ಉತ್ತರ ಕನ್ನಡದ ರಾಜಕಾರಣದ ಸೂತ್ರ ಸಮೀಕರಣ ನಿಧಾನಕ್ಕೆ ಬದಲಾಗತೊಡಗಿದೆ. ಕಳೆದ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಹೊನ್ನಾವರದ ಕೆರೆಯಲ್ಲಿ ಬಿದ್ದು ಅಸುನೀಗಿದ ಮೀನುಗಾರರ ಪರೇಶ್ ಮೇಸ್ತನನ್ನು ಸಾಬರೇ ಕೊಂದೆಸೆದಿದ್ದಾರೆಂದು ಹುಯಿಲೆಬ್ಬಿಸಿ ಬಿಜೆಪಿ ಭೂಪರು ಭರ್ಜರಿ ಗೆಲವು ಸಾಧಿಸಿದ್ದರು! ಆದರೆ ಬಿಜೆಪಿ ಬುಡವೀಗ ಮೊದಲಿನಷ್ಟು ಭದ್ರವಾಗುಳಿದಿಲ್ಲ. ಯಲ್ಲಾಪುರದ ಕಾಂಗ್ರೆಸ್ ಶಾಸಕನಾಗಿದ್ದ ಶಿವರಾಮ ಹೆಬ್ಬಾರ್ ಬಿಜೆಪಿ ಪಾರ್ಟಿಗೆ ನೆಗೆದು ಉಸ್ತುವಾರಿ ಮಂತ್ರಿಯಾದ ಬಳಿಕವಂತೂ ಜಿಲ್ಲೆಯ ಕೇಸರಿ ಪಾಳೆಯ ಬಣ್ಣಗೆಡುತ್ತಿದೆ. ಮುಗಿದ ಗ್ರಾಪಂ ಇಲೆಕ್ಷನ್‌ನಲ್ಲಿ ಬಿಜೆಪಿ ಬೀಗುವಂಥ ದಿಗ್ವಿಜಯವೂ ಸಾಧ್ಯವಾಗಿಲ್ಲ!!

ಸತೀಶ್ ಸೈಲ್

ಬಿಜೆಪಿಯ ಎಂಪಿ, ಎಂಎಲ್‌ಎ, ಮಂತ್ರಿಗಳು ಜನರ ವಿಶ್ವಾಸ ಕಳೆದುಕೊಳ್ಳಲು ಎರಡು ಕಾರಣ. ಒಂದು, ಸಿಬಿಐಗೆ ವಹಿಸಲಾಗಿದ್ದರೂ ಪರೇಶ ಮೇಸ್ತನ ಸಾವಿನ ಪ್ರಕರಣದ ತನಿಖೆ ತ್ವರಿತವಾಗಿ, ಪ್ರಾಮಾಣಿಕವಾಗಿ ಮಾಡದಿರುವುದು. ಹಾಗೊಮ್ಮೆ ಸರಿಯಾದ ತನಿಖೆ ನಡೆದರೆ ತಮ್ಮ ಬಂಡವಾಳ ಬಯಲಾಗುತ್ತದೆಂಬ ಆತಂಕ ಕಟ್ಟರ್ ಹಿಂದುತ್ವವಾದಿ ಸೂತ್ರಧಾರರಿಗೆ ಕಾಡುತ್ತಿದೆ ಎಂಬುದು ಜನರಿಗೆ ಖಾತ್ರಿಯಾಗಿಹೋಗಿದೆ. ಮತ್ತೊಂದು ಕಾರಣ, ಕಿಕ್‌ಬ್ಯಾಕ್, ಪರ್ಸೆಂಟೇಜ್ ದಂಧೆಯಿಂದ ಜನಸಾಮಾನ್ಯರು ರೋಸತ್ತು ಹೋಗಿದ್ದಾರೆ. ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರ ವಿರುದ್ಧ ಆಡಳಿತ ವಿರೋಧಿ ಆಕ್ರೋಶ ಎದ್ದಿದೆ! ಹೀಗಾಗಿಯೇ ಸಂಘಟನೆ, ನಾಯಕತ್ವ ಇಲ್ಲದಿದ್ದರೂ ಕಾಂಗ್ರೆಸ್ ಕಳೆದ ಗ್ರಾಪಂ ಇಲೆಕ್ಷನ್‌ನಲ್ಲಿ ಬಿಜೆಪಿಗೆ ಬೆವರಿಳಿಸಿದೆ. ವಲಸಿಗ ಮಂತ್ರಿ ಹೆಬ್ಬಾರ್‌ನಿಂದ ಬಿಜೆಪಿ ಬೆಳವಣಿಗೆಗೆ ಪೈಸೆ ಪ್ರಯೋಜನವೂ ಆಗುತ್ತಿಲ್ಲ. ಬದಲಿಗೆ ಹೆಬ್ಬಾರರ ಯಲ್ಲಾಪುರ, ಮುಂಡಗೋಡ ಕ್ಷೇತ್ರದಲ್ಲೇ ಮೂಲ ಬಿಜೆಪಿ ಬಸವಳಿದು ಹೆಬ್ಬಾರ್ ಬಿಜೆಪಿ ತಲೆಯೆತ್ತಿರುವುದು ಸಂಘಪರಿವಾರದ ಕಣ್ಣು ಕೆಂಪು ಮಾಡಿಸಿದೆ.

ಪ್ರಶಾಂತ ದೇಶಪಾಂಡೆ

ಕೇಸರಿ ಕೋಟೆ ಕಂಗೆಡುತ್ತಿರುವ ಈ ಕಾಲಘಟ್ಟದಲ್ಲಿ ಕಾಂಗ್ರೆಸ್ ಫಿನಿಕ್ಸ್‌ನಂತೆ ಬೂದಿಯಿಂದ ಮೇಲೇಳುತ್ತಿದೆ. ಕಾಂಗ್ರೆಸ್‌ನ ವಯೋವೃದ್ಧ ಮುಖಂಡ ಆರ್.ವಿ ದೇಶಪಾಂಡೆ ತಮ್ಮ ಕುಲಕಂಠೀರವ ಪ್ರಶಾಂತ ದೇಶಪಾಂಡೆಯನ್ನು ಉತ್ತರಾಧಿಕಾರಿಯಾಗಿಸಿ ಜಿಲ್ಲಾ ರಾಜಕಾರಣ ಆಖಾಡಕ್ಕೆ ಬಿಟ್ಟಿದ್ದಾರೆ. ಒಮ್ಮೆ ಲೋಕಸಭಾ ಇಲೆಕ್ಷನ್‌ಗೆ ಸ್ಪರ್ಧಿಸಿ ಸೋತ ನಂತರ ರಾಜಕಾರಣದ ಉಸಾಬರಿಯೇ ಬೇಡವೆಂಬಂತಿದ್ದ ಪ್ರಶಾಂತ್ ಈಗ ಕಾಂಗ್ರೆಸ್ ಕಟ್ಟಲು ಜಿಲ್ಲೆಯಲ್ಲಿ ಓಡಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿರುವ ಹಿಂದುತ್ವದ ಸೋಂಕಿಲ್ಲದ ಹಿರಿ-ಮರಿ ನೇತಾಗಳ ಸೆಳೆಯಲು ಸ್ಕೆಚ್ ಹಾಕಿಕೊಂಡು ಹೊರಟಿದ್ದಾರೆ. ಅತ್ತ ಹಳಿಯಾಳದಲ್ಲಿ ದೊಡ್ಡ ದೇಶಪಾಂಡೆ ಸಾಹೇಬರು ಮಗ್ಗಲು ಮುಳ್ಳಾಗಿರುವ ಶಿಷ್ಯ ಕಂ ಎಂಎಲ್‌ಸಿ ಶ್ರೀಕಾಂತ ಘೋಟನೇಕರ್‌ರನ್ನು ಮಟ್ಟಹಾಕಲು ನೋಡುತ್ತಿದ್ದಾರೆ. ತನ್ನಿಂದಲೇ ಎರಡು ಬಾರಿ ಎಂಎಲ್‌ಸಿಯಾದರೂ, ಈಗ ತನ್ನ ಎಂಎಲ್‌ಎ ಕುರ್ಚಿ ಮೇಲೆ ಕಣ್ಣು ಹಾಕಿರುವ ಘೋಟನೇಕರ್ ಬಿಜೆಪಿ ಮಂತ್ರಿಯೂ ಮಾಜಿ ಕಾಂಗ್ರೆಸಿಗನೂ ಆಗಿರುವ ಶಿವರಾಮ ಹೆಬ್ಬಾರ್‌ರ ಗಳಸ್ಯಕಂಠಸ್ಯ ಸಖನಾಗಿರುವುದರಿಂದ, ಮಾತೃ ಪಕ್ಷಕ್ಕೆ ದ್ರೋಹ ಬಗೆಯುತ್ತಾರೆಂದು ಹೈಕಮಾಂಡ್ ಮಟ್ಟಲ್ಲಿ ದೇಶಪಾಂಡೆ ಬಿಂಬಿಸುತ್ತಿದ್ದಾರೆ! ಘೋಟನೇಕರ್‌ರನ್ನು ಖಳನಾಯಕನಾಗಿ ಬಿಂಬಿಸಲು, ಅವರು ಗ್ರಾಪಂ ಇಲೆಕ್ಷನ್ ಸಂದರ್ಭದಲ್ಲಿ ಹೆಬ್ಬಾರರ ಯಲ್ಲಾಪುರ-ಮುಂಡಗೋಡದ ಕಾಂಗ್ರೆಸ್ ಉಸ್ತುವಾರಿಯಿಂದ ನುಣುಚಿಕೊಂಡಿದ್ದು, ದೇಶಪಾಂಡೆಯವರಿಗೆ ನೆರವಾಗಿದೆ.

ಎಸ್.ಎಲ್ ಘೋಟನೇಕರ್

ಘೋಟನೇಕರ್ ಮತ್ತು ಕಾರವಾರದ ಕಾಂಗ್ರೆಸ್ ಮಾಜಿ ಶಾಸಕ ಸತೀಶ್ ಸೈಲ್ ಬಿಜೆಪಿ ಸೇರಲು ಸರ್ಕಸ್ ಮಾಡುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಸದ್ಯಕ್ಕೆ ಜೆಡಿಎಸ್‌ನಲ್ಲಿರುವ ಕಾರಾವಾರದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಇಲ್ಲಿರುವುದು ಸುಮ್ಮನೆ; ಎಲ್ಲಿರುವುದೋ ನನ್ನ ಮನೆ ಎಂದು ಹಾಡುತ್ತಿದ್ದಾರೆ. ಪಾಪ! ಕಳೆದ ಲೋಕಸಭಾ ಇಲೆಕ್ಷನ್‌ನಲ್ಲಿ ಜೆಡಿಎಸ್ ಕಾಂಗ್ರೆಸ್ ಜಂಟೀ ಅಭ್ಯರ್ಥಿಯಾಗಿದ್ದ ಅಸ್ನೋಟಿಕರ್ ಹಿಂದುತ್ವದ ಬೂಟಾಟಿಕೆ ಮತ್ತು ಸಂಸದ ಅನಂತ ಹೆಗಡೆಯ ಸೋಗಲಾಡಿತನ ಬಯಲುಗೊಳಿಸಿದ್ದರು. ಆದರೂ ಬಿಜೆಪಿಗೆ ನುಸುಳಲು ಮಂತ್ರಿ ಈಶ್ವರಪ್ಪರನ್ನು ಹಿಡಿದು ವಿಫಲ ತಿಪ್ಪರಲಾಗ ಹಾಕಿದ್ದಾರೆ. ಅಸ್ನೋಟಿಕರ್‌ಗೆ ಬಿಜೆಪಿ ಸೇರಲು ಅನಂತ್‌ಹೆಗಡೆ ಮತ್ತು ಕಾಂಗ್ರೆಸ್ ಹೊಕ್ಕಲು ದೇಶಪಾಂಡೆ ಅಡ್ಡಗಾಲು ಹಾಕಿ ಕುಂತಿದ್ದಾರೆ. ಒಂದು ಸುದ್ದಿಯ ಪ್ರಕಾರ ದೇಶಪಾಂಡೆಗೆ ಅಸ್ನೋಟಿಕರ್ ಮೇಲಿನ ಸಿಟ್ಟು ಕೊಂಚ ಕಡಿಮೆ ಆಗಿದೆಯಂತೆ. ಹೀಗಾಗಿ ಅಸ್ನೋಟಿಕರ್ ಒಂದು ಕಡೆಯಿಂದ ಪ್ರಶಾಂತ ದೇಶಪಾಂಡೆ ಮತ್ತೊಂದು ಕಡೆಯಿಂದ ಮಧುಬಂಗಾರಪ್ಪರ ಮೂಲಕ ಕಾಂಗ್ರೆಸ್‌ಗೆ ಎಂಟ್ರಿ ಹೊಡಲು ತಿಣುಕಾಡುತ್ತಿದ್ದಾರೆ.

ಬಳ್ಳಾರಿ ರೆಡ್ಡಿ ರಾಮುಲುಗಳ ಸಂಗಡ ನಿಕಟ ನಂಟಿರುವ ಸತೀಶ್ ಸೈಲ್ ಬಿಜೆಪಿಗೆ ಹೋಗಲು ಬಹಳ ದಿನಗಳಿಂದ ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಸಂಘಪರಿವಾರದ ಸೂತ್ರಧಾರರಿಗೆ ಹಾಲಿ ಶಾಸಕಿ ರೂಪಾಲಿನಾಯ್ಕ್ ಬೇಡವಾಗುತ್ತಿದ್ದಾರೆ. ಹೀಗಾಗಿ ಸೈಲ್ ಬಿಜೆಪಿಗೆ ಹೋದರೆ ಆನಂದ ಅಸ್ನೋಟಿಕರ್‌ಗೆ ಕಾಂಗ್ರೆಸ್ ನೆಗೆತ ಸಲೀಸಾಗುತ್ತದೆ! ಕಾಂಗ್ರೆಸ್ ಸೇರಲು ಸನ್ನದ್ಧವಾಗಿರುವ ಜೆಡಿಎಸ್‌ನ ಕಾರ್ಯಾಧ್ಯಕ್ಷ ಮಧುಬಂಗಾರಪ್ಪ ತನ್ನೊಂದಿಗೆ ಈ ಅಸ್ನೋಟಿಕರ್ ಮತ್ತು ಸಿದ್ದಾಪುರದ ಶಶಿಭೂಷಣ ಹೆಗಡೆಯನ್ನು ಕರೆದೊಯ್ದು ತಾಕತ್ತು ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಸ್ವಜಾತಿ ದೀವರು ಹೆಚ್ಚಿರುವ ಉತ್ತರಕನ್ನಡದಲ್ಲಿ, ಅವರ ತಂದೆ ದಿವಂಗತ ಬಂಗಾರಪ್ಪನವರ ದೊಡ್ಡ ಅಭಿಮಾನಿ ಬಳಗವಿದೆ. ಹಾಗಾಗಿ ಉತ್ತರಕನ್ನಡದಲ್ಲಿ ಮಧು ವರ್ಚಸ್ಸು ಒಂದು ಲೇವಲ್‌ಗೆ ಬೆಳೆದಿದೆ.

ಶಶಿಭೂಷಣ ಹೆಗಡೆ

ಮಧು ಜತೆಯಲ್ಲಿ ಕಾರವಾರದಲ್ಲಿ ಪ್ರಬಲನಾಗಿರುವ ಆನಂದ ಅಸ್ನೋಟಿಕರ್ ಮತ್ತು ಶಿರಸಿಯ ಪ್ರಭಾವಿ ಯುವ ನಾಯಕ ಶಶಿಭೂಷಣ ಹೆಗಡೆ ಜೆಡಿಎಸ್‌ಗೆ ಬೈಹೇಳಿ ಕಾಂಗ್ರೆಸ್ ಪಾಲಾಗುತ್ತಾರೆಂಬ ಸುದ್ದಿ ಜಿಲ್ಲೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಶಶಿಭೂಷಣ ಹೆಗಡೆ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ದಾಯಾದಿ ಮೊಮ್ಮಗ. ಈ ಕಾಣಕ್ಕೆ ಜಿಲ್ಲೆಯ ಬಹುಸಂಖ್ಯಾತ ಹವ್ಯಕ ಬ್ರಾಹ್ಮಣರ ಒಂದು ವರ್ಗ ಶಶಿ ಹಿಂದಿದೆ. ಕ್ರೀಯಾಶೀಲತೆ, ವಿನಯವಂತಿಕೆ ಮತ್ತು ಜಿಲ್ಲೆಯ ಬೇಕು ಬೇಡಗಳ ತಿಳುವಳಿಕೆಯಿರುವ ಶಶಿ ತೀರಾ ಸಣ್ಣ ಅಂತರದಲ್ಲಿ ನಾಲ್ಕು ಬಾರಿ ಸೋತಿರುವುದರಿಂದ ಸಿಂಪಥಿಯೂ ಪಡೆದಿದ್ದಾರೆ. ಅವರು ಎರಡು ಬಾರಿ ಕುಮಟಾದಲ್ಲಿ ಬಿಜೆಪಿಯಿಂದ ಎರಡು ಬಾರಿ ಜೆಡಿಎಸ್‌ನಿಂದ ಶಿರಸಿಯಲ್ಲಿ ಸೋತಿದ್ದಾರೆ. ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಬಂ ಮತ್ತು ಹೆಗಡೆಜೀ ನಾಮ ಮಹಿಮೆ ಇವತ್ತಿಗೂ ಇರುವುದರಿಂದ ಶಶಿ ಕಾಂಗ್ರೆಸ್‌ಗೆ ಮಧು ತಂಡದೊಂದಿಗೆ ಬಂದರೆ ಶಾಸಕನಾಗುವ ಛಾನ್ಸ್ ಜಾಸ್ತಿಯೆಂಬುದು ರಾಜಕೀಯ ಪಂಡಿತರ ತರ್ಕ!!

ವಿಶ್ವೇಶ್ವರ ಹೆಗಡೆ ಕಾಗೇರಿ

ದುರಂತ ನಾಯಕ ಎಂದೇ ಜಿಲ್ಲೆಯಲ್ಲಿ ಚಿರಪರಿಚಿತನಾಗಿರುವವರು ಶಶಿ ಹೆಗಡೆ. 2004ರಲ್ಲಿ ಬಿಜೆಪಿ ಪ್ರಭಾವಿ ಮುಖಂಡರಾಗಿದ್ದ ಮಾಜಿ ಶಾಸಕ ಡಾ ಎಂ.ಪಿ ಕರ್ಕಿಯನ್ನು ಮೂಲೆಗೆ ತಳ್ಳುವ ಉದ್ದೇಶದಿಂದ, ಸಂಘಪರಿವಾರದಲ್ಲಿ ಬೇರು ಬಿಟ್ಟಿದ್ದ ಇಂದಿನ ಸ್ಪೀಕರ್ ಕಾಗೇರಿ ನಾಜೂಕಾಗಿ, ಶಶಿ ಕುಮಟಾದಲ್ಲಿ ಬಿಜೆಪಿ ಕ್ಯಾಂಡಿಡೇಟಾಗುವಂತೆ ನೋಡಿಕೊಂಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಮಂತ್ರಿಗಿರಿ ಡಾ. ಕರ್ಕಿ ಪಾಲಾಗುತ್ತದೆಂಬ ದೂ(ದು)ರಾಲೋಚನೆಯಿಂದ ಕಾಗೇರಿ ಅವರಿಗೆ ಟಿಕೆಟ್ ಸಿಗದಂತೆ ಮಾಡಿದ್ದರು. ಆ ನಂತರ ಸ್ವಜಾತಿ ಹವ್ಯಕ ವಲಯದಲ್ಲಿ ಶಶಿ ತನಗೆ ಪ್ರತಿಸ್ಪರ್ಧಿಯಾಗುತ್ತಾರೆಂದು ಹೆದರಿ ಆತ ಬಿಜೆಪಿಯಿಂದ ಹೊರಹೋಗುವಂಥ ಸಂದಿಗ್ಧ ಸೃಷ್ಟಿಸಿದ್ದೂ ಇದೇ ಕಾಗೇರಿ! ಇದರಿಂದ ಕೆರಳಿದ ಶಶಿ ತವರು ಕ್ಷೇತ್ರ ಶಿರಸಿಗೇ ಬಂದು ಕಾಗೇರಿ ವಿರುದ್ಧವೇ ಸ್ಪರ್ಧಿಸಿದ್ದರು. ಅದೆಂಥ ರೋಚಕ ಜಿದ್ದಾಜಿದ್ದಿಯಾಗಿತ್ತೆಂದರೆ ಕಾಗೇರಿ ಬರೀ ಎರಡೇ ಸಾವಿರ ಮತದಂತರದಿಂದ ಗೆದ್ದೂ ಸೋತಂತಾಗಿತ್ತು! ಎರಡನೇ ಬಾರಿ ಪರೇಶ್ ಮೇಸ್ತನ ಸಾವಿನ ಧರ್ಮೋನ್ಮಾದ ಅಲೆಯಲ್ಲೂ ಶಶಿ ಶಿರಸಿಯಲ್ಲಿ ಕಾಗೇರಿಗೆ ಬೆವರಿಳಿಸಿದ್ದರು.

ಇಂಥ ಶಶಿ ಕಾಂಗ್ರೆಸ್ ಸೇರಿದರೆ ಸ್ವಜಾತಿ ಹವ್ಯಕ ಮತ ಮತ್ತು ಮಧುಬಂಗಾರಪ್ಪರಿಂದ ದೀವರ ಓಟು ಬಂದು ಕಾಗೇರಿ ಮಾಜಿಯಾಗುತ್ತಾರೆಂಬುದು ಸರಳ ಗಣಿತದ ಲೆಕ್ಕಾಚಾರ. ಆರು ಬಾರಿ ಶಾಸಕನಾದರೂ ಕಾಗೇರಿಯಿಂದ ಅಭಿವೃದ್ಧಿಯೇನೂ ಆಗಿಲ್ಲ. ಒಂದಂತೂ ಖರೆ; ಶಶಿ ಕಾಂಗ್ರೆಸ್ ಪ್ರವೇಶವಾದರೆ ಕ್ಷೇತ್ರದಲ್ಲಿ ಹಿಡಿತ ಕಳಕೊಂಡಿರುವ ಕಾಗೇರಿಗೆ ಗಂಡಾಂತರ ಖಂಡಿತ!!


ಇದನ್ನೂ ಓದಿ: ರಾಜಕೀಯದಲ್ಲೇ ಮುಳುಗಿ ಹೋದವರಿಗೆ ರಾಜ್ಯದ ಹಿತ ನೆನಪಿರುತ್ತದೆಯೇ?- ಕುಮಾರಸ್ವಾಮಿ ಆಕ್ರೋಶ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಶುದ್ಧೋಧನ
+ posts

LEAVE A REPLY

Please enter your comment!
Please enter your name here