HomeUncategorizedಮಂಡ್ಯ ಚುನಾವಣೆಯ ಒಳನೋಟ

ಮಂಡ್ಯ ಚುನಾವಣೆಯ ಒಳನೋಟ

- Advertisement -
- Advertisement -

ಬಿ. ಚಂದ್ರೇಗೌಡ |
ಮಂಡ್ಯದ ಚುನಾವಣೆಯೊಳಗೆ ನಾನು ನೇರ ಹೋಗಿ ಸೇರಿಕೊಂಡೆ. ಯಾಕೆಂದರೆ, “ಲಂಕೇಶ್ ಹೆಸರಿನಲ್ಲಿ ನಮ್ಮೂರ ಮುಂದೆ ಒಂದು ಬಯಲು ರಂಗಮಂದಿರ ಕಟ್ಟುತ್ತೇನೆ, ಒಂದೈದು ಲಕ್ಷ ರೂಪಾಯಿ ಕೊಡಣ್ಣ” ಎಂದು ಅಂಬರೀಶ್ ಬಳಿ ಕೇಳಿದ್ದೆ. ಕೂಡಲೆ ಹಿಂದೆ-ಮುಂದೆ ನೋಡದೆ ಅವರ ಸಹಾಯಕ ವಾಸುಕಿಯನ್ನ ಕರೆದು “ಲೇ ಇವುನೇನೋ ಕೇಳ್ತಿದಾನೆ ಕೊಡೋ” ಎಂದರು. ಕೂಡಲೇ ವಾಸುಕಿ ಹಣ ಬಿಡುಗಡೆ ಮಾಡಿದರು. ಈ ನಡುವೆ ಗೌರಿ ಕೂಡ ಅಂಬರೀಶ್‍ಗೆ ಫೋನ್ ಮಾಡಿ ಹೇಳಿದ್ದಳು. ಅಂತೂ ರಂಗಮಂದಿರವಾಯ್ತು. ಅದರ ಫೋಟೋ ತೋರಿಸಿ ಉದ್ಘಾಟನೆಗೆ ನೀವೇ ಬರಬೇಕು ಎಂದೆ. “ಯಾರ್ನಾರ ಕರದು ಮಾಡಿಸಿಕೋ ಹೋಗೋ” ಎಂದರು. ಆಗ ನಾನು ಅಂಬರೀಶ್ ಅರ್ಥಮಾಡಿಕೊಳ್ಳಲು ಯತ್ನಿಸಿದೆ. ಅವರೊಬ್ಬ ಅಪರೂಪದ ರಾಜಕಾರಣಿ. ಸದಾ ಜಾಲಿಯಾಗಿರುತ್ತಿದ್ದ ಅಂಬರೀಶ್, ವಿಲಾಸಿ ಜೀವನಕ್ಕೆ ಒಗ್ಗಿಕೊಂಡಿದ್ದರು. ಇಂತಹ ಜೀವನಕ್ಕಾಗಿಯೇ ಬೆಂಗಳೂರಿನ ವುಡ್‍ಲ್ಯಾಂಡ್ ಹೊಟೇಲಿನಲ್ಲಿ ತಂಗಿದ್ದರು. ಆದರೆ ಈ ಒಂಟಿ ಸಲಗನನ್ನ ಕುಟುಂಬ ಜೀವನಕ್ಕೆ ಒಗ್ಗಿಸಿ ಸಂಸಾರಸ್ಥನನ್ನಾಗಿ ಮಾಡಿದ ಕೀರ್ತಿ ಸುಮಲತಾಗೆ ಸಲ್ಲಬೇಕು. ಅಂಬರೀಶ್ ಬದುಕಿರುವವರೆಗೆ ಎಲ್ಲೂ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಸುಮಲತಾರನ್ನ ಜನ ನೋಡಿದ್ದು ಅವರ ಸಾವಿನ ಸಂದರ್ಭದಲ್ಲಿ. ಆದರೆ ಅಂಬಿ ಸಾವಿನ ಜಾಗವನ್ನ ದೇವೇಗೌಡರ ಕುಟುಂಬ ಆವರಿಸುತ್ತದೆಂದು ಯಾರೂ ಊಹಿಸಿರಲಿಲ್ಲ. ಆದರೆ ಅದಕ್ಕಾಗಿ ವರ್ಷದ ಹಿಂದೆಯೇ ಗೌಡರು ಮತ್ತು ಕುಮಾರಣ್ಣ ನೀಲನಕ್ಷೆಯನ್ನೇ ತಯಾರಿಸಿದ್ದರು. ಜಾಗ್ವಾರ್ ಸಿಡಿ ಬಿಡುಗಡೆಯಿಂದ ಹಿಡಿದು, ಸೀತಾರಾಮ ಕಲ್ಯಾಣ ಚಿತ್ರದ ಟಿಕೆಟ್‍ಗಳನ್ನು ಮನೆ ಬಾಗಿಲಿಗೇ ತಲುಪಿಸುವ ಹುನ್ನಾರದ ಸೂತ್ರಗಳೆಲ್ಲಾ ನಿಖಿಲ್‍ನನ್ನು ಮಂಡ್ಯದಲ್ಲಿ ಸ್ಥಾಪಿಸುವುದಾಗಿತ್ತು.
ರಾಜಕಾರಣಕ್ಕೆ ಬರಬೇಕಾದರೆ ಜನರ ನಾಲಿಗೆಯಲ್ಲಿ ಆತನ ಹೆಸರು ನಲಿದಾಡಬೇಕು. ಇದಕ್ಕೆ ಸುಲಭದ ದಾರಿ ಎಂದರೆ ಸಿನಿಮಾ ತಯಾರಿಸುವುದು. ಹೀಗಾಗಿ ಸಿನಿಮಾ ಮುಖಾಂತರ ರಾಜಕಾರಣಕ್ಕೆ ಬಂದ ದೊಡ್ಡ ಹಿಂಡೇ ಇದೆ. ಆ ಪೈಕಿ ನಿಖಿಲ್‍ದು ಈಚಿನ ಪ್ರಹಸನ. ವಾಸ್ತವವಾಗಿ ನಿಖಿಲ್‍ಗೆ ಸಿನಿಮಾ ಒಂದು ನೆಪ ಅಷ್ಟೇ. ಎರಡೇ ಚಿತ್ರಕ್ಕೆ ಆತ ಬಂದು ಮಂಡ್ಯದ ಅಭ್ಯರ್ಥಿಯಾದ, ಆಗ ಇದ್ದಕ್ಕಿದ್ದಂತೆ ಈ ಅನ್ಯಾಯದ ವಿರುದ್ಧ ಮಂಡ್ಯದ ಜನ ಎದ್ದು ನಿಂತರು. ಏಕೆಂದರೆ ಮಂಡ್ಯದಲ್ಲಿ ಜನತಾದಳ ಕಟ್ಟಿದ ಜಯರಾಂ, ಆತನ ಮಗ ಮತ್ತು ಹೆಂಡತಿ, ನಿಖಿಲ್ ಜಾಗ ತುಂಬಲು ಯೋಗ್ಯರಿದ್ದರು. ಇನ್ನ ಶಂಕರೇಗೌಡರ ಕುಟುಂಬ ಕಷ್ಟದಲ್ಲಿದೆ, ಅವರ ಪೈಕಿ ಯಾರನ್ನೂ ಗುರುತಿಸಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ, ಲಕ್ಷ್ಮೀ ಅಶ್ವಿನ್‍ಗೌಡ ಎಂಬ ಹೆಣ್ಣು ಮಗಳು ಐಆರ್‍ಎಸ್‍ನಲ್ಲಿದ್ದರು. ಅವರನ್ನ ಕೆಲಸ ಬಿಡಿಸಿ ಕರೆತಂದ ದೇವೇಗೌಡರ ಪರಿವಾರ ಆಕೆಯನ್ನ ಮುಂದಿನ ಮಂಡ್ಯ ಜಿಲ್ಲೆ ರಾಜಕಾರಣಿಯೆಂದು ಬಿಂಬಿಸಿ, ಬೆಳ್ಳೂರು ಸಮೀಪ ಬೃಹತ್ ಸಭೆ ಮಾಡಿ ಪರಿಚಯಿಸಿದರು. ಆರು ತಿಂಗಳ ಹಿಂದೆ ಬಂದ ಚುನಾವಣೆಗೆ ಲಕ್ಷ್ಮೀ ಬದಲಿಗೆ ಶಿವರಾಮೇಗೌಡನಿಗೆ ಲೋಕಸಭಾ ಚುನಾವಣೆ ಟಿಕೆಟ್ ಕೊಟ್ಟರು. ಏಕೆಂದರೆ ಲಕ್ಷ್ಮೀಯಾಗಿದ್ದರೆ ನಿಖಿಲ್‍ಗೆ ಜಾಗ ಬಿಡಿಸಲು ತೊಂದರೆಯಾಗುತ್ತಿತ್ತು. ಆದರೆ ನಟ ಯಶ್ ಹೇಳುವಂತೆ ಶಿವರಾಮೇಗೌಡ ಎಂಬ ಕರ್ಚೀಫು ಮರು ಮಾತನಾಡದೆ ಸುಮ್ಮನಾದುದಲ್ಲದೆ, ಮುಂದೆ ನಾನು ಕುಮಾರಣ್ಣನ ಕಾರಿನ ಬಾಗಿಲು ತೆಗೆದು ಹತ್ತಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದಿತು. ಈ ಮಾತು ಸ್ವಾಭಿಮಾನಿ ಮಂಡ್ಯದ ಜನರನ್ನ ಕೆರಳಿಸಿತು. ಶಿವರಾಮನ ಮಗನೇ ಹೇಳಿದಂತೆ ಮಂಡ್ಯ ಜಿಲ್ಲೆ ಚುನಾವಣಾ ಬಜೆಟ್ ನೂರೈವತ್ತು ಕೋಟಿ. ಆದರೆ ಇಡೀ ಜಿಲ್ಲೆಯಾದ್ಯಂತ ನಡೆದ ಸಭೆ ಸಮಾರಂಭಗಳಿಗೆ ಹಣಕೊಟ್ಟು ಕರೆಸಿದ ಜನರ ಬಟವಾಡೆ ನೋಡಿದರೆ ಈ ಖರ್ಚು ಆ ನೂರೈವತ್ತು ಕೋಟಿಯೊಳಗಿಲ್ಲ ಅನ್ನಿಸುತ್ತೆ. ಅಂತೂ ಜನ ತಂದು ಸುರಿದು ನಿಖಿಲ್‍ನನ್ನ ಅಭ್ಯರ್ಥಿಯನ್ನಾಗಿ ಮಾಡಿದ ಸಮಾರಂಭದ ಮುಖಾಂತರ ಮಂಡ್ಯದ ಅಖಾಡ ರೆಡಿಯಾಯ್ತು.
ಇತ್ತ ಸುಮಲತಾ ತನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದವರ ಅಭಿಪ್ರಾಯಗಳಲ್ಲದೆ, ಜೆಡಿಎಸ್ಸು, ಕಾಂಗ್ರೆಸ್, ರೈತಸಂಘ ಮತ್ತು ಅಂಬರೀಶ್ ಅಭಿಮಾನಿಗಳ ಅಭಿಪ್ರಾಯಗಳನ್ನ ಪಡೆದು ನಾಮಪತ್ರ ಸಲ್ಲಿಸಿದರು. ಆ ದಿನವೇ ಅವರ ದೂರದೃಷ್ಟಿಯ ಮಾತು ಅಚ್ಚರಿ ಹುಟ್ಟಿಸಿತು. ಪಾಪ ನನ್ನಿಂದ ನಿಮಗೆ ಕೆಟ್ಟದಾಗಬಹುದು ಎಂದು ಯಶ್ ಮತ್ತು ದರ್ಶನ್ ಕುರಿತು ಹೇಳಿದರು. ಹಾಗೇ ಆಯ್ತು. ಸ್ವತಃ ಮುಖ್ಯಮಂತ್ರಿಯೇ ಈ ಇಬ್ಬರು ನಟರ ಬಗ್ಗೆ ಹಗುರವಾಗಿ ಮಾತನಾಡಿದರು. ಇದರಿಂದ ನಮ್ಮ ಮುಖ್ಯಮಂತ್ರಿಗೆ ಬುದ್ದಿ ಭಾಷೆಯ ಕೊರತೆ ಜೊತೆಗೆ ಅಪ್ರಭುದ್ದತೆಯೂ ಅಮರಿಕೊಂಡಿದೆ ಎಂದು ನಾಡಿನ ಜನಕ್ಕೆ ಅರಿವಾಯ್ತು. ಸ್ವತಃ ಸುಮಲತ, ಯಶ್ ಮತ್ತು ದರ್ಶನ್ ಅಭಿಮಾನಿಗಳು ಈ ಜಿಲ್ಲೆಗಷ್ಟೇ ಸೀಮಿತವಾಗಿಲ್ಲ. ಇಡೀ ನಾಡಿನಾದ್ಯಂತ ಇದ್ದಾರೆ. ಅವರ ಅಕ್ರೋಶ ದಳದ ಮೇಲಾಗಬಹುದೆಂದು ಎಚ್ಚರಿಸಿದರು. ಆದರೆ ಇಂತಹ ಎಚ್ಚರಿಕೆ ಮಾತುಗಳಿಗೆ ನಮ್ಮ ಮುಖ್ಯಮಂತ್ರಿ ಬಗ್ಗುವವರಲ್ಲ. ಅವರು ನೇರ ಸುಮಲತಾರನ್ನೇ ಟೀಕಿಸತೊಡಗಿದರು. ಇದಕ್ಕೆ ಜನರೇ ಉತ್ತರ ಕೊಡತೊಡಗಿದರು. ಜಾಲತಾಣಗಳಂತೂ ಅಂಗೈನಲ್ಲೇ ಮನರಂಜನೆ ಒದಗಿಸತೊಡಗಿದವು. ತರಕಾರಿ ಸೊಪ್ಪು ಮಾರುವವರಿಂದ ಹಿಡಿದು ಕಾಲೇಜು ಹುಡುಗರೂ ಕೂಡ ಗೌಡರ ಕುಟುಂಬವನ್ನ ಜಾಲಾಡಿಬಿಟ್ಟವು.
ಜನಸಾಮಾನ್ಯರ ಆಕ್ರೋಶ ಎಲ್ಲಿಯವರೆಗೆ ಮುಟ್ಟಿತೆಂದರೆ ದೇವೇಗೌಡರು ಒಕ್ಕಲಿಗರಲ್ಲ ಕುರುಬರು ಎಂದು ಬಹಳ ಹಿಂದೆ ಸುಬ್ರಮಣ್ಯಸ್ವಾಮಿ ಹೇಳಿದ್ದ ಪ್ರಜಾವಾಣಿಯ ಪೇಪರ್ ಕಟಿಂಗ್ ಜಾಲತಾಣದಲ್ಲಿ ಹರಿದಾಡಿತು. ಮುಗ್ದ ಜನರಿಗೆ ಜಾತಿ ಜಾಢ್ಯವನ್ನ ಅಂಟಿಸಿದ ನಾಯಕರೇ ಜಾತಿ ಅನಿಷ್ಟದ ಆಪಾದನೆಗೆ ಗುರಿಯಾದರು. ಅದಷ್ಟೇ ಅಲ್ಲ, ಮಂಡ್ಯದಲ್ಲಿ ಈ ದೇವೇಗೌಡರು ಒಕ್ಕಲಿಗ ಜನಾಂಗದ ಎಲ್ಲ ಪ್ರತಿಭಾವಂತ ನಾಯಕರನ್ನ ಮುಗಿಸಬೇಕಾದರೆ ಆತ ನಿಜವಾದ ಒಕ್ಕಲಿಗನಲ್ಲ, ಅದು ಈಗ ಸಾಬೀತಾಗಿದೆ ಎಂಬಂತೆ ಮಾತನಾಡಿದರು.
ಕೆಲವು ಬುದ್ದಿಜೀವಿಗಳೂ ಕೂಡ ಸದ್ಯದ ಸ್ಥಿತಿಯಲ್ಲಿ ಮೋದಿಯನ್ನ ಉಗ್ರವಾಗಿ ವಿರೋಧಿಸಿ ಮಹಾಘಟ್‍ಬಂಧನ್‍ಗೆ ಒಂದೆರಡು ಜಾಸ್ತಿ ಸೀಟು ದೊರಕಿಸಿಕೊಡುವ ಸಂದರ್ಭದಲ್ಲಿ ದ್ಯಾವೇಗೌಡರು ಕುಟುಂಬ ರಾಜಕಾರಣ ಮಾಡಿ ಅನ್ಯಾಯವಾಗಿ ಮೂರು ಕ್ಷೇತ್ರಗಳನ್ನ ಬಿಜೆಪಿ ಬಾಯಿಗೆ ಹಾಕುತ್ತಿದ್ದಾರಲ್ಲಾ ಎಂದು ಹಲುಬಿದರು. ಅದರಲ್ಲೂ ಮುದ್ದ ಹನುಮೇಗೌಡರ ಪ್ರಕರಣ, ಹಾಡುಹಗಲೇ ನಡೆದ ಕೂನಿಯಂತ ಪ್ರಕರಣ. ಆದರೆ ದೇವೇಗೌಡರು ಎಂತಹ ಹಠವಾದಿ ಎಂದರೆ ಆ ವಿಷಯದಲ್ಲವರು ಎಂದೂ ಹಿಂದೆ ಸರಿದಿಲ್ಲ. ತುಮಕೂರಿನಲ್ಲಿ ಮುದ್ದ ಹನುಮೇಗೌಡರನ್ನ ಬಲಿ ಪಡೆದು ಮಂಡ್ಯಕ್ಕೆ ಬಂದ ಅವರಿಗೆ, ತಾವೇ ಮತೀಯ ಜಾಲದೊಳಕ್ಕೆ ದೂಡಿದ ಜನ ತಮ್ಮ ವಿರುದ್ಧವೇ ನಿಂತಿರುವುದು ಗೋಚರಿಸಿತು. ನುರಿತ ರಾಜಕಾರಣಿಯಾದ ಅವರು ಈಗ ಮಂಡ್ಯಕ್ಕೆ ಸಿದ್ದರಾಮಯ್ಯನೇ ಬಂದು ಭಾಷಣ ಮಾಡಿದರೂ ಇದು ನಮ್ಮ ಕೈಗೆ ಸಿಗುವುದಿಲ್ಲ ಎಂಬ ಸೋಲಿನ ಮಾತನಾಡಿದರು. ಆದರೆ ಅವರ ಮಗ ಇದನ್ನೊಪ್ಪದೆ ಕೆಆರ್‍ಎಸ್‍ನಲ್ಲಿ ಬೀಡುಬಿಟ್ಟು ಕ್ಷುದ್ರ ತಂತ್ರಗಳನ್ನ ಹೆಣಿಯತೊಡಗಿದ್ದರು.
ಅವುಗಳನ್ನ ಇಲ್ಲಿ ದಾಖಲಿಸುವುದಾದರೆ ಅಂಬರೀಶ್ ಮನೆಯಲ್ಲಿ ಕೆಲಸ ಮಾಡುತ್ತಿದ್ದವರನ್ನ ಹಿಡಿದು ಆಮಿಷವೊಡ್ಡಿ ಸುಮಲತ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ಪುಸಲಾಯಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಕುಮಾರಸ್ವಾಮಿ ಎಂತಹ ವ್ಯಕ್ತಿಯೆಂದರೆ, ಸುಮಲತಾರ ಬಗ್ಗೆ ಕೆಟ್ಟದಾಗಿ ಮಾತನಾಡಿದವರನ್ನು ಕರೆದು ಬಹುಮಾನ ಕೊಡುವಂತಹ ಗಿರಾಕಿ. ಆದ್ದರಿಂದ ಅವರಿಗೆ ಇಂತಹ ಕೆಲಸ ಮಾಡಲು ಯಾವ ಅಳಕೂ ಆಗಲಿಲ್ಲ. ಇನ್ನ ದರ್ಶನ್‍ಗೆ ತೊಂದರೆ ಕೊಡಲು, ಅವರ ಅಭಿಮಾನಿಗಳೆಂದು ಹೇಳಿಕೊಳ್ಳುವ ಒಂದು ಗುಂಪನ್ನ ತಯಾರಿಸಿ ಅವರೆಲ್ಲಾ ದರ್ಶನ್‍ಗೆ ತಿರುಗಿಬಿದ್ದು ನಿಖಿಲ್‍ಗೆ ಓಟು ಮಾಡುತ್ತೇವೆ ಎಂಬ ಹೇಳಿಕೆಯನ್ನ ಮಾಧ್ಯಮದ ಮುಂದೆ ಕೊಡಿಸಿದರು.
ಸುಮಲತಾ ಬಿಜೆಪಿ ಸಹಾಯ ಕೇಳಿ ಆ ಪಾರ್ಟಿ ಅಭ್ಯರ್ಥಿ ನಿಲ್ಲದಂತೆ ಮಾಡಿದ್ದು ಒಂದು ಅಸ್ತ್ರವಾಗಿ ಪರಿಣಮಿಸಿದ್ದರಿಂದ ಮುಸ್ಲಿಮರನ್ನ ಕರೆದು ಅವರೆಲ್ಲಾ ಸ್ವತಂತ್ರ ಅಭ್ಯರ್ಥಿ ಪಾಳಯ ತೊರೆದು ನಿಖಿಲ್‍ಗೆ ಓಟು ಮಾಡುತ್ತೇವೆ ಎಂಬ ಹೇಳಿಕೆ ಕೊಡಿಸಿದರು. ಇನ್ನು ವಿಷ್ಣು ಅಭಿಮಾನಿಗಳಿಗೆ ಮೈಸೂರಲ್ಲೇ ಭವ್ಯವಾದ ವಿಷ್ಣು ಸ್ಮಾರಕ ನಿರ್ಮಿಸಿಕೊಡುವುದಾಗಿ ಅಮಿಷವೊಡ್ಡಿ ಅವರೆಲ್ಲಾ ನಿಖಿಲ್‍ಗೆ ಓಟು ಮಾಡುವುದಾಗಿ ಹೇಳಿಸಿದರು. ಇದಿಷ್ಟೇ ಅಲ್ಲ, ದಿಢೀರನೆ ಹೆಗಲಿಗೆ ಹಸಿರು ಟವಲ್ ಹಾಕಿಕೊಂಡು ಕೆಲವರು ಹಾಗೂ ಹಳದಿ ಕೆಂಪು ಪಟ್ಟಿ ಬಿಗಿದುಕೊಂಡ ಕನ್ನಡ ಚಳುವಳಿಗಾರರೆಲ್ಲಾ ರಾತ್ರೋರಾತ್ರಿ ತಯಾರಾಗಿ ತಾವೆಲ್ಲರೂ ಕುಮಾರಣ್ಣನ ಕೈ ಹಿಡಿಯುವುದಾಗಿ ಘೋಷಿಸಿಕೊಂಡರು. ಇಂತೆಲ್ಲಾ ಛದ್ಮವೇಶದವರು ಕುಮಾರಣ್ಣನ ಅಮಿಷಕ್ಕೊಳಗಾಗಿ ಸಪೋರ್ಟ್‍ಗೆ ಬಂದಿದ್ದು ಸರಿ. ಆದರೆ ಅಂಬರೀಶ್ ಎಂಬ ಅಪೂರ್ವ ರಾಜಕಾರಣಿ ಪರವಾಗಿ ಬಂದ ಯಶ್ ಮತ್ತು ದರ್ಶನ್ ಬಣ್ಣದವರಾಗಿ, ಕಳ್ಳೆತ್ತುಗಳಾಗಿ ಕ್ಷುದ್ರ ವ್ಯಕ್ತಿಗಳಾಗಿ ಕುಮಾರಸ್ವಾಮಿಗೆ ಕಂಡರು. ಇದೇ ಅವರಿಗೆ ಮುಳುವಾಯ್ತು.
ವಾಸ್ತವವಾಗಿ ಕುಮಾರಸ್ವಾಮಿ ತನ್ನ ಮಗನನ್ನು ಅಭ್ಯರ್ಥಿಯನ್ನಾಗಿಸಿ ಇನ್ನ ನೀನುಂಟು ಮಂಡ್ಯ ಜನರುಂಟು ಎಂದು ಉಳಿದ ಹದಿಮೂರು ಕ್ಷೇತ್ರಗಳ ಕಡೆ ಹೋಗಿದ್ದರೆ ಸುಮಲತ ಇನ್ನೂ ಕಷ್ಟಪಡಬೇಕಿತ್ತು. ಆದರೆ ಕುಮಾರಣ್ಣ ಒಬ್ಬ ಪ್ರಬುದ್ಧ ರಾಜಕಾರಣಿಯಲ್ಲ, ಕೀಳು ಅಭಿರುಚಿಯ ವ್ಯಕ್ತಿಯಂತೆ ವರ್ತಿಸತೊಡಗಿದರು. ಸುಮಲತ ತೂಕವಾಗಿ ಮಾತನಾಡುತ್ತ, ಪತ್ರಕರ್ತರಿಗೆಲ್ಲಾ ಸಮಂಜಸವಾದ ಉತ್ತರಕೊಡುತ್ತ ಎದುರಾಳಿಗಳಿಗೆ ಅವರ ಮಾತುಗಳನ್ನೆ ಅವರಿಗೆ ತಿರುಗಿಸಿಬಿಡುತ್ತ ಮಂಡ್ಯದ ಜನರಷ್ಟೇ ಅಲ್ಲ ಈ ನಾಡಿನ ಜನಮನ ಗೆದ್ದಾಗಿತ್ತು. ಒಂದು ಸಣ್ಣ ಕಾಂಟ್ರವರ್ಸಿ ಮಾತನ್ನು ಸುಮಲತಾರಿಂದ ಹೊರಡಿಸಿ ಅದನ್ನೇ ದಿನವೆಲ್ಲಾ ಹೊಸೆಯುವ ಟಿವಿಯವರ ಹುನ್ನಾರ ಫಲಿಸಲಿಲ್ಲ. ಒಂದುರೀತಿ ಸುಮಲತಾರ ಬಳಿಗೋದ ದೂರುಗಳಾಗಲಿ, ಹೇಳಿಕೆಗಳಾಗಲಿ ಮರುಜೀವ ಪಡೆಯದೆ ಸತ್ತು ಹೋಗುತ್ತಿದ್ದವು. ಜೆಡಿಎಸ್‍ನವರ ಬಾಲಿಶ ಹೇಳಿಕೆಗಳು, ಅವುಗಳಿಗೆ ಸುಮಲತಾರ ಪ್ರಬುದ್ಧ ಪ್ರತ್ಯುತ್ತರಗಳ ಪರಿಣಾಮವಾಗಿ ಚುನಾವಣೆ ಇಡೀ ಭಾರತದಲ್ಲಿ ನಡೆಯುತ್ತಿದೆಯೊ ಅಥವಾ ಮಂಡ್ಯದಲ್ಲಿ ಮಾತ್ರ ನಡೆಯುತ್ತಿದೆಯೊ ಎನ್ನುವಂತಾಯ್ತು. ಸುಮ¯ತಾರನ್ನ ಸೋಲಿಸಲೇಬೇಕೆಂಬ ಹಠಕ್ಕೆ ಕುಮಾರಣ್ಣ ಮೂರ್ನಾಲ್ಕು ಸುಮಲತಾರನ್ನ ಹಿಡಿಸಿ ತರಿಸಿದರು. ಅವರನ್ನು ತರಾತುರಿಯಿಂದ ತಯಾರು ಮಾಡಿ ನಾಮಪತ್ರ ಸಲ್ಲಿಸಿ ಒಬ್ಬಳನ್ನ ಸುಮಲತಾರಂತೆಯೇ ತಯಾರು ಮಾಡಲಾಯ್ತು. ಇಲ್ಲಿದ್ದ ಚುನಾವಣಾಧಿಕಾರಿ ಕುಮಾರಣ್ಣನಿಗೆ ಅದೆಷ್ಟು ವಿಧೇಯಳಾಗಿದ್ದಳೆಂದರೆ, ಹೇಳಿದ ಕೆಲಸವನ್ನು ಜಾಸ್ತಿಯಾಗಿಯೇ ಮಾಡುತ್ತಿದ್ದಳು. ಇದರಿಂದ ಸಿಡಿದೆದ್ದ ಸುಮಲತಾ ದೂರು ನೀಡಿದರು. ಅಷ್ಟರಲ್ಲಿ ಅಸಂಖ್ಯಾತ ತಪ್ಪು ಮಾಡಿದ್ದ ಜಿಲ್ಲಾಧಿಕಾರಿ ವರ್ಗಾವಣೆಗೊಂಡರು. ನಾನಿರುವುದು ಚುನಾವಣಾ ನಿಯಮ ಪಾಲಿಸುವುದಕ್ಕೇ ಹೊರತು ನಿಮ್ಮ ಆದೇಶಗಳನ್ನು ಪಾಲಿಸಲಲ್ಲ ಎಂಬ ಒಂದು ಮಾತು ಆ ಜಿಲ್ಲಾಧಿಕಾರಿಯಿಂದ ಬರಲಿಲ್ಲ. ವಾಸ್ತವವಾಗಿ ಕುಮಾರಣ್ಣ ತನ್ನ ಪೂರ್ವನಿರ್ಧಾರದಂತೆ ಹೇಳಿದಂತೆ ಕೇಳುವ ಅಧಿಕಾರಿಗಳನ್ನ ಜಿಲ್ಲೆಗೆ ತುಂಬಿ ಬಹಳ ದಿನಗಳಾಗಿದ್ದವು. ಈಗ ಕುಮಾರಣ್ಣನ ಆಣತಿಯಂತೆ ನಡೆದಿರುವ ಚುನಾವಣಾ ಅಕ್ರಮಗಳನ್ನ ಸಂಗ್ರಹಿಸಿರುವ ಚಿರಂಜೀವಿ ಎಂಬ ಯುವಕನ ಬಳಿಯಿರುವ ದಾಖಲಾತಿಗಳು ನಿಖಿಲ್ ಗೆದ್ದರೂ ಬೆಂಬಿಡದಂತೆ ಕಾಡುತ್ತವೆ. ಆ ದಾಖಲಾತಿ ಪರಿಶೀಲಿಸಿದರೆ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುವ ಯಾವ ಅರ್ಹತೆಯನ್ನೂ ಪಡೆದಿಲ್ಲ ಎಂಬುದು ಸಾಬೀತಾಗುತ್ತದೆ.
ಶಿವರಾಮೇಗೌಡನ ಮಗನ ಹೇಳಿಕೆಯಂತೆ ಪ್ರತಿ ಬೂತಿಗೆ ಐದು ಲಕ್ಷದಂತೆ ಹರಿದು ಬಂದಿದ್ದು ನಿಜ, ಆದರೆ ಕಾರಿನಲ್ಲಿ ಬರುವ ಬದಲು ಭೈಕಿನಲ್ಲಿ ಬಂದವು. ಮುಂದೆ ಬೈಕುಗಳಿಗೆ ಎಕ್ಸಾರ್ಟಾಗಿ ಕಾರು ಹೋಗುತ್ತಿದ್ದು. ಮತ ಮಾರಿಕೊಳ್ಳುವ ಜನ ಖುಷಿಯಿಂದ ಮಾತನಾಡಿಕೊಳ್ಳುತ್ತಿದ್ದರು. ಅವರ ನಿರೀಕ್ಷೆಯಂತೆ ಓಟಿಗೆ ಸಾವಿರ ಎರಡು ಸಾವಿರಕ್ಕೆ ಬದಲು. ಐದು ನೂರಂತೆ ಎಂಬುದು ನಿರಾಶೆ ಹುಟ್ಟಿಸುತ್ತಿತ್ತು. ಹಂಚುವ ಜನ ಕೂಡ ಎಲ್ಲರಿಗೂ ಹಂಚದೆ ನಿಖಿಲನಿಗೆ ಮತಹಾಕುವವರನ್ನ ನಿಖರವಾಗಿ ಗುರುತಿಸಿ ಬಟವಾಡೆ ಮಾಡಿ ಉಳಿದದ್ದನ್ನ ಹಂಚಿಕೊಂಡರು. ಇನ್ನ ಸುಮಲತ ಹಣ ಹಂಚಿಕೆಯಿಂದ ದೂರವುಳಿದರು. ಏಕೆಂದರೆ ಅಂಬರೀಶ್ ಎಂದೂ ಹಣ ಹಂಚಿದವರಲ್ಲ. ಅದರೂ ಸೋತ ಜಿಲ್ಲೆಯ ಕಾಂಗ್ರೆಸ್ ಎಮ್ಮೆಲ್ಲೆಗಳ ತಲಾ ನೂರರಂತೆ ಹಂಚಿದರು. ಈ ಪೈಕಿ ನಾಗಮಂಗಲದ ಚಲುವರಾಯಸ್ವಾಮಿ ಕಡೆಯವರು. ನೂರು ರೂ ಹಂಚಲು ಹೋದಾಗ ಆಟೊಂತರ ಮಾಡಿಕೊಂಡವುನೆ ಇನ್ನೂರನ್ನು ಮುನ್ನೂರನ್ನೂ ಕೊಡಕ್ಕೇನಾಗಿತ್ತು” ಎಂದು ಗೊಣಗಿಕೊಂಡೇ ಈಸಿಕೊಂಡರು. ಜನಗಳು ಯಾವುದೇ ಅಳುಕಿಲ್ಲದೆ ಮತವನ್ನು ಮಾರಿಕೊಳ್ಳುತ್ತಿದ್ದಾರೆ. ಮುಂದೆ ಕೊಳ್ಳುವವರಷ್ಟೇ ಶಾಸಕರಾಗುತ್ತಾರೆ. ಆದರೆ ಮಂಡ್ಯದಲ್ಲಿ ಮಾತ್ರ ನೂರು ರೂ. ನೋಟು ಐನೂರರ ನೋಟನ್ನು ಸೋಲಿಸಿದೆ. ಸ್ವಾಭಿಮಾನದ ಭಿಕ್ಷೆಗಾಗಿ ಸೆರಗೊಡ್ಡಿದ ಸುಮಲತಾ ಮಂಡ್ಯದ ಜನರನ್ನು ಗೆದ್ದಿದ್ದಾರೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...