Homeಮುಖಪುಟನವ ರಾಜಕೀಯ ಶಕೆಗೆ ಮುನ್ನುಡಿ ಬರೆದ ಚಿಲಿ

ನವ ರಾಜಕೀಯ ಶಕೆಗೆ ಮುನ್ನುಡಿ ಬರೆದ ಚಿಲಿ

- Advertisement -
- Advertisement -

ಭಾರತದ ರಾಜಕೀಯ ಪಕ್ಷಗಳು ತಾವು ಭಾಗವಹಿಸುವ ಚುನಾವಣೆಗಳಲ್ಲಿ, ದೇಶವಾಸಿಗಳನ್ನು ಅತಿಹೆಚ್ಚು ಬಾಧಿಸುತ್ತಿರುವ ಸಮಸ್ಯೆಗಳ ಮೂಲವನ್ನು ಅಂದರೆ ವ್ಯವಸ್ಥೆಯ ರಾಚನಿಕ ಹುಳುಕುಗಳನ್ನು ಚರ್ಚಿಸಿ, ಪ್ರಶ್ನಿಸಿ, ಅವುಗಳ ಬಗ್ಗೆ ಜನರಿಗೆ ತಿಳಿಸಿ, ಚುನಾವಣೆಯ ಪ್ರಣಾಳಿಕೆಯ ಭಾಗವನ್ನಾಗಿಸಿ, ಆ ಹಿನ್ನೆಲೆಯಲ್ಲಿ ಮತ ಕೇಳುವುದನ್ನು ಇನ್ನೂ ಮೈಗೂಡಿಸಿಕೊಂಡಿಲ್ಲ. ವಿಶ್ವದೆಲ್ಲೆಡೆ ಇಂದು ಹೆಚ್ಚು ಚರ್ಚೆಯಲ್ಲಿರುವ ಅತೀವ ಅಸಮಾನತೆಯ ಬಗ್ಗೆ ಇಲ್ಲಿನ ರಾಜಕೀಯ ಪಕ್ಷಗಳು ಮತ್ತು ಮುಖಂಡರು ಮಾತಾಡುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹಲವು ವರ್ಷಗಳಿಂದ ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲಿ ಮೇಲ್‌ಸ್ತರದಲ್ಲಿರುವ ಕೆಲವು ಶ್ರೀಮಂತರ ಮತ್ತು ಅಪಾರ ಸಂಖ್ಯೆಯಲ್ಲಿರುವ ಬಡವರ ನಡುವೆ ಹೇಗೆ ಅಸಮಾನತೆಯ ಕಂದರ ತೀವ್ರಗೊಳ್ಳುತ್ತಿದೆ ಎಂಬ ಬಗ್ಗೆ ಹಲವು ವರದಿಗಳು ಪ್ರಕಟಗೊಳ್ಳುತ್ತಿದ್ದರೂ, ಜನರನ್ನು ಚಿಂತನೆಗೆ ಹಚ್ಚಬಲ್ಲ ಸಂಕಥನಗಳನ್ನು ಹುಟ್ಟುಹಾಕಲು ಮುಖ್ಯವಾಹಿನಿ ಮಾಧ್ಯಮಗಳಿಗೂ ಇನ್ನೂ ಸಾಧ್ಯವಾಗಿಲ್ಲ. ಇದೇ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ವಿಶ್ವ ಅಸಮಾನತೆ ವರದಿ 2021ರ (ವರ್ಲ್ಡ್ ಇನ್‌ಇಕ್ವಾಲಿಟಿ ರಿಪೋರ್ಟ್) ಪ್ರಕಾರ “ಭಾರತ ಇನ್ನೂ ಬಡದೇಶವಾಗಿ ಉಳಿದಿದೆ, ಬಹಳ ಅಸಮಾನ ದೇಶವಾಗಿದೆ ಮತ್ತು ಶ್ರೀಮಂತ ಎಲೈಟ್‌ಗಳಿಂದ ಕೂಡಿದೆ” ಎನ್ನುತ್ತದೆ. ಈ ವರದಿ ಹೇಳುವುದೇನೆಂದರೆ, ದೇಶದ ಶ್ರೀಮಂತ ವರ್ಗದ 1% ಜನ 21.7% ಆದಾಯ ಗಳಿಸುತ್ತಿದ್ದರೆ (ಐದರ ಒಂದು ಭಾಗ), ಕೆಳಗಿರುವ 50% ಜನರ ಆದಾಯ 13.1%. ಮೇಲಿರುವ 10% ಜನ ಒಟ್ಟಾರೆ
ಆದಾಯದ 57%ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಅಂಕಿಅಂಶಗಳ ಮೂಲಕ ಇಂದಿನ ಸಮಾಜದ ಸಮಸ್ಯೆಗಳನ್ನು ವಿವರಿಸಿ, ಇದನ್ನು ಸರಿಪಡಿಸುವ ಆದ್ಯತೆ ರಾಜಕೀಯ ಪಕ್ಷಗಳ-ಮುಖಂಡರ ಚುನಾವಣಾ ಪ್ರಣಾಳಿಕೆಯ ಭಾಗವಾಗಬೇಕಿತ್ತು. ಇದರ ಜೊತೆಗೆ ಭಾರತದಲ್ಲಿ ಆ ಮೇಲಿನ 10% ಶ್ರೀಮಂತ ಜನ ಯಾವ ಜಾತಿ-ಸಮುದಾಯಗಳಿಗೆ ಸೇರಿದವರು ಎಂಬ ಅಧ್ಯಯನವನ್ನು ಕೈಗೊಂಡರೆ ಸಮಸ್ಯೆಯ ಆಳ ಇನ್ನಷ್ಟು ಅರಿವಾಗಬಹುದು. ಅಸಮಾನತೆಯ ಜಾತಿ ರಾಜಕಾರಣವೂ ಬಯಲಾಗಬಹುದು. ಆದರೆ ಕೋಮು ವಿಷಮತೆ, ಧ್ರುವೀಕರಣಗಳೇ ಇನ್ನೂ ಚುನಾವಣೆಗಳನ್ನು ಆಳುವಂತಹ ಪರಿಸ್ಥಿತಿ ಇಲ್ಲಿ ನಿರ್ಮಿಸಲಾಗಿದೆ. ಇನ್ನು ದೇಶದ ಸಂಪತ್ತಿನ ಹಂಚಿಕೆಯನ್ನು ಸರಿಪಡಿಸುವ, ಅದಕ್ಕಾಗಿ ದೈತ್ಯ ಶ್ರೀಮಂತರ ಅಂದರೆ ಆ ಮೇಲಿನ 1% ಜನರಿಗೆ ಹೆಚ್ಚಿನ ತೆರಿಗೆ ಹಾಕಬೇಕಾಗಿರುವ, ಸರ್ಕಾರದಿಂದ ಬಡಜನರ ಕಲ್ಯಾಣಕ್ಕಾಗಿ ಮಾಡುವ ಸಾಮಾಜಿಕ ಖರ್ಚನ್ನು ಇನ್ನಷ್ಟು ಹೆಚ್ಚು ಮಾಡಬೇಕಿರುವ ಮಾತುಗಳು ಎಲ್ಲಿಂದ ಕೇಳಿಬರಬೇಕು? ಅನ್ನಭಾಗ್ಯದಂತಹ ಯೋಜನೆಯನ್ನು ಅವಮಾನಿಸುವ, ಲೇವಡಿ ಮಾಡುವ ವಾತಾವರಣವನ್ನು ಸೃಷ್ಟಿಸಲು ಬಲಪಂಥೀಯ ಪಾಪ್ಯುಲಿಸ್ಟ್ ರಾಜಕಾರಣ ಮತ್ತು ಅದನ್ನು ಬೆಂಬಲಿಸುವ ಮಾಧ್ಯಮಕ್ಕೆ ಸುಲಭವಾಗಿ ಸಾಧ್ಯವಾಗಿದೆ.

ಸೆಲ್ವಡಾರ್ ಅಯ್ಯೆಂಡೆ

ಇನ್ನು ಸಂಪತ್ತನ್ನು- ಸರ್ವರಿಗೂ ಸೇರಬೇಕಾದ ನೈಸರ್ಗಿಕ ಸಂಪನ್ಮೂಲಗಳನ್ನು ಹುರಿದು ಮುಕ್ಕುತ್ತಿರುವ ಕಾರ್ಪೊರೆಟ್‌ಗಳಿಗೆ ಭೂಮಂಡಲದ ಪರಿಸರದ ಬಗ್ಗೆ, ಅದರ ಸಮತೋಲನದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಜಾಗತಿಕ ತಾಪಮಾನವನ್ನು ಹೋಕ್ಸ್-ಸುಳ್ಳು ಎಂದು ಕರೆಯುವ, ಲಾಭದ ದೃಷ್ಟಿಯಿಂದ ಕಾಡು ನದಿ ಕೆರೆ ಹೊಳೆ ಕೊಳ್ಳಗಳನ್ನು ನಾಶಪಡಿಸುತ್ತಿರುವ ವಿಷಯಗಳು ಕೂಡ ಭಾರತದ ಮಟ್ಟಿಗೆ ಚುನಾವಣಾ ವಿಷಯವಾಗಿ ಬೆಳೆದಿಲ್ಲ. ಜಾಗತಿಕವಾಗಿ ಹಲವು ಪಕ್ಷಗಳು (ಉದಾಹರಣೆಗೆ ಕೆನಡಾದ ಗ್ರೀನ್ ಪಾರ್ಟಿ) ಇಂದು ಈ ಪರಿಸರ ಸಮತೋಲನ-ಕ್ಲೈಮೇಟ್ ಚೇಂಜ್ ವಿಷಯಗಳನ್ನೇ ತಮ್ಮ ಮುಖ್ಯ ರಾಜಕೀಯ ವಿಷಯವನ್ನಾಗಿಸಿಕೊಂಡು ಜನರ ನಡುವೆ ಹೋಗುತ್ತಿವೆ. ಅಲ್ಲಿ ಮತದಾರರನ್ನು ಸೆಳೆದು, ಒಟ್ಟಾರೆ ರಾಜಕೀಯದಲ್ಲಿ ತಮ್ಮ ಸ್ಥಾನವನ್ನು ನಿರ್ಣಾಯಕಗೊಳಿಸುವಲ್ಲಿ ಹೆಜ್ಜೆ ಇಟ್ಟಿವೆ. ನಮ್ಮ ದೇಶದ ದುರ್ದೈವ ನೋಡಿ: ಬೆಂಗಳೂರಿನಂತಹ ಮಹಾನಗರದ ಪಾಲಿಕೆ ಚುನಾವಣೆಗಳಲ್ಲಿ ಕೂಡ, ಎಕಾಲಜಿ-ಕೆರೆ-ನೈಸರ್ಗಿಕ ದುರಂತ ಮುಂತಾದವುಗಳು ಚುನಾವಣೆಯ ವಿಷಯಗಳಾಗುವುದಿಲ್ಲ.

ಜಗತ್ತಿನ ಕೆಲವು ದೇಶಗಳಲ್ಲಾದರೂ ಬೆರಳೆಣಿಕೆಯಷ್ಟು ಮುಖಂಡರಾದರೂ ಸಮಸ್ಯೆಗಳ ಬಗೆಗಿನ ಹೊಸ ತಿಳಿವಳಿಕೆಯ ಬೆನ್ನಿಗೆ ಬಿದ್ದು, ಅವನ್ನು ಸರಿಪಡಿಸುವ ಆದರ್ಶಗಳ ಬೆನ್ನುಹತ್ತಿ ರಾಜಕೀಯ ಮಾಡುವಲ್ಲಿ ಸಫಲರಾಗುತ್ತಿದ್ದಾರೆ. ಅಸಮಾನತೆಯ ಸಮಸ್ಯೆಗಳು, ಪರಿಸರ ನಾಶದ ಬಿಕ್ಕಟ್ಟಿನ ಬಗ್ಗೆ ಕಥೆಗಳನ್ನು ಹೇಳಿ ಜನರಿಗೆ ಮನವರಿಕೆ ಮಾಡಿಕೊಟ್ಟು, ತಮ್ಮನ್ನು ಆಯ್ಕೆ ಮಾಡಿದ್ದಲ್ಲಿ ಅವುಗಳಿಗೆ ಸ್ಪಷ್ಟ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಜನರಿಗೆ ಭರವಸೆಯನ್ನು ಮೂಡಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಚಿಲಿ ದೇಶದಲ್ಲಿ ಭಾರಿ ಮತಗಳಿಂದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ವಿದ್ಯಾರ್ಥಿ ಸಂಘದ ಮುಖಂಡ, ಮಿಲೆನಿಯಲ್ ಗೇಬ್ರಿಯಲ್ ಬೋರಿಚ್ ಭರವಸೆಯಾಗಿ ಕಾಣುತ್ತಾರೆ. ಫ್ಯಾಸಿಸಂ ಕಡೆಗೆ ಹೊರಳುತ್ತಿರುವ ಬಲಪಂಥೀಯ ಪಾಪ್ಯುಲಿಸ್ಟ್ ಆಡಳಿತಗಳನ್ನು ವಿರೋಧಿಸುತ್ತಿರುವ ಹಲವು ದೇಶಗಳಿಗೆ, ಹಲವು ಹೋರಾಟಗಳಿಗೆ ಚಿಲಿಯ ಬೆಳವಣಿಗೆ ಸ್ಫೂರ್ತಿಯಾಗುವ ಸಾಧ್ಯತೆಯಿದೆ.

ಜಗತ್ತಿನ ಭೂಪಟದಲ್ಲಿ ಲ್ಯಾಟಿನ್ ಅಮೆರಿಕ ಖಂಡದ ಮೇಲೆ ಒಮ್ಮೆ ಕಣ್ಣಾಡಿಸಿದರೆ, ಆ ಖಂಡದ ಪಶ್ಚಿಮ ಮತ್ತು ದಕ್ಷಿಣಕ್ಕೆ, ಒಂದು ಕೊರಕಲು ಹಾದಿಯಂತೆ ಕಾಣುವ ದೇಶ ಚಿಲಿ. ಆ ಹೆಸರಿನ ಉತ್ಪತ್ತಿಗೆ ಹಲವು ಪ್ರತೀತಿಗಳು ಇದ್ದರೂ, ಭೂಮಿ ಕೊನೆಯಾಗುವ ಪ್ರದೇಶವನ್ನು ಸೂಚಿಸುವ ಪದ ಅದು ಅಂತಲೂ ಹೇಳಲಾಗುತ್ತದೆ. ಬಹಳ ಸಂಪದ್ಭರಿತ ಲ್ಯಾಟಿನ್ ಅಮೆರಿಕದ ಚರಿತ್ರೆ ರಕ್ತಸಿಕ್ತವಾದುದು. ಕೊಲಂಬಿಯ, ಕ್ಯೂಬಾ, ಗ್ವಾಂಟೆಮಾಲ, ಎಲ್ ಸೆಲ್ವಡಾರ್ ಹೀಗೆ ಹಲವು ದೇಶಗಳ ಮೇಲೆ ಉತ್ತರ ಅಮೆರಿಕ-ವಾಶಿಂಗ್ಟನ್‌ನ ಹಲವು ಸರ್ಕಾರಗಳು-ಅಧ್ಯಕ್ಷರು ಮತ್ತು ಅವರ ಗುಪ್ತಚರದಳ ಸಿಐಎ ನಡೆಸಿದ ದೌರ್ಜನ್ಯಕ್ಕೆ ಕೊನೆಮೊದಲಿಲ್ಲ. ಸರ್ಕಾರಗಳನ್ನು ಮನಬಂದಂತೆ ಉರುಳಿಸುವುದು, ತನ್ನ ಕೈಗೊಂಬೆಯಾಗಿರುವ ಮಿಲಿಟರಿ ಅಧಿಕಾರಿಗಳನ್ನು ಅಧ್ಯಕ್ಷರನ್ನಾಗಿಸಲು ಮಿಲಿಟರಿ ದಂಗೆಗಳಿಗೆ ಸಹಕರಿಸುವುದು, ಕಮ್ಯುನಿಸ್ಟ್-ಸೋಷಿಯಲಿಸ್ಟ್ ಸರ್ಕಾರಗಳ ತೇಜೋವಧೆಗೆ ಪ್ರಪೋಗಾಂಡ ಕಟ್ಟುವುದು, ಇವುಗಳಿಗಾಗಿ ಯಾವ ನೀಚಮಟ್ಟಕ್ಕಾದರೂ ಇಳಿಯುವುದು – ಇವೆಲ್ಲಾ ಈಗಾಗಲೇ ವಿದಿತವಾದ ಸಂಗತಿಗಳು. ಇದರಿಂದ ಚಿಲಿ ಕೂಡ ಹೊರತಾಗಿರಲಿಲ್ಲ. ಆದರೆ ಅಮೆರಿಕ ನಿಯಂತ್ರಿತ ಸರ್ವಾಧಿಕಾರ ಚಿಲಿಗೆ ಆಗಮಿಸಿದ್ದು 73ರಲ್ಲಿ. ಅಲ್ಲಿನಿಂದ ಚಿಲಿ ದೇಶದ್ದು ಏಳುಬೀಳಿನ ಹಾದಿ.

ಚಿಲಿಯಲ್ಲಿ ಅಮೆರಿಕ ಬೆಂಬಲಿತ ಮಿಲಿಟರಿ ಸರ್ವಾಧಿಕಾರಿ ಅಗಸ್ಟೋ ಪಿನೋಶೆ ಮಿಲಿಟರಿ ದಂಗೆ ನಡೆಸಿ ಸರ್ವಾಧಿಕಾರಿಯಾಗುವುದಕ್ಕೂ ಮೊದಲು, ಅಲ್ಲಿ ಜನಪ್ರಿಯ ಅಧ್ಯಕ್ಷನಾಗಿದ್ದುದು ಸೆಲ್ವಡಾರ್ ಅಯ್ಯೆಂಡೆ. ಪ್ರಜಾಸತ್ತಾತ್ಮಕ ಕ್ರಾಂತಿಗೆ ಇಂದಿಗೂ ಹೆಸರುವಾಸಿ ಅಯ್ಯೆಂಡೆ ಅಧಿಕಾರಕ್ಕೆ ಏರಿದ ಮಾದರಿ. ಹಲವು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಎಡಪಂಥೀಯ ಪಕ್ಷಗಳು (ವಿಶ್ವದ ಹಲವೆಡೆಯ ಕಮ್ಯುನಿಸ್ಟ್ ಹೋರಾಟಗಳು), ಅಮೆರಿಕದ ಮತ್ತು ಆ ದೇಶದ ಲಾಭಕೋರ ಕಾರ್ಪೊರೆಟ್‌ಗಳನ್ನು ವಿರೋಧಿಸಲು ಶಸ್ತ್ರಾಸ್ತ್ರ ಹೋರಾಟದ ಹಾದಿ ಹಿಡಿದಿದ್ದರೆ, ಚಿಲಿಯಲ್ಲಿ ಅಯ್ಯೆಂಡೆ ಅವರದ್ದು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸಮಾಜವಾದಿ ಸರ್ಕಾರ. ಸಾಮಾಜಿಕ ನ್ಯಾಯದ ಬಗ್ಗೆ ಅಚಲ ನಂಬಿಕೆ ಹೊಂದಿದ್ದ ಮಾರ್ಕ್ಸ್‌ವಾದಿ ಅಯ್ಯೆಂಡೆ ಅವರು ಹಲವು ಸುಧಾರಣೆಗಳಿಗೆ ಮುಂದಾಗುತ್ತಾರೆ. ಚಿಲಿಯಲ್ಲಿ ಅಪಾರವಾಗಿ ಸಿಗುತ್ತಿದ್ದ ನೈಸರ್ಗಿಕ ಸಂಪನ್ಮೂಲವಾದ ಕಂಚಿನ ಲೋಹದ ಗಣಿಗಾರಿಕೆಯನ್ನು ರಾಷ್ಟ್ರೀಕೃತಗೊಳಿಸಿದ ನಡೆ ಅಮೆರಿಕದ ಕೆಂಗಣ್ಣಿಗೆ ಗುರಿಯಾಗುತ್ತದೆ.

ಅಮೆರಿಕದ ಹಲವು ಕಂಪನಿಗಳು ಅಲ್ಲಿ ಲೋಹದ ಗಣಿಕಾರಿಕೆಯಿಂದ ಲಾಭ ಮಾಡಿಕೊಳ್ಳುತ್ತಿರುತ್ತವೆ. ಆಗ ಚಿಲಿಯಲ್ಲಿ ತೀವ್ರ ಬಲಪಂಥೀಯ ಫ್ಯಾಸಿಸ್ಟ್ ಬಣಗಳನ್ನು ಬಳಸಿಕೊಂಡು, ಅನ್‌ರೆಸ್ಟ್ ಸೃಷ್ಟಿಸಲಾಗುತ್ತೆ. ಅಮೆರಿಕದ ಗುಪ್ತಚರ ದಳ ನೇರವಾಗಿ ಮಿಲಿಟರಿ ದಂಗೆಗೆ ಸಹಾಯ ಮಾಡಿದ್ದು 2014ರಲ್ಲಿ ಬಿಡುಗಡೆಯಾದ ರಹಸ್ಯ ದಾಖಲೆಗಳ ಮೂಲಕ ಸಾಬೀತಾಗಿದೆ. ಅಯ್ಯೆಂಡೆ ಅವರನ್ನು ಬಂಧಿಸಲು ಅಂದಿನ ಮಿಲಿಟರಿ ದಂಗೆಕೋರ ಪಿನೋಶೆ ಮುಂದಾದಾಗ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಲವು ಎಡಪಂಥೀಯ ಚಿಂತಕರು-ಕಾರ್ಯಕರ್ತರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಗುತ್ತದೆ. ಜನಕವಿ ಎಂದೇ ಹೆಸರಾಗಿದ್ದ, ಅಯ್ಯೆಂಡೆ ನೀತಿಗಳ ಬೆಂಬಲಿಗನಾಗಿದ್ದ ಪಾಬ್ಲೋ ನೆರೂಡಾ ಅವರನ್ನು ಕೂಡ ವಿಷವುಣಿಸಿ ಕೊಲ್ಲಲಾಯಿತು ಎಂಬ ಆರೋಪ ಇದೆ. (ಅವರಿಗೆ ಪ್ರಾಸ್ಟ್ರೇಟ್ ಕ್ಯಾನ್ಸರ್ ಇದ್ದು ಅದರಿಂದ ಮೃತರಾದರು ಎಂಬ ವಾದಕ್ಕೆ ವ್ಯತಿರಿಕ್ತವಾಗಿ, ಹೊಸದಾಗಿ ಸಿಕ್ಕಿರುವ ಸಾಕ್ಷ್ಯಗಳು ನುಡಿಯುತ್ತಿರುವ ಸತ್ಯ ಇದು.) ಸುಮಾರು ಎರಡು ಲಕ್ಷ ಚಿಲಿ ನಾಗರಿಕರನ್ನು ಗಡಿಪಾರು ಮಾಡಿದ್ದಲ್ಲದೆ, ಹಲವು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದ್ದ ಬಲಪಂಥೀಯ ಮಿಲಿಟರಿ ಸರ್ವಾಧಿಕಾರಿ ಪಿನೋಶೆ 1980ರಲ್ಲಿ ಹೊಸ ಸಂವಿಧಾನವನ್ನು ಕೂಡ ತನ್ನ ಅಗತ್ಯಕ್ಕೆ ತಕ್ಕಂತೆ ರಚಿಸಿಕೊಳ್ಳುತ್ತಾನೆ. 17 ವರ್ಷಗಳ ಕಾಲ ಆಡಳಿತ ನಡೆಸುತ್ತಾನೆ. ಆದರೆ, ಪಿನೋಶೆ ಚಿಲಿ ಅಧ್ಯಕ್ಷನಾಗಿ ಇನ್ನೂ 8 ವರ್ಷಗಳ ಕಾಲ ಮುಂದುವರೆಯಬೇಕೇ ಬೇಡವೇ ಎನ್ನುವ 1988ರ ಪ್ಲೆಬಿಸೈಟ್‌ನಲ್ಲಿ (ಜನಮತ) ಸೋಲುಂಡು ಅಧಿಕಾರದಿಂದ ಕೆಳಗಿಳಿಯುತ್ತಾನೆ. ನಂತರ ಚುನಾವಣೆಗಳು ನಡೆದು ಹಲವು ಸರ್ಕಾರಗಳು ಬಂದರೂ, ರ್‍ಯಾಡಿಕಲ್ ಆದ ಸುಧಾರಣೆಗಳಿಗೆ ಯಾವ ಸರ್ಕಾರವೂ ಮುಂದಾಗದೆ ಯಥಾಸ್ಥಿತಿಯನ್ನು ಮುಂದುವರೆಸಿಕೊಂಡು ಹೋಗುತ್ತವೆ.

ಸುದೀರ್ಘ 17 ವರ್ಷಗಳ ಪಿನೋಶೆಯ ದುರಾಡಳಿತ ಮತ್ತು ನಂತರದ ಸರ್ಕಾರಗಳಿಂದ ಜರ್ಜರಿತರಾಗಿ ಬೇಸತ್ತ ನಾಗರಿಕ ಸಮಾಜ 21ನೇ ಶತಮಾನದ ಆರಂಭದಿಂದಲೂ ತೀವ್ರ ಪ್ರತಿಭಟನೆಗಳಿಗೆ ಇಳಿಯುತ್ತದೆ. ಇದು ತೀವ್ರವಾಗುವುದು ಅಕ್ಟೋಬರ್ 2019ರಲ್ಲಿ. ಮೆಟ್ರೋ ರೈಲಿನ ಪ್ರಯಾಣ ದರ ಹೆಚ್ಚಳದ ವಿರುದ್ಧವಾಗಿ ಪ್ರಾರಂಭವಾಗುವ ಪ್ರತಿಭಟನೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಕೊರೊನಾದಿಂದ ಈ ಪ್ರತಿಭಟನೆಗಳಿಗೆ ತಾತ್ಕಾಲಿಕ ಹಿನ್ನಡೆಯಾದರೂ, ಸಂವಿಧಾನ ಬದಲಾಗಬೇಕೆನ್ನುವ ಕೂಗು ತೀವ್ರಗೊಳ್ಳುತ್ತದೆ. 2020ರ ಅಕ್ಟೋಬರ್‌ನಲ್ಲಿ ನಡೆಯುವ ಪ್ಲೆಬಿಸೈಟ್‌ನಲ್ಲಿ ಸಂವಿಧಾನ ಬದಲಾವಣೆಗೆ ಜನರ ಬಹುಮತ ದೊರಕುತ್ತದೆ. ಈ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವಿದ್ಯಾರ್ಥಿ ಸಂಘಟನೆಯ ಎಡಪಂಥೀಯ ಮುಖಂಡ ಗೇಬ್ರಿಯಲ್ ಬೋರಿಚ್ ಈಗ ತಮ್ಮ 35ನೇ ವಯಸ್ಸಿನಲ್ಲಿ ಬಲಪಂಥೀಯ ಪಾಪ್ಯುಲಿಸ್ಟ್ ನಾಯಕ ಹೋಸೆ ಆಂಟೋನಿಯೋ ಕ್ಯಾಸ್ಟ್ ಅವರನ್ನು ಸೋಲಿಸಿ, ಮಾರ್ಚ್‌ನಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.

ಪಿನೋಶೆ

ಚುನಾವಣೆ ಗೆದ್ದ ನಂತರ ಬೋರಿಚ್ ತಮ್ಮ ಗೆಲುವಿನ ಭಾಷಣದಲ್ಲಿ ಹೇಳಿದ್ದು ಹೀಗೆ:
“ರಾಜಕೀಯ ಮತ್ತು ಸಾಮಾಜಿಕ-ಆರ್ಥಿಕ ಸ್ತರಗಳಲ್ಲಿ, 1980ರ ದಶಕದಿಂದಲೂ ಚಿಲಿ ನವಉದಾರವಾದಿ ಪ್ರಯೋಗದ ತೊಟ್ಟಿಲಾಗಿದೆ. ಅದು ಪ್ರಜಾಪ್ರಭುತ್ವವಾದಾಗಲೂ, ಅದು ವ್ಯವಸ್ಥೆಯನ್ನು ಬದಲಾಯಿಸಲಿಲ್ಲ. ಅದರ ಅತಿಗಳನ್ನು ನಿವಾರಿಸಲಾಯಿತೇ ಹೊರತು ಆದರ ಸಾರವನ್ನಲ್ಲ. ಗಣಿಕಾರಿಕೆಯಿಂದ ಮಾತ್ರ ಹೆಚ್ಚಾಗಿ ಸಂಪತ್ತು ಸೃಷ್ಟಿಯಾಗುವ ಮಾದರಿಗೆ ಭಿನ್ನವಾದ ಹೊಸ ಅಭಿವೃದ್ಧಿ ಮಾದರಿ ನಮಗೆ ಬೇಕಾಗಿದೆ. ಟ್ರಿಕಲ್ ಡೌನ್ (ಬಂಡವಾಳಶಾಹಿ ವ್ಯವಸ್ಥೆ ಪ್ರತಿಪಾದಿಸುವ ಆರ್ಥಿಕ ಸಂಪತ್ತು ಮೇಲಿನವರಿಂದ ಸೋರಿ ಹಂಚಿಕೆಯಾಗುವ ವ್ಯವಸ್ಥೆ) ಅಲ್ಲದ ಸಂಪತ್ತು ಹಂಚಿಕೆ ನಮಗೆ ಬೇಕಾಗಿದೆ. ಸಂಪತ್ತು ಒಂದು ಕಡೆ ಕ್ರೋಢೀಕರಣವಾಗುತ್ತಿರುವುದನ್ನು ಒಡೆದು ವಿಕೇಂದ್ರೀಕರಣಗೊಳಿಸಬೇಕಾಗಿದೆ ಮತ್ತು ಅದಕ್ಕೆ ಪರಿಸರದ ದೃಷ್ಟಿಕೋನ ಇರಬೇಕಿದೆ. ಭವಿಷ್ಯದ ಇತಿಹಾಸಕಾರರು ಇಂತಹ ಕ್ರಮಕ್ಕೆ ಹೊಸ ಹೆಸರು ನೀಡಬಹುದು ಆದರೆ ಅದಕ್ಕೆ ಸಾಮಾಜಿಕ ಮತ್ತು ಪರಿಸರ ಸಮತೋಲನದ ಅಂಗಗಳು ಇರಬೇಕು ಎನ್ನುವುದರ ಬಗ್ಗೆ ಪ್ರಶ್ನೆಯೇ ಇಲ್ಲ. ಇದು ನವಉದಾರವಾದಿ ತಿಳಿಸಿದ ಲೌಖಿಕ ಮತ್ತು ಉಪಯೋಗವಾದಿ ಸಿದ್ಧಾಂತಗಳಿಗಿಂತ ಹೆಚ್ಚು ಮುಖ್ಯವಾದದ್ದು” ಎಂದಿದ್ದಾರೆ. “ನೀವು ನನ್ನ ಪರವಾಗಿ ಮತ ಹಾಕಿದ್ದರೂ ಅಥವಾ ನನ್ನ ವಿರುದ್ಧವಾಗಿ ಮತ ಹಾಕಿದ್ದರೂ” ಎಲ್ಲರ ಅಧ್ಯಕ್ಷನಾಗಿ ಎಲ್ಲರ ಒಳಿತಿಗೆ ಕೆಲಸ ಮಾಡುವುದಾಗಿ ಘೋಷಿಸಿ ಬೆಸೆಯುವ ಮಾತುಗಳನ್ನಾಡಿದ್ದಾರೆ.

ನಾಜಿ ಜರ್ಮನಿಯ ಮೂಲದವರಾದ ಪ್ರತಿ ಅಭ್ಯರ್ಥಿ ಆಂಟೋನಿಯೋ ಕ್ಯಾಸ್ಟ್ ಅವರ ತೀವ್ರ ಧ್ರುವೀಕರಣದ ಪಾಪ್ಯುಲಿಸ್ಟ್ ರಾಜಕೀಯವನ್ನು ಸೋಲಿಸಲು ಬೋರಿಚ್ ವಿಚಾರವಾದಕ್ಕೆ, ಹೊಸ ಯುಗದ ಜನತೆಯ ಸಮಸ್ಯೆಗಳನ್ನು ಬಗೆಹರಿಸುವ ಹೊಸ ಸಂಕಥನಗಳಿಗೆ ಮೊರೆ ಹೋಗಿದ್ದಾರೆ. ಇದು ಹಲವು ದೇಶಗಳಲ್ಲಿ ಸಮಾನತೆಗಾಗಿ, ಪರಿಸರ ಉಳಿವಿಗಾಗಿ ಒಡಕಿನ ಶಕ್ತಿಗಳ ವಿರುದ್ಧ ಹೋರಾಡುತ್ತಿರುವವರಿಗೆ ಮಾದರಿಯಾದೀತು. ಫ್ಯಾಸಿಸ್ಟ್ ಶಕ್ತಿಗಳನ್ನು ಸೋಲಿಸಬಲ್ಲ ಸಂಕಥಗಳನ್ನು ಹುಡುಕಲು ಸಹಕರಿಸೀತು!


ಇದನ್ನೂ ಓದಿ: ಬಲಪಂಥೀಯ ಪ್ರತಿಸ್ಪರ್ಧಿಯನ್ನು ಸೋಲಿಸಿ ‘ಚಿಲಿ’ ಅಧ್ಯಕ್ಷನಾಗಲಿರುವ ಎಡಪಂಥೀಯ ವಿದ್ಯಾರ್ಥಿ ನಾಯಕ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...