Homeರಾಜಕೀಯಉತ್ತರ ಕನ್ನಡ ರಾಜಕೀಯ ಇತಿಹಾಸದ ರೂಪಾಂತರ

ಉತ್ತರ ಕನ್ನಡ ರಾಜಕೀಯ ಇತಿಹಾಸದ ರೂಪಾಂತರ

- Advertisement -
- Advertisement -

 ಶುದ್ಧೋದನ |

ಎಲ್ಲರೂ ಸೇರಿದರು ಹೊಸ ಪಕ್ಷ ತಂಗಿ
ಬಿಡಲಿಲ್ಲ ನಾನೊಬ್ಬನೇ ಹಳೆಯ ಅಂಗಿ
ನನಗೆ ಬೇಕಾಗಿಲ್ಲ ಹೊಸ ಹಗಲುವೇಷ
ವೇಷಧಾರಿಗಳಿಂದ ಹಾಳಾಯಿತು ದೇಶ
ಇದು ರೈತ ಹೋರಾಟಗಾರ, ಶಿಕ್ಷಣ ತಜ್ಞ, ನಿಜ ಜನನಾಯಕ ದಿನಕರ ದೇಸಾಯಿ 1960ರ ದಶಕದಲ್ಲಿ ಬರೆದ ಚುಟುಕು. ಪಕ್ಷಾಂತರ ಪಿಡುಗಿಂದ ರೋಸಿದ ದೇಸಾಯರು ಇಂಥ ಹಲವು ಚೌಪದಿ ಕಟ್ಟಿದ್ದಾರೆ. ದೇಸಾಯರು ರಚಿಸಿದ ಸಾವಿರಾರು ಚುಟುಕುಗಳಲ್ಲಿ ಮುಕ್ಕಾಲು ಪಾಲು ರಾಜಕೀಯ ವಿಡಂಬನೆ, ವಿಮರ್ಶೆಗೆ ಸಂಬಂಧಿಸಿದ್ದು. 1967ರಲ್ಲಿ ದೇಸಾಯರು ಉತ್ತರ ಕನ್ನಡದಿಂದ ಗೆದ್ದು ಪಾರ್ಲಿಮೆಂಟ್‍ಗೆ ಹೋಗಿದ್ದರು. ಮೊದಲೊಮ್ಮೆ ಸೋತಿದ್ದ ದೇಸಾಯರು 1971ರಲ್ಲಿ ಗೆಲ್ಲಲಾಗಲಿಲ್ಲ; ಆ ನಂತರ ರಾಜಕೀಯದಿಂದ ದೂರಾದರು.
ಸದಾ ಜನಪರವಾಗಿ ತುಡಿಯುತ್ತಿದ್ದ, ದುಡಿಯುತ್ತಿದ್ದ ದೇಸಾಯರಂತೆ ಹಲವು ಸಜ್ಜನರು ಕೆನರಾ ಕ್ಷೇತ್ರದಲ್ಲಿ ಸೋತಿದ್ದಾರೆ. ಈಗ ಹೇಗೆ ಮೋದಿ ಮಂಕುಬೂದಿ ಹಾರಾಡುತ್ತಿದೆಯೋ ಹಾಗೆ ಅಂದು ಇಂದಿರಾ ಭ್ರಮೆ ಜಿಲ್ಲೆಯಲ್ಲಿತ್ತು. ಹಾಗಾಗಿ ಉಡುಪಿಯಿಂದ ವಲಸೆ ಬಂದಿದ್ದ ಜೋಕಿಮ್ ಆಳ್ವನಂಥ ಕೆಲಸಕ್ಕೆ ಬಾರದವರು ಎರಡೆರಡು ಬಾರಿ ಕೆನರಾದ ಎಂಪಿಯಾಗಿದ್ದು ದೌರ್ಭಾಗ್ಯವೇ ಸರಿ. ಜೋಯಿಡಾದ ರಾಮನಗರದ ಬಳಿ ವಾಸವಾಗಿದ್ದ ನಿವೃತ್ತ ಸೈನ್ಯಾಧಿಕಾರಿ, ಪ್ರಸಿದ್ಧ ಸಾಹಿತಿ ಮನೋಹರ್ ಮಾಳಗಾಂವ್ಕರ್ 1962ರಲ್ಲಿ ಸ್ಪರ್ಧಿಸಿದ್ದರು. ಅವರ ಮಹತ್ವ ಮತದಾರರಿಗೆ ಅರ್ಥವಾಗಲಿಲ್ಲ. ಆತ ಸೋತರು. ರಾಜಮಹಾರಾಜರು, ಗಂಗೆಯಲ್ಲಿ ತಿರುವು ತರಹದ ಕಾದಂಬರಿ ಇಂಗ್ಲಿಷ್‍ನಲ್ಲಿ ಬರೆದಿದ್ದ ಮಾಳಗಾಂವ್ಕರ್‍ನಂಥ ಜನರ ನಾಡಿಬಡಿತ ಬಲ್ಲವರ ಬದಲು ದಂಡಪಿಂಡ ಜೋಕಿಮ್‍ರನ್ನು ಜನ ಗೆಲ್ಲಿಸಿದ್ದರು.
1971ರಲ್ಲಿ ಇಂದಿರಾ ಗಾಳಿಯ ಅಲೆಯೇರಿ ಗೆದ್ದಿದ್ದು ಅಂದು ಸಹಕಾರಿ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದ “ನಾಡವ” ಸಮುದಾಯದ ಬಿ.ವಿ.ನಾಯಕ್. ಭೂ ಮಾಲೀಕರ ವಿರುದ್ಧ ರೈತ-ಕೂಲಿಕಾರರ ಸಂಘಟಿಸಿ ಪ್ರಚಂಡ ಹೋರಾಟ ಕಟ್ಟಿದ್ದ ದೇಸಾಯರ ಎದುರು “ಅನಾಮಧೇಯ” ನಾಯಕ್ ಪಾರ್ಲಿಮೆಂಟ್ ಮೆಂಬರ್ ಆಗಿದ್ದರು. ನಾಯಕ್ ಮಹಾಮೇಧಾವಿ. ಅಂತಾರಾಷ್ಟ್ರಿಯ ವಿಷಯಗಳ ಮೇಲೆ ಪ್ರಭುತ್ವದಿಂದ ಮಾತಾಡುತ್ತಿದ್ದ ನಾಯಕ್ ಇಂದಿರಾ ಆಪ್ತ ವಲಯದಲ್ಲಿದ್ದರು. ಅಂದಿನ ಲೋಕಸಭಾ ಅಧ್ಯಕ್ಷ ಲ್ಲೋನ್‍ರ ಮೆಚ್ಚಿಗೆ ಪಡೆದಿದ್ದರು.
ಮಾದನ ಗೇರಿ, ಹಿರೇಗುತ್ತಿ ಬಡ ರೈತರಿಂದ ಹೊಲಗದ್ದೆ ಕಸಿದುಕೊಂಡು ಹೊರ ರಾಜ್ಯದ ಬಂಡವಾಳಶಾಹಿಗಳಿಗೆ ಕಾಸ್ಟಿಕ್ ಸೋಡಾ ತಯಾರಿಕೆಗೆ ಕೊಟ್ಟಾಗ ತಿರುಗಿ ಬಿದ್ದ ನಾಯಕ್ ಹೋರಾಟ ನಡೆಸಿದ್ದರು. ರೈತರಂತೆ ಕಚ್ಚೆ ಕಟ್ಟಿಕೊಂಡು ಪಾರ್ಲಿಮೆಂಟ್‍ಗೆ ಹೋಗಿ ಪ್ರತಿಭಟಿಸಿದ್ದರು. ಇದರಿಂದ ಅಂದಿನ ಸಿಎಂ ದೇವರಾಜ ಅರಸರ ಕೆಂಗಣ್ಣಿಗೆ ತುತ್ತಾದರು. ತುರ್ತುಪರಿಸ್ಥಿತಿ ವಿರೋಧಿಸಿ “ಲಾಂಗ್ ಲಾಂಗ್ ವೇ ಟು ಗೋ” ಎಂಬ ಪುಸ್ತಕ ಬರೆದು ಇಂದಿರೆಯ ಎದುರು ಹಾಕಿಕೊಂಡಿದ್ದರು. ನಂತರ ಕಾಂಗ್ರೆಸ್ ಟಿಕೆಟ್ ನಾಯಕ್‍ಗೆ ಸಿಗಲಿಲ್ಲ.
ತುರ್ತು ಪರಿಸ್ಥಿತಿ ಹೊತ್ತಲ್ಲಿ ಜೈಲು ಪಾಲಾಗಿದ್ದ “ಜಾಣ” ರಾಮಕೃಷ್ಣ ಹೆಗಡೆ 1977ರ ಎಲೆಕ್ಷನ್‍ನಲ್ಲಿ ಸಂಯುಕ್ತ ಜನತಾ ಪಕ್ಷದಿಂದ ಸ್ಪರ್ಧಿಸಿದ್ದರು. ಉತ್ತರ ಕನ್ನಡದಲ್ಲಿ ಹೆಗಡೆಗೆ ಎದುರಾಳಿ ಬಿ.ಪಿ.ಕದಮ್‍ಗಿಂತ ಹೆಚ್ಚು ಮತ ಬಂದಿತ್ತು. ಆದರೆ ಬೆಳಗಾವಿ ಜಿಲ್ಲೆಯ ಖಾನಾಪುರ-ಕಿತ್ತೂರಲ್ಲಿ ಹಿನ್ನಡೆಯಾಗಿ ಬರೀ ಮೂವತ್ತು ಸಾವಿರ ಮತದಿಂದ ಸೋಲಬೇಕಾಯ್ತು. ಆನಂತರ ಕಾಂಗ್ರೆಸ್‍ನ ಜೋಬದ್ರಗೇಡಿ ಎಂದೇ ಹೆಸರುವಾಸಿಯಾಗಿದ್ದ ದೇವರಾಯ ನಾಯ್ಕ ಸತತ ನಾಲ್ಕು ಬಾರಿ ಸಂಸದರಾಗಿದ್ದರು. ಇಂದಿರಾ ಮತ್ತು ಬಂ ಪ್ರಭಾವದಿಂದ ನಾಯ್ಕ್ ಗೆಲ್ಲುತ್ತಿದ್ದರು. ಉತ್ತರ ಕನ್ನಡದ ಹೊನ್ನಾವರ ಮೂಲದ ಜನಪ್ರಿಯ ಸಿನಿನಟ ಅನಂತನಾಗ್ ಜನತಾ ಪಕ್ಷದಿಂದ ಅಖಾಡಕ್ಕಿಳಿದಾಗ ಜಿಲ್ಲೆಯಲ್ಲಿ ಕೈಗಾ-ಸೀಬರ್ಡ್ ಪರಿಸರ ಹೋರಾಟ ಬಿರುಸಾಗಿತ್ತು. ಕೈಗಾ ವಿರೋಧಿ ಚಳವಳಿಯಲ್ಲಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ- ಪಕ್ಕದ ಉಡುಪಿ ಜಿಲ್ಲೆಯ ಶಿವರಾಮಕಾರಂತರನ್ನು ಪರಿಸರವಾದಿಗಳು ಕರೆತಂದು ಕಣಕ್ಕಿಳಿಸಿದ್ದರು.
ನಾಮಪತ್ರ ಕೊಟ್ಟ ಒಂದು ದಿನವೂ ಪ್ರಚಾರ ಮಾಡದೆ ಕಾರಂತರು ವಿದೇಶಕ್ಕೆ ಹೋದರು. ಚುನಾವಣೆ ಮುಗಿದಾಗ ಬಂದರು ಆದರೂ 58 ಸಾವಿರ ಮತ ಬಂದಿತ್ತು. ಕಾರಂತ್, ಅನಂತನಾಗ್ ಇಬ್ಬರೂ ಸೋತರು. ಅದೇ ನಿದ್ದೆಬಡುಕ ದೇನಾ ಗೆದ್ದಿದ್ದರು. ಇವತ್ತು ಜಿಲ್ಲೆಯ ಪೊಲಿಟಿಕಲ್ ಡಾನ್ ಎನಿಸಿರುವ ದೇಶಪಾಂಡೆ ಜನತಾ ಪಕ್ಷ, ಜನತಾದಳದಿಂದ ಎರಡೆರಡು ಬಾರಿ ಮುಗ್ಗರಿಸಿ ಬಿದ್ದವರೇ. ವೈಚಾರಿಕ ಸಾಹಿತಿ ಗೌರೀಶ್ ಕಾಯ್ಕಿಣಿ ಒಮ್ಮೆ ಸ್ಪರ್ಧಿಸಿದ್ದರು. ಅಧಿಕೃತವಾಗಿ ಕಾಯ್ಕಿಣಿ ಸೋತಿದ್ದರು; ಜಿಲ್ಲೆಯ ಮತದಾರರು ಎಡವಿದ್ದರು. ಜೋಕಿಮ್ ಆಳ್ವರ ಸೊಸೆ ಮ್ಯಾಗಿ ನಾಲ್ಕು ಬಾರಿ ಸ್ಪರ್ಧಿಸಿ ಒಮ್ಮೆ ಮಾತ್ರ ಗೆದ್ದಿದ್ದರು. ಆ ನಂತರದ್ದು ಸಂವಿಧಾನ ಬದಲಿಸುವ ಸಂಚಿನ, ದಲಿತರನ್ನು ನಾಯಿಗಳು ಎನ್ನುವ ಅನಂತ್ಮಾಣಿಯ ಹಿಂಧೂತ್ವದ ಅಂಧಯುಗ.
ಅಯೋಗ್ಯ ಮಾಣಿಯ ಗೆಲುವಿನ ಗುಟ್ಟು ಅಡಗಿರುವುದೇ ಮ್ಯಾಗಿ-ದೇಶ್ ಕಾಲೆಳೆದಾಟ ಮತ್ತು ಪುತ್ರ ವ್ಯಾಮೋಹದಲ್ಲಿ. ಪಾರ್ಟಿಯ ಸಬ್ಸಿಡಿ ಸೌಲತ್ತುಗಳೆಲ್ಲ ತಮ್ಮ ಕುಟುಂಬಕ್ಕಷ್ಟೇ ಸೀಮಿತ ಆಗಬೇಕೆಂಬ ಅವರ ಮಸಲತ್ತಿನಿಂದಾಗಿ ಎರಡನೇ ಸಾಲಿನ ನಾಯಕರ್ಯಾರನ್ನೂ ಬೆಳೆಸಲಿಲ್ಲ. ಆದರೆ ಮೋಟಿನ್ಸ್‍ರ ತಿಮ್ಮಪ್ಪ ಹೆಗಡೆ, ರಾಮಕೃಷ್ಣ ಹೆಗಡೆ, ಬಂಗಾರಪ್ಪ ತಮ್ಮ ಶಿಷ್ಯರಿಗೆ ಶಾಸಕ-ಮಂತ್ರಿ ಮಾಡಿ ನಾಯಕತ್ವ ಬೆಳೆಸಿದ್ದರು. ನಿಜಲಿಂಗಪ್ಪನವರು ಸಿಎಂ ಆಗಿದ್ದಾಗ ಜಿಲ್ಲೆಯಿಂದ ವಿಧಾನ ಪರಿಷತ್ತಿಗೆ ಶಿರಸಿಯ ಮೋಟಿನ್ಸರ್ ತಿಮ್ಮಪ್ಪ ಹೆಗಡೆ ನಾಮಕರಣಗೊಂಡಿದ್ದರು.
ಹಿರಿಯ ಮುತ್ಸದ್ದಿಯಾಗಿದ್ದ ತಿಮ್ಮಪ್ಪನವರನ್ನು ಮಂತ್ರಿ ಮಾಡಲು ನಿರ್ಧರಿಸಲಾಗಿತ್ತು. ಈ ಸುದ್ದಿ ಕೇಳಿ ತಿಮ್ಮಪ್ಪ ಖುಷಿ ಪಡಲಿಲ್ಲ, ಬದಲಿಗೆ ದಂಗಾದರು. `ನೇರವಾಗಿ ಜನರಿಂದ ಆಯ್ಕೆಯಾಗಿದ್ದ ಶಿರಸಿ ಶಾಸಕ ರಾಮಕೃಷ್ಣ ಹೆಗಡೆಯೇ ಮಂತ್ರಿಗಿರಿಗೆ ಅರ್ಹ. ನಾನು ನಾಮಕರಣ ಎಮ್ಮೆಲ್ಸಿ, ನನಗ್ಯಾಕೆ ಮಂತ್ರಿಗಿರಿ’ ಎಂದು ನಿರಾಕರಿಸುವ ತಿಮ್ಮಪ್ಪನವರು “ರಾಮಕೃಷ್ಣನಿಗೇ ಮಂತ್ರಿ ಮಾಡಿ” ಎಂದು ಸಿಎಂಗೆ ಹೇಳಿದ್ದರು. ತಿಮ್ಮಪ್ಪನವರ ಶಿಷ್ಯನಾಗಿ ರಾಜಕಾರಣ ಶುರುಮಾಡಿದ್ದ ರಾಕೃ ಹೆಗಡೆ ಮಂತ್ರಿ, ಮುಖ್ಯಮಂತ್ರಿ, ರಾಜ್ಯಸಭಾ ಸದಸ್ಯ, ಕೇಂದ್ರ ಮಂತ್ರಿ ಆಗಿ ಬೆಳೆದದ್ದು ಇತಿಹಾಸ. ದುರಂತವೆಂದರೆ, ಹೆಗಡೆ ರಾಷ್ಟ್ರಮಟ್ಟದ ಇಮೇಜು ಬೆಳೆಸಿಕೊಂಡರೇ ಹೊರತು ಹೆತ್ತ ಜಿಲ್ಲೆಯ ಋಣ ತೀರಿಸಲೇ ಇಲ್ಲ!!
ಹೆಗಡೆಜೀ ಕೊಂಕಣ ದೇಶಪಾಂಡೆಯನ್ನು “ಸೈತಾನ”ನಾಗಿ ಬೆಳೆಸಿದರು. ದೀವರ ಆರ್.ಎಸ್.ನಾಯ್ಕರನ್ನು ರಾಜ್ಯಸಭೆಗೆ ಕಳಿಸಿದರು. ನೆರೆಯ ಶಿವಮೊಗ್ಗದ `ಬಂ’ಗೆ ಉತ್ತರ ಕನ್ನಡ (ಶಿರಸಿ) ಹೆಣ್ಣು ಕೊಟ್ಟ ಮಾವನ ಮನೆ. `ಬಂ’ ಕೆ.ಎಚ್.ಗೌಡ (ಹಾಲಕ್ಕಿ ಒಕ್ಕಲಿಗ), ಆರ್.ಎನ್.ನಾಯ್ಕ್ (ದೀವರು), ದೇವರಾಯ ನಾಯ್ಕ್ (ದೀವರು), ಪ್ರಭಾಕರ್ ರಾಣೆ (ಮರಠ), ವಂಸತ್ ಅಸ್ನೋಟಿಕರ್ (ದೇವಳಿ)ಯಂಥ ತೀರಾ ಹಿಂದುಳಿದ ವರ್ಗದವರನ್ನು ಶಾಸಕ-ಸಂಸದ-ಮಂತ್ರಿ ಮಾಡಿದ್ದರು.
ಅಂದಿನ ಲಿಬರಲ್ ನಾಯಕರಿಗೂ-ಇಂದಿನ ಪುಢಾರಿಗಳಿಗೂ ಇರುವ ವ್ಯತ್ಯಾಸವಿದು! ಇಂದು ಎರಡು-ಮೂರು ದಶಕದಿಂದ ಆಳುತ್ತಿರುವ ದೇಶ್, ಮ್ಯಾಗಿ, ಮಾಣಿಗಳೇ ಉತ್ತರ ಕನ್ನಡಕ್ಕೆ ದೊಡ್ಡ ಶಾಪವಾಗಿದ್ದಾರೆ. ಪ್ರಗತಿ, ಅಭಿವೃದ್ಧಿ, ಜನಹಿತದ ಯೋಜನೆ-ಯೋಚನೆಯ ನಾಯಕರೇ ಜಿಲ್ಲೆಯಲ್ಲಿಲ್ಲ. ನತದೃಷ್ಟ ಉತ್ತರ ಕನ್ನಡ ಜಿಲ್ಲೆಯ ನೋವಿನ ಪ್ರಶ್ನೆಗಳಿಗೆ ಉತ್ತರವೇ ಇಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...