ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದ ಇಂಡೋ-ಮಲೇಷಿಯಾ ಮೂಲದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮತ್ತು ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ತಮಿಳುನಾಡಿದ ಎಐಎಡಿಎಂಕೆ ಮಾಜಿ ಸಚಿವ ಎಂ.ಮಣಿಕಂಠನ್ ಅವರಿಗೆ ಮದ್ರಾಸ್ ಹೈಕೋರ್ಟ್ ಬುಧವಾರ ಷರತ್ತು ಬದ್ಧ ಜಾಮೀನು ನೀಡಿದೆ.
ನ್ಯಾಯಮೂರ್ತಿ ಎಂ. ನಿರ್ಮಲ್ ಕುಮಾರ್ ಜಾಮೀನು ಮಂಜೂರು ಮಾಡಿದ್ದು, ಪಾಸ್‌ಪೋರ್ಟ್ ಮತ್ತು ತಲಾ 10,000 ಸಾವಿರ ರೂಪಾಯಿಗಳಂತೆ ಇಬ್ಬರು ಶ್ಯೂರಿಟಿ ಹಾಕಿದ ನಂತರ ಜಾಮೀನು ನೀಡಲಾಗಿದೆ. ಜೊತೆಗೆ ಎರಡು ವಾರಗಳವರೆಗೆ ಪ್ರತಿದಿನ ತನಿಖಾ ಅಧಿಕಾರಿಯ ಮುಂದೆ ಹಾಜರಾಗಬೇಕು. ತನಿಖಾಧಿಕಾರಿ ಕರೆ ಮಾಡಿದಾಗಲೆಲ್ಲಾ ಬಂದು ಹೋಗಬೇಕು ಎಂದು ತಿಳಿಸಲಾಗಿದೆ.
ಮಾಜಿ ಸಚಿವ ಮಣಿಕಂಠನ್ ಮದುವೆಯಾಗಿದ್ದರು ಕೂಡ ಇಂಡೊ-ಮಲೇಷಿಯಾ ಮೂಲದ ಮಹಿಳೆಯ ಜೊತೆಗೆ ವಾಸಿಸುತ್ತಿದ್ದರು. “ಮಣಿಕಂಠನ್ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಜೊತೆ ಲಿವ್ ಇನ್ ಸಂಬಂಧದಲ್ಲಿ ಇದ್ದಾರೆ. 3 ಸಾರಿ ಬಲವಂತದಿಂದ ಗರ್ಭಪಾತವನ್ನು ಮಾಡಿಸಿದ್ದಾರೆ. ತಮ್ಮ ಹೆಂಡತಿಗೆ ವಿಚ್ಛೇದನ ನೀಡಿ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ” ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ದಾಖಲಿಸಿದ್ದಾಳೆ.
ಇದನ್ನೂ ಓದಿ: ಸಿನಿಮಾಟೋಗ್ರಾಫ್ ಆಕ್ಟ್‌ಗೆ ಸ್ಟಾಲಿನ್ ವಿರೋಧ: ನಿರ್ಧಾರ ಹಿಂಪಡೆಯುವಂತೆ ಒಕ್ಕೂಟ ಸಚಿವರಿಗೆ ಪತ್ರ
“ತನಿಖೆಯೂ ಈಗಾಗಲೇ ಭಾಗಶಃ ಮುಗಿದಿದೆ. ಕಕ್ಷಿದಾರರು ನ್ಯಾಯಾಲಯದ ಎಲ್ಲಾ ಷರತ್ತುಗಳಿಗೆ ಬದ್ಧರಾಗಿರುತ್ತಾರೆ” ಎಂದು ಮಾಜಿ ಸಚಿವರ ಪರ ವಕೀಲರು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಜೊತೆಗೆ ಅತ್ಯಾಚಾರ ಮತ್ತು ಒಮ್ಮತದ ಲೈಂಗಿಕತೆಯ ನಡುವೆ ಸ್ಪಷ್ಟ ವ್ಯತ್ಯಾಸವಿದೆ. ರಾಜಕೀಯ ಪ್ರೇರಿತವಾಗಿ ಈ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಮದ್ರಾಸ್ ಹೈಕೋರ್ಟ್‌ನಲ್ಲಿ ತಮ್ಮ ಬಂಧನಕ್ಕೆ ತಡಕೋರಿ ಮಣಿಕಂಠನ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮದ್ರಾಸ್ ಹೈಕೋರ್ಟ್ ಮಣಿಕಂಠನ್ ಜಾಮೀನು ಅರ್ಜಿಯನ್ನು ವಿಚಾರಣೆ ಮಾಡಿ ಜೂನ್ 9 ರ ವರೆಗೆ ಅವರನ್ನು ಬಂಧಿಸದಂತೆ ಆದೇಶ ನೀಡಿತ್ತು. ಜೂನ್ 9 ರ ನಂತರ ಮಣಿಕಂಠನ್ ತಮಿಳುನಾಡನ್ನು ತೊರೆದು ತಲೆಮರೆಸಿಕೊಂಡಿದ್ದರು. ನಂತರ ಜೂನ್ 20 ರಂದು ಬೆಂಗಳೂರಿನಲ್ಲಿ ಮಣಿಕಂಠನ್ ಅಡಗಿರುವ ನಿಖರ ಮಾಹಿತಿಯನ್ನು ಪಡೆದ ಪೊಲೀಸರು ಅವರನ್ನು ಬಂಧಿಸಿ ತಮಿಳುನಾಡಿಗೆ ಕರೆದೊಯ್ದಿದ್ದರು.
ಮಲೇಷಿಯಾ ಮೂಲದ ಮಹಿಳೆ ಆಡ್ಯಾರ್ ಆಲ್ ವಿಮೆನ್ ಪೊಲೀಸ್ ಠಾಣೆಯಲ್ಲಿ ಮಣಿಕಂಠನ್ ಅವರ ವಿರುದ್ಧ ಮೋಸ, ಅತ್ಯಾಚಾರ, ಗರ್ಭಪಾತದ ಆರೋಪದಲ್ಲಿ ದೂರು ದಾಖಲಿಸಿದ್ದರು. ಆಡ್ಯಾರ್ ಪೊಲೀಸರು ಮಣಿಕಂಠನ್ ವಿರುದ್ಧ IPC ಸೆಕ್ಷನ್ 376 ( ಅತ್ಯಾಚಾರ) ,ಸೆಕ್ಷನ್ 313 (ಗರ್ಭಪಾತ), ಸೆಕ್ಷನ್ 323 ( ಸ್ವಯಂ ಪ್ರೇರಿತ ಹಲ್ಲೆ), ಸೆಕ್ಷನ್ 417(ಮೋಸ), ಸೆಕ್ಷನ್ 506(i)(ಅಪರಾಧಿಕ ಕೃತ್ಯಕ್ಕೆ ಕುಮ್ಮಕ್ಕು) IT ಕಾಯ್ದೆ ಸೇರಿ ಹಲವು ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಬೆಂಗಳೂರಿನಲ್ಲಿ ತಮಿಳುನಾಡಿನ ಮಾಜಿ ಸಚಿವ ಎಂ.ಮಣಿಕಂಠನ್ ಬಂಧನ


