Homeಮುಖಪುಟಬಿಲ್ಕಿಸ್‌ ಬಾನು ಪ್ರಕರಣ: ಶರಣಾಗತಿಗೆ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋದ ಮೂವರು ಅಪರಾಧಿಗಳು

ಬಿಲ್ಕಿಸ್‌ ಬಾನು ಪ್ರಕರಣ: ಶರಣಾಗತಿಗೆ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋದ ಮೂವರು ಅಪರಾಧಿಗಳು

- Advertisement -
- Advertisement -

ಶರಣಾಗಲು ಸಮಯ ವಿಸ್ತರಿಸುವಂತೆ ಕೋರಿ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಪೈಕಿ ಮೂವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ಜನವರಿ 9ರಂದು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌ ಮುಂದಿನ ಎರಡು ವಾರಗಳಲ್ಲಿ ಜೈಲಿಗೆ ಮರಳುವಂತೆ ಸೂಚಿಸಿತ್ತು.

ಒಟ್ಟು 11 ಅತ್ಯಾಚಾರಿಗಳ ಪೈಕಿ ಪ್ರಮುಖರಾದ ಗೋವಿಂದಭಾಯಿ ನಾಯ್, ರಮೇಶ್ ರೂಪಾಭಾಯ್ ಚಂದನ್ ಮತ್ತು ಮಿತೇಶ್ ಚಿಮನ್ಲಾಲ್ ಭಟ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅತ್ಯಾಚಾರಿ ಗೋವಿಂದಭಾಯಿ ನಾಯ್ ತಮ್ಮ ಅನಾರೋಗ್ಯ ಮತ್ತು ಮನೆಯ ಜವಾಬ್ದಾರಿಗಳನ್ನು ಉಲ್ಲೇಖಿಸಿ ಸಮಯ ವಿಸ್ತರಣೆಗೆ ಅರ್ಜಿ ಸಲ್ಲಿಸಿದ್ದಾನೆ. “ನನ್ನ 88 ವರ್ಷದ ತಂದೆ ಹಾಸಿಗೆ ಹಿಡಿದಿದ್ದಾರೆ. ಅವರು ನನ್ನ ಮೇಲೆ ಅವಲಂಬಿತರಾಗಿದ್ದಾರೆ. ಹೆತ್ತವರನ್ನು ನೋಡಿಕೊಳ್ಳಲು ನನ್ನನ್ನು ಬಿಟ್ಟು ಬೇರೆ ಯಾರು ಇಲ್ಲ” ಎಂದು ಆತ ತನ್ನ ಅರ್ಜಿಯಲ್ಲಿ ಹೇಳಿದ್ದಾನೆ.

ಅಲ್ಲದೆ, ಇತ್ತೀಚೆಗೆ ಆಂಜಿಯೋಗ್ರಫಿಗೆ ಒಳಗಾಗಿದ್ದೇನೆ. ಮೂಲವ್ಯಾಧಿ ಚಿಕಿತ್ಸೆಗಾಗಿ ಮತ್ತೊಂದು ಶಸ್ತ್ರಚಿಕಿತ್ಸೆಗೆ ಮಾಡಿಸಿಕೊಳ್ಳಬೇಕಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾನೆ. 55 ವರ್ಷ ವಯಸ್ಸಿನವನಾದ ನಾನು ಆಸ್ತಮಾದಿಂದ ಬಳಲುತ್ತಿದ್ದು, ಆರೋಗ್ಯ ಮಟ್ಟ ನಿಜವಾಗಿಯೂ ಕಳಪೆಯಾಗಿದೆ ಎಂದು ಹೇಳಿಕೊಂಡಿದ್ದಾನೆ.

ಮತ್ತೊಬ್ಬ ಅತ್ಯಾಚಾರಿ ರಮೇಶ್ ರೂಪಾಭಾಯ್ ಚಂದನ್, ತನ್ನ ಮಗನಿಗೆ ಮದುವೆಯಿದೆ, ಹಾಗಾಗಿ ಆರು ವಾರಗಳ ಕಾಲಾವಕಾಶ ನೀಡುವಂತೆ ಕೋರಿದ್ದಾನೆ. ಇನ್ನೋರ್ವ ಅತ್ಯಾಚಾರಿ ಮಿತೇಶ್ ಚಿಮನ್ಲಾಲ್ ಭಟ್, ತನ್ನ ಚಳಿಗಾಲದ ಕೃಷಿ ಉತ್ಪನ್ನಗಳು ಕೊಯ್ಲಿಗೆ ಸಿದ್ಧವಾಗಿವೆ. ಅದರ ಪ್ರಕ್ರಿಯೆ ಪೂರ್ಣಗೊಳಿಸಲು ಆರು ವಾರಗಳ ಕಾಲವಕಾಶ ಕೋರಿದ್ದಾನೆ. ಕೊಯ್ಲು ಕೆಲಸ ಮುಗಿದ ಬಳಿ ಶರಣಾಗುವುದಾಗಿ ತಿಳಿಸಿದ್ದಾನೆ.

ಸುಪ್ರೀಂ ಕೋರ್ಟ್‌ ಆದೇಶದಂತೆ ಅಪರಾಧಿಗಳಿಗೆ ಶರಣಾಗಲು ಜನವರಿ 21 ಕೊನೆಯ ದಿನಾಂಕವಾಗಿರುವುದರಿಂದ ಅವರು ಸಲ್ಲಿಸಿದ್ದ ಅರ್ಜಿಯನ್ನು ಆದಷ್ಟು ಬೇಗ ವಿಚಾರಣೆ ನಡೆಸಬೇಕೆಂದು ಹಿರಿಯ ವಕೀಲ ವಿ ಚಿತಂಬರೇಶ್‌ ಕೋರಿದ್ದರು.

ಈ ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ನಡೆಸಲು ಪೀಠವನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಅವರಿಗೆ ಕೋರಲು ರಿಜಿಸ್ಟ್ರಿಗೆ ನ್ಯಾಯಮೂರ್ತಿ ಬಿವಿ ನಾಗರತ್ನ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಮೂವರು ಸೇರಿದಂತೆ ಒಟ್ಟು 11 ಮಂದಿ 2002ರ ಗುಜರಾತ್ ಗಲಭೆಯ ಸಮಯದಲ್ಲಿ ಬಿಲ್ಕಿಸ್ ಬಾನು ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬ ಸದಸ್ಯರ ಕೊಲೆಯ ಅಪರಾಧಿಗಳಾಗಿದ್ದಾರೆ.

ಅಪರಾಧಿಗಳು 14 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕ, 2022ರ ಆಗಸ್ಟ್‌ನಲ್ಲಿ ಗುಜರಾತ್ ಸರ್ಕಾರ ಸನ್ನಡೆಯ ನೆಪ ಹೇಳಿ ಬಿಡುಗಡೆ ಮಾಡಿತ್ತು. ಇದರ ವಿರುದ್ದ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಜನವರಿ 8, 2024ರಂದು ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಅಪರಾಧಿಗಳನ್ನು ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ರದ್ದುಪಡಿಸಿದೆ. ಎರಡು ವಾರಗಳಲ್ಲಿ ಜೈಲಿಗೆ ಮರುಳುವಂತೆ ಅಪರಾಧಿಗಳಿಗೆ ಸೂಚಿಸಿದೆ.

ಇದನ್ನೂ ಓದಿ : ರಾಮ ಮಂದಿರ ಉದ್ಘಾಟನಾ ಸಮಾರಂಭದ ವಿರುದ್ಧ ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ: ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗುಜರಾತ್| 200ಕ್ಕೆ 212 ಅಂಕ ಪಡೆದ ವಿದ್ಯಾರ್ಥಿನಿ: ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಪ್ರಶ್ನಿಸಿದ ಜನ

0
ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಪರೀಕ್ಷೆಯ ಫಲಿತಾಂಶಗಳಲ್ಲಿ ಕಂಡು ಬಂದ ದೋಷಗಳು ಭಾರೀ ಚರ್ಚೆಗೆ ಕಾರಣವಾಗಿದ್ದು, ಶಿಕ್ಷಣ ವ್ಯವಸ್ಥೆಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗಿದೆ. ವರದಿಗಳ ಪ್ರಕಾರ, ನಾಲ್ಕನೇ ತರಗತಿಯ ವಿದ್ಯಾರ್ಥಿನಿ ವಂಶಿಬೆನ್...