ಹತ್ರಾಸ್‌ನ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೇಳುತ್ತಿರುವ ಹೊತ್ತಿನಲ್ಲೇ, ಮಧ್ಯಪ್ರದೇಶದಿಂದಲೂ ಇದೇ ರೀತಿಯ ಪ್ರಕರಣ ವರದಿಯಾಗಿದೆ.
ಮಧ್ಯಪ್ರದೇಶದ ಖಾರ್ಗೊನ್ ಜಿಲ್ಲೆಯ ಮಾರುಗರ್ ಎಂಬಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿ ತನ್ನ ಸಹೋದರನೊಂದಿಗೆ ಕೃಷಿ ಜಮೀನಿನಲ್ಲಿ ಇದ್ದ ಗುಡಿಸಲಿನಲ್ಲಿ ವಾಸವಿದ್ದರು. ಘಟನೆ ನಡೆದ ದಿನ ಮೂವರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ಆಕೆಯನ್ನು ಗುಡಿಸಲಿನಿಂದ ಹೊರಗೆ ಎಳೆದೊಯ್ಯಲು ಪ್ರಯತ್ನಿಸಿದ್ದಾರೆ. ಆಕೆಯ ಸಹೋದರ ವಿರೋಧ ವ್ಯಕ್ತಪಡಿಸಿದಾಗ, ಆತನನ್ನು ಕೋಲುಗಳಿಂದ ಹೊಡೆದು ಪ್ರಜ್ಞೆ ತಪ್ಪಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ಮತ್ತೊಬ್ಬ ದಲಿತ ಯುವತಿ ಮೇಲೆ ಅತ್ಯಾಚಾರ, ಕೊಲೆ
ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿ, ರಸ್ತೆಯ ಬದಿಯಲ್ಲಿ ಆಕೆಯನ್ನು ಬಿಟ್ಟು ಓಡಿಹೋಗಿದ್ದಾರೆ. ಎಚ್ಚರಗೊಂಡ ಸಹೋದರ ಗ್ರಾಮಕ್ಕೆ ಓಡಿ ಹೋಗಿ ಗ್ರಾಮಸ್ಥರನ್ನು ಕರೆತಂದು ಆರೋಪಿಗಳ ಬೆನ್ನಟ್ಟುವಷ್ಟರಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಚೈನ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೃತ್ಯಕ್ಕಾಗಿ ಬಳಸಿರುವ ದ್ವಿಚಕ್ರ ವಾಹನ ಕೂಡ ಕಳ್ಳತನದ್ದು ಎಂದು ಖಾರ್ಗೋನ್ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಸಿಂಗ್ ಚೌಹಾನ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಬಾಲಕಿ ಮತ್ತು ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡು ಅಪ್ರಾಪ್ತ ಬಾಲಕಿಯ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ. ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ರಾಸ್ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ, ಉತ್ತರ ಪ್ರದೇಶದಲ್ಲಿ ಮತ್ತೆರಡು ಪ್ರಕರಣಗಳು ಕಂಡುಬಂದಿವೆ. ಜೊತೆಗೆ ಮಧ್ಯಪ್ರದೇಶದಲ್ಲೂ ಇದೇ ಮಾದರಿಯ ಘಟನೆ ನಡೆದಿರುವುದು ಸಮಾಜದಲ್ಲಿ ಮಹಿಳೆಯರ ದುಸ್ಥಿತಿ ಹಿಡಿದ ಕೈಗನ್ನಡಿಯಾಗಿದೆ.


