ನೂತನ ರಾಜ್ಯಪಾಲ ಆರ್.ಎನ್ ರವಿ ಅವರನ್ನು ‘ಬಿಜೆಪಿ ಕೇಡರ್’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಲೇವಡಿ ಮಾಡಿದ್ದು, ಮುಂಬರುವ ದಿನಗಳಲ್ಲಿ ರಾಜ್ಯ ಸಚಿವಾಲಯ ‘ನಬನ್ನಾ’ ಮತ್ತು ರಾಜ್ಯಪಾಲರ ನಿವಾಸ ‘ಲೋಕ ಭವನ’ದ ನಡುವೆ ಸಂಘರ್ಷ ತೀವ್ರಗೊಳ್ಳುವ ಮುನ್ಸೂಚನೆ ನೀಡಿದ್ದಾರೆ.
ಮಾರ್ಚ್ 5, 2026ರಂದು ಸಿ.ವಿ ಆನಂದ್ ಬೋಸ್ ಅವರ ಹಠಾತ್ ರಾಜೀನಾಮೆಯ ನಂತರ, ಆರ್.ಎನ್ ರವಿ ಅವರನ್ನು ಪಶ್ಚಿಮ ಬಂಗಾಳದ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಈ ನೇಮಕಾತಿಯನ್ನು ವಿರೋಧಿಸಿರುವ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯ ಸರ್ಕಾರದೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಕೈಗೊಂಡ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಸುಮಾರು 64 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದನ್ನು ವಿರೋಧಿಸಿ ಕೋಲ್ಕತ್ತಾದ ಎಸ್ಪ್ಲೇನೇಡ್ ಮೆಟ್ರೋ ಚಾನೆಲ್‌ನಲ್ಲಿ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹದ ಎರಡನೇ ದಿನವಾದ ಶನಿವಾರ ಟಿಎಂಸಿ ಬೆಂಬಲಿಗರನ್ನು ಉದ್ದೇಶಿಸಿ ಮಮತಾ ಬ್ಯಾನರ್ಜಿ ಮಾತನಾಡಿದರು.
ರಾಜ್ಯಪಾಲರಾಗಿದ್ದ ಸಿ. ವಿ. ಆನಂದ್ ಬೋಸ್ ಅವರ ಹಠಾತ್ ರಾಜೀನಾಮೆಯು, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಹೇರಿದ ಒತ್ತಡದ ಫಲಿತಾಂಶವಾಗಿದೆ ಎಂದು ಮಮತಾ ಬ್ಯಾನರ್ಜಿ ತಮ್ಮ ಭಾಷಣದಲ್ಲಿ ಆರೋಪಿಸಿದ್ದಾರೆ.
ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಕೇಂದ್ರ ಸರ್ಕಾರ ‘ಲೋಕ ಭವನ’ವನ್ನು (ರಾಜಭವನ) ರಾಜಕೀಯ ಕೇಂದ್ರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
“ಸಿ.ವಿ ಆನಂದ್ ಬೋಸ್ ಅವರನ್ನು ಹೇಗೆ ತೆಗೆದು ಹಾಕಲಾಯಿತು ಎಂಬುವುದು ನಿಮಗೆ ಗೊತ್ತಾ? ನನಗೆ ಎಲ್ಲವೂ ಗೊತ್ತು. ಅವರು ಲೋಕಭವನದಿಂದ ಹಣ ಹಂಚಲು ಬಯಸಿದ್ದಾರೆ. ಅವರು ಲೋಕಭವನವನ್ನು ಬಿಜೆಪಿ ಪಕ್ಷದ ಕಚೇರಿಯನ್ನಾಗಿ ಪರಿವರ್ತಿಸಲು ಬಯಸಿದ್ದಾರೆ. ಆದರೆ ಎಲ್ಲರೂ ದೆಹಲಿಯ ಇಂತಹ ಹುಚ್ಚಾಟಗಳನ್ನು ಒಪ್ಪದಿರಬಹುದು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಹೊಸ ರಾಜ್ಯಪಾಲರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ನೆನಪಿಡಿ ಬಂಗಾಳ ಟಫ್ ಟರ್ಫ್” ಎಂದು ಗುಡುಗಿದ್ದಾರೆ.
ತಮಿಳುನಾಡು ರಾಜ್ಯಪಾಲರಾಗಿಯೂ ಇರುವ ಆರ್.ಎನ್. ರವಿ ಅವರ ಉದಾಹರಣೆ ನೀಡಿದ ಮಮತಾ ಬ್ಯಾನರ್ಜಿ, “ಅವರು ಅಲ್ಲಿನ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೂ ತೊಂದರೆ ಕೊಟ್ಟಿದ್ದಾರೆ. ಅವರೊಬ್ಬ ಬಿಜೆಪಿಯ ಕೇಡರ್. ಆ ಪಕ್ಷ ನಡೆಸುವ ಸಭೆಗಳಲ್ಲಿ ಭಾಗವಹಿಸಿದವರಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ರವಿ ಅವರು ಬಿಹಾರ ಕೇಡರ್‌ನ 1976ರ ಬ್ಯಾಂಚ್‌ನ ನಿವೃತ್ತ ಐಪಿಎಸ್ ಅಧಿಕಾರಿಯಾಗಿದ್ದು, ತಮ್ಮ ವೃತ್ತಿಜೀವನದಲ್ಲಿ ಕೇಂದ್ರ ಗುಪ್ತಚರ ದಳ ಮತ್ತು ಕೇಂದ್ರೀಯ ತನಿಖಾ ದಳದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಾರೆ.


