ಮಹಾರಾಷ್ಟ್ರದಲ್ಲಿ ಸಿಎಂ ಏಕನಾಥ್ ಶಿಂಧೆ ನೂತನ ಸರ್ಕಾರ ರಚಿಸಿ ಏಳು ವಾರಗಳ ನಂತರ ಮೊದಲ ಹಂತದ ಖಾತೆ ಹಂಚಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ನಗರ ಅಭಿವೃದ್ದಿ ಸಚಿವಾಲಯವನ್ನು ತಾವೇ ಇಟ್ಟುಕೊಂಡಿರುವ ಶಿಂಧೆ 18 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.
ಮಾಜಿ ಸಿಎಂ ಮತ್ತು ಹಾಲಿ ಡಿಸಿಎಂ ದೇವೇಂದ್ರ ಫಡ್ನವಿಸ್ ಶಿಂಧೆ ಸಂಪುಟದಲ್ಲಿ ಸಿಂಹಪಾಲು ಪಡೆದಿದ್ದು ಗೃಹ, ಹಣಕಾಸು ಯೋಜನಾ ಸಚಿವಾಲಯದಂತಹ ಮಹತ್ವದ ಖಾತೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ನೀರಾವರಿ, ವಸತಿ, ವಿದ್ಯುತ್ ನಂತಹ ಸಚಿವಾಲಯಗಳನ್ನು ಸದ್ಯಕ್ಕೆ ತಮ್ಮಲ್ಲಿ ಇಟ್ಟುಕೊಂಡಿದ್ದಾರೆ.
ಬಿಜೆಪಿ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ನೂತನ ಕಂದಾಯ ಸಚಿವರಾಗಲಿದ್ದಾರೆ. ಅದೇ ರೀತಿ ಬಿಜೆಪಿ ಶಾಸಕ ಸುಧೀರ್ ಮುಂಗನ್ ಅರಣ್ಯ ಸಚಿವರಾಗಲಿದ್ದಾರೆ.
ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಉನ್ನತ ಮತ್ತು ತಾಂತ್ರಿಕ ಶಿಕ್ಷಣದ ನೂತನ ಸಚಿವರಾಗಿದ್ದು, ಸಂಸದೀಯ ವ್ಯವಹಾರಗಳನ್ನೂ ಅವರು ನೋಡಿಕೊಳ್ಳಲಿದ್ದಾರೆ.
ಶಿವಸೇನಾ ಪಾಳಯದಿಂದ ದೀಪಕ್ ಕೇಸರ್ಕರ್ ಅವರು ಶಾಲಾ ಶಿಕ್ಷಣ ಸಚಿವರಾಗಿದ್ದರೆ, ಅಬ್ದುಲ್ ಸತ್ತಾರ್ ಅವರಿಗೆ ಕೃಷಿ ಖಾತೆ ನೀಡಲಾಗಿದೆ.
ಇದನ್ನೂ ಓದಿ: ವಿಭಿನ್ನ ಸಮುದಾಯದ ಜೋಡಿ ಧರ್ಮಸ್ಥಳ ಪ್ರವೇಶಿಸದಂತೆ ತಡೆದ ಹಿಂದುತ್ವ ಕಾರ್ಯಕರ್ತರು


