ತನ್ನ ಹೊಲವನ್ನು ಹದಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ದೇವರ ವಿಗ್ರಹಕ್ಕೆ ಹಾನಿ ಮಾಡಿದಕ್ಕಾಗಿ ರೈತರೊಬ್ಬರಿಗೆ 21 ಸಾವಿರ ರೂಪಾಯಿ ದಂಡ ಹಾಕಿರುವ ಘಟನೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಅಮಗಾಂವ್ ತಹಸಿಲ್ ವ್ಯಾಪ್ತಿಯ ಸಿತೇಪಾರ್ ಗ್ರಾಮದಲ್ಲಿ ನಡೆದಿದೆ. ದಂಡವನ್ನು ಕಟ್ಟದಿದ್ದರೇ ಸಾಮಾಜಿಕ ಬಹಿಷ್ಕಾರ ಹಾಕುವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಚಾಯಿತಿ ನಿರ್ಣಯ ಮತ್ತು ಬೆದರಿಕೆಗೆ ಹೆದರದ ರೈತ ಟಿಕಾರಾಮ್ ಪ್ರೀತಮ್ ಪಾರ್ಧಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಜೂನ್ 16 ರಂದು ಗ್ರಾಮದ ಸರ್‌ಪಂಚ್ ಮತ್ತು ಇತರ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸೀತೆಪಾರ್ ಗ್ರಾಮದ ನಿವಾಸಿ ಟಿಕಾರಾಮ್ ಪ್ರೀತಮ್ ಪಾರ್ಧಿ ಅವರು ಜೂನ್ 12 ರಂದು ತಮ್ಮ ಜಮೀನಿನಲ್ಲಿ ನೆಲ ಹದಗೊಳಿಸುತ್ತಿದ್ದಾಗ, ದೇವತೆಯ ಕಲ್ಲಿನ ವಿಗ್ರಹಕ್ಕೆ ಆಕಸ್ಮಿಕವಾಗಿ ಹಾನಿಯಾಗಿದೆ. ಈ ದೇವತೆಯನ್ನು ಗ್ರಾಮದವರು ಊರಿನ ಕುಲದೇವತೆ ಎಂದು ನಂಬಿದ್ದು, ತಕ್ಷಣ ಕೆಲಸ ನಿಲ್ಲಿಸುವಂತೆ ರೈತರನ್ನು ಒತ್ತಾಯಿಸಿದ್ದಾರೆ” ಎಂದು ಅಮಗಾಂವ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿಲಾಸ್ ನಲೆ ತಿಳಿಸಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪ: ನಿರ್ಮಾಪಕಿ ಆಯಿಷಾ ಸುಲ್ತಾನಗೆ ಬಂಧನದಿಂದ ರಕ್ಷಣೆ ನೀಡಿದ ಕೇರಳ ಹೈಕೋರ್ಟ್
ಘಟನೆ ಸಂಬಂಧ ರೈತರ ವಿರುದ್ಧ ಪಂಚಾಯಿತಿ ಕರೆಯಲಾಗಿದೆ. ಪಂಚಾಯಿತಿಯಲ್ಲಿ ರೈತ ಪಾರ್ಧಿ ದೇವರ ವಿಗ್ರಹಕ್ಕೆ ಹಾನಿ ಮಾಡಿ ಸ್ಥಳೀಯ ನಿವಾಸಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ, ಅವರಿಗೆ 21,000 ರೂ.ಗಳ ದಂಡವನ್ನು ವಿಧಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.
ಪಂಚಾಯಿತಿ ವಿಧಿಸಿರುವ ದಂಡವನ್ನು ಪಾವತಿಸಲಿಲ್ಲ ಎಂದರೆ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾಗುತ್ತದೆ ಎಂದು ಪಂಚಾಯತ್ ತೀರ್ಪು ನೀಡಿದೆ ಎಂದು ರೈತ ಪಾರ್ಧಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಘಟನೆಯಲ್ಲಿ ನಾನು ನಿರಪರಾಧಿ ಮತ್ತು ನನ್ನ ಹಣಕಾಸಿನ ಪರಿಸ್ಥಿತಿ ಕೆಟ್ಟದಾಗಿದೆ ಎಂದು ಪಾರ್ಧಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ, ಗ್ರಾಮದ ಸರ್‌ಪಂಚ್ ಗೋಪಾಲ್ ಫುಲಿಚಂದ್ ಮೆಶ್ರಾಮ್, ಗ್ರಾಮ ಮಟ್ಟದ ಪೊಲೀಸ್ ಸಹಾಯಕನಾದ ಪೊಲೀಸ್ ಪಾಟೀಲ್, ಉಲ್ಲಾಸ್‌ರಾವ್ ಭೈಯಾಲಾಲ್ ಬಿಸೆನ್, ರಾಜೇಂದ್ರ ಹಿವರ್ಲಾಲ್ ಬಿಸೆನ್, ಪುರನ್‌ಲಾಲ್ ಬಿಸೆನ್, ಯೋಗೇಶ್ ಹಿರಾಲಾಲ್ ಬಿಸೆನ್, ಯಾದವರಾವ್ ಶ್ರೀರಾಮ್ ಬಿಸೆನ್, ಪ್ರತಾಪ್ ಲಖನ್ ವಿರುದ್ಧ ಮಹಾರಾಷ್ಟ್ರದ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2016 ರ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಜೈಲು ಅಧಿಕಾರಿಗಳಿಂದ ಚಿಕಿತ್ಸೆ ವಿಳಂಬ: ಸೋಂಕಿನಿಂದ ಹದಗೆಟ್ಟ ಪ್ರಾಧ್ಯಾಪಕ ಡಾ. ಹನಿ ಬಾಬು ಅವರ ಕಣ್ಣು


