ದಲಿತ ಯುವಕನ ಮೇಲೆ ದೌರ್ಜನ್ಯ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಗೌಡೆಗೆರೆ ಗ್ರಾಮದಲ್ಲಿ ನಡೆದಿದೆ. ಗುಂಪೊಂದು ಅಡ್ಡಗಟ್ಟಿ ಜಾತಿ ನಿಂದಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡುವುದರ ಜೊತೆಗೆ, ಸಾರ್ವಜನಿಕವಾಗಿ ಬಟ್ಟೆ ಹರಿದು ಹಾಕಿ ಮೆರವಣಿಗೆ ಮಾಡಿ ಅವಮಾನ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಈ ಕುರಿತು ಸಂತ್ರಸ್ತ ಯುವಕ ಕಿರಣ್ ಜಿ.ಗಂಗಾಧರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಜ.6ರಂದು ಸಂಜೆ 7.30ರ ಸುಮಾರಿಗೆ ನಾನು ನನ್ನ ಊರಿನಿಂದ ಹಾಡ್ಲಿ ಸರ್ಕಲ್‌ಗೆ ಸ್ನೇಹಿತನಾದ ಶಿವಕುಮರ್ ಬಳಿ ಡ್ರಾಪ್ ಕೇಳುತ್ತಿದ್ದಾಗ, ವೈ ಸಿ ಎಸ್ ಬಾರ್ ಮುಂಭಾಗ ಕಾರಿನಲ್ಲಿ ಅತಿ ವೇಗವಾಗಿ ಢಿಕ್ಕಿ ಹೊಡೆಯುವ ರೀತಿಯಲ್ಲಿ ಬಂದು ಬಸವನಪುರ ಗ್ರಾಮದ ಬಿಪಿ ಗಿರೀಶ, ಗಂಗಾಧರ, ಚನ್ನಿಪುರ ಗ್ರಾಮದ ಸುರೇಶ, ಅಗಸನಪುರ ಗ್ರಾಮದ ಅಪ್ಪಯ್ಯ, ಮತ್ತು ಬಸವನಪುರದ ಪ್ರಸನ್ನ ಇತರರು ಸೇರಿಕೊಂಡು ಗುಂಪುಗೂಡಿಕೊಂಡು ಬಂದು ಬೈಕಿಗೆ ಅಡ್ಡಲಾಗಿ ನಿಂತು ಬೈಕ್‌ನಲ್ಲಿ ಕುಳಿತಿದ್ದ ನನ್ನನ್ನು ಕುತ್ತಿಗೆ ಹಿಡಿದು ಎಳೆದು ಅವಾಚ್ಯವಾಗಿ ನಿಂದಿಸಿ ಜಾತಿ ನಿಂದನೆ ಮಾಡಿದ್ದಾರೆ. ಬಳಿಕ ದೊಣ್ಣೆ ಮತ್ತು ರಾಡ್‌ನಿಂದ ಹಲ್ಲೆ ಮಾಡಲು ಮುಂದಾದಾಗ ನಾನು ತಪ್ಪಿಸಿಕೊಳ್ಳಲು ಯತ್ನಿಸಿದ್ದೇನೆ. ಈ ವೇಳೆ ನನ್ನನ್ನು ಅಟ್ಟಾಡಿಸಿಕೊಂಡು ಬಂದ ಗುಂಪು ಸಾರ್ವಜನಿಕವಾಗಿ ನನ್ನ ಬಟ್ಟೆ ಹರಿದು ದೊಣ್ಣೆ, ರಾಡ್‌ಗಳಿಂದ ಹಲ್ಲೆ ನಡೆಸಿ, ನನ್ನ ಎದೆ ಮತ್ತು ಹೊಟ್ಟೆಯ ಮೇಲೆ ಒದ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಹೊಲಯ ಜಾತಿಯ ಇವನನ್ನು ಬಿಡಬೇಡಿ ಎಂದು ಎಂದು ಥಳಿಸಿದ್ದಾರೆ. ಇದಲ್ಲದೆ ಕತ್ತಿನಲ್ಲಿದ್ದ 50ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿದ್ದಾರೆ. ಜೇಬಿನಲ್ಲಿದ್ದ 50ಸಾವಿರೂ ರೂವನ್ನು ದರೋಡೆ ಮಾಡಿಕೊಂಡು ಬಟ್ಟೆ ಹರಿದು ಹೀಯಾಳಿಸುತ್ತಾ, ಹಲ್ಲೆ ನಡೆಸುತ್ತಾ ಒಂದು ಕಿ.ಮೀ ಮೆರವಣಿಗೆ ಮಾಡಿದ್ದು, ಬಳಿಕ ಸರ್ಕಲ್‌ನಲ್ಲಿ ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಮೈಮೇಲೆ ಮೂತ್ರವಿಸರ್ಜನೆ ಮಾಡಿದ್ದಾರೆ. ಬಳಿಕ ನನ್ನನ್ನು ಅಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಕೊಲೆ ಮಾಡುವ ಬೆದರಿಕೆಯನ್ನು ಕೂಡ ಹಾಕಿದ್ದಾರೆ. ನಾನು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದೆ. ನನ್ನನ್ನು ಬಳಿಕ ಹಲಗೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ನಾನು ಚಿಕಿತ್ಸೆ ಪಡೆದ ಬಳಿಕ ಊರಿನಲ್ಲಿ ಅವಮಾನದಿಂದ ಮುಖವನ್ನು ತೋರಿಸಲು ಸಾಧ್ಯವಾಗದೆ ಪತ್ನಿ ಮನೆ ಕನಕಪುರಕ್ಕೆ ತೆರಳಿರುತ್ತೇನೆ. ಬಳಿಕ ಕನಕಪುರ ಆಸ್ಪತ್ರೆಯಲ್ಲಿ 4 ದಿನ ಒಳರೋಗಿಯಾಗಿ ಚಿಕಿತ್ಸೆಯನ್ನು ಪಡೆದಿದ್ದೇನೆ. ತದ ನಂತರ ಆರೋಪಿಗಳು ರಾಜಿ ಪಂಚಾಯತಿಗೆ ಕರೆದು ದೂರು ನೀಡಬಾರದು ಎಂದು ಬೆದರಿಸಿದ್ದಾರೆ. ನಾನು ಈ ಅವಮಾನ ತಾಳಲಾರದೆ ಇದೀಗ ತಡವಾಗಿ ದೂರು ದಾಖಲಿಸುತ್ತೇನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ದಲಿತ ಹೋರಾಟಗಾರ ಪ್ರೊ.ಹರಿರಾಮ್, ಮಳವಳ್ಳಿಯಲ್ಲಿ ನಡೆದಿರುವುದು ಜಾತಿ ಭಯೋತ್ಪಾದನೆ, ಹಲ್ಲೆ ಜೊತೆ ನಿಂದನೆ ಕೂಡ ಅಲ್ಲಿ ನಡೆದಿದೆ. ನಮ್ಮ ತಂಡ ನಾಳೆ ಮಳವಳ್ಳಿಗೆ ತೆರಳಲಿದೆ. ಪೊಲೀಸ್ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಸರಕಾರ ಬಂದಾಗ ಕೆಲವರಿಗೆ ಒಂದು ರೀತಿ ಅಹಂ ಬಂದಿದೆ. ಕಾಂಗ್ರೆಸ್ ಬಂದ ಮೇಲೆ ದಲಿತರ ಮೇಲೆ ಹೆಚ್ಚು ದೌರ್ಜನ್ಯಗಳು ನಡೆಯುತ್ತಿದೆ. ಇವರು ಬಿಜೆಪಿಗಿಂತ ಭಿನ್ನವಾಗಿಲ್ಲ. ಎಲ್ಲೂ ದಲಿತ ದೌರ್ಜನ್ಯ ನಡೆದಾಗ ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಎಫ್ಐಆರ್ ಆಗಬೇಕಾದರೂ ನಮ್ಮಂತಹ ಹೋರಾಟಗಾರರು ಒತ್ತಡ, ಬಲವಂತ, ಪ್ರತಿಭಟನೆ ಮಾಡಿದ ಮೇಲೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿದೆ. ದಲಿತರಿಗೆ ಸಂಬಂಧಿಸಿದ ಯೋಜನೆಗಳಿಗೆ ಕೂಡ ದುಡ್ಡು ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನವರು ಬಿಜೆಪಿಯನ್ನು ತೊರಿಸಿ ಸುಳ್ಳು ಹೇಳಿ ಮುಸ್ಲಿಮರು ಮತ್ತು ದಲಿತರ ವೋಟ್ ತೆಗೆದುಕೊಂಡರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಕಲ್ಲಡ್ಕ ಭಟ್ಟ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದಾಗ ಆತನಿಗೆ ಬಂಧಿಸಲ್ಲ, ಸರಕಾರಿ ವಕೀಲರೇ ಆತನಿಗೆ ಬಂಧಿಸಲ್ಲ ಎಂದು ಹೇಳುತ್ತಾರೆ. ಆತನಿಗೆ ಜಾಮೀನು ಕೂಡ ಸಿಕ್ಕಿದೆ. ಚಿಕ್ಕಮಗಳೂರಿನ ಗೊಲ್ಲರ ಹಟ್ಟಿ ಘಟನೆ ನಡೆದಿದೆ, ಅದೇ ರೀತಿ ಮಡಿಕೇರಿಯಲ್ಲಿ ಹೆಣ್ಣುಮಗಳ ಮೇಲೆ ದೌರ್ಜನ್ಯ ನಡೆದಿದೆ. ಅದರಲ್ಲಿ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿಲ್ಲ. ಎಲ್ಲಾ ಸಮಸ್ಯೆ ವೇಳೆ ಮುಂದೆ ನಿಂತು ಬಗೆಹರಿಸಬೇಕಾದ ಕಾಂಗ್ರೆಸ್‌ನವರು ಈ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ದಲಿತ ಹೋರಾಟಗಾರ ಭಾಸ್ಕರ್ ಪ್ರಸಾದ್, ಮಳವಳ್ಳಿಯಲ್ಲಿ ಕಿರಣ್ ಎಂಬ ಯುವಕನ ಮೇಲೆ ತುಂಬಾ ಜನ ಗುಂಪಾಗಿ ಹೊಡೆದಿದ್ದಾರೆ. ಈ ಬಗ್ಗೆ ಡಿವೈಎಸ್ಪಿ ಜೊತೆ ಮಾತನಾಡಲು ಯತ್ನಿಸಿದೆ. ಆದರೆ ಅವರು ಪೋನ್ ತೆಗೆದಿಲ್ಲ. ಬಳಿಕ ಎಸ್‌ಐ ಜೊತೆ ಮಾತನಾಡಿದೆವು, ಮೊದಲು ಎಫ್‌ಐಆರ್ ಮಾಡಿರಲಿಲ್ಲ. ತುಂಬಾ ತಕರಾರು ಮಾಡಿದ್ರು, ಈಗಾದರೆ ನಾವೆಲ್ಲಾ ಅಲ್ಲಿಗೆ ಬರಬೇಕಾಗುತ್ತೆ ಎಂದ ಮೇಲೆ ಎಫ್‌ಐಆರ್ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಒಬ್ಬನಿಗೆ ಮಾತ್ರ ಬಂದಿಸಿದ್ದಾರೆ. ಬೇರೆ ಯಾರಿಗೂ ಬಂಧಿಸಿಲ್ಲ. ಸಂತ್ರಸ್ತನಿಗೆ ಪೊಲೀಸರು ಬೆದರಿಸಿದ್ದಾರೆ. ನೀನು 80 ಜನರನ್ನು ಎಫ್‌ಐಆರ್‌ನಲ್ಲಿ ಹೇಳಿದ್ದಿಯಾ, ನೀನೇ ಅವರನ್ನು ಹುಡುಕಿಕೊಡು ಎಂದು ಬೆದರಿಸಿದ್ದಾರೆ. ಈ ಹಿನ್ನೆಲೆ ನಾವು ನಾಳೆ ಮಳವಳ್ಳಿಗೆ ತೆರಳಲಿದ್ದೇವೆ ಎಂದು ಹೇಳಿದ್ದಾರೆ.
ಇದನ್ನು ಓದಿ: ರಂಜನ್ ಗೊಗೊಯ್‌ಗೆ ‘ಅತ್ಯುನ್ನತ ನಾಗರಿಕ ಪ್ರಶಸ್ತಿ’: ‘ರಾಮ ಮಂದಿರ’ ಸ್ಥಾಪನೆಯಾಗಿದ್ದರೆ…..


