ನಟ ಉಪೇಂದ್ರ ಅವರು ಲೈವ್ ವಿಡಿಯೋದಲ್ಲಿ ಗಾದೆಯ ಪದ ಬಳಕೆ ಮಾಡಿ ದಲಿತರಿಗೆ ಅವಮಾನ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತು ದಾಖಲಾದ ಎಫ್ ಐಆರ್ ಗೆ ಬಳಿಕ ಹೈಕೋರ್ಟ್ ತಡೆ ನೀಡಿತ್ತು. ಈ ಬೆಳವಣಿಗೆ ಬೆನ್ನಲ್ಲೇ ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹಳೆಯ ವೀಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಡಿಯೋದಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಮೂರು ತಿಂಗಳ ಮೊದಲು ಅಪ್ಲೋಡ್ ಮಾಡಲಾಗಿದೆ.
ವಿಡಿಯೋದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ನಗರದ ಅಶೋಕ್ ಥಿಯೇಟರ್ ಬಳಿ ನಿರ್ಮಾಣಗೊಂಡಿರುವ ಅಂಡರ್ ಪಾಸ್ ಬಗ್ಗೆ ಅಭಿಪ್ರಾಯ ಕೇಳುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಲವು ಬಾರಿ ನಾನು ಪ್ರಶ್ನೆ ಮಾಡಿದ್ದೆ, ಸಂಬಂಧಪಟ್ಟ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದೆ. ʼʼಊರನ್ನು ಹೊಲೆಗೇರಿ ಮಾಡಬೇಡಿʼʼ ಎಂದು ಹೇಳಿದ್ದೆ ಎಂದು ಮಲ್ಲಿಕಾರ್ಜುನ್ ಅವರು ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕವಾದಂತಹ ಆಕ್ರೋಶಕ್ಕೆ ಕಾರಣವಾಗಿದೆ. ಉಪೇಂದ್ರ ಅವರ ಮೇಲೆ ಕೇಸ್ ದಾಖಲಿಸಿದಂತೆ ಇವರ ಮೇಲೆ ಯಾವಾಗ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹಲವರು ಪ್ರಶ್ನಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಆರೋಪದಲ್ಲಿ ಎಸ್ ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಸಚಿವರ ಮೇಲೂ ರಾಜಾಜಿನಗರ ಪೊಲೀಸ್ ಠಾಣೆಗೆ ಎಫ್ ಐಆರ್ ದಾಖಲಿಸುವಂತೆ ಅರ್ಜಿ ಕೊಡಲಾಗಿದೆ.ಸಚಿವರಾದ ಕಾರಣ ಅವರ ಮೇಲೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕಾಗಿದೆ. ಆದ್ದರಿಂದ ಅವರ ವಿರುದ್ಧದ ದೂರನ್ನು ಪಡೆದು ವಿಧಾನಸೌಧ ಠಾಣೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ಏಕನಾಥ್ ಶಿಂಧೆಯನ್ನು ಆಸ್ಪತ್ರೆಗೆ ದಾಖಲಿಸಿ ಅಜಿತ್ ಪವಾರನ್ನು ಸಿಎಂ ಮಾಡುವ ಹುನ್ನಾರ ನಡೆಯುತ್ತಿದೆ: ವಿಜಯ್ ವಾಡೆತ್ತಿವಾರ್


