Homeಮುಖಪುಟವಿವಾಹ ಕಾಯ್ದೆ; ಎಲ್‌ಜಿಬಿಟಿಕ್ಯುಐ ಸಮುದಾಯದ ಬೇಡಿಕೆ ಮತ್ತು ಭಾರತ ಸರ್ಕಾರದ ನಿರಾಶಾದಾಯಕ ಪ್ರತಿಕ್ರಿಯೆ

ವಿವಾಹ ಕಾಯ್ದೆ; ಎಲ್‌ಜಿಬಿಟಿಕ್ಯುಐ ಸಮುದಾಯದ ಬೇಡಿಕೆ ಮತ್ತು ಭಾರತ ಸರ್ಕಾರದ ನಿರಾಶಾದಾಯಕ ಪ್ರತಿಕ್ರಿಯೆ

- Advertisement -
- Advertisement -

ಭಾರತದ ವೈವಿಧ್ಯ ಎಲ್‌ಜಿಬಿಟಿಕ್ಯುಐ ಸಮುದಾಯದ (LGBTQI- Lesbian, Gay, Bisexual, Transgender, Queer, Intersex) 18ಕ್ಕೂ ಹೆಚ್ಚು ದೂರುದಾರರು ಈಗಿರುವ ವಿವಾಹ ಕಾಯಿದೆಗಳು ಅಸಾಂವಿಧಾನಿಕ ಎಂಬ ನೆಲೆಯಲ್ಲಿ ಅವುಗಳನ್ನು ಪ್ರಶ್ನಿಸಿದ್ದಾರೆ. ಈ ವಿಷಯವು ಸುಪ್ರೀಂ ಕೋರ್ಟಿನ ಮೂವರು ಸದಸ್ಯರ ಪೀಠದ ಮುಂದೆ ಬಂದಾಗ, ಮುಖ್ಯ ನ್ಯಾಯಾಧೀಶರಾದ ನ್ಯಾ. ಚಂದ್ರಚೂಡ್ ಅವರು- ಇದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪ್ರಾಮುಖ್ಯತೆ ಪಡೆಯುವುದೆಂದು ಗುರುತಿಸಿ, ಅದನ್ನು ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಒಪ್ಪಿಸಿದರು. ಇದರ ವಿಚಾರಣೆಯು ಏಪ್ರಿಲ್ 18ರಂದು ನಡೆಯಲಿದೆ.

ಹದಿನೆಂಟಕ್ಕೂ ಹೆಚ್ಚು ದೂರುದಾರರಲ್ಲಿ ಎಲ್‌ಜಿಬಿಟಿಕ್ಯುಐ ಸಮುದಾಯದ ಹಲವು ಯುವ ಮನಸ್ಸುಗಳಿದ್ದು, ತಾವು ಪ್ರೀತಿಸುವ ವ್ಯಕ್ತಿಯನ್ನು ನೆಲದ ಕಾನೂನಿಗೆ ಅನುಗುಣವಾಗಿ ಮದುವೆಯಾಗಲು ಬಯಸಿದ್ದಾರೆ.

ಈ ಹೃದಯಪೂರ್ವಕ ಇಚ್ಛೆಯನ್ನು ಪುರುಷ ಸಲಿಂಗಿ ಜೋಡಿಯಾಗಿರುವ (ಗೇ) ಸುಪ್ರಿಯೋ ಚಕ್ರಬೊರ್ತಿ ಮತ್ತು ಅಭಯ್ ಡಾಂಗೆ, ಉತ್ಕರ್ಷ್ ಸಕ್ಸೇನಾ ಮತ್ತು ಅನನ್ಯ ಕೋಟಿಯಾ ಅವರಂತೆಯೇ, ಮಹಿಳಾ ಸಲಿಂಗಿ ಜೋಡಿಗಳಾದ (ಲೆಸ್ಬಿಯನ್) ಕವಿತಾ ಅರೋರಾ ಮತ್ತು ಅಂಕಿತಾ ಖನ್ನಾ, ಅದಿತಿ ಆನಂದ್ ಮತ್ತು ಸುಸಾನ್ ಡಯಾಸ್ ಜೋಡಿಗಳು ಸಲ್ಲಿಸಿದ ಅರ್ಜಿಗಳಲ್ಲಿ ಕಾಣಬಹುದು. ಅರ್ಜಿದಾರರಲ್ಲಿ ಪರಿಚಿತ ಟ್ರಾನ್ಸ್‌ಜೆಂಡರ್ ಕಾರ್ಯಕರ್ತರಾದ ಅಕ್ಕೈ ಪದ್ಮಶಾಲಿ, ಜೈನಾಬ್ ಪಟೇಲ್, ಉಮಾ ಉಮೇಶ್ ಮತ್ತು ವೈಜಯಂತಿ ವಸಂತ ಮೋಗ್ಲಿ; ಗೇ ಕಾರ್ಯಕರ್ತರಾದ ನಿತಿನ್ ಕರಾನಿ ಮತ್ತು ಹರೀಶ್ ಐಯ್ಯರ್; ಕ್ವೀರ್ (ಸ್ಥಾಪಿತ ಲಿಂಗತ್ವದ ಅಥವಾ ಲೈಂಗಿಕತ್ವದ ಗುರುತುಗಳನ್ನು ಒಪ್ಪಿಕೊಳ್ಳದವರು) ಮತ್ತು ಲೆಸ್ಬಿಯನ್ ಕಾರ್ಯಕರ್ತರಾದ ರಿತುಪರ್ಣ ಬೊರಾ, ಚಯನಿಕಾ ಶಾ, ಮಾಯಾ ಶರ್ಮಾ ಮತ್ತು ಮೀನಾಕ್ಷಿ ಸನ್ಯಾಲ್, ಅಂತರ್‌ಲಿಂಗತ್ವ (Intersex, ಗಂಡು ಮತ್ತು ಹೆಣ್ಣಿನ ಜೈವಿಕ ಗುಣಗಳನ್ನು ಹೊಂದಿರುವ ವ್ಯಕ್ತಿ) ಕಾರ್ಯಕರ್ತರಾದ ಗೋಪಿ ಶಂಕರ್ ಎಂ. ಸೇರಿದ್ದಾರೆ.

ಅರ್ಜಿದಾರರು ದೇಶದ ಉದ್ದಗಲದಿಂದ ಬಂದಿದ್ದು, ಎಲ್‌ಜಿಬಿಟಿಕ್ಯುಐ ಸಮುದಾಯದ ಎಲ್ಲಾ ವರ್ಗಗಳಿಗೆ ಸೇರಿರುವುದು, ಅವರ ಅರ್ಜಿಗಳು ಭಾರತದ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಸಾಂಸ್ಥಿಕ ವಿವಾಹವು ಒದಗಿಸುವ ಹಲವಾರು ಲಾಭಗಳಿಂದ ತಮ್ಮನ್ನು ಹೊರತುಪಡಿಸುವ ಹಲವಾರು ಕಾಯಿದೆಗಳನ್ನು ಅರ್ಜಿದಾರರು ಪ್ರಶ್ನಿಸುತ್ತಿದ್ದಾರೆ. ಹನ್ನೊಂದು ಅರ್ಜಿದಾರರು ವಿಶೇಷ ವಿವಾಹ ಕಾಯಿದೆ, ಇಬ್ಬರು ಹಿಂದೂ ವಿವಾಹ ಕಾಯಿದೆ, ಮೂವರು ವಿದೇಶಿ ವಿವಾಹ ಕಾಯಿದೆ ಮತ್ತು ಒಬ್ಬರು ಎಲ್ಲಾ ವಿವಾಹ ಕಾಯಿದೆಗಳನ್ನು ಪ್ರಶ್ನಿಸುತ್ತಿದ್ದಾರೆ. ಮತ್ತೊಬ್ಬರು ಒಂದೇ ಲಿಂಗದ ಜೋಡಿಯನ್ನು ಸಾಗರೋತ್ತರ ಭಾರತೀಯ ನಾಗರಿಕ (ಓಸಿಐ) ಸ್ಥಾನಮಾನಕ್ಕೆ ಅರ್ಜಿ ಹಾಕುವುದರಿಂದ ಹೊರತುಪಡಿಸಿರುವ ಪೌರತ್ವ ಕಾಯಿದೆಯ ಕೇಂದ್ರ ಸರಕಾರದ ವ್ಯಾಖ್ಯಾನವನ್ನು ಪ್ರಶ್ನಿಸಿದ್ದಾರೆ.

ಈ ಎಲ್ಲಾ ಪ್ರಶ್ನೆಗಳ ತಳಪಾಯವಾಗಿರುವುದು ಸಮಾನತೆಯ ತತ್ವಗಳು. ಮದುವೆಯು ನೀಡುವ ಸೌಲಭ್ಯಗಳಿಂದ ಎಲ್‌ಜಿಬಿಟಿಕ್ಯುಐ ಸಮುದಾಯದ ವ್ಯಕ್ತಿಗಳನ್ನು ಹೊರತುಪಡಿಸಲು ಸಾಂವಿಧಾನಿಕವಾಗಿ ಸ್ವೀಕಾರಾರ್ಹವಾದ ಯಾವುದೇ ಆಧಾರಗಳಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಜಂಟಿ ಬ್ಯಾಂಕ್ ಖಾತೆಗಳನ್ನು ತೆರಯುವ, ಜಂಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಹಕ್ಕುಗಳ ಸಹಿತ, ತಮ್ಮ ಲೈಂಗಿಕ ಆಸಕ್ತಿ, ಲಿಂಗತ್ವ ಗುರುತು ಅಥವಾ ಅಸ್ಮಿತೆ ಇತ್ಯಾದಿಗಳ ಆಧಾರದಲ್ಲಿ ತಮ್ಮನ್ನು ಹೊರತುಪಡಿಸಲಾಗಿರುವ ಸೌಲಭ್ಯಗಳ ಸರಣಿಯನ್ನೇ ಅರ್ಜಿದಾರರು ಪಟ್ಟಿ ಮಾಡಿದ್ದಾರೆ. ಇವುಗಳಲ್ಲಿ ವಿಮಾ ಕಾಯಿದೆಯ ಪ್ರಕಾರ ತನ್ನ ಸಂಗಾತಿಯನ್ನು ಫಲಾನುಭವಿಯಾಗಿ ನಾಮನಿರ್ದೇಶನ ಮಾಡುವ ಅಧಿಕಾರ, ತಾವು ಪ್ರೀತಿಸುವ ವ್ಯಕ್ತಿಯ ಪರವಾಗಿ- ಆ ವ್ಯಕ್ತಿ ಸ್ವಂತ ನಿರ್ಧಾರ ಮಾಡಲಾಗದ ಸ್ಥಿತಿಯಲ್ಲಿ ಇದ್ದಾಗ- ವೈದ್ಯಕೀಯ ನಿರ್ಧಾರಗಳನ್ನು ಮಾಡುವ ಅರ್ಜಿದಾರರ ಹಕ್ಕುಗಳು ಕೂಡಾ ಸೇರಿವೆ. ಮದುವೆಯಾದ ದಂಪತಿಗಳಿಗೆ ಸಿಗುವ ಸೌಲಭ್ಯಗಳಿಂದ ಎಲ್‌ಜಿಬಿಟಿಕ್ಯುಐ ಸಮುದಾಯದ ವ್ಯಕ್ತಿಗಳನ್ನು ಹೊರತುಪಡಿಸಿದರೆ ಕಾನೂನುಪ್ರಕಾರ ಸಮಾನವಾಗಿರುವುದು ಸಾಧ್ಯವಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.

ಮದುವೆಯ ಪ್ರಶ್ನೆಯು ತಮ್ಮ ಸ್ವಯಂ ಅಭಿವ್ಯಕ್ತಿಯ ಹಕ್ಕಿಗೆ ತಳಕುಹಾಕಿಕೊಂಡಿದೆ ಎಂದು ಕೂಡಾ ಅರ್ಜಿದಾರರು ಒತ್ತಿಹೇಳಿದ್ದಾರೆ. ಮದುವೆ ಎಂಬುದು ಪ್ರೀತಿಸುವ ಹಕ್ಕನ್ನು ಸಮಾಜವು ಗುರುತಿಸುವ ಒಂದು ವಿಧಾನವಾಗಿದೆ ಮತ್ತು ನ್ಯಾ. ಲೀಲಾ ಸೇಠ್ ಅವರ ಸ್ಫೂರ್ತಿದಾಯಕ ಶಬ್ದಗಳಲ್ಲಿ ಹೇಳುವುದಾದರೆ “ಜೀವನವನ್ನು ಅರ್ಥಪೂರ್ಣಗೊಳಿಸುವುದೇ ಪ್ರೀತಿ”. ಜೀವನದ ಸ್ಮರಣೀಯ ಮತ್ತು ಅರ್ಥಪೂರ್ಣ ನಿರ್ಧಾರಗಳಲ್ಲೊಂದನ್ನು ತೆಗೆದುಕೊಳ್ಳುವುದರಿಂದ ತಮ್ಮನ್ನು ಹೊರಗಿಡುವುದು, ಮನುಷ್ಯರಾಗಿರುವುದೆಂದರೇನು ಎಂಬ ಒಂದು ಮೂಲಭೂತ ಆಯಾಮಕ್ಕೇ ಹೊಡೆತ ನೀಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಇದನ್ನೂ ಓದಿ: ಸಲಿಂಗ ವಿವಾಹ ಮಾನ್ಯತೆಗಾಗಿ ಸುಪ್ರೀಂಕೋರ್ಟ್‌ಗೆ ಪತ್ರ; ಕೇಂದ್ರದ ನಿಲುವಿಗೆ ವಿರೋಧ

ಈ ರೀತಿ ಮದುವೆ ಆಗುವುದಕ್ಕೆ ನಿಷೇಧವಿರುವುದರಿಂದ ಅಪಾಯಕ್ಕೆ ಒಳಗಾಗಿರುವುದೆಂದರೆ ಸಾಂವಿಧಾನಿಕವಾಗಿ ರಕ್ಷಿತವಾದ ಮಾನವೀಯ ಘನತೆಯ ಮೌಲ್ಯ ಎಂದೂ ಅರ್ಜಿದಾರರು ವಾದಿಸಿದ್ದಾರೆ. ಮದುವೆಯು ಒಂದು ಸಂಬಂಧಕ್ಕೆ ಸಾಮಾಜಿಕ ಅಂಗೀಕಾರವನ್ನು ಒದಗಿಸುತ್ತದೆ ಮತ್ತು ಎಲ್‌ಜಿಬಿಟಿಕ್ಯುಐ ಸಂಬಂಧಗಳನ್ನು ಬೇರೆಬೇರೆ ಲಿಂಗ ಸಂಬಂಧದ ಮದುವೆಗಿಂತ ಕೀಳು ಎಂಬ ಕಳಂಕವನ್ನು ತೊಡೆಯಲು ಸಾಧ್ಯವಾಗುತ್ತದೆ ಎಂದೂ ಅರ್ಜಿದಾರರು ವಾದಿಸಿದ್ದಾರೆ.

ಅರ್ಜಿದಾರರ ವಾದಗಳು ಸುಪ್ರೀಂ ಕೋರ್ಟಿನಲ್ಲಿ ಮೂಡಿಬರುತ್ತಿರುವ ನ್ಯಾಯಶಾಸ್ತ್ರೀಯ ವಿವೇಚನೆಯಿಂದ ಬಲವನ್ನು ಪಡೆಯುತ್ತವೆ. ಪುಟ್ಟಸ್ವಾಮಿ ವರ್ಸಸ್ ಭಾರತ ಸರಕಾರ ಪ್ರಕರಣದಲ್ಲಿ ತೀರ್ಪು ನೀಡುತ್ತಾ ನ್ಯಾಯಾಲಯವು, “ವಿವಾಹದ ಪಾವಿತ್ರ್ಯತೆ, ಸಂತಾನಾಭಿವೃದ್ಧಿಯ ಸ್ವಾತಂತ್ರ್ಯ, ಕೌಟುಂಬಿಕ ಜೀವನದ ಅಯ್ಕೆ ಮತ್ತು ಜೀವನದ ಘನತೆಯು ’ಪ್ರತಿ ವ್ಯಕ್ತಿಯ’ ಕಾಳಜಿಗಳಾಗಿವೆ… ಸಂತೋಷದ ಅನ್ವೇಷಣೆಯು ಸ್ವಾಯತ್ತತೆ ಮತ್ತು ಘನತೆಯ ಆಧಾರದ ಮೇಲೆ ನಿಂತಿದೆ. ಇವೆರಡೂ ಖಾಸಗಿತನದ ಅತ್ಯಗತ್ಯ ಗುಣಗಳಾಗಿದ್ದು, ವ್ಯಕ್ತಿಗಳ ಹುಟ್ಟಿನ ಗುರುತುಗಳ ನಡುವೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ” ಎಂದು ಹೇಳಿದೆ.

“ನಿರಪರಾಧಿಕರಣಗೊಳಿಸಲು (decriminalization) ಕಾರಣವಾಗಿರುವ ಸಾಂವಿಧಾನಿಕ ತತ್ವಗಳು- ಸಲಿಂಗಿ ಸಂಬಂಧಗಳು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸಾರ್ಥಕತೆಯನ್ನು ಕಂಡುಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಲು- ನಿರಂತರವಾಗಿ ಹಕ್ಕುಗಳ ಕುರಿತ ಸಂವಾದದಲ್ಲಿ ತೊಡಗಬೇಕು. ಸಲಿಂಗಿ ಸಂಬಂಧಗಳ ಕುರಿತು ಕಾನೂನು ತಾರತಮ್ಯ ಮಾಡುವಂತಿಲ್ಲ. ಮಾತ್ರವಲ್ಲ, ಅದು ಸಮಾನ ರಕ್ಷಣೆಯನ್ನು ಸಾಧಿಸಲು ಧನಾತ್ಮಕ ಹೆಜ್ಜೆಗಳನ್ನು ಕೂಡಾ ಇಡಬೇಕು” ಎಂದು ’ನವ್‌ತೇಜ್ ಜೋಹರ್ ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ನ್ಯಾ. ಚಂದ್ರಚೂಡ್ ಹೇಳಿದ್ದಾರೆ.

’ನಲ್ಸಾ (NALSA) ವರ್ಸಸ್ ಭಾರತ ಸರಕಾರ’ ಪ್ರಕರಣದಲ್ಲಿ ನ್ಯಾಯಾಲಯವು, “ಪರಿಚ್ಛೇದ 14- ’ವ್ಯಕ್ತಿ’ (person) ಎಂಬ ಪದವನ್ನು ಸೀಮಿತಗೊಳಿಸುವುದಿಲ್ಲ. ಅದರ ಅನ್ವಯ ಗಂಡು ಅಥವಾ ಹೆಣ್ಣಿಗೆ ಮಾತ್ರವೇ ಅಲ್ಲ. ಗಂಡು/ಹೆಣ್ಣು ಎರಡೂ ಅಲ್ಲದ ಹಿಜಿಡಾಗಳು/ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು (ನ್ಯಾಯಾಲಯ ಬಳಸಿದ ಪದಗಳು: Hijras/transgender persons) ಕೂಡಾ- ’ವ್ಯಕ್ತಿ’ ಎಂಬುದರ ಪದವ್ಯಾಖ್ಯೆಯ ಒಳಗೆ ಬರುತ್ತಾರೆ. ಆದುದರಿಂದ ಉದ್ಯೋಗ, ಆರೋಗ್ಯ ರಕ್ಷಣೆ, ಶಿಕ್ಷಣ ಮಾತ್ರವಲ್ಲದೇ, ಸಮಾನ ಸಾಮಾಜಿಕ ಮತ್ತು ಪೌರತ್ವದ ಹಕ್ಕುಗಳೂ ಸೇರಿದಂತೆ, ಸರಕಾರದ ಚಟುವಟಿಕೆಯ ಎಲ್ಲಾ ಕ್ಷೇತ್ರಗಳಲ್ಲೂ- ಈ ದೇಶದ ಯಾವುದೇ ಇತರ ನಾಗರಿಕರು ಅನುಭವಿಸುವ ಕಾನೂನು ರಕ್ಷಣೆಗೆ ಅವರು ಅರ್ಹರಾಗಿದ್ದಾರೆ” ಎಂದು ಹೇಳಿದೆ.

ಸಂವಿಧಾನದ ತತ್ವಗಳನ್ನು ಎಲ್‌ಜಿಬಿಟಿಕ್ಯುಐ ಸಮುದಾಯದ ವ್ಯಕ್ತಿಗಳ ಜೀವನ ಮತ್ತು ಪ್ರೀತಿಗಳಿಗೆ ಅನ್ವಯಿಸುವುದಕ್ಕೆ ಈಗ ಆರಂಭವಾಗಿದ್ದು, ಆ ಮೂಲಕ ಸಂವಿಧಾನದ ಸಮಾನತೆಯ ಭರವಸೆಗಳಿಗೆ ಜೀವ ತುಂಬಲಾಗುತ್ತಿದೆ.

ಸಂವಿಧಾನದ ಪಠ್ಯ ಮತ್ತು ಅದರ ನ್ಯಾಯಾಲಯದ ವ್ಯಾಖ್ಯಾನಗಳಲ್ಲಿ ಕೂಡಾ ಬೇರೂರಿರುವ ಈ ಗಾಢವಾದ ವಿಮೋಚನಕಾರಿ ಬೆಳವಣಿಗೆಗಳಿಗೆ ಭಾರತ ಸರಕಾರದ ಪ್ರತಿಕ್ರಿಯೆಯು ನಿರಾಶಾದಾಯಕವಾಗಿದೆ. ’ದೇಶದ ಸಾಮೂಹಿಕ ವಿವೇಕವನ್ನು ಪ್ರತಿಫಲಿಸುವ ಶಾಸಕಾಂಗವು’, ’ಸಾಂಸ್ಕೃತಿಕ ನಿಯಮಗಳು’ ಮತ್ತು ’ಸಾಮಾಜಿಕ ಗುಣಮಟ್ಟ’ದ ಮೇಲೆ ಆಧರಿತವಾಗಿದೆ ಹಾಗೂ ಅದು ’ಮಾನವ ಸಂಬಂಧಗಳನ್ನು ಅನುಮತಿಸುತ್ತದೆ ಅಥವಾ ನಿಷೇಧಿಸುತ್ತದೆ’ ಎಂದು ಮುಂತಾಗಿ ಭಾರತ ಸರ್ಕಾರ ವಾದಿಸಿದೆ.

’ಸಾಂಸ್ಕೃತಿಕ ನಿಯಮ’ಗಳನ್ನು ಮತ್ತು ’ಸಾಮಾಜಿಕ ಗುಣಮಟ್ಟ’ವನ್ನು ರಕ್ಷಿಸಲು ಶಾಶಕಾಂಗವು ಸನ್ನದ್ಧವಾಗಿದೆ ಎಂಬ ಈ ಅಭಿಪ್ರಾಯವು ಘನ ತಪ್ಪಿನಿಂದ ಕೂಡಿದೆ. ಸದಾ ಬದಲಾಗುವ ಸಾಮಾಜಿಕ ಗುಣಮಟ್ಟ ಅಥವಾ ಸಾಂಸ್ಕೃತಿಕ ನಿಯಮಗಳ ರಕ್ಷಣೆಯು ಶಾಸಕಾಂಗದ ಕೆಲಸವಲ್ಲ. ಇಂಥ ವಾದವು ಹಿಂದೆ ಜಾತಿ ಪದ್ಧತಿ ಮತ್ತು ಸತಿ ಪದ್ಧತಿಯಂತಹ ಪಿಡುಗುಗಳ ಸಮರ್ಥನೆಯಲ್ಲಿ/ರಕ್ಷಣೆಯ ಹಿಂದೆಯೂ ಇತ್ತು. ಆದುದರಿಂದ ತನ್ನ ಈ ನಿಲುವಿನ ಬದಲಾಗಿ ಭಾರತ ಸರಕಾರವು ತನ್ನ ಕಾರ್ಯಗಳನ್ನು ಸಂವಿಧಾನದ ಆಳವಾದ ನೈತಿಕತೆಯ ತಳಹದಿಯಲ್ಲಿ ನಿರ್ವಹಿಸಬೇಕು. ಕೇಂದ್ರ ಮಂತ್ರಿಗಳು (ಸೇರಿದಂತೆ ಶಾಸಕಾಂಗದ ಸದಸ್ಯರು) ಭಾರತೀಯ ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದಿರುವ ಸಾಂವಿಧಾನಿಕ ಪ್ರಮಾಣ ಸ್ವೀಕರಿಸಿರುತ್ತಾರೆ. ಆದುದರಿಂದ, ಸಂವಿಧಾನದ ಆಶಯಗಳನ್ನು ಅರ್ಥಪೂರ್ಣಗೊಳಿಸುವುದು ಅವರ ಕರ್ತವ್ಯವಾಗಿದೆ. ’ಸಾಮಾಜಿಕ ಗುಣಮಟ್ಟ’ ಮತ್ತು ’ಸಾಂಸ್ಕತಿಕ ನಿಯಮ’ಗಳ ಅಸ್ಪಷ್ಟ ಮತ್ತು ಅಂದಾದುಂದಿ ಕಲ್ಪನೆಗಳ ಆಧಾರದಲ್ಲಿ ಅವರು ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಲಾಗದು.

ಬಾಬಾಸಾಹೇಬ್ ಅಂಬೇಡ್ಕರರು ಸಂವಿಧಾನ ರಚನಾ ಸಭೆಯಲ್ಲಿ ವಿವರಿಸಿದಂತೆ: “ಸಾಂವಿಧಾನಿಕ ನೈತಿಕತೆಯು ಒಂದು ಸಹಜ ಭಾವನೆಯಲ್ಲ. ಅದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ನಮ್ಮ ಜನರು ಅದನ್ನು ಇನ್ನಷ್ಟೇ ಕಲಿತುಕೊಳ್ಳಬೇಕಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಭಾರತದಲ್ಲಿ ಪ್ರಜಾಪ್ರಭುತ್ವವು- ಮೂಲಭೂತವಾಗಿ ಅಪ್ರಜಾಸತ್ತಾತ್ಮಕವಾಗಿರುವ ಮಣ್ಣಿನ ಮೇಲ್ಪದರ ಮಾತ್ರವೇ ಆಗಿದೆ.”

ಬಾಬಾಸಾಹೇಬರ ದೃಷ್ಟಿಕೋನದ ಸಾರವೆಂದರೆ, ಭಾರತೀಯ ಸಮಾಜವನ್ನು ಪ್ರಜಾಸತ್ತಾತ್ಮಕಗೊಳಿಸುವ ಅಗತ್ಯವಿದೆ. ಒಂದು ಜಾತಿ ಆಧರಿತ, ಪಿತೃಪ್ರಧಾನ ಸಾಮಾಜಿಕ ವ್ಯವಸ್ಥೆಯು- ದಲಿತರು, ಮಹಿಳೆಯರು ಮತ್ತು ಎಲ್‌ಜಿಬಿಟಿಕ್ಯುಐ ಸಮುದಾಯದ ವ್ಯಕ್ತಿಗಳ ಹಕ್ಕುಗಳನ್ನು ಸೀಮಿತಗೊಳಿಸುತ್ತದೆ. ತನ್ನ ಸಾಂವಿಧಾನಿಕ ಕರ್ತವ್ಯಗಳ ಈ ಆಯಾಮವನ್ನೇ ಭಾರತ ಸರಕಾರವು ಅರ್ಥಮಾಡಿಕೊಂಡು ಗೌರವಿಸಲು ವಿಫಲವಾಗಿರುವುದು. ’ಸಹ ನಾಗರಿಕರು’ ತಮ್ಮ ’ಸಾಂವಿಧಾನಿಕ ಹಕ್ಕುಗಳನ್ನು ಸಾಕಾರಗೊಳಿಸುವ ಆಕಾಂಕ್ಷೆ ಹೊಂದಿದ್ದಾರೆ’ ಮತ್ತು ’ಸಮಾಜದ ರೂಪಾಂತರ’ವನ್ನು ಬಯಸುತ್ತಿದ್ದಾರೆ ಎಂಬ ವಾಸ್ತವಕ್ಕೆ ಕುರುಡುಗಣ್ಣಾಗಲು ಕೇಂದ್ರ ಸರಕಾರವು ನಿರ್ಧರಿಸಿದೆ. ’ಸಾಮಾಜಿಕ ಗುಣಮಟ್ಟ’ ಮತ್ತು ’ಸಾಂಸ್ಕೃತಿಕ ನಿಯಮ’ಗಳ ರೂಪಾಂತರ ಅಥವಾ ಬದಲಾವಣೆಯಷ್ಟೇ ಸಂವಿಧಾನವು ತನ್ನೆಲ್ಲಾ ನಾಗರಿಕರ ಪರವಾಗಿ ಮಾತನಾಡಲು ಆರಂಭಿಸುವಂತೆ ಮಾಡಬಲ್ಲದು.

ಇದುವೇ ಏಪ್ರಿಲ್ 18, 2023ರಂದು ಸುಪ್ರೀಂ ಕೋರ್ಟಿನ ಮುಂದೆ ಬರಲಿರುವ ವಿಷಯ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಅರವಿಂದ್ ನಾರಾಯಣ್

ಅರವಿಂದ್ ನಾರಾಯಣ್
ಸಂವಿಧಾನ ತಜ್ಞರು, ಪಿಯುಸಿಎಲ್-ಕೆನ ರಾಜ್ಯಾಧ್ಯಕ್ಷರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...