ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಅಜಿತ್ ಪವಾರ್ ಅವರ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ, ಈ ಹಿಂದೆ ಸರಣಿ ಸುದ್ದಿಗೋಷ್ಠಿಗಳನ್ನು ನಡೆಸಿದ್ದ ಎನ್‌ಸಿಪಿ (ಎಸ್‌ಪಿ) ಶಾಸಕ ರೋಹಿತ್ ಪವಾರ್, ಮಂಗಳವಾರ (ಮಾ.24) ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್‌ಐಆರ್ ಒಂದನ್ನು ದಾಖಲಿಸಿದ್ದಾರೆ.
ಅಜಿತ್ ಪವಾರ್ ಅವರ ಸೋದರ ಸಂಬಂಧಿಯ ಮಗನಾದ ರೋಹಿತ್ ರಾಜೇಂದ್ರ ಪವಾರ್, ಪ್ರಸ್ತುತ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕರ್ಜತ್-ಜಮಖೇಡ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇವರು ಎನ್‌ಸಿಪಿ ಶರದ್ ಪವಾರ್ ಬಣದಲ್ಲಿದ್ದಾರೆ.
ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವನ್ನಪ್ಪಿದ್ದರ ಹಿಂದೆ ‘ದೊಡ್ಡ ಮಟ್ಟದ ಕ್ರಿಮಿನಲ್ ಪಿತೂರಿ’ಯ ಅನುಮಾನವನ್ನು ವ್ಯಕ್ತಪಡಿಸಿ ಅಥವಾ ಆರೋಪ ಮಾಡಿ ರೋಹಿತ್ ಪವಾರ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದನ್ನು ಆಧರಿಸಿ ಪೊಲೀಸರು ಝೀರೋ ಎಫ್‌ಐಆರ್ ದಾಖಲಿಸಿದ್ದಾರೆ.
ಝೀರೋ ಎಫ್‌ಐಆರ್ ಎಂದರೆ ಅಪರಾಧ ಎಲ್ಲಿ ಸಂಭವಿಸಿದೆ ಎಂಬುದನ್ನು ಲೆಕ್ಕಿಸದೆ ದೇಶದ ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸಬಹುದಾದ ದೂರು. ಈ ಎಫ್‌ಐಆರ್ ಅನ್ನು ಆರಂಭದಲ್ಲಿ ಕ್ರಮ ಸಂಖ್ಯೆ 0 ಯೊಂದಿಗೆ ನೋಂದಾಯಿಸಿ, ನಂತರ ತನಿಖೆಗಾಗಿ ಸೂಕ್ತ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ.
ಬೆಂಗಳೂರು ಪೊಲೀಸರು ರೋಹಿತ್ ಪವಾರ್ ದೂರಿನ ಎಫ್‌ಐಆರ್ ಅನ್ನು ಹೆಚ್ಚಿನ ತನಿಖೆಗಾಗಿ ಈಗಾಗಲೇ ಮಹಾರಾಷ್ಟ್ರ ಪೊಲೀಸರಿಗೆ ವರ್ಗಾಯಿಸಿದ್ದಾರೆ ಎಂದು indianexpress.com ಬುಧವಾರ (ಮಾ.25) ವರದಿ ಮಾಡಿದೆ.
ಬೆಂಗಳೂರಿನಲ್ಲಿ ದೂರು ದಾಖಲಿಸಿರುವ ಕುರಿತು ಪ್ರತಿಕ್ರಿಯಿಸಿದ ರೋಹಿತ್ ಪವಾರ್, “ಈ ಹಿಂದೆ ದೂರು ನೀಡಿದ್ದರೂ ಮಹಾರಾಷ್ಟ್ರದಲ್ಲಿ ಪ್ರಕರಣ ದಾಖಲಾಗಿಲ್ಲ. ಆದ್ದರಿಂದ ತಾನು ಬೆಂಗಳೂರು ಪೊಲೀಸರನ್ನು ಸಂಪರ್ಕಿಸಬೇಕಾಯಿತು” ಎಂದು ಹೇಳಿರುವುದಾಗಿ ವರದಿಯಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ನಿವೃತ್ತ ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ನಡೆದ ಅವರ ಮೇಲೆ ನಡೆದ ಹಲ್ಲೆಯ ಯತ್ನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ‘ಝೀರೋ ಎಫ್‌ಐಆರ್’ ದಾಖಲಾದ ಉದಾಹರಣೆಯನ್ನು ರೋಹಿತ್ ಪವಾರ್ ಸ್ಮರಿಸಿದ್ದು, ಮಹಾರಾಷ್ಟ್ರ ಪೊಲೀಸರ ನಿಷ್ಕ್ರಿಯತೆಯಿಂದಾಗಿ ಅಜಿತ್ ಪವಾರ್ ಅವರ ಪ್ರಕರಣದಲ್ಲೂ ಇದೇ ಮಾದರಿಯ ಕಾನೂನು ಪ್ರಕ್ರಿಯೆಯನ್ನು ಅನುಸರಿಸಬೇಕಾಯಿತು ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ರೋಹಿತ್ ಪವಾರ್ ಅವರು ಬೆಂಗಳೂರಿನಲ್ಲಿ ದಾಖಲಿಸಿರುವ ‘ಝೀರೋ ಎಫ್‌ಐಆರ್’ನಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಪ್ರಮುಖ ಸೆಕ್ಷನ್‌ಗಳನ್ನು ಉಲ್ಲೇಖಿಸಲಾಗಿದೆ. ಈ ದೂರಿನಲ್ಲಿ ಪ್ರಮುಖವಾಗಿ ಅಜಿತ್ ಪವಾರ್ ಅವರ ಸಾವಿನ ಹಿಂದೆ ವ್ಯವಸ್ಥಿತ ಕ್ರಿಮಿನಲ್ ಪಿತೂರಿ ನಡೆದಿದೆ ಎಂದು ಆರೋಪಿಸಲಾಗಿದೆ.
ದೂರಿನ ಪ್ರಕಾರ, ವಿಎಸ್‌ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಸಂಸ್ಥೆ ನಿರ್ವಹಿಸುತ್ತಿದ್ದ ವಿಮಾನವು ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ವಿಮಾನದ ನಿರ್ವಹಣಾ ದಾಖಲೆಗಳನ್ನು ತಿದ್ದಲಾಗಿದೆ ಮತ್ತು ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಗಂಭೀರ ಅಂಶಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೈಲಟ್‌ನ ಹಳೆಯ ದಾಖಲೆಗಳು, ಕೊನೆಯ ಕ್ಷಣದಲ್ಲಿ ವಿಮಾನದ ಸಿಬ್ಬಂದಿಯನ್ನು ಬದಲಾಯಿಸಿದ್ದು ಮತ್ತು ಹವಾಮಾನ ವೈಪರೀತ್ಯದ ನಡುವೆಯೂ ವಿಮಾನವನ್ನು ಇಳಿಸಲು ತೆಗೆದುಕೊಂಡ ಸಂಶಯಾಸ್ಪದ ನಿರ್ಧಾರಗಳ ಬಗ್ಗೆಯೂ ರೋಹಿತ್ ಪವಾರ್ ದೂರಿನಲ್ಲಿ ಅನುಮಾಣ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಎಫ್‌ಐಆರ್ ದಾಖಲಿಸಲು ಮಾಡಿದ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ತಾವು ಬೆಂಗಳೂರು ಪೊಲೀಸರನ್ನು ಸಂಪರ್ಕಿಸಬೇಕಾಯಿತು ಎಂದು ರೋಹಿತ್ ಪವಾರ್ ತಿಳಿಸಿದ್ದಾರೆ. ಬೆಂಗಳೂರು ಪೊಲೀಸರು ಈ ದೂರಿನ ಆಧಾರದ ಮೇಲೆ ‘ಝೀರೋ ಎಫ್‌ಐಆರ್’ ದಾಖಲಿಸಿಕೊಂಡು, ನಂತರ ಅದನ್ನು ಮುಂದಿನ ತನಿಖೆಗಾಗಿ ಪುಣೆಯ ಸಂಬಂಧಪಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
ರೋಹಿತ್ ಪವಾರ್ ಅವರ ಪ್ರಕಾರ, ಅವರು ಫೆಬ್ರವರಿ 25ರಂದು ಮೆರೈನ್ ಡ್ರೈವ್ ಪೊಲೀಸ್ ಠಾಣೆ ಮತ್ತು ಫೆಬ್ರವರಿ 26ರಂದು ಬಾರಾಮತಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದರು. ಆದರೆ ಅಲ್ಲಿ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ. ನಂತರ ಪುಣೆ ಸಿಐಡಿಯು ಕೇವಲ ಆಕಸ್ಮಿಕ ಸಾವು ವರದಿ (ಎಡಿಆರ್) ಬಗ್ಗೆ ಮಾತ್ರ ತನಿಖೆ ನಡೆಸಲಾಗುತ್ತಿದೆ ಎಂದು ತಮಗೆ ತಿಳಿಸಿತ್ತು ಎಂದು ಅವರು ಹೇಳಿದ್ದಾರೆ.
ತಮ್ಮ ದೂರಿನಲ್ಲಿ ಪವಾರ್ ಅವರು, ‘ಉಪಮುಖ್ಯಮಂತ್ರಿಯನ್ನು ಮಟ್ಟಹಾಕುವ ಉದ್ದೇಶದಿಂದ ನಡೆದ ದೊಡ್ಡ ಕ್ರಿಮಿನಲ್ ಪಿತೂರಿ’ ಇದಾಗಿದೆ ಎಂದು ಆರೋಪಿಸಿದ್ದಾರೆ. ವಿಮಾನಯಾನ ಸುರಕ್ಷತಾ ನಿಯಮಗಳ ವ್ಯವಸ್ಥಿತ ಉಲ್ಲಂಘನೆ, ದಾಖಲೆಗಳ ತಿದ್ದುಪಡಿ ಮತ್ತು ವಿಎಸ್‌ಆರ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಘೋರ ನಿರ್ಲಕ್ಷ್ಯವನ್ನು ಅವರು ದೂರಿನಲ್ಲಿ ಎತ್ತಿ ತೋರಿಸಿದ್ದಾರೆ.
ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ನಡೆಸಿದ ಸುರಕ್ಷತಾ ತಪಾಸಣೆಯನ್ನು ಉಲ್ಲೇಖಿಸಿದ ಅವರು, ಬೊಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನವು ‘ನಿರ್ಲಕ್ಷ್ಯಕ್ಕೊಳಗಾಗಿತ್ತು, ಹಾರಾಟಕ್ಕೆ ಯೋಗ್ಯವಾಗಿರಲಿಲ್ಲ’ ಮತ್ತು ಅದನ್ನು ನೆಲಕ್ಕಿಳಿಸಲಾಗಿತ್ತು ಎಂದು ಪ್ರತಿಪಾದಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಜೆಟ್ ವಿಮಾನವನ್ನು ಅದರ ಓವರ್‌ಹಾಲ್ ಮಿತಿಯ ಅಪಾಯಕಾರಿ ಹತ್ತಿರದ ಅವಧಿಯಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು ಮತ್ತು ವಿಮಾನದ ಹಾರಾಟದ ದತ್ತಾಂಶಗಳನ್ನು ಮರೆಮಾಚಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ವಿಮಾನದ ಸಿಬ್ಬಂದಿ ಬದಲಾವಣೆಯ ಬಗ್ಗೆಯೂ ಪ್ರಶ್ನೆ ಎತ್ತಿರುವ ಪವಾರ್, ಅದಕ್ಕೆ ನೀಡಲಾದ ವಿವರಣೆಯು ‘ಅಪನಂಬಿಕೆಯಿಂದ ಕೂಡಿದೆ’ ಎಂದು ಕರೆದಿದ್ದಾರೆ. ಮುಖ್ಯ ಪೈಲಟ್ ಸುಮಿತ್ ಕಪೂರ್ ಅವರಿಗೆ ಮದ್ಯಪಾನಕ್ಕೆ ಸಂಬಂಧಿಸಿದ ನಿಯಮ ಉಲ್ಲಂಘನೆಯ ಇತಿಹಾಸವಿದೆ ಎಂದು ಅವರು ಆರೋಪಿಸಿದ್ದಾರೆ. ವಿವರಿಸಲಾಗದ ವಿಳಂಬಗಳು, ರನ್‌ವೇಯ ಹಠಾತ್ ಬದಲಾವಣೆ ಮತ್ತು ಅಂತಿಮ ಕ್ಷಣಗಳಲ್ಲಿ ಪೈಲಟ್‌ನ ಮೌನವನ್ನು ಅವರು ಎತ್ತಿ ತೋರಿಸಿದ್ದು, ಇದು ಮದ್ಯಪಾನದಿಂದ ಉಂಟಾದ ಅಶಕ್ತತೆ ಅಥವಾ ಉದ್ದೇಶಪೂರ್ವಕ ನಿರ್ಲಕ್ಷ್ಯ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಬೊಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನದ ಪ್ರಮಾಣೀಕರಣದಲ್ಲಿ ಕಾರ್ಯವಿಧಾನದ ಲೋಪಗಳಿತ್ತು ಎಂದು ಎಫ್‌ಐಆರ್‌ನಲ್ಲಿ ಪ್ರತಿಪಾದಿಸಲಾಗಿದೆ. ಅಲ್ಲದೆ, ಇದು ನಿಯಂತ್ರಕ ಸಂಸ್ಥೆಗಳ ವೈಫಲ್ಯದ ಸಾಧ್ಯತೆಯನ್ನು ಎತ್ತಿ ತೋರಿಸಿದ್ದು, ಪ್ರಸ್ತುತ ನಡೆಯುತ್ತಿರುವ ತಾಂತ್ರಿಕ ತನಿಖೆಯ ಆಚೆಗೆ ಸಮಗ್ರ ಕ್ರಿಮಿನಲ್ ತನಿಖೆಗೆ ಒತ್ತಾಯಿಸಲಾಗಿದೆ.
ಜನವರಿ 28ರಂದು ಮುಂಬೈನಿಂದ ಹೊರಟಿದ್ದ ವಿಎಸ್‌ಆರ್ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಬೊಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನವು ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಪತನಗೊಂಡಿತ್ತು. ಈ ಭೀಕರ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಸಾವನ್ನಪ್ಪಿದ್ದರು.


