HomeUncategorizedಮಂಡ್ಯ ಚುನಾವಣೆಯ ಒಳನೋಟ

ಮಂಡ್ಯ ಚುನಾವಣೆಯ ಒಳನೋಟ

- Advertisement -
- Advertisement -

ಬಿ. ಚಂದ್ರೇಗೌಡ |
ಮಂಡ್ಯದ ಚುನಾವಣೆಯೊಳಗೆ ನಾನು ನೇರ ಹೋಗಿ ಸೇರಿಕೊಂಡೆ. ಯಾಕೆಂದರೆ, “ಲಂಕೇಶ್ ಹೆಸರಿನಲ್ಲಿ ನಮ್ಮೂರ ಮುಂದೆ ಒಂದು ಬಯಲು ರಂಗಮಂದಿರ ಕಟ್ಟುತ್ತೇನೆ, ಒಂದೈದು ಲಕ್ಷ ರೂಪಾಯಿ ಕೊಡಣ್ಣ” ಎಂದು ಅಂಬರೀಶ್ ಬಳಿ ಕೇಳಿದ್ದೆ. ಕೂಡಲೆ ಹಿಂದೆ-ಮುಂದೆ ನೋಡದೆ ಅವರ ಸಹಾಯಕ ವಾಸುಕಿಯನ್ನ ಕರೆದು “ಲೇ ಇವುನೇನೋ ಕೇಳ್ತಿದಾನೆ ಕೊಡೋ” ಎಂದರು. ಕೂಡಲೇ ವಾಸುಕಿ ಹಣ ಬಿಡುಗಡೆ ಮಾಡಿದರು. ಈ ನಡುವೆ ಗೌರಿ ಕೂಡ ಅಂಬರೀಶ್‍ಗೆ ಫೋನ್ ಮಾಡಿ ಹೇಳಿದ್ದಳು. ಅಂತೂ ರಂಗಮಂದಿರವಾಯ್ತು. ಅದರ ಫೋಟೋ ತೋರಿಸಿ ಉದ್ಘಾಟನೆಗೆ ನೀವೇ ಬರಬೇಕು ಎಂದೆ. “ಯಾರ್ನಾರ ಕರದು ಮಾಡಿಸಿಕೋ ಹೋಗೋ” ಎಂದರು. ಆಗ ನಾನು ಅಂಬರೀಶ್ ಅರ್ಥಮಾಡಿಕೊಳ್ಳಲು ಯತ್ನಿಸಿದೆ. ಅವರೊಬ್ಬ ಅಪರೂಪದ ರಾಜಕಾರಣಿ. ಸದಾ ಜಾಲಿಯಾಗಿರುತ್ತಿದ್ದ ಅಂಬರೀಶ್, ವಿಲಾಸಿ ಜೀವನಕ್ಕೆ ಒಗ್ಗಿಕೊಂಡಿದ್ದರು. ಇಂತಹ ಜೀವನಕ್ಕಾಗಿಯೇ ಬೆಂಗಳೂರಿನ ವುಡ್‍ಲ್ಯಾಂಡ್ ಹೊಟೇಲಿನಲ್ಲಿ ತಂಗಿದ್ದರು. ಆದರೆ ಈ ಒಂಟಿ ಸಲಗನನ್ನ ಕುಟುಂಬ ಜೀವನಕ್ಕೆ ಒಗ್ಗಿಸಿ ಸಂಸಾರಸ್ಥನನ್ನಾಗಿ ಮಾಡಿದ ಕೀರ್ತಿ ಸುಮಲತಾಗೆ ಸಲ್ಲಬೇಕು. ಅಂಬರೀಶ್ ಬದುಕಿರುವವರೆಗೆ ಎಲ್ಲೂ ರಾಜಕೀಯ ವೇದಿಕೆಯಲ್ಲಿ ಕಾಣಿಸಿಕೊಳ್ಳದ ಸುಮಲತಾರನ್ನ ಜನ ನೋಡಿದ್ದು ಅವರ ಸಾವಿನ ಸಂದರ್ಭದಲ್ಲಿ. ಆದರೆ ಅಂಬಿ ಸಾವಿನ ಜಾಗವನ್ನ ದೇವೇಗೌಡರ ಕುಟುಂಬ ಆವರಿಸುತ್ತದೆಂದು ಯಾರೂ ಊಹಿಸಿರಲಿಲ್ಲ. ಆದರೆ ಅದಕ್ಕಾಗಿ ವರ್ಷದ ಹಿಂದೆಯೇ ಗೌಡರು ಮತ್ತು ಕುಮಾರಣ್ಣ ನೀಲನಕ್ಷೆಯನ್ನೇ ತಯಾರಿಸಿದ್ದರು. ಜಾಗ್ವಾರ್ ಸಿಡಿ ಬಿಡುಗಡೆಯಿಂದ ಹಿಡಿದು, ಸೀತಾರಾಮ ಕಲ್ಯಾಣ ಚಿತ್ರದ ಟಿಕೆಟ್‍ಗಳನ್ನು ಮನೆ ಬಾಗಿಲಿಗೇ ತಲುಪಿಸುವ ಹುನ್ನಾರದ ಸೂತ್ರಗಳೆಲ್ಲಾ ನಿಖಿಲ್‍ನನ್ನು ಮಂಡ್ಯದಲ್ಲಿ ಸ್ಥಾಪಿಸುವುದಾಗಿತ್ತು.
ರಾಜಕಾರಣಕ್ಕೆ ಬರಬೇಕಾದರೆ ಜನರ ನಾಲಿಗೆಯಲ್ಲಿ ಆತನ ಹೆಸರು ನಲಿದಾಡಬೇಕು. ಇದಕ್ಕೆ ಸುಲಭದ ದಾರಿ ಎಂದರೆ ಸಿನಿಮಾ ತಯಾರಿಸುವುದು. ಹೀಗಾಗಿ ಸಿನಿಮಾ ಮುಖಾಂತರ ರಾಜಕಾರಣಕ್ಕೆ ಬಂದ ದೊಡ್ಡ ಹಿಂಡೇ ಇದೆ. ಆ ಪೈಕಿ ನಿಖಿಲ್‍ದು ಈಚಿನ ಪ್ರಹಸನ. ವಾಸ್ತವವಾಗಿ ನಿಖಿಲ್‍ಗೆ ಸಿನಿಮಾ ಒಂದು ನೆಪ ಅಷ್ಟೇ. ಎರಡೇ ಚಿತ್ರಕ್ಕೆ ಆತ ಬಂದು ಮಂಡ್ಯದ ಅಭ್ಯರ್ಥಿಯಾದ, ಆಗ ಇದ್ದಕ್ಕಿದ್ದಂತೆ ಈ ಅನ್ಯಾಯದ ವಿರುದ್ಧ ಮಂಡ್ಯದ ಜನ ಎದ್ದು ನಿಂತರು. ಏಕೆಂದರೆ ಮಂಡ್ಯದಲ್ಲಿ ಜನತಾದಳ ಕಟ್ಟಿದ ಜಯರಾಂ, ಆತನ ಮಗ ಮತ್ತು ಹೆಂಡತಿ, ನಿಖಿಲ್ ಜಾಗ ತುಂಬಲು ಯೋಗ್ಯರಿದ್ದರು. ಇನ್ನ ಶಂಕರೇಗೌಡರ ಕುಟುಂಬ ಕಷ್ಟದಲ್ಲಿದೆ, ಅವರ ಪೈಕಿ ಯಾರನ್ನೂ ಗುರುತಿಸಲಿಲ್ಲ. ಅದೆಲ್ಲಕ್ಕಿಂತ ಮುಖ್ಯವಾಗಿ, ಲಕ್ಷ್ಮೀ ಅಶ್ವಿನ್‍ಗೌಡ ಎಂಬ ಹೆಣ್ಣು ಮಗಳು ಐಆರ್‍ಎಸ್‍ನಲ್ಲಿದ್ದರು. ಅವರನ್ನ ಕೆಲಸ ಬಿಡಿಸಿ ಕರೆತಂದ ದೇವೇಗೌಡರ ಪರಿವಾರ ಆಕೆಯನ್ನ ಮುಂದಿನ ಮಂಡ್ಯ ಜಿಲ್ಲೆ ರಾಜಕಾರಣಿಯೆಂದು ಬಿಂಬಿಸಿ, ಬೆಳ್ಳೂರು ಸಮೀಪ ಬೃಹತ್ ಸಭೆ ಮಾಡಿ ಪರಿಚಯಿಸಿದರು. ಆರು ತಿಂಗಳ ಹಿಂದೆ ಬಂದ ಚುನಾವಣೆಗೆ ಲಕ್ಷ್ಮೀ ಬದಲಿಗೆ ಶಿವರಾಮೇಗೌಡನಿಗೆ ಲೋಕಸಭಾ ಚುನಾವಣೆ ಟಿಕೆಟ್ ಕೊಟ್ಟರು. ಏಕೆಂದರೆ ಲಕ್ಷ್ಮೀಯಾಗಿದ್ದರೆ ನಿಖಿಲ್‍ಗೆ ಜಾಗ ಬಿಡಿಸಲು ತೊಂದರೆಯಾಗುತ್ತಿತ್ತು. ಆದರೆ ನಟ ಯಶ್ ಹೇಳುವಂತೆ ಶಿವರಾಮೇಗೌಡ ಎಂಬ ಕರ್ಚೀಫು ಮರು ಮಾತನಾಡದೆ ಸುಮ್ಮನಾದುದಲ್ಲದೆ, ಮುಂದೆ ನಾನು ಕುಮಾರಣ್ಣನ ಕಾರಿನ ಬಾಗಿಲು ತೆಗೆದು ಹತ್ತಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದಿತು. ಈ ಮಾತು ಸ್ವಾಭಿಮಾನಿ ಮಂಡ್ಯದ ಜನರನ್ನ ಕೆರಳಿಸಿತು. ಶಿವರಾಮನ ಮಗನೇ ಹೇಳಿದಂತೆ ಮಂಡ್ಯ ಜಿಲ್ಲೆ ಚುನಾವಣಾ ಬಜೆಟ್ ನೂರೈವತ್ತು ಕೋಟಿ. ಆದರೆ ಇಡೀ ಜಿಲ್ಲೆಯಾದ್ಯಂತ ನಡೆದ ಸಭೆ ಸಮಾರಂಭಗಳಿಗೆ ಹಣಕೊಟ್ಟು ಕರೆಸಿದ ಜನರ ಬಟವಾಡೆ ನೋಡಿದರೆ ಈ ಖರ್ಚು ಆ ನೂರೈವತ್ತು ಕೋಟಿಯೊಳಗಿಲ್ಲ ಅನ್ನಿಸುತ್ತೆ. ಅಂತೂ ಜನ ತಂದು ಸುರಿದು ನಿಖಿಲ್‍ನನ್ನ ಅಭ್ಯರ್ಥಿಯನ್ನಾಗಿ ಮಾಡಿದ ಸಮಾರಂಭದ ಮುಖಾಂತರ ಮಂಡ್ಯದ ಅಖಾಡ ರೆಡಿಯಾಯ್ತು.
ಇತ್ತ ಸುಮಲತಾ ತನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದವರ ಅಭಿಪ್ರಾಯಗಳಲ್ಲದೆ, ಜೆಡಿಎಸ್ಸು, ಕಾಂಗ್ರೆಸ್, ರೈತಸಂಘ ಮತ್ತು ಅಂಬರೀಶ್ ಅಭಿಮಾನಿಗಳ ಅಭಿಪ್ರಾಯಗಳನ್ನ ಪಡೆದು ನಾಮಪತ್ರ ಸಲ್ಲಿಸಿದರು. ಆ ದಿನವೇ ಅವರ ದೂರದೃಷ್ಟಿಯ ಮಾತು ಅಚ್ಚರಿ ಹುಟ್ಟಿಸಿತು. ಪಾಪ ನನ್ನಿಂದ ನಿಮಗೆ ಕೆಟ್ಟದಾಗಬಹುದು ಎಂದು ಯಶ್ ಮತ್ತು ದರ್ಶನ್ ಕುರಿತು ಹೇಳಿದರು. ಹಾಗೇ ಆಯ್ತು. ಸ್ವತಃ ಮುಖ್ಯಮಂತ್ರಿಯೇ ಈ ಇಬ್ಬರು ನಟರ ಬಗ್ಗೆ ಹಗುರವಾಗಿ ಮಾತನಾಡಿದರು. ಇದರಿಂದ ನಮ್ಮ ಮುಖ್ಯಮಂತ್ರಿಗೆ ಬುದ್ದಿ ಭಾಷೆಯ ಕೊರತೆ ಜೊತೆಗೆ ಅಪ್ರಭುದ್ದತೆಯೂ ಅಮರಿಕೊಂಡಿದೆ ಎಂದು ನಾಡಿನ ಜನಕ್ಕೆ ಅರಿವಾಯ್ತು. ಸ್ವತಃ ಸುಮಲತ, ಯಶ್ ಮತ್ತು ದರ್ಶನ್ ಅಭಿಮಾನಿಗಳು ಈ ಜಿಲ್ಲೆಗಷ್ಟೇ ಸೀಮಿತವಾಗಿಲ್ಲ. ಇಡೀ ನಾಡಿನಾದ್ಯಂತ ಇದ್ದಾರೆ. ಅವರ ಅಕ್ರೋಶ ದಳದ ಮೇಲಾಗಬಹುದೆಂದು ಎಚ್ಚರಿಸಿದರು. ಆದರೆ ಇಂತಹ ಎಚ್ಚರಿಕೆ ಮಾತುಗಳಿಗೆ ನಮ್ಮ ಮುಖ್ಯಮಂತ್ರಿ ಬಗ್ಗುವವರಲ್ಲ. ಅವರು ನೇರ ಸುಮಲತಾರನ್ನೇ ಟೀಕಿಸತೊಡಗಿದರು. ಇದಕ್ಕೆ ಜನರೇ ಉತ್ತರ ಕೊಡತೊಡಗಿದರು. ಜಾಲತಾಣಗಳಂತೂ ಅಂಗೈನಲ್ಲೇ ಮನರಂಜನೆ ಒದಗಿಸತೊಡಗಿದವು. ತರಕಾರಿ ಸೊಪ್ಪು ಮಾರುವವರಿಂದ ಹಿಡಿದು ಕಾಲೇಜು ಹುಡುಗರೂ ಕೂಡ ಗೌಡರ ಕುಟುಂಬವನ್ನ ಜಾಲಾಡಿಬಿಟ್ಟವು.
ಜನಸಾಮಾನ್ಯರ ಆಕ್ರೋಶ ಎಲ್ಲಿಯವರೆಗೆ ಮುಟ್ಟಿತೆಂದರೆ ದೇವೇಗೌಡರು ಒಕ್ಕಲಿಗರಲ್ಲ ಕುರುಬರು ಎಂದು ಬಹಳ ಹಿಂದೆ ಸುಬ್ರಮಣ್ಯಸ್ವಾಮಿ ಹೇಳಿದ್ದ ಪ್ರಜಾವಾಣಿಯ ಪೇಪರ್ ಕಟಿಂಗ್ ಜಾಲತಾಣದಲ್ಲಿ ಹರಿದಾಡಿತು. ಮುಗ್ದ ಜನರಿಗೆ ಜಾತಿ ಜಾಢ್ಯವನ್ನ ಅಂಟಿಸಿದ ನಾಯಕರೇ ಜಾತಿ ಅನಿಷ್ಟದ ಆಪಾದನೆಗೆ ಗುರಿಯಾದರು. ಅದಷ್ಟೇ ಅಲ್ಲ, ಮಂಡ್ಯದಲ್ಲಿ ಈ ದೇವೇಗೌಡರು ಒಕ್ಕಲಿಗ ಜನಾಂಗದ ಎಲ್ಲ ಪ್ರತಿಭಾವಂತ ನಾಯಕರನ್ನ ಮುಗಿಸಬೇಕಾದರೆ ಆತ ನಿಜವಾದ ಒಕ್ಕಲಿಗನಲ್ಲ, ಅದು ಈಗ ಸಾಬೀತಾಗಿದೆ ಎಂಬಂತೆ ಮಾತನಾಡಿದರು.
ಕೆಲವು ಬುದ್ದಿಜೀವಿಗಳೂ ಕೂಡ ಸದ್ಯದ ಸ್ಥಿತಿಯಲ್ಲಿ ಮೋದಿಯನ್ನ ಉಗ್ರವಾಗಿ ವಿರೋಧಿಸಿ ಮಹಾಘಟ್‍ಬಂಧನ್‍ಗೆ ಒಂದೆರಡು ಜಾಸ್ತಿ ಸೀಟು ದೊರಕಿಸಿಕೊಡುವ ಸಂದರ್ಭದಲ್ಲಿ ದ್ಯಾವೇಗೌಡರು ಕುಟುಂಬ ರಾಜಕಾರಣ ಮಾಡಿ ಅನ್ಯಾಯವಾಗಿ ಮೂರು ಕ್ಷೇತ್ರಗಳನ್ನ ಬಿಜೆಪಿ ಬಾಯಿಗೆ ಹಾಕುತ್ತಿದ್ದಾರಲ್ಲಾ ಎಂದು ಹಲುಬಿದರು. ಅದರಲ್ಲೂ ಮುದ್ದ ಹನುಮೇಗೌಡರ ಪ್ರಕರಣ, ಹಾಡುಹಗಲೇ ನಡೆದ ಕೂನಿಯಂತ ಪ್ರಕರಣ. ಆದರೆ ದೇವೇಗೌಡರು ಎಂತಹ ಹಠವಾದಿ ಎಂದರೆ ಆ ವಿಷಯದಲ್ಲವರು ಎಂದೂ ಹಿಂದೆ ಸರಿದಿಲ್ಲ. ತುಮಕೂರಿನಲ್ಲಿ ಮುದ್ದ ಹನುಮೇಗೌಡರನ್ನ ಬಲಿ ಪಡೆದು ಮಂಡ್ಯಕ್ಕೆ ಬಂದ ಅವರಿಗೆ, ತಾವೇ ಮತೀಯ ಜಾಲದೊಳಕ್ಕೆ ದೂಡಿದ ಜನ ತಮ್ಮ ವಿರುದ್ಧವೇ ನಿಂತಿರುವುದು ಗೋಚರಿಸಿತು. ನುರಿತ ರಾಜಕಾರಣಿಯಾದ ಅವರು ಈಗ ಮಂಡ್ಯಕ್ಕೆ ಸಿದ್ದರಾಮಯ್ಯನೇ ಬಂದು ಭಾಷಣ ಮಾಡಿದರೂ ಇದು ನಮ್ಮ ಕೈಗೆ ಸಿಗುವುದಿಲ್ಲ ಎಂಬ ಸೋಲಿನ ಮಾತನಾಡಿದರು. ಆದರೆ ಅವರ ಮಗ ಇದನ್ನೊಪ್ಪದೆ ಕೆಆರ್‍ಎಸ್‍ನಲ್ಲಿ ಬೀಡುಬಿಟ್ಟು ಕ್ಷುದ್ರ ತಂತ್ರಗಳನ್ನ ಹೆಣಿಯತೊಡಗಿದ್ದರು.
ಅವುಗಳನ್ನ ಇಲ್ಲಿ ದಾಖಲಿಸುವುದಾದರೆ ಅಂಬರೀಶ್ ಮನೆಯಲ್ಲಿ ಕೆಲಸ ಮಾಡುತ್ತಿದ್ದವರನ್ನ ಹಿಡಿದು ಆಮಿಷವೊಡ್ಡಿ ಸುಮಲತ ಬಗ್ಗೆ ಕೆಟ್ಟದಾಗಿ ಮಾತನಾಡುವಂತೆ ಪುಸಲಾಯಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಕುಮಾರಸ್ವಾಮಿ ಎಂತಹ ವ್ಯಕ್ತಿಯೆಂದರೆ, ಸುಮಲತಾರ ಬಗ್ಗೆ ಕೆಟ್ಟದಾಗಿ ಮಾತನಾಡಿದವರನ್ನು ಕರೆದು ಬಹುಮಾನ ಕೊಡುವಂತಹ ಗಿರಾಕಿ. ಆದ್ದರಿಂದ ಅವರಿಗೆ ಇಂತಹ ಕೆಲಸ ಮಾಡಲು ಯಾವ ಅಳಕೂ ಆಗಲಿಲ್ಲ. ಇನ್ನ ದರ್ಶನ್‍ಗೆ ತೊಂದರೆ ಕೊಡಲು, ಅವರ ಅಭಿಮಾನಿಗಳೆಂದು ಹೇಳಿಕೊಳ್ಳುವ ಒಂದು ಗುಂಪನ್ನ ತಯಾರಿಸಿ ಅವರೆಲ್ಲಾ ದರ್ಶನ್‍ಗೆ ತಿರುಗಿಬಿದ್ದು ನಿಖಿಲ್‍ಗೆ ಓಟು ಮಾಡುತ್ತೇವೆ ಎಂಬ ಹೇಳಿಕೆಯನ್ನ ಮಾಧ್ಯಮದ ಮುಂದೆ ಕೊಡಿಸಿದರು.
ಸುಮಲತಾ ಬಿಜೆಪಿ ಸಹಾಯ ಕೇಳಿ ಆ ಪಾರ್ಟಿ ಅಭ್ಯರ್ಥಿ ನಿಲ್ಲದಂತೆ ಮಾಡಿದ್ದು ಒಂದು ಅಸ್ತ್ರವಾಗಿ ಪರಿಣಮಿಸಿದ್ದರಿಂದ ಮುಸ್ಲಿಮರನ್ನ ಕರೆದು ಅವರೆಲ್ಲಾ ಸ್ವತಂತ್ರ ಅಭ್ಯರ್ಥಿ ಪಾಳಯ ತೊರೆದು ನಿಖಿಲ್‍ಗೆ ಓಟು ಮಾಡುತ್ತೇವೆ ಎಂಬ ಹೇಳಿಕೆ ಕೊಡಿಸಿದರು. ಇನ್ನು ವಿಷ್ಣು ಅಭಿಮಾನಿಗಳಿಗೆ ಮೈಸೂರಲ್ಲೇ ಭವ್ಯವಾದ ವಿಷ್ಣು ಸ್ಮಾರಕ ನಿರ್ಮಿಸಿಕೊಡುವುದಾಗಿ ಅಮಿಷವೊಡ್ಡಿ ಅವರೆಲ್ಲಾ ನಿಖಿಲ್‍ಗೆ ಓಟು ಮಾಡುವುದಾಗಿ ಹೇಳಿಸಿದರು. ಇದಿಷ್ಟೇ ಅಲ್ಲ, ದಿಢೀರನೆ ಹೆಗಲಿಗೆ ಹಸಿರು ಟವಲ್ ಹಾಕಿಕೊಂಡು ಕೆಲವರು ಹಾಗೂ ಹಳದಿ ಕೆಂಪು ಪಟ್ಟಿ ಬಿಗಿದುಕೊಂಡ ಕನ್ನಡ ಚಳುವಳಿಗಾರರೆಲ್ಲಾ ರಾತ್ರೋರಾತ್ರಿ ತಯಾರಾಗಿ ತಾವೆಲ್ಲರೂ ಕುಮಾರಣ್ಣನ ಕೈ ಹಿಡಿಯುವುದಾಗಿ ಘೋಷಿಸಿಕೊಂಡರು. ಇಂತೆಲ್ಲಾ ಛದ್ಮವೇಶದವರು ಕುಮಾರಣ್ಣನ ಅಮಿಷಕ್ಕೊಳಗಾಗಿ ಸಪೋರ್ಟ್‍ಗೆ ಬಂದಿದ್ದು ಸರಿ. ಆದರೆ ಅಂಬರೀಶ್ ಎಂಬ ಅಪೂರ್ವ ರಾಜಕಾರಣಿ ಪರವಾಗಿ ಬಂದ ಯಶ್ ಮತ್ತು ದರ್ಶನ್ ಬಣ್ಣದವರಾಗಿ, ಕಳ್ಳೆತ್ತುಗಳಾಗಿ ಕ್ಷುದ್ರ ವ್ಯಕ್ತಿಗಳಾಗಿ ಕುಮಾರಸ್ವಾಮಿಗೆ ಕಂಡರು. ಇದೇ ಅವರಿಗೆ ಮುಳುವಾಯ್ತು.
ವಾಸ್ತವವಾಗಿ ಕುಮಾರಸ್ವಾಮಿ ತನ್ನ ಮಗನನ್ನು ಅಭ್ಯರ್ಥಿಯನ್ನಾಗಿಸಿ ಇನ್ನ ನೀನುಂಟು ಮಂಡ್ಯ ಜನರುಂಟು ಎಂದು ಉಳಿದ ಹದಿಮೂರು ಕ್ಷೇತ್ರಗಳ ಕಡೆ ಹೋಗಿದ್ದರೆ ಸುಮಲತ ಇನ್ನೂ ಕಷ್ಟಪಡಬೇಕಿತ್ತು. ಆದರೆ ಕುಮಾರಣ್ಣ ಒಬ್ಬ ಪ್ರಬುದ್ಧ ರಾಜಕಾರಣಿಯಲ್ಲ, ಕೀಳು ಅಭಿರುಚಿಯ ವ್ಯಕ್ತಿಯಂತೆ ವರ್ತಿಸತೊಡಗಿದರು. ಸುಮಲತ ತೂಕವಾಗಿ ಮಾತನಾಡುತ್ತ, ಪತ್ರಕರ್ತರಿಗೆಲ್ಲಾ ಸಮಂಜಸವಾದ ಉತ್ತರಕೊಡುತ್ತ ಎದುರಾಳಿಗಳಿಗೆ ಅವರ ಮಾತುಗಳನ್ನೆ ಅವರಿಗೆ ತಿರುಗಿಸಿಬಿಡುತ್ತ ಮಂಡ್ಯದ ಜನರಷ್ಟೇ ಅಲ್ಲ ಈ ನಾಡಿನ ಜನಮನ ಗೆದ್ದಾಗಿತ್ತು. ಒಂದು ಸಣ್ಣ ಕಾಂಟ್ರವರ್ಸಿ ಮಾತನ್ನು ಸುಮಲತಾರಿಂದ ಹೊರಡಿಸಿ ಅದನ್ನೇ ದಿನವೆಲ್ಲಾ ಹೊಸೆಯುವ ಟಿವಿಯವರ ಹುನ್ನಾರ ಫಲಿಸಲಿಲ್ಲ. ಒಂದುರೀತಿ ಸುಮಲತಾರ ಬಳಿಗೋದ ದೂರುಗಳಾಗಲಿ, ಹೇಳಿಕೆಗಳಾಗಲಿ ಮರುಜೀವ ಪಡೆಯದೆ ಸತ್ತು ಹೋಗುತ್ತಿದ್ದವು. ಜೆಡಿಎಸ್‍ನವರ ಬಾಲಿಶ ಹೇಳಿಕೆಗಳು, ಅವುಗಳಿಗೆ ಸುಮಲತಾರ ಪ್ರಬುದ್ಧ ಪ್ರತ್ಯುತ್ತರಗಳ ಪರಿಣಾಮವಾಗಿ ಚುನಾವಣೆ ಇಡೀ ಭಾರತದಲ್ಲಿ ನಡೆಯುತ್ತಿದೆಯೊ ಅಥವಾ ಮಂಡ್ಯದಲ್ಲಿ ಮಾತ್ರ ನಡೆಯುತ್ತಿದೆಯೊ ಎನ್ನುವಂತಾಯ್ತು. ಸುಮ¯ತಾರನ್ನ ಸೋಲಿಸಲೇಬೇಕೆಂಬ ಹಠಕ್ಕೆ ಕುಮಾರಣ್ಣ ಮೂರ್ನಾಲ್ಕು ಸುಮಲತಾರನ್ನ ಹಿಡಿಸಿ ತರಿಸಿದರು. ಅವರನ್ನು ತರಾತುರಿಯಿಂದ ತಯಾರು ಮಾಡಿ ನಾಮಪತ್ರ ಸಲ್ಲಿಸಿ ಒಬ್ಬಳನ್ನ ಸುಮಲತಾರಂತೆಯೇ ತಯಾರು ಮಾಡಲಾಯ್ತು. ಇಲ್ಲಿದ್ದ ಚುನಾವಣಾಧಿಕಾರಿ ಕುಮಾರಣ್ಣನಿಗೆ ಅದೆಷ್ಟು ವಿಧೇಯಳಾಗಿದ್ದಳೆಂದರೆ, ಹೇಳಿದ ಕೆಲಸವನ್ನು ಜಾಸ್ತಿಯಾಗಿಯೇ ಮಾಡುತ್ತಿದ್ದಳು. ಇದರಿಂದ ಸಿಡಿದೆದ್ದ ಸುಮಲತಾ ದೂರು ನೀಡಿದರು. ಅಷ್ಟರಲ್ಲಿ ಅಸಂಖ್ಯಾತ ತಪ್ಪು ಮಾಡಿದ್ದ ಜಿಲ್ಲಾಧಿಕಾರಿ ವರ್ಗಾವಣೆಗೊಂಡರು. ನಾನಿರುವುದು ಚುನಾವಣಾ ನಿಯಮ ಪಾಲಿಸುವುದಕ್ಕೇ ಹೊರತು ನಿಮ್ಮ ಆದೇಶಗಳನ್ನು ಪಾಲಿಸಲಲ್ಲ ಎಂಬ ಒಂದು ಮಾತು ಆ ಜಿಲ್ಲಾಧಿಕಾರಿಯಿಂದ ಬರಲಿಲ್ಲ. ವಾಸ್ತವವಾಗಿ ಕುಮಾರಣ್ಣ ತನ್ನ ಪೂರ್ವನಿರ್ಧಾರದಂತೆ ಹೇಳಿದಂತೆ ಕೇಳುವ ಅಧಿಕಾರಿಗಳನ್ನ ಜಿಲ್ಲೆಗೆ ತುಂಬಿ ಬಹಳ ದಿನಗಳಾಗಿದ್ದವು. ಈಗ ಕುಮಾರಣ್ಣನ ಆಣತಿಯಂತೆ ನಡೆದಿರುವ ಚುನಾವಣಾ ಅಕ್ರಮಗಳನ್ನ ಸಂಗ್ರಹಿಸಿರುವ ಚಿರಂಜೀವಿ ಎಂಬ ಯುವಕನ ಬಳಿಯಿರುವ ದಾಖಲಾತಿಗಳು ನಿಖಿಲ್ ಗೆದ್ದರೂ ಬೆಂಬಿಡದಂತೆ ಕಾಡುತ್ತವೆ. ಆ ದಾಖಲಾತಿ ಪರಿಶೀಲಿಸಿದರೆ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುವ ಯಾವ ಅರ್ಹತೆಯನ್ನೂ ಪಡೆದಿಲ್ಲ ಎಂಬುದು ಸಾಬೀತಾಗುತ್ತದೆ.
ಶಿವರಾಮೇಗೌಡನ ಮಗನ ಹೇಳಿಕೆಯಂತೆ ಪ್ರತಿ ಬೂತಿಗೆ ಐದು ಲಕ್ಷದಂತೆ ಹರಿದು ಬಂದಿದ್ದು ನಿಜ, ಆದರೆ ಕಾರಿನಲ್ಲಿ ಬರುವ ಬದಲು ಭೈಕಿನಲ್ಲಿ ಬಂದವು. ಮುಂದೆ ಬೈಕುಗಳಿಗೆ ಎಕ್ಸಾರ್ಟಾಗಿ ಕಾರು ಹೋಗುತ್ತಿದ್ದು. ಮತ ಮಾರಿಕೊಳ್ಳುವ ಜನ ಖುಷಿಯಿಂದ ಮಾತನಾಡಿಕೊಳ್ಳುತ್ತಿದ್ದರು. ಅವರ ನಿರೀಕ್ಷೆಯಂತೆ ಓಟಿಗೆ ಸಾವಿರ ಎರಡು ಸಾವಿರಕ್ಕೆ ಬದಲು. ಐದು ನೂರಂತೆ ಎಂಬುದು ನಿರಾಶೆ ಹುಟ್ಟಿಸುತ್ತಿತ್ತು. ಹಂಚುವ ಜನ ಕೂಡ ಎಲ್ಲರಿಗೂ ಹಂಚದೆ ನಿಖಿಲನಿಗೆ ಮತಹಾಕುವವರನ್ನ ನಿಖರವಾಗಿ ಗುರುತಿಸಿ ಬಟವಾಡೆ ಮಾಡಿ ಉಳಿದದ್ದನ್ನ ಹಂಚಿಕೊಂಡರು. ಇನ್ನ ಸುಮಲತ ಹಣ ಹಂಚಿಕೆಯಿಂದ ದೂರವುಳಿದರು. ಏಕೆಂದರೆ ಅಂಬರೀಶ್ ಎಂದೂ ಹಣ ಹಂಚಿದವರಲ್ಲ. ಅದರೂ ಸೋತ ಜಿಲ್ಲೆಯ ಕಾಂಗ್ರೆಸ್ ಎಮ್ಮೆಲ್ಲೆಗಳ ತಲಾ ನೂರರಂತೆ ಹಂಚಿದರು. ಈ ಪೈಕಿ ನಾಗಮಂಗಲದ ಚಲುವರಾಯಸ್ವಾಮಿ ಕಡೆಯವರು. ನೂರು ರೂ ಹಂಚಲು ಹೋದಾಗ ಆಟೊಂತರ ಮಾಡಿಕೊಂಡವುನೆ ಇನ್ನೂರನ್ನು ಮುನ್ನೂರನ್ನೂ ಕೊಡಕ್ಕೇನಾಗಿತ್ತು” ಎಂದು ಗೊಣಗಿಕೊಂಡೇ ಈಸಿಕೊಂಡರು. ಜನಗಳು ಯಾವುದೇ ಅಳುಕಿಲ್ಲದೆ ಮತವನ್ನು ಮಾರಿಕೊಳ್ಳುತ್ತಿದ್ದಾರೆ. ಮುಂದೆ ಕೊಳ್ಳುವವರಷ್ಟೇ ಶಾಸಕರಾಗುತ್ತಾರೆ. ಆದರೆ ಮಂಡ್ಯದಲ್ಲಿ ಮಾತ್ರ ನೂರು ರೂ. ನೋಟು ಐನೂರರ ನೋಟನ್ನು ಸೋಲಿಸಿದೆ. ಸ್ವಾಭಿಮಾನದ ಭಿಕ್ಷೆಗಾಗಿ ಸೆರಗೊಡ್ಡಿದ ಸುಮಲತಾ ಮಂಡ್ಯದ ಜನರನ್ನು ಗೆದ್ದಿದ್ದಾರೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ : ಬೆಂಗಳೂರಿನ ಟೌನ್‌ಹಾಲ್ ಬಳಿ ಪ್ರತಿಭಟಿಸಿದವರ ಬಂಧನ, ಬಿಡುಗಡೆ

ಶನಿವಾರ (ಅಕ್ಟೋಬರ್ 17) ಬೆಂಗಳೂರಿನ ಟೌನ್ ಹಾಲ್ ಬಳಿ ಮತದಾರರ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸಿದ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...

ಆಂಧ್ರದಲ್ಲಿ ಮುಂದುವರಿದ ಟಿಡಿಪಿ-ವೈಎಸ್‌ಆರ್‌ಸಿಪಿ ಸಂಘರ್ಷ : ಪರಿಸ್ಥಿತಿ ಹತೋಟಿಗೆ ತರಲು ಗಾಳಿಯಲ್ಲಿ ಗುಂಡು ಹಾರಿಸಿದ ಕಡಪಾ ಪೊಲೀಸರು

ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಶನಿವಾರ (ಅಕ್ಟೋಬರ್ 17) ಆಂಧ್ರ ಪ್ರದೇಶದಲ್ಲಿ ರಾಜಕೀಯ ಸಂಘರ್ಷಗಳು ಮುಂದುವರಿದಿವೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್‌ಸಿಪಿ) ಭದ್ರಕೋಟೆಯಾಗಿರುವ ವೈಎಸ್ಆರ್ ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ...

ಮಧ್ಯಪ್ರದೇಶ: ದೇವಸ್ಥಾನದ ಬಳಿ ಭಕ್ತರ ಮೇಲೆ ಹರಿದ ಲಾರಿ; 14 ಸಾವು, ಹಲವರಿಗೆ ಗಂಭೀರ ಗಾಯ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಶೀತಲಾ ಮಾತಾ ದೇವಸ್ಥಾನದ ಬಳಿ ನವರಾತ್ರಿ ಉತ್ಸವದ ಸಂಭ್ರಮದಲ್ಲಿದ್ದ ಭಕ್ತಾದಿಗಳ ಮೇಲೆ ಅತಿವೇಗವಾಗಿ ಬಂದ ಲಾರಿಯೊಂದು ನುಗ್ಗಿದ ಪರಿಣಾಮ ಕನಿಷ್ಠ 14 ಜನರು ದಾರುಣವಾಗಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ...

ಕೋಲ್ಕತ್ತಾ ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ಕಾಲ್ತುಳಿತ : ಮೃತರ ಸಂಖ್ಯೆ 19ಕ್ಕೆ ಏರಿಕೆ; ಏಳು ಮಂದಿಯ ಬಂಧನ

ಕೋಲ್ಕತ್ತಾದ ಸಮುದಾಯ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಶನಿವಾರ (ಅ.17) ಸಂಜೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಸುಮಾರು 25 ಮಂದಿ ಗಾಯಗೊಂಡಿದ್ದು, ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ...

ಯುಎಪಿಎ ಕಾಯಿದೆಯಡಿ ಆರೋಪ ಹೊರಿಸಿದ ಮಾತ್ರಕ್ಕೆ ವಿದೇಶ ಪ್ರಯಾಣದ ಹಕ್ಕು ಕಸಿಯಲಾಗದು: ನತಾಶಾ ನರ್ವಾಲ್‌ಗೆ ದೆಹಲಿ ಹೈಕೋರ್ಟ್ ಅಭಯ

ಒಬ್ಬ ವ್ಯಕ್ತಿಯ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ (UAPA) ಯಂತಹ ಕಠಿಣ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಒಂದೇ ಕಾರಣಕ್ಕೆ, ಅವರ ವಿದೇಶ ಪ್ರಯಾಣದ ಮೂಲಭೂತ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು...

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ಅಭಿಜಿತ್ ದೀಪ್ಕೆಗೆ ‍‍ಜಾಮೀನು : ಪೊಲೀಸ್ ಕಸ್ಟಡಿಯಿಂದ ಬಿಡುಗಡೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಶನಿವಾರ (ಅಕ್ಟೋಬರ್ 17) ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ದೆಹಲಿಯ ಮಂದಿರ್ ಮಾರ್ಗ್ ಠಾಣೆ ಪೊಲೀಸರ ಕಸ್ಟಡಿಯಿಂದ ಬಿಡುಗಡೆಯಾಗಿದ್ದಾರೆ ಎಂದು...

ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೂ ಇಂಟರ್‌ನೆಟ್ ಬಳಕೆ ಮೂಲಭೂತ ಹಕ್ಕು : ಸುಪ್ರೀಂ ಕೋರ್ಟ್

ಮಹತ್ವದ ತೀರ್ಪಿನಲ್ಲಿ, ಸಂವಿಧಾನದ 21 ಮತ್ತು 19(1)(ಎ) ವಿಧಿಗಳ ಅಡಿಯಲ್ಲಿ ಇಂಟರ್‌ನೆಟ್ ಪಡೆಯುವ ಮತ್ತು ಬಳಸುವ ಹಕ್ಕನ್ನು ಸುಪ್ರೀಂ ಕೋರ್ಟ್ 'ಮೂಲಭೂತ ಹಕ್ಕು' ಎಂದು ಘೋಷಿಸಿದೆ. ಮಕ್ಕಳು ಸೇರಿದಂತೆ ಪ್ರತಿಯೊಬ್ಬ ವ್ಯಕ್ತಿಗೂ ಈ...

ಸಿಜೆಐ ಸೂರ್ಯಕಾಂತ್ ವಿರುದ್ಧದ ಪೋಸ್ಟ್: ಕೇರಳ ಕಾಂಗ್ರೆಸ್ ಅಧ್ಯಕ್ಷರಿಗೆ ಎಸ್‌ಸಿಬಿಎ ಜಂಟಿ ಕಾರ್ಯದರ್ಶಿಯಿಂದ ಲೀಗಲ್ ನೋಟಿಸ್!

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರನ್ನು ಗುರಿಯಾಗಿಸಿ ಕೇರಳ ಕಾಂಗ್ರೆಸ್‌ನ ಅಧಿಕೃತ ಎಕ್ಸ್ (X) ಖಾತೆಯಿಂದ ಮಾಡಲಾಗಿತ್ತು ಎನ್ನಲಾದ ಪೋಸ್ಟ್‌ಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ನ (SCBA) ಜಂಟಿ...

ದೆಹಲಿ | ತಿರಂಗಾ ರ‍್ಯಾಲಿ ವೇಳೆ ಬಂಧಿತರಾಗಿದ್ದ ನೇಹಾ ಬೋರಾ ಬಿಡುಗಡೆ : ಅಭಿಜಿತ್ ದೀಪ್ಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಿರುವ ಪೊಲೀಸರು

ಶುಕ್ರವಾರ (ಅಕ್ಟೋಬರ್ 16) ಬಂಧಿತರಾಗಿದ್ದ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (ಎಐಎಸ್‌ಎ) ಅಧ್ಯಕ್ಷೆ ನೇಹಾ ಬೋರಾ ಅವರನ್ನು ಶನಿವಾರ (ಅ.17) ಮುಂಜಾನೆ ಬಿಡುಗಡೆ ಮಾಡಲಾಗಿದ್ದು, ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್...

ಬೆಂಗಳೂರಿನಲ್ಲಿ ತಿರಂಗ ಯಾತ್ರೆಗೆ ಪೊಲೀಸರ ಷರತ್ತುಬದ್ಧ ಅನುಮತಿ: ಪ್ರತಿಭಟನೆ, ಘೋಷಣೆಗಳಿಗೆ ನಿರ್ಬಂಧ

ಬೆಂಗಳೂರು: ದೆಹಲಿಯಲ್ಲಿ ಸಿಜೆಪಿಯ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆ ವಿಚಾರವಾಗಿ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಬೆಂಗಳೂರಿನಲ್ಲಿ ಅಕ್ಟೋಬರ್ 16ರಂದು ಟೌನ್ ಹಾಲ್‌ನಿಂದ ಬನ್ನಪ್ಪ ಪಾರ್ಕ್‌ನಲ್ಲಿರುವ ಕ್ವಿಟ್ ಇಂಡಿಯಾ ಸ್ಮಾರಕದವರೆಗೆ ಹಮ್ಮಿಕೊಂಡಿರುವ ತಿರಂಗ...