿ ಯಶಸ್ಸಾಗಲಿಲ್ಲ. ಹೀಗಾಗಿ ಕೆಲವು ಹಿಂದುತ್ವ ಕಾರ್ಯಕರ್ತರು ಪೊನ್ನಣ್ಣನತ್ತ ಹೊರಳಿದ್ದರು. ಇವರಿಗೆ ಬೆಂಬಲ ನೀಡಲು ಸಿದ್ಧವಿದ್ದರು. ಆದರೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾದ ಬಳಿಕ ಪರಿಸ್ಥಿತಿ ಕೊಂಚ ತಿರುಗಾಮುರುಗಾವಾಗಿದೆ. ಬಜರಂಗದಳವನ್ನು ಕಾಂಗ್ರೆಸ್ ಬ್ಯಾನ್ ಮಾಡಲಿದೆ ಎಂಬ ಕೂಗು ಕಾಡ್ಗಿಚ್ಚಿನಂತೆ ಕ್ಷೇತ್ರದಲ್ಲಿ ಹಬ್ಬಿದ್ದರಿಂದ, ಬಿಜೆಪಿ ತೊರೆದವರು ಮತ್ತೆ ಬಿಜೆಪಿಯತ್ತ ಹೊರಳುವ ಸೂಚನೆ ಕಾಣುತ್ತಿದೆ. ಪೊನ್ನಣ್ಣ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವುದರಿಂದ ಎಷ್ಟು ದುಡ್ಡು ಖರ್ಚು ಮಾಡಲೂ ಸಿದ್ಧವಿದ್ದಾರೆ. ಹಣಬಲ ಪ್ರಯೋಗದ ಎದುರು ಬೋಪಯ್ಯ ಸದ್ಯಕ್ಕೆ ಪೇಲವವಾಗಿ ಕಾಣುತ್ತಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ವೀಣಾ ಅಚ್ಚಯ್ಯ ಸಮಾಧಾನವಾಗಿರುವುದು ಪೊನ್ನಣ್ಣನವರಿಗೆ ವರದಾನವಾಗಿ ಪರಿಣಮಿಸಿದೆ. ಹಿಂದುತ್ವದ ಕಣದಲ್ಲಿ ಹಣ ಮತ್ತು ಜಾತಿ ಸಮೀಕರಣ ‘ಕೈ’ಗೂಡಿದರೆ ಪೊನ್ನಣ್ಣ ಗೆದ್ದು ಬೀಗುವ ಸಾಧ್ಯತೆ ಹೆಚ್ಚಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...