ಮದ್ರಾಸ್ ಮತ್ತು ಮಣಿಪುರದ ಹೈಕೋರ್ಟ್‌ಗಳಲ್ಲಿ ಮೂವರು ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ಮಣಿಪುರದಲ್ಲಿ ಇದೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆ ಓರ್ವರು ಹೈಕೋರ್ಟ್ ಜಡ್ಜ್ ಆಗಿ ನೇಮಕಗೊಂಡಿದ್ದಾರೆ.
ಕೇಂದ್ರ ಸರ್ಕಾರ ನೇಮಿಸಿರುವ ಮೂವರು ಜಡ್ಜ್‌ಗಳಲ್ಲಿ ಓರ್ವರು ಬುಡಕಟ್ಟು ಮಹಿಳೆ ಮತ್ತೋರ್ವರು ಪರಿಶಿಷ್ಟ ಜಾತಿಗೆ ಸೇರಿದವರು ಹಾಗೂ ಮತ್ತೊಬ್ಬರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಕುರಿತ ಅಧಿಸೂಚನೆ ಶೀಘ್ರದಲ್ಲೇ ಹೊರಬೀಳಲಿದೆ.
ಗೊಲ್ಮೀ ಗೈಫುಲ್ ಶಿಲ್ಲು ಕಬೈ ಅವರ ನೇಮಕಾತಿ ಪ್ರಸ್ತಾಪ ಕಳೆದ ಜ.10ರಿಂದ ಬಾಕಿ ಇತ್ತು. ಇತರ ಇಬ್ಬರು ವಕೀಲರಾದ ಎನ್.ಸೆಂಥಿಲ್ ಕುಮಾರ್ ಮತ್ತು ಜಿ.ಅರುಲ್ ಮುರುಗನ್ ಅವರು ಮದ್ರಾಸ್ ಹೈಕೋರ್ಟ್‌ಗೆ ನೇಮಕಗೊಂಡಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಧನಂಜಯ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ಕೊಲಾಜಿಯಂ ಈ ಹೆಸರುಗಳನ್ನು ಶಿಫಾರಸ್ಸು ಮಾಡಿತ್ತು.
ಸೆಂಥಿಲ್‌ಕುಮಾರ್ ಅವರು ಬಾರ್‌ನಲ್ಲಿ 28 ವರ್ಷಗಳಿಗಿಂತ ಅಧಿಕ ಕಾಲ ಸದಸ್ಯತ್ವವನ್ನು ಹೊಂದಿದ್ದಾರೆ. ಮದ್ರಾಸ್ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಕ್ರಿಮಿನಲ್, ಸೇವಾ ಮತ್ತು ಸಿವಿಲ್ ವಲಯಗಳಲ್ಲಿ ಅನುಭವವನ್ನು ಹೊಂದಿದ್ದಾರೆ. ಇದಲ್ಲದೆ ಅವರು ಪರಿಶಿಷ್ಟ ಜಾತಿಗೆ ಸೇರಿದವರು. ಅವರನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕ ಮಾಡುವುದರಿಂದ ಅಂಚಿನಲ್ಲಿರುವ ಸಮುದಾಯಗಳಿಗೆ ಪೀಠದಲ್ಲಿ ಪ್ರಾತಿನಿಧ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.
ಮುರುಗನ್ ಅವರು ಬಾರ್‌ನಲ್ಲಿ 24 ವರ್ಷಗಳ ಕಾಲ ಸದಸ್ಯತ್ವವನ್ನು ಹೊಂದಿದ್ದಾರೆ ಮತ್ತು ಸಿವಿಲ್, ಕ್ರಿಮಿನಲ್ ಮತ್ತು ರಿಟ್ ಪ್ರಕರಣಗಳಲ್ಲಿ ಪರಿಣತಿ ಹೊಂದಿದ್ದಾರೆ ಎಂದು ಕೊಲಿಜಿಯಂ ಗಮನಸೆಳೆದಿದೆ. ಅವರು ಒಬಿಸಿ ವರ್ಗಕ್ಕೆ ಸೇರಿದವರು. ನ್ಯಾಯಾಧೀಶರಾಗಿ ಅವರ ನೇಮಕವು ಉನ್ನತ ನ್ಯಾಯಾಂಗದ ನೇಮಕಾತಿಯಲ್ಲಿ OBC ಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿದಂತಾಗುತ್ತದೆ ಎಂದು ಹೇಳಲಾಗಿದೆ.
ಮಾರ್ಚ್‌ನಲ್ಲಿ ಲೋಕಸಭೆಯಲ್ಲಿ ಸರ್ಕಾರ ಮಂಡಿಸಿದ ಮಾಹಿತಿಯ ಪ್ರಕಾರ, 2018 ರಿಂದ ನೇಮಕಗೊಂಡ 575 ಹೈಕೋರ್ಟ್ ನ್ಯಾಯಾಧೀಶರಲ್ಲಿ 67 ಒಬಿಸಿ ವರ್ಗಕ್ಕೆ, 17 ಎಸ್‌ಸಿ ವರ್ಗಕ್ಕೆ, 9 ಎಸ್‌ಟಿ ವರ್ಗಕ್ಕೆ ಮತ್ತು 18 ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.
ಇದನ್ನು ಓದಿ: ಮಣಿಪುರ: ಮೈತಿ ವಿದ್ಯಾರ್ಥಿಗಳ ಬರ್ಬರ ಹತ್ಯೆ ಪ್ರಕರಣ; ಐದನೇ ಆರೋಪಿಯ ಬಂಧನ


