ಮೇಘಾಲಯದ ದಕ್ಷಿಣ ತುರಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ವಿರುದ್ಧ ಬಿಜೆಪಿಯು ತನ್ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಉಗ್ರಗಾಮಿ ನಾಯಕ ಬರ್ನಾರ್ಡ್ ಎನ್ ಮರಕ್ ಅವರನ್ನು ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಬರ್ನಾರ್ಡ್ ಎನ್ ಮರಕ್‌ರವರು ಗಾರೋ ಬುಡಕಟ್ಟು ಜನಾಂಗದವರಿಗೆ ಪ್ರತ್ಯೇಕ ರಾಜ್ಯವನ್ನು ರೂಪಿಸಲು ಅಚಿಕ್ ರಾಷ್ಟ್ರೀಯ ಸ್ವಯಂಸೇವಕ ಮಂಡಳಿ (ANVC-B) ಸೇರಿ ಉಗ್ರಗಾಮಿ ಹೋರಾಟಕ್ಕೆ ಕರೆ ನೀಡಿದ್ದರು. ಆದರೆ 2014ರಲ್ಲಿ ಅವರು ಶಸ್ತ್ರಾಶ್ತ್ರಗಳನ್ನು ತ್ಯಜಿಸಿ ತಮ್ಮ ಉಗ್ರಗಾಮಿ ಸಂಘಟನೆಯನ್ನು ವಿಸರ್ಜಿಸಿದ್ದರು. ಕೆಲ ಸಮಯದ ನಂತರ ಅವರು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದರು.
ಬಿಜೆಪಿಯು ಮೇಘಾಲಯ ವಿಧಾನಸಭೆಯ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದು, 60 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಕಳೆದ ಕೆಲವು ತಿಂಗಳ ಹಿಂದೆ ಬೇರೆ ಪಕ್ಷಗಳನ್ನು ತೊರೆದು ಬಿಜೆಪಿ ಸೇರಿದ ಹಾಲಿ ಶಾಸಕರಿಗೂ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇವರಲ್ಲಿ ಎಚ್‌ಎಂ ಶಾಂಗ್‌ಪ್ಲಿಯಾಂಗ್, ಫೆರ್ಲಿನ್ ಸಂಗ್ಮಾ, ಬೆನೆಡಿಕ್ಟ್ ಮರಾಕ್ ಮತ್ತು ಸ್ಯಾಮ್ಯುಯೆಲ್ ಎಂ ಸಂಗ್ಮಾ ಅವರು ಕ್ರಮವಾಗಿ ಮೌಸಿನ್‌ರಾಮ್, ಸೆಲ್ಸೆಲ್ಲಾ, ರಾಕ್ಸಾಮ್ಗ್ರೆ ಮತ್ತು ಬಾಗ್ಮಾರಾ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.
ಕಳೆದ ತಿಂಗಳು ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಕ್ಷವು ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್‌ನಿಂದ ಬೇರ್ಪಟ್ಟು ರಾಜ್ಯ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮದ್ದೂರು: ಕದಲೂರು ಉದಯ್ ದಿಢೀರ್ ಎಂಟ್ರಿಯಿಂದ ಸಂಕಷ್ಟಕ್ಕೆ ಸಿಲುಕಿದ ಡಿ.ಸಿ ತಮ್ಮಣ್ಣ


