ಭಾರತದಲ್ಲಿ ಉದ್ಯೋಗಗಳು ಕಡಿಮೆಯಾಗುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ (ಪಿಎಸ್‌ಯು) ಕಳೆದ ಒಂದು ದಶಕದಲ್ಲಿ ಉದ್ಯೋಗದಲ್ಲಿ ಕುಸಿತ ಕಂಡಿವೆ ಎಂದು ವರದಿಗಳು ಸೂಚಿಸಿದ ಕೆಲವೇ ಗಂಟೆಗಳ ನಂತರ ರಾಹುಲ್ ಗಾಂಧಿ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು (ಪಿಎಸ್‌ಯು) ನಿರ್ಲಕ್ಷಿಸುತ್ತಿದೆ. ಎರಡು ಲಕ್ಷಕ್ಕೂ ಅಧಿಕ ಉದ್ಯೋಗ ಕಡಿತ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಇದೇ ವೇಳೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಒದಗಿಸುವ ಬಿಜೆಪಿ ನಾಯಕರ ಹಿಂದಿನ ಭರವಸೆಗಳನ್ನು ರಾಹುಲ್ ನೆನಪಿಸಿಕೊಂಡರು.
“ಇದು ನಿಜವಾಗಿಯೂ ‘ಅಮೃತ ಕಾಲ’ ಆಗಿದ್ದರೆ ಉದ್ಯೋಗಗಳು ಏಕೆ ಈ ರೀತಿ ಕಣ್ಮರೆಯಾಗುತ್ತಿವೆ? ಈ ಸರ್ಕಾರದ ಅಡಿಯಲ್ಲಿ ದೇಶವು ದಾಖಲೆಯ ನಿರುದ್ಯೋಗದಿಂದ ನಲುಗುತ್ತಿದೆ. ಕೆಲವು ಬಂಡವಾಳಶಾಹಿ ಸ್ನೇಹಿತರ ಲಾಭಕ್ಕಾಗಿ ಲಕ್ಷಾಂತರ ಯುವಕರ ಕನಸನ್ನು ಭಗ್ನಗೊಳಿಸಲಾಗಿದೆ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
पीएसयू भारत की शान हुआ करते थे और रोज़गार के लिए हर युवा का सपना हुआ करते थे। मगर, आज ये सरकार की प्राथमिकता नहीं हैं।
देश के पीएसयू में रोज़गार, 2014 में 16.9 लाख से कम हो कर 2022 में मात्र 14.6 लाख रह गए हैं। क्या एक प्रगतिशील देश में रोज़गार घटते हैं?
BSNL में 1,81,127…
— Rahul Gandhi (@RahulGandhi) June 18, 2023
ದೇಶದ ಪಿಎಸ್‌ಯುಗಳಲ್ಲಿ ಉದ್ಯೋಗಾವಕಾಶವು 2014ರಲ್ಲಿ 16.9 ಲಕ್ಷದಿಂದ 2022ರಲ್ಲಿ 14.6 ಲಕ್ಷಕ್ಕೆ ಇಳಿಕೆಯಾಗಿದೆ. ಪ್ರಗತಿಪರ ದೇಶದಲ್ಲಿ ಉದ್ಯೋಗಗಳು ಕಡಿಮೆಯಾಗಿವೆಯೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದ ಅವರು, 2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿಮೆ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪಿಎಸ್‌ಯುನಲ್ಲಿ ಉದ್ಯೋಗ ಕಡಿತಕ್ಕೆ ಸಂಬಂಧಿಸಿದಂತೆ ರಾಹುಲ್ ನೀಡಿರುವ ಪಟ್ಟಿ:
ಬಿಎಸ್‌ಎನ್‌ಎಲ್: 1,81,127
ಸೇಲ್ (SAIL): 61,928
ಎಂಟಿಎನ್‌ಎಲ್: 34,997
ಎಸ್‌ಇಎಸ್‌ಎಲ್: 29,140
ಎಫ್‌ಸಿಐ: 28,063
ಒಎನ್‌ಜಿಸಿ: 21,120
”ಭಾರತದ ಪಿಎಸ್‌ಯುಗಳಿಗೆ ಸರ್ಕಾರ ಬೆಂಬಲ ನೀಡಿದರೆ ಅವು ಆರ್ಥಿಕತೆ ಮತ್ತು ಉದ್ಯೋಗ ಎರಡನ್ನೂ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ. ಪಿಎಸ್‌ಯುಗಳು ದೇಶದ ಮತ್ತು ದೇಶವಾಸಿಗಳ ಆಸ್ತಿಯಾಗಿದ್ದು, ಭಾರತದ ಪ್ರಗತಿಯ ಹಾದಿಯನ್ನು ಬಲಪಡಿಸಲು ಅವುಗಳನ್ನು ಉತ್ತೇಜಿಸಬೇಕು” ಎಂದು ರಾಹುಲ್ ಹೇಳಿದರು.
ಪಿಎಸ್‌ಯುಗಳಲ್ಲಿ ಗುತ್ತಿಗೆ ನೇಮಕಾತಿಯನ್ನು ಹೆಚ್ಚಿಸುವ ಮತ್ತು ಆ ಮೂಲಕ ಮೀಸಲಾತಿಯ ಹಕ್ಕನ್ನು ಕಸಿದುಕೊಳ್ಳುವ ಬಗ್ಗೆ ರಾಹುಲ್ ಗಾಂಧಿ ಅವರು ಸರ್ಕಾರವನ್ನು ಟೀಕಿಸಿದರು.
”ಇದು ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಪಿತೂರಿಯೇ? ಕೈಗಾರಿಕೋದ್ಯಮಿಗಳ ಸಾಲ ಮನ್ನಾ, ಮತ್ತು ಪಿಎಸ್‌ಯುಗಳಿಂದ ಸರ್ಕಾರಿ ಉದ್ಯೋಗಗಳನ್ನು ತೆರವುಗೊಳಿಸುವುದು! ಇದು ಯಾವ ರೀತಿಯ ಅಚ್ಛೆ ದಿನ್?” ಎಂದು ಪ್ರಶ್ನೆ ಮಾಡಿದರು.
ಪ್ರಧಾನಿ ಮೋದಿ ಸರ್ಕಾರವು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳ ಸುಳ್ಳು ಭರವಸೆಯನ್ನು ನೀಡಿದೆ. ಆದರೆ ಭರವಸೆ ಈಡೇರಿಸುವ ಬದಲು ಎರಡೂ ಲಕ್ಷಕ್ಕೂ ಅಧಿಕ ಉದ್ಯೋಗ ಕಡಿತಗೊಳಿಸಲಾಗಿದೆ ಎಂದು ರಾಹುಲ್ ಹೇಳಿದ್ದಾರೆ.


