Homeಅಂಕಣಗಳುಗೌರಿ ಕಾರ್ನರ್: ಜಾಗತಿಕ ತಾಪಮಾನ ಏರಿಕೆಗೆ ಮನುಷ್ಯನ ಪ್ರತಿಕ್ರಿಯೆ; ನಿಧಾನಕ್ಕೆ ಕುದಿಯುತ್ತಿರುವ ಬಿಸಿ ನೀರಿನೊಳಗಿನ ಕಪ್ಪೆಯಂತೆ

ಗೌರಿ ಕಾರ್ನರ್: ಜಾಗತಿಕ ತಾಪಮಾನ ಏರಿಕೆಗೆ ಮನುಷ್ಯನ ಪ್ರತಿಕ್ರಿಯೆ; ನಿಧಾನಕ್ಕೆ ಕುದಿಯುತ್ತಿರುವ ಬಿಸಿ ನೀರಿನೊಳಗಿನ ಕಪ್ಪೆಯಂತೆ

- Advertisement -
- Advertisement -

ಈತ ಒಬ್ಬ ರಾಜಕಾರಣಿ; ತನ್ನ ರಾಜಕೀಯ ಬದುಕಿನ ಅತಿಮುಖ್ಯ ಚುನಾವಣೆಯಲ್ಲಿ ಸೋತು ಮನೆ ಸೇರಿದ ರಾಜಕಾರಣಿ, ಆದರೆ ಈತ ಇತರೆ ವೃತ್ತಿ ರಾಜಕಾರಣಿಗಳಂತೆ ಹಪಹಪಿಸಲಿಲ್ಲ; ಮತ್ತೆ ಸ್ಪರ್ಧಿಸಿ ಅಧಿಕಾರವನ್ನು ಹಿಡಿಯಬೇಕೆಂದು ಕುತಂತ್ರಗಳಲ್ಲಿ ತೊಡಗಲಿಲ್ಲ. ಬದಲಾಗಿ, “ಅಧಿಕಾರ ಇಲ್ಲದಿದ್ದರೇನು? ಜನರ ಬದುಕಿನಲ್ಲಿ ನಾನು ಹೇಗೆ ಬದಲಾವಣೆ ತರಬಲ್ಲೆ?” ಎಂದು ಚಿಂತಿಸಿದ. ಆತನಿಗೆ ಅಪಾರ ಆಸಕ್ತಿ ಇದ್ದ ಪರಿಸರ ರಕ್ಷಣೆ ಕೆಲಸದಲ್ಲಿ ತೊಡಗಿದ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈ ಭೂಮಂಡಲಕ್ಕೆ ಎದುರಾಗಲಿರುವ ಸಮಸ್ಯೆಯ ಬಗ್ಗೆ ಚಿಂತಿಸಿದ, ಓದಿದ, ಮಾಹಿತಿ ಸಂಗ್ರಹಿಸಿದ. ಅವೆಲ್ಲವನ್ನು ಕಣ್ಣಿಗೆ ಕಟ್ಟುವಂತೆ ಹೇಳುವ ಫೋಟೋಗಳನ್ನು ಪಡೆದ, ಚಾರ್ಟ್‌ಗಳನ್ನು ಮಾಡಿದ. ಆನಂತರ ತನ್ನನ್ನು ಆಹ್ವಾನಿಸಿದ ಸಾವಿರಕ್ಕೂ ಹೆಚ್ಚು ಜಾಗಗಳಿಗೆ ಹೋಗಿ ಜನರಿಗೆ ಗೊತ್ತಿಲ್ಲದಂತೆ ಜರುಗುತ್ತಿರುವ ವಾಯುಗುಣದಲ್ಲಿನ ಬದಲಾವಣೆಗಳನ್ನು, ಅದರಿಂದ ಆಗಲಿರುವ ಆಪಾಯಗಳನ್ನು ವಿವರಿಸಲಾರಂಭಿಸಿದ.

ಈಗ, ಈ ಮಾಜಿ ರಾಜಕಾರಣಿ ಮತ್ತು ಹಾಲಿ ಪರಿಸರವಾದಿ ಏರುತ್ತಿರುವ ಜಾಗತಿಕ ತಾಪಮಾನದ ಬಗ್ಗೆ ನೀಡಿದ್ದ ಒಂದು ಭಾಷಣವೇ ಅಮೆರಿಕೆಯಲ್ಲಿ ಜನಪ್ರಿಯ ಸಿನಿಮಾವಾಗಿದೆ, ಅಲ್ಲಿನ ಜನರಲ್ಲಿ ತಳಮಳ ಹುಟ್ಟಿಸಿದೆ. ಹೇಗಾದರೂ ಮಾಡಿ ಈ ಭೂಮಿಯನ್ನು ನಮಗಾಗಿ, ನಮ್ಮ ಮಕ್ಕಳಿಗಾಗಿ, ಮೊಮ್ಮಕ್ಕಳಿಗಾಗಿ ಉಳಿಸಬೇಕೆಂಬ ತಹತಹ, ಕಾಳಜಿ ಹೆಚ್ಚಿಸಿದೆ.

PC: EarthTalk (ಆಲ್ ಗೋರ್)

ಈ ಮನುಷ್ಯನ ಹೆಸರು ಆಲ್ ಗೋರ್. ಬಿಲ್ ಕ್ಲಿಂಟನ್‌ನ ಅಧ್ಯಕ್ಷಾವಧಿಯಲ್ಲಿ ಉಪಾಧ್ಯಕ್ಷನಾಗಿದ್ದವರು. ನಾನು ಇಲ್ಲಿ ಹೇಳಹೊರಟಿದ್ದು ಗೋರ್‌ರವರೇ ’ನಟಿಸಿರುವ’, ಜಾಗತಿಕ ಪರಿಸರದಲ್ಲಿನ ಬದಲಾವಣೆಗಳೇ ’ಕಥಾವಸ್ತ್ತು’ವಾಗಿರುವ, ‘An Inconvenient Truth’ (ಒಂದು ಅನಾನುಕೂಲ ಸತ್ಯ) ಎಂಬ ಸಾಕ್ಷ್ಯ ಚಿತ್ರ ಹೇಗೆ ಹಾಲಿವುಡ್‌ನ ಮಸಾಲಾ ಸಿನಿಮಾಗಳನ್ನೂ ಮೀರಿ ಜನಪ್ರಿಯವಾಗಿದೆ ಎಂಬುದರ ಬಗ್ಗೆ.

ಈ ಚಿತ್ರದ ಬಗ್ಗೆ ನನಗೆ ಗೊತ್ತಾಗಿದ್ದೇ ನನ್ನ 28 ವರ್ಷಗಳ ಸ್ನೇಹಿತ ಚಿದು (ಚಿದಾನಂದ ರಾಜಘಟ್ಟ) ಅದರ ಬಗ್ಗೆ ಹೇಳಿದಾಗ. 2004ರಲ್ಲಿ ಭಾರತವನ್ನು ಅಪ್ಪಳಿಸಿದ ಸುನಾಮಿಗೂ, 2005ರಲ್ಲಿ ಮುಂಬೈಯನ್ನೇ ಮುಳುಗಿಸಿದ ಅತಿವೃಷ್ಟಿಗೂ, ಆನಂತರ ಅಮೆರಿಕವನ್ನೇ ತಲ್ಲಣಿಸಿದ ಸುಂಟರಗಾಳಿ ’ಕ್ಯಾಟ್ರಿನಾ’ಗೂ ಈಗ ಉತ್ತರ ಕರ್ನಾಟಕವನ್ನು ಮಳೆಯಲ್ಲಿ ಮುಳುಗಿಸಿ, ದಕ್ಷಿಣ ಕರ್ನಾಟಕವನ್ನು ಬರಗಾಲಕ್ಕೆ ದೂಡುತ್ತಿರುವ ಜಾಗತಿಕ ತಾಪಮಾನಗಳ ನಡುವೆ ಸಂಬಂಧವಿದೆಯೇ?

ಹಾಗೆಯೇ ಇನ್ನು ಹಲವು ವರ್ಷಗಳಲ್ಲಿ ಜಗತ್ತಿನ ಬಹಳಷ್ಟು ನಗರಗಳನ್ನು (ಉದಾಹರಣೆಗೆ ನ್ಯೂಯಾರ್ಕ್) ಮತ್ತು ದೇಶಗಳನ್ನು (ಉದಾ: ಮಾಲ್ಡೀವ್) ಜಲಾಂತರವಾಗಿಸಲಿರುವ ಪ್ರಾಕೃತಿಕ ವಿಕೋಪಗಳ ನಡುವೆ ಸಂಬಂಧವಿದೆಯೇ?

ಆಲ್ ಗೋರ್ ಪ್ರಕಾರ ಸಂಬಂಧವಿದೆ. ವೈಜ್ಞಾನಿಕ ಸಂಶೋಧನೆಗಳನ್ನೇ ಆಧರಿಸಿ ಅವರು ನೀಡುವ ಮಾಹಿತಿ ಪ್ರಕಾರ ಇನ್ನು ಹಲವೇ, ಹೌದು ಹಲವೇ ವರ್ಷಗಳಲ್ಲಿ ಜಗತ್ತಿನ ಹಲವೆಡೆ ಅತಿಯಾದ ಚಂಡಮಾರುತಗಳು, ಹಲವೆಡೆ ನಿರಂತರವಾಗಿ ಮಳೆ, ಹಲವೆಡೆ ಕೊನೆ ಇಲ್ಲದಂತಹ ಬರಗಾಲ ಕಾಣಿಸಿಕೊಳ್ಳುತ್ತದೆ. ಅವರು ತೋರಿಸುವ ಚಿತ್ರಗಳಲ್ಲಿ ಸಾವಿರಾರು ವರ್ಷಗಳ ಕಾಲ ಸುರಕ್ಷಿತವಾಗಿಯೇ ಇದ್ದ ಹಿಮಪರ್ವತಗಳು ಕಳೆದ ಕೆಲವೇ ಶತಮಾನಗಳಲ್ಲಿ ಕರಗಿ ಹೋಗಿರುವುದನ್ನು ಕಾಣಬಹುದು. ಇದು ಹೀಗೆ ಮುಂದುವರೆದರೆ ಮಂಜುಗಡ್ಡೆಯ ಮೇಲೆ ನಿಂತಿರುವ ಗ್ರೀನ್ ಲ್ಯಾಂಡ್ ಬೇಗನೇ ಕರಗಿ, ಜಗತ್ತಿನ ಹಲವಾರು ದ್ವೀಪಗಳು ಮುಳುಗಿ ಹೋಗಲಿವೆ. ಅಷ್ಟೇ ಅಲ್ಲ, ನದಿಗಳು ಬತ್ತಿ ಹೋಗಿ, ನೂರಾರು ಜೀವಸಂಕುಲಗಳು ಮಾಯವಾಗಿ, ಕಾಡುಗಳು ನಾಶವಾಗಲಿವೆ. ಇದೆಲ್ಲ ಎಷ್ಟು ಘೋರವಾಗಿರುತ್ತವೆ ಎಂಬುದಕ್ಕೆ ಒಂದು ಉದಾಹರಣೆ: 20 ಅಡಿ ಎತ್ತರದ ಸುನಾಮಿ ಅಪ್ಪಳಿಸಿ ಮಾಯವಾಯಿತು. ಆದರೆ ಜಾಗತಿಕ ತಾಪಮಾನ ಏರಿಕೆಯಿಂದ ಇಡೀ ನಗರಗಳು/ ದೇಶಗಳು ಇಪ್ಪತ್ತು ಅಡಿ ನೀರಿನಲ್ಲಿ ಶಾಶ್ವತವಾಗಿ ಜಲಸಮಾಧಿ ಆಗುತ್ತವೆ.

ಇದೆಲ್ಲ ಅತಿಶಯೋಕ್ತಿ ಅಲ್ಲ. ಗೋರ್‌ರವರು ನೀಡುವ ಅಂಕಿಅಂಶಗಳ ಪ್ರಕಾರ ಇತಿಹಾಸದಲ್ಲೇ ಅತಿಹೆಚ್ಚು ’ಸೆಖೆ’ ಕಂಡ ಹತ್ತು ವರ್ಷಗಳು ಕಳೆದ ಹದಿನಾಲ್ಕು ವರ್ಷಗಳಲ್ಲಿ ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ, ಜಗತ್ತಿನ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ದಕ್ಷಿಣ ಅಮೆರಿಕದಲ್ಲಿ ಚಂಡಮಾರುತಗಳು ಬೀಸಿವೆ. ಜಪಾನ್ ಮತ್ತು ಪೆಸಿಫಿಕ್ ಪ್ರದೇಶಗಳು ಅಪರೂಪದ ತೂಫಾನುಗಳನ್ನು ಎದುರಿಸಿವೆ.

ಫ್ಲೋರಿಡಾವನ್ನು ತತ್ತರಿಸುವಂತೆ ಮಾಡಿದ ಚಂಡಮಾರುತ ಕ್ಯಾಟ್ರಿನಾ ಕೊಲ್ಲಿ ಪ್ರದೇಶವನ್ನು ತಲುಪಿ, ಅಲ್ಲಿನ ಸೆಖೆಯನ್ನು ತಡೆಯಲಾರದೆ, ಕ್ಯಾಟಗೆರಿ ಮೂರರಿಂದ ಐದಕ್ಕೆ ಏರಿತು. ಕೊಲ್ಲಿ ಹರಿವು ಮತ್ತು ಜೆಟ್ ಹರಿವಿನಲ್ಲಿ ಬದಲಾವಣೆಗಳಾಗಿರುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ. ಧ್ರುವಗಳ ಹಿಮದಲ್ಲಿ ಇಂಗಾಲ ಡೈ ಆಕ್ಸೈಡ್ ಹೆಚ್ಚಾಗಿರುವುದನ್ನು ಗೋರ್ ತೋರಿಸುತ್ತಾರೆ. ಹಿಂದೆ ಪ್ರಕೃತಿಯಲ್ಲಿ ಈ ಇಂಗಾಲ ಡೈ ಆಕ್ಸೈಡ್ ತಿರುಗುತ್ತಿರುವ ಚಕ್ರದಂತೆ ಏರುತ್ತಾ ಮತ್ತು ಕಡಿಮೆ ಆಗುತ್ತಾ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ವಾಯುವಿನಲ್ಲಿ ಇಂಗಾಲ ಡೈ ಆಕ್ಸೈಡ್‌ನ ಪ್ರಮಾಣ ಎಷ್ಟು ಹೆಚ್ಚಾಗಿದೆ ಎಂದರೆ, ಅದು ಚಕ್ರದಂತೆ ಏರುತ್ತಾ-ಇಳಿಯುತ್ತಾ ಹೋಗುವುದರ ಬದಲಾಗಿ ಕಳೆದ ಐದು ನೂರು ವರ್ಷಗಳಲ್ಲಿ ಬರೀ ಏರುತ್ತಾ ಸಾಗಿದೆ.

ಈ ಇಂಗಾಲ ಡೈ ಆಕ್ಸೈಡ್ ಇವತ್ತಿನ ಏರುತ್ತಿರುವ ಜಾಗತಿಕ ತಾಪಮಾನಕ್ಕೆ ಪ್ರಮುಖ ಕಾರಣವಾಗಿದೆ. ಇದು ಯಾಕೆ ಮತ್ತು ಹೇಗೆ ಆಗುತ್ತಿದೆ? ಇದಕ್ಕೆ ಪ್ರಮುಖ ಕಾರಣ ನಾವೆಲ್ಲರೂ ದಿನನಿತ್ಯ ಬಳಸುತ್ತಿರುವ ಭೂಗರ್ಭದ ಇಂಧನಗಳು, ಲಕ್ಷಾಂತರ ವರ್ಷಗಳಿಂದ ಕಲ್ಲಿದ್ದಲು, ಅನಿಲ, ತೈಲ ರೂಪದಲ್ಲಿ ಸಂಗ್ರಹವಾಗಿದ್ದ ಇಂಧನಗಳನ್ನು ನಾವು ಈಗ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾ ಇಂಗಾಲ ಡೈ ಆಕ್ಸೈಡ್ ಅನ್ನು ಪರಿಸರದಲ್ಲಿ ಬಿಡುತ್ತಿರುವುದೇ ಜಾಗತಿಕ ತಾಪಮಾನ ಏರುವಿಕೆಗೆ ಒಂದು ಪ್ರಮುಖ ಕಾರಣವಾಗಿದೆ. ಹೀಗೆ ಬಿಡುಗಡೆಗೊಂಡ ಇಂಗಾಲ ಡೈ ಆಕ್ಸೈಡ್‌ನಿಂದಾಗಿ ಸೂರ್ಯನ ಕಿರಣಗಳನ್ನು ಪ್ರತಿಫಲಿಸುವ ಹಿಮಪರ್ವತಗಳು ಕರಗುತ್ತಿವೆ ಮಾತ್ರವಲ್ಲ ಸೂರ್ಯನ ಉಷ್ಣವನ್ನು ಹೀರುವ ಸಮುದ್ರಗಳು ಬಿಸಿಯಾಗುತ್ತಿವೆ. ಅಂದರೆ ಒಂದೆಡೆ ಕರಗುತ್ತಿರುವ ಹಿಮಪರ್ವತಗಳು, ಇನ್ನೊಂದೆಡೆ ಬಿಸಿಯಾಗುತ್ತಿರುವ ಸಮುದ್ರಗಳು. ಈ ಭೂಮಿಯ ಬಹಳಷ್ಟು ಭಾಗ ಈ ಪ್ರಕ್ರಿಯೆಯಲ್ಲಿ ಮುಳುಗದೇ ಇರುತ್ತದೆಯೇ?

ಭೂಭಾಗದ ವಿಷಯ ಬದಿಗಿರಲಿ, ಆದರೆ ಕರಗುತ್ತಿರುವ ಹಿಮಪರ್ವತಗಳು ಮತ್ತು ಕಾವೇರುತ್ತಿರುವ ಸಮುದ್ರಗಳ ನಡುವೆ ಮಾನವರು ಹೇಗೆ ತಾವು ವಿನಾಶದ ಆಂಚಿನಲ್ಲಿರುವುದರ ಬಗ್ಗೆ ಅರಿವೇ ಇಲ್ಲದಂತೆ ಬದುಕುತ್ತಿದ್ದಾರೆ? ಇದಕ್ಕೆ ಗೋರ್ “ಬಿಸಿ ನೀರು ಮತ್ತು ಕಪ್ಪೆಯ ಉದಾಹರಣೆಯನ್ನು ನೀಡುತ್ತಾರೆ. ನೀವು ಕುದಿಯುತ್ತಿರುವ ನೀರಿನ ಪಾತ್ರೆಯಲ್ಲಿ ಕಪ್ಪೆಯನ್ನು ಬಿಸಾಡಿದರೆ ಅದು ತಕ್ಷಣವೇ ಹಾರಿ ಹೊರಬರುತ್ತದೆ. ಆದರೆ ಅದೇ ಕಪ್ಪೆಯನ್ನು ತಣ್ಣೀರಿನ ಪಾತ್ರೆಯಲ್ಲಿ ಹಾಕಿ; ಆದು ಸುಮ್ಮನಿರುತ್ತದೆ. ನಿಧಾನವಾಗಿ ಆ ಪಾತ್ರೆಯಲ್ಲಿನ ನೀರನ್ನು ಕಾಯಿಸಲಾರಂಭಿಸಿ ನೋಡಿ, ನೀರು ಕುದಿಯಲಾರಂಭಿಸಿದರೂ ತನಗೆ ಏನಾಗುತ್ತಿದೆ ಎಂದು ಅರಿಯಲಾಗದ ಕಪ್ಪೆ ತಾನು ಬೆಂದುಹೋಗುವವರೆಗೂ ಅಲ್ಲೇ ಇರುತ್ತದೆ!

ಮನುಷ್ಯರು ಕೂಡ ಆ ಕಪ್ಪೆಯಂತೆ ಕಾವೇರುತ್ತಿರುವ ಭೂಮಂಡಲದಲ್ಲಿ ತಮಗರಿವಿಲ್ಲದಂತೆ ಬೆಂದು ವಿನಾಶದ ಅಂಚನ್ನು ತಲುಪುತ್ತಿದ್ದಾರೆ. ಆದರೆ ಗೋರ್ ಪ್ರಕಾರ ಮಾನವ ಕಪ್ಪೆಯಲ್ಲ. ಆತನಲ್ಲಿ ತನ್ನ ಸುತ್ತ ಆಗುತ್ತಿರುವ ಬದಲಾವಣೆಗಳ ಬಗ್ಗೆ ಅರಿವು ಮೂಡಿಸಬಹುದು. ಆ ಮೂಲಕ ಆತ ಕಾವೇರುತ್ತಿರುವ ಭೂಮಿಯನ್ನು ತಣ್ಣಗಾಗಿಸಿ ಪರಿಸರ ನಾಶವನ್ನು ತಡೆದು ಎಲ್ಲವನ್ನು ಸರಿಪಡಿಸಬಹುದು ಎಂದು ಹೇಳುತ್ತಾರೆ.

ಇಡೀ ಮಾನವ ಸಂಕುಲ ಇವತ್ತು ಒಂದು ಟೈಮ್‌ಬಾಂಬ್ ಮೇಲೆ ಕೊತಿದೆ. ಇದನ್ನು ಬ್ರಿಟನ್ನಿನ ವಿಜ್ಞಾನಿ ಸರ್ ಜೇಮ್ಸ್ ಲವ್‌ಲಾಕ್‌ರವರೂ ದೃಢೀಕರಿಸುತ್ತಾರೆ. ಅವರು ಇತ್ತೀಚೆಗೆ ಪ್ರಕಟಿಸಿರುವ ಪುಸ್ತಕದಲ್ಲಿ ಏನು ಹೇಳಿದ್ದಾರಂತೆ ಗೊತ್ತಾ? ಮನುಷ್ಯ ತನ್ನ ಪರಿಸರವನ್ನು ಹೀಗೇ ನಾಶಮಾಡುತ್ತಾ ಸಾಗಿದರೆ, ಇನ್ನೆರಡು ತಲೆಮಾರುಗಳಲ್ಲಿ ಇಡೀ ಭೂಪ್ರದೇಶ ಮುಳುಗಡೆಯಾಗಿ ಮಾನವಸಂಕುಲ ಎಂಬುದು ಉತ್ತರ ಅಥವಾ ದಕ್ಷಿಣ ಧ್ರುವಗಳಲ್ಲಿ ವಾಸಿಸುವ ಹಲವೇ ಹಲವು ಸಂಖ್ಯೆಯಾಗುವ ಹಂತ ತಲುಪುತ್ತದೆ ಎಂದು.

ಒಂದುಕ್ಷಣ ಯೋಚಿಸಿ: ಇಡೀ ಹಿಮಾಲಯ ಪರ್ವತಗಳು ಕರಗಿದರೆ ಏನೇನಾಗುತ್ತದೆಂದು? ನಮ್ಮ ಮಕ್ಕಳನ್ನು ಭೂಕಂಪನಗಳಿಗೆ, ಸುನಾಮಿಗಳಿಗೆ, ಜ್ವಾಲಾಮುಖಿಗಳಿಗೆ, ಚಂಡಮಾರುತಗಳಿಗೆ ತುತ್ತಾಗಿಸುವ ಬಯಕೆ ನಮ್ಮದಾ? ಇಲ್ಲವಾದರೆ ನಾವು ಮಾಡಬೇಕಿರುವುದು ನಮ್ಮ ಜೀವನಶೈಲಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾತ್ರ.

ಹೈಡ್ರೋ ಫ್ಲೋರೋಕಾರ್ಬನ್‌ಗಳನ್ನು ಕಡಿಮೆಗೊಳಿಸಿ ಹೇಗೆ ಓಜೋನ್ ಪದರದಲ್ಲಿನ ರಂಧ್ರಗಳನ್ನು ಕಡಿಮೆಗೊಳಿಸಲಾಗಿತ್ತೋ, ಹಾಗೆಯೇ ಇಂಗಾಲ ಡೈ ಆಕ್ಸೈಡ್‌ಅನ್ನು ಹೊರ ಚೆಲ್ಲುವ ಕ್ರಿಯೆಗಳನ್ನು ಕಡಿತಗೊಳಿಸಿದರೆ ಜಾಗತಿಕ ತಾಪಮಾನ ಏರುವಿಕೆಯನ್ನು ತಡೆಯಬಹುದು, ನಮ್ಮ ಮಕ್ಕಳನ್ನು ರಕ್ಷಿಸಬಹುದು.

ವಿಚಿತ್ರ ನೋಡಿ, ಈ ಭೂಮಂಡಲ ಕೊನೆಗೂ ನಾಶವಾಗುವುದು ನಾಸ್ಟ್ರೋಡ್ಯಾಮಸ್‌ನಂತಹ ಯಾವನೋ ಒಬ್ಬ ಆಸಾಮಿ ಹಾಗಂತ ಹೀಗಂತ ಭವಿಷ್ಯ ನುಡಿದಿದ್ದ ಎಂಬ ಕಾರಣಕ್ಕಲ್ಲ. ಬದಲಾಗಿ, ಮಾನವನೇ ತನ್ನ ಕೈಯಾರೆ ಪರಿಸರಕ್ಕೆ ಮಾಡುತ್ತಿರುವ ಘೋರ ಹಾನಿಗಳಿಂದ.

ನಾವು ಬಿಸಿಯಾಗುತ್ತಿರುವ ನೀರಿನಲ್ಲಿರುವ ಕಪ್ಪೆಯಂತಿರಬಾರದಲ್ಲವೇ?

(ಆಗಸ್ಟ್ 30, 2006ರಂದು ಬರೆದಿದ್ದ ಗೌರಿಯವರ ಕಂಡಹಾಗೆ ಅಂಕಣದ ಸಂಗ್ರಹ ಭಾಗ ಇದು)


ಇದನ್ನೂ ಓದಿ: ಗೌರಿ ಕಾರ್ನರ್: ಆಲ್ ಗೋರ್ ಎಂಬ ವಿಭಿನ್ನ ವ್ಯಕ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...