Homeಅಂಕಣಗಳುಮೈಂಡ್ ಟ್ಯಾಂಪರಿಂಗ್: ಮೆದುಳಿಗೆ ತಣ್ಣಗೆ ತಗುಲಿಕೊಂಡ ‘ಮೋದಿ’ ವೈರಸ್!

ಮೈಂಡ್ ಟ್ಯಾಂಪರಿಂಗ್: ಮೆದುಳಿಗೆ ತಣ್ಣಗೆ ತಗುಲಿಕೊಂಡ ‘ಮೋದಿ’ ವೈರಸ್!

ಸಿಟಿ ಸೇರಿ ಭಕ್ತರಾಗಿರುವ ಯುವಕರು ಇಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ‘ಬೋಧನೆ’ ಮಾಡುತ್ತಿದ್ದಾರೆ. ಆ ‘ಯಶಸ್ವಿ’ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳುವುದಕ್ಕೆ ತಳಮಟ್ಟದಲ್ಲಿ ಖುಷಿಯಿದೆ.

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

‘ಹಗಲಿರುಳು ಕಾಯಕವೇ ಕೈಲಾಸ ಗೆಲಿದಿದೆ…… ದಯವೇ ಧರ್ಮದ ಮೂಲ ಚೆಲುವಾಗಿ ಒಲಿದಿದೆ…’ -ಚುನಾವಣಾ ಫಲಿತಾಂಶದ ಮರುದಿನ ಈ ಫೇಸ್‍ಬುಕ್ ಬರಹ ನೋಡಿ ಆ ಕ್ಷಣ ಅಸಹ್ಯವಾಯಿತು. ಏಕೆಂದರೆ ಮೋದಿಯನ್ನು ಹೊಗಳಲು ಬಸವಣ್ಣನ ವಚನ ಬಳಸಿಕೊಂಡಿದ್ದ ನಿರ್ಲಜ್ಜ ಮಾದರಿಯಿದು. ಈ ಫೇಸ್‍ಬುಕ್ ಬರಹ ಹಾಕಿದ್ದು, ಭಾರತದ ಸಾಫ್ಟ್‍ವೇರ್ ರಫ್ತಿನಲ್ಲಿ ಮೊದಲ ಮೂರು ಸ್ಥಾನದಲ್ಲಿರುವ ದೈತ್ಯ ಸಾಫ್ಟ್‍ವೇರ ಕಂಪನಿಯೊಂದರ ಮಾನವ ಅಭಿವೃದ್ಧಿ ವಿಭಾಗದ ಮುಖ್ಯಸ್ಥರೊಬ್ಬರು! 3-4 ತಿಂಗಳಿಂದ ಇವರ ಪೋಸ್ಟ್ ಗಮನಿಸುತ್ತಿದ್ದಾಗ, ಅಲ್ಲಿ ಅವರು ಬೇರೆ ಬೇರೆ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕರಿಯರ್ ಗೈಡೆನ್ಸ್ ಮಾಡುವ ಕಾರ್ಯಾಗಾರಗಳ ಅಥವಾ ಕೆಲವೊಮ್ಮೆ ಬಸವಣ್ಣನ ಕುರಿತಾದ ಟಿಪ್ಪಣಿ ಅಥವಾ ವಚನ ಇದ್ದವು. ಎಂದೂ ರಾಜಕೀಯ ಬರಹ ಕಂಡಿರಲಿಲ್ಲ. ಮೋದಿ ಗೆದ್ದ ಉತ್ಸಾಹದಲ್ಲಿ ಈ ‘ಜಂಗಮ’ರು ತಮ್ಮ ಒಡಲೊಳಗಿನ ಪ್ರೀತಿಯನ್ನು ಹಂಚಿಕೊಳ್ಳುವ ಭರದಲ್ಲಿ ಬಸವಣ್ಣನ ಹೆಸರನ್ನೂ ತಂದು ಅವಮಾನಿಸಿಬಿಟ್ಟರು!ಅಂದಂತೆ ಇವರು ಕೂಡಲ ಸಂಗಮದಲ್ಲಿರುವ ಪೂಜಾರಿ ಕುಟುಂಬವೊಂದಕ್ಕೆ ಸೇರಿದವರು!
*****

‘ನಿನ್ನ ಪ್ರಜಾವಾಣಿನೂ ಬೇಡ, ನೀನೂ ಬೇಡ’ ಎಂದು ಅವರು ತಮ್ಮ ಎದುರಿದ್ದ ಪೇಪರನ್ನು ಎಸೆದರು. ಎಸೆದವರು ನನ್ನ ಹತ್ತಿರದ ಸಂಬಂಧಿ. ಅವತ್ತು ಅವರ ಮನೆಗೆ ಹೋದಾಗ ಕೈಲಿಯಲ್ಲಿದ್ದ ‘ಪ್ರಜಾವಾಣಿ’ಯನ್ನು ಅವರ ಟೀಪಾಯಿ ಮೇಲಿಟ್ಟು ಕುಳಿತಿದ್ದೆ. ಹಂಗೇ ರಾಜಕಾರಣದ ವಿಚಾರವೂ ಬಂದಿತು. ನೋಟು ಅಮಾನ್ಯೀಕರಣದ ವಿಷಯವೂ ಬಂದಿತು. ಅವರು ಒಬ್ಬ ಸಾಧಾರಣ ಬಿಜೆಪಿ ಅಭಿಮಾನಿ ಎಂದು ನಾನು ತಿಳಿದಿದ್ದೆ. ಅಮಾನ್ಯೀಕರಣವಾಗಿ ವರ್ಷವಾಗುತ್ತ ಬಂದ ಹೊತ್ತದು. ಅದರಿಂದ ಕಪ್ಪುಹಣಕ್ಕೆ ಮೂಗುದಾರ ಬಿದ್ದಿದೆ, ಭಯೋತ್ಪಾದನೆ ನಿಲ್ಲಲಿದೆ ಎಂದೆಲ್ಲ ಅವರು ಹೇಳತೊಡಗಿದರು.

ನೋಟ್ ಬ್ಯಾನ್‍ನಿಂದ ಜನಸಾಮಾನ್ಯರಿಗಾದ ತೊಂದರೆಗಳನ್ನು ಮತ್ತು ಅರ್ಥವ್ಯವಸ್ಥೆಗೆ ಅದು ಮಾಡಿದ ಧಕ್ಕೆಯನ್ನು ಹೇಳಿ, ಕಪ್ಪುಹಣ ಈಗ ಮಾನ್ಯತೆ ಪಡೆದು ಹೊರಬಿದ್ದಿದೆ ಎಂದೆ… ಹೀಗೆ ಮಾತು ಸಾಗಿ, ನಿಮ್ಮಂಥವರಿದ್ದರೆ ಹಿಂದೂಗಳಿಗೆ ಉಳಿಗಾಲವಿಲ್ಲ, ಅದಕ್ಕೇ ಮೋದಿ ಬಂದಿರುವುದು ಅಂತಾ ಏನೇನೋ ವಿಷಯಾಂತರ ಮಾಡಿದರು. ನಾನೂ ತಿಕ್ಕಲನೇ! ಅವರ ಮನೆಯ ವಿಜಯವಾಣಿ ತೆಗೆದುಕೊಂಡು, ಓಹ್ ಇದನ್ನಾ ನೀವ್ ಓದೋದು ಅಂದೆ….ಅವರಿಗೆ ಅದೆಲ್ಲಿಂದ ಸಿಟ್ಟು ಬಂತೋ, ಟೀಪಾಯಿ ಮೇಲಿದ್ದ ಪ್ರಜಾವಾಣಿಯನ್ನು ಬೀಸಿ ಒಗೆದರು. ‘ಬಂದ್ರ ನಾಕ್ ಚಂದಂಗ್ ಮಾತಾಡಿ ಹೋಗ್ಬೇಕ್. ಕಾಂಗ್ರೆಸ್‍ನೋರು ನಮ್ ಮನಿಗೆ ಬರೋದ ಬ್ಯಾಡ’ ಎಂದು ಅಬ್ಬರಿಸಿದರು. ಅವರ ಪತ್ನಿ ಬಂದು ನನ್ನನ್ನು ಒಳ ಕರೆದು, ‘ರಾಜಕೀಯ ಯಾಕ್ ಮಾತಾಡ್ತೀರಿ?’ ಎಂದು ಸಮಾಧಾನ ಮಾಡಿದರು. ಒಟ್ಟಿನಲ್ಲಿ ಅವರು ನನಗೆ ಕಾಂಗ್ರೆಸ್ ಸದಸ್ಯತ್ವವನ್ನು ದಯಪಾಲಿಸಿದ್ದರು!

ಇಲ್ಲಿ ಸಮಸ್ಯೆ ಎಂದರೆ, ಅವರು ಪ್ರಜಾವಾಣಿ ಓದದಿದ್ದರೂ, ನಾನು ಅದನ್ನು ತಂದಿದ್ದೇ ಎಂಬುದಕ್ಕೆ ಅದರ ಮೇಲೆ ಸಿಟ್ಟು. ಅದಕ್ಕಿಂತ ಹೆಚ್ಚಾಗಿ ವಿಜಯವಾಣಿಗೆ ಗೇಲಿ ಮಾಡಿದ್ದು ಇನ್ನೂ ಸಿಟ್ಟು. ಈ ಸಿಟ್ಟಿನ ಮೂಲ ಅವರ ಮೋದಿಯ ಆರಾಧನೆ!
***

ಕಾಂಗ್ರೆಸ್ ವಿರುದ್ಧದ ಆಕ್ರೋಶ ಅವರನ್ನು ಬಿಜೆಪಿ ಕಡೆ ತಿರುಗಿಸಿರಬಹುದು. ಆದರೆ, ಸ್ವಚ್ಛ ಭಾರತ ಮತ್ತು ನೋಟ್‍ಬ್ಯಾನ್ ಅವರನ್ನು ಮೋದಿ ಅಭಿಮಾನಿಯನ್ನಾಗಿ ಮಾಡಿದ್ದು ಹೇಗೆ? ಬಹುಷ: ಅವರು ದಿನವೂ ಓದುತ್ತ ಬಂದ ವಿಜಯವಾಣಿ ಮತ್ತು ನೋಡುತ್ತ ಬಂದಿದ್ದ ಕನ್ನಡದ ನ್ಯೂಸ್ ಚಾನೆಲ್‍ಗಳು. ನಿವೃತ್ತ ಶಿಕ್ಷರಾದ ಅವರು, ಕುಟುಂಬಗಳ ಮದುವೆ ಸಮಾರಂಭ, ಅಂತ್ಯಸಂಸ್ಕಾರಗಳಲ್ಲಿ ಮೋದಿಯ ಗುಣಗಾನ ಮಾಡಿದರು. ಸಂಶಯಪಟ್ಟವರಿಗೆ, ಮೋದಿ ಬ್ರಹ್ಮಚಾರಿ, ರೊಕ್ಕ, ಬಂಗಾರ, ಸೈಟು ತಗೊಂಡು ಅವಾ ಏನ್ ಮಾಡ್ತಾನೋ ಎಂದು ಮೋದಿಯನ್ನು ತಲೆ ಮೇಲೆ ಹೊರಲಾರಂಭಿಸಿದರು. ಅವರು ಮುಂಜಾನೆ ವಾಕಿಂಗ್ ಹೋದಾಗ ಪರಿಚಯವಾದ ನಿವೃತ್ತರೆಲ್ಲರ ನಡುವಿನ ಚರ್ಚೆ ಮೋದಿ ಗುಣಗಾನವೇ ಆಗಿತ್ತು, ಈಗ ಅದು ಇನ್ನಷ್ಟು ಹೆಚ್ಚಾಗಿರಲೇಬೇಕು. ಯಾರೀ ನಿವೃತ್ತರು? ಪುಟ್ಟ ನಗರದಲ್ಲಿ ನೆಲೆ ಕಂಡುಕೊಂಡಿರುವ ಇವರೆಲ್ಲ ತಮ್ಮ ಹೆಣ್ಣುಮಕ್ಕಳನ್ನು ಚೆನ್ನಾಗಿ ಓದಿಸಿ ಹುಡುಹುಡುಕಿ ಟೆಕ್ಕಿಗಳಿಗೆ ಮದುವೆ ಮಾಡಿದವರು. ಗಂಡು ಮಕ್ಕಳೆಲ್ಲ ಟೆಕಿಯೋ, ಅಕೌಂಟಂಟೋ ಆಗಿ ವಿದೇಶ ಅಥವಾ ಬೆಂಗಳೂರಲ್ಲಿ ಇರುವವರು. ಇವರು ಇಲ್ಲಿ ವಿಜಯವಾಣಿ (ಇದು ಒಂದು ರೂಪಕವಷ್ಟೇ…ಅಂತಹ ಪೇಪರ್ಸ್ ಎಂದು ಓದಿಕೊಳ್ಳಿ) ಓದುತ್ತ ತಮಗೇ ಗೊತ್ತಿಲ್ಲದಂತೆ ಆರೆಸ್ಸೆಸ್ ಐಡಿಯಾಲಜಿಗೆ ತುತ್ತಾದರೆ, ಮಕ್ಕಳು ವ್ಯಾಟ್ಸಪ್, ಫೇಸ್‍ಬುಕ್ ಬರಹಗಳೇ ಅಂತಿಮ ಎಂದು ಅದನ್ನು ನಂಬಿಕೊಂಡವರು.
***

ಆ ಸಂಬಂಧಿ ಮತ್ತು ಅವರ ಪತ್ನಿ ಮಗಳ ಹೆರಿಗೆಗೆಂದು 6 ತಿಂಗಳು ವಿದೇಶದಲ್ಲಿದ್ದು ಬಂದರು. ಅವರು ಬಂದ ದಿನ ನಾನು ಅವರ ಮನೆಗೆ ಹೋದಾಗ, ನನ್ನ ಕಸಿನ್ ಜೊತೆ ಮಾತಾಡುತ್ತ ಕುಳಿತಿದ್ದ ಅವರು, ವಿದೇಶದ ಗುಣಗಾನ ಮಾಡುತ್ತ ಇಲ್ಲಿನ ರಾಜಕೀಯವನ್ನೆಲ್ಲ ಬೈಯುತ್ತಿದ್ದರು. ಆದರೂ ಮೋದಿ ಬಂದ ಮೇಲೆ ಸುಧಾರಿಸುತ್ತಿದೆ ಎಂಬ ಫೈನಲ್ ಟಚ್! ಇಲ್ಲಿನ (ಆಗಿನ) ಸಿದ್ದರಾಮಯ್ಯ ಸರ್ಕಾರವನ್ನು ಅವರು ಮತ್ತು ನನ್ನ ಕಸಿನ್ ಸಿಕ್ಕಾಪಟ್ಟೆ ಬೈದರು. ಅನ್ನಭಾಗ್ಯ, ಕುರಿ ಸಾಲ ಇತ್ಯಾದಿಗಳೆಲ್ಲ ವೇಸ್ಟ್ ಅಂದರು. ಸಿದ್ದರಾಮಯ್ಯ ಬಂದ ಮೇಲೆ ಕುರುಬರ ಸೊಕ್ಕು ಜಾಸ್ತಿಯಾಗಿದೆ ಎಂದರು. ಅದ್ಹೇಗೆ ಹೇಳ್ತೀರಿ? ಅವರ ಸಂಪುಟದಲ್ಲಿ ಅವರನ್ನು ಬಿಟ್ಟರೆ ಹುಲ್ಲಪ್ಪ ಮೇಟಿ ಒಬ್ಬರೇ ಕುರುಬ ಸಚಿವ ಅಲ್ಲವೇ? ಸಿಎಂ ಸುತ್ತ ಕುರುಬ ಅಧಿಕಾರಿಗಳ ಹಿಂಡೂ ಇಲ್ಲ. ಜೆಎಚ್ ಪಟೇಲ್, ಯಡಿಯೂರಪ್ಪ, ಎಸ್‍ಎಂ. ಕೃಷ್ಣ, ಕುಮಾರಸ್ವಾಮಿ ಸಿಎಂ ಇದ್ದಾಗ ಅವರ ಜಾತಿಯ ಅಧಿಕಾರಿಗಳೆಲ್ಲ ಉನ್ನತ ಸ್ಥಾನದಲ್ಲಿದ್ದರು ಎಂದೆ. ಏನೂ ಗೊತ್ತಿಲ್ದ ಮಾತಾಡಬ್ಯಾಡ. ನಿಂಗೇನು ಗೊತೈತಿ, ಕುರುಬರ ಸೊಕ್ಕು ಜಾಸ್ತಿ ಆಗೈತಿ ಎಂದು ಆ ಸಂಬಂಧಿ ಕಿಡಿ ಕಾರಿದರು.

ಚಾ ಕುಡಿಯುವಾಗ ಅವರು ಮತ್ತು ಅವರ ಪತ್ನಿ ವಿದೇಶದ ಅನುಭವ ಹೇಳತೊಡಗಿದರು. ಅಲ್ಲಿನ ಉಚಿತ ಶಿಕ್ಷಣ, ಹೆಲ್ತ್‍ಕೇರ್ ಕುರಿತು ಬಣ್ಣಿಸಿ ಇಲ್ಲಿನ ಅವ್ಯವಸ್ಥೆಗೆ ಛೇ ಎಂದರು. ಈಗ ಹುಟ್ಟಿರುವ ತಮ್ಮ ಮೊಮ್ಮಗಳಿಗೆ (ನವಜಾತ ಶಿಶು) ಅಲ್ಲಿ 6 ವಾರಗಳವರೆಗೆ ಪೋಷಣಾ ಭತ್ಯೆ ನೀಡುತ್ತಾರೆ ಎಂದರು. ಈ ಬಗ್ಗೆ ಗೊತ್ತಿದ್ದ ನಾನು, ಅದೆಲ್ಲ ಸರ್ಕಾರದ ಕರ್ತವ್ಯ ಎನ್ನುತ್ತ, ಆದರೆ ಇಲ್ಲಿ ಅನ್ನಭಾಗ್ಯ ಯೋಜನೆಯನ್ನು ವಿರೋಧ ಮಾಡ್ತೀರಿ, ಗರ್ಭಿಣಿಯರಿಗೆ ನೆರವಾಗುವ ಮಾತೃಪೂರ್ಣ ಯೋಜನೆಯನ್ನೂ ಟೀಕಿಸುತ್ತೀರಿ… ಅಲ್ಲಾದರೆ ಸರಿ, ಇಲ್ಲಾದರೆ ತಪ್ಪೇ ಎಂದಾಗ ಸಂಬಂಧಿ ಮತ್ತು ನನ್ನ ಕಸಿನ್ ಮತ್ತೆ ರೇಗಾಡಿದರು, ಮೋದಿಯನ್ನು ತಂದು ನಿಲ್ಲಿಸಿದರು. ಮೋದಿಯ ಶಿಸ್ತಿನ ಆಡಳಿತವೇ ಈಗ ದೇಶಕ್ಕೆ ಬೇಕಾಗಿದೆ ಎಂದರು.
***

2018 ರ ವಿಧಾನಸಭಾ ಚುನಾವಣೆ ಮುಗಿದ ನಂತರ ಆ ಸಂಬಂಧಿಕರ ಪತ್ನಿ ನಮ್ಮ ಮನೆಗೆ ಬಂದಿದ್ದರು. ಯಾರಿಗೆ ವೋಟ್ ಹಾಕಿದ್ರಿ ಎಂದೆ. ಮೋದಿಗೆ ಅಂದರು. ಅಲ್ಲರಿ, ಹೋದ ತಿಂಗಳು ನೀವೇ ಹೇಳ್ತಿದ್ರಿ, 6 ತಿಂಗಳಿಂದ ನೀರಿನ ಟ್ಯಾಂಕರ್ ಹಾಕಿಸಿಲ್ಲ, ದಿನಾ ನೀರು ಬರ್ತಾವೆ ಅಂತಾ. ನಿಮ್ಮ ಅಳಿಯ ಬಂದಾಗ ಈ ಸಲ ರಸ್ತೆ ಚೆನ್ನಾಗಿ ಆಗಿವೆ ಅಂದಿದ್ರು. 10-12 ದಿನಕ್ಕೊಮ್ಮೆ ಬರುತ್ತಿದ್ದ ನೀರು ದಿನವೂ ಬರುವಾಗ, ಅದನ್ನು ಕಷ್ಟಪಟ್ಟು ಸಾಧ್ಯವಾಗಿಸಿದ ಮನುಷ್ಯನಿಗೆ ವೋಟ್ ಹಾಕಬೇಕಿತ್ತಲ್ಲ? ಅದೂ ಮೋದಿ ಪಕ್ಷದ ಕಡೆಯಿಂದ ನಿಂತವನು ಉಂಡಾಡಿಗುಂಡ. ಅವನಿಗೆ ವೋಟ್ ಹಾಕಿರಲ್ಲ ಎಂದೆ. ದಿನಾ ನೀರು ಬರಾಕ ಹತ್ತಿದ ಮೇಲೆ ನಮ್ಮ ಓಣಿ ಹೆಣ್ಮಕ್ಕಳು ಅವ್ರನ್ನು ಹೊಗಳ್ತಾನೇ ಇದ್ದೀವಿ. ಆದರೆ ನಮ್ಮ ಓಣಿಯ ಗಂಡು ಮಕ್ಕಳು ಸಭೆ ಮಾಡಿ ಮೋದಿಗೇ ವೋಟ್ ಹಾಕೋದು ಅಂತಾ ನಿರ್ಧಾರ ಮಾಡಿದರು ಎಂದರು!

ಬೇರೆ ಕ್ಷೇತ್ರ ಹೋಲಿಸಿದರೆ ಆ ಸಲ ಸಾಕಷ್ಟು ಕೆಲಸ ಮಾಡಿದ್ದ ಎಚ್.ಕೆ. ಪಾಟೀಲ ಕೇವಲ ಸಾವಿರದ ಚಿಲ್ಲರೆ ಮತಗಳಿಂದ ಗೆದ್ದರು. ನಗರದ ದಲಿತರು, ಮುಸ್ಲಿಮರು ಮತ್ತು ಬಹು ಗ್ರಾಮಗಳು ಎಚ್‍ಕೆ ಕೈ ಹಿಡಿಯದಿದ್ದರೆ ಅನಿಲ್ ಮೆಣಸಿನಕಾಯಿ ಎಂಬ ಪುಂಡ ಗದಗಿನ ಶಾಸಕ ಆಗಿ ಬಿಡುತ್ತಿದ್ದ! ಇದರಿಂದ ನನ್ನ ಸಂಬಂಧಿ ಮತ್ತು ಅವರ ಪತ್ನಿ ಬೇಜಾರಾಗಿದ್ದರು!
***

ಮೊದಲ ಪ್ಯಾರಾದಲ್ಲಿ ಪ್ರಸ್ತಾಪಿಸಿದ ಮಾನವಾಭಿವೃದ್ಧಿಕಾರಿ ಈ ಹಿಂದೆ ಲೆಕ್ಚರರ್ ಆಗಿದ್ದ ಇಂಜಿನಿಯರಿಂಗ್ ಕಾಲೇಜಿನ ಅವರ ಕೆಲವು ವಿದ್ಯಾರ್ಥಿಗಳೂ (ನನ್ನ ಮಿತ್ರರೂ) ಈಗ ಒಳ್ಳೊಳ್ಳೆ ಸಂಬಳದ ಖಾಸಗಿ ಕೆಲಸದಲ್ಲಿದ್ದು, 3-4 ತಿಂಗಳಿಂದ ಫೇಸ್‍ಬುಕ್ ಮತ್ತು ವ್ಯಾಟ್ಸಾಪ್ ಸಂಪರ್ಕದಲ್ಲಿ ಸಿಗುತ್ತಿದ್ದಾರೆ. ಇಂತಹ ಸುಮಾರು 30 ಮಂದಿ ಪೈಕಿ ನಾಲ್ವರನ್ನು ಬಿಟ್ಟು ಉಳಿದೆಲ್ಲರೂ ಮೋದಿಯ ಭಕ್ತರು! ಆ ನಾಲ್ವರಲ್ಲಿ ಇಬ್ಬರು ಮುಸ್ಲಿಮರು, ಒಬ್ಬ ಒಬಿಸಿ ಮತ್ತು ಒಬ್ಬ ದಲಿತ.. ಮೋದಿಭಕ್ತರಲ್ಲಿ ಒಬಿಸಿ, ದಲಿತ ಗೆಳೆಯರೂ ಇದ್ದಾರೆ. ಆದರೆ ಆ ವ್ಯಾಟ್ಸಾಪ್ ಗ್ರೂಪ್‍ಗಳ ನಿಯಂತ್ರಣ ಬ್ರಾಹ್ಮಣರು ಅಥವಾ ಚೆಡ್ಡಿಗಳಾದ ಲಿಂಗಾಯತರ ಕೈಯಲ್ಲಿದೆ. ಮೋದಿ ವಿರುದ್ಧ ಒಂದು ಸಾಲು ಬಂದರೂ ಇವರೆಲ್ಲ ಪೋಸ್ಟ್‍ಕಾರ್ಡ್ ಹಂಚಿದ ಸುಳ್ಳನ್ನೋ, ಬಿಜೆಪಿ ಐಟಿ ಸೆಲ್ ಹಬ್ಬಿಸಿದ ಸುಳ್ಳನ್ನೋ ಸತ್ಯ ಎಂಬಂತೆ ಪ್ರತಿಪಾದಿಸುತ್ತಾರೆ. ಎಲ್ಲರೂ ಮುಗಿ ಬೀಳುತ್ತಾರೆ.
***

ಗ್ರಾಮಗಳ ಯುವಕರಿಗೆ ಈ ‘ಮೋದಿಯ’ ಸಾಧನೆ ಹರಿಯುವುದು ವ್ಯಾಟ್ಸಾಪ್ ಮೂಲಕ|! ಸಿಟಿ ಸೇರಿ, ಒಳ್ಳೆ ಸಂಬಳದಲ್ಲಿರುವ ಜನರೆಲ್ಲ ತಮ್ಮ ಊರು, ತಾಲೂಕಿನ ವ್ಯಾಟ್ಸಾಪ್ ಗುಂಪುಗಳ ಸದಸ್ಯರಾಗಿ, ಸುಳ್ಳನ್ನು ಹರಿಬಿಡುತ್ತಾರೆ. ಇವರು ಹೇಳಿದ್ದೆಲ್ಲ ಸತ್ಯ ಎಂಬಂತೆ ಹಳ್ಳಿಯ ಪಿಯು, ಡಿಗ್ರಿ ಹುಡುಗರು ಮಾತಾಡುತ್ತವೆ. ಹಳ್ಳಿಯ ಕಾಂಗ್ರೆಸ್ ಯುವ ನಾಯಕರನ್ನೂ ಇವರು ‘ವಾದ’ದಲ್ಲಿ ಬಗ್ಗಿಸುತ್ತಾರೆ. ಯಾವ ಕಂಟೆಂಟೂ ಇಲ್ಲದ ಕಾಂಗ್ರೆಸ್ಸಿನ ಮಬ್ಬ ನಾಯಕರು ಹೌದದು ಹೌದು ಎನ್ನುತ್ತಾರೆ. ಇದು ಅವರ ತಪ್ಪಲ್ಲ. ಅದು ಕಾಂಗ್ರೆಸ್‍ನ ಸಂಘಟನೆಯ ದೋಷ.
***

ಅಂತಿಮವಾಗಿ ಹೇಳುವುದಾದರೆ, ತಳಮಟ್ಟದಲ್ಲಿ ಏನಾಗುತ್ತಿದೆ ಎಂದರೆ, ಸಿಟಿ ಸೇರಿ ಭಕ್ತರಾಗಿರುವ ಯುವಕರು ಇಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ‘ಬೋಧನೆ’ ಮಾಡುತ್ತಿದ್ದಾರೆ. ಆ ‘ಯಶಸ್ವಿ’ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳುವುದಕ್ಕೆ ತಳಮಟ್ಟದಲ್ಲಿ ಖುಷಿಯಿದೆ.

ಮೇಲೆ ಉಲ್ಲೇಖಿಸಿದ ನನ್ನ ಸಂಬಂಧಿಯ ತಲೆಗೆ ಮೊದಲಿಗೆ ಮೋದಿ ಹವಾ ತುರುಕಿದ್ದು ಮೆಟ್ರೋಗಳಲ್ಲಿ ಓದುತ್ತಿದ್ದ, ಕೆಲಸ ಮಾಡುತ್ತಿದ್ದ ಅವರ ಮಕ್ಕಳು ಮತ್ತು ಅಳಿಯಂದಿರು. ನಂತರ ಆ ಸಂಬಂಧಿಯೇ 5 ವರ್ಷಗಳಲ್ಲಿ ಬಿಜೆಪಿಯ ವಕ್ತಾರರಂತೆ ಮಾತಾಡಲು ಶುರು ಮಾಡಿದರು.

ಮೇಲೆ ಉಲ್ಲೇಖಿಸಲಾದ ಬಹುತೇಕರಲ್ಲಿ ಲಿಂಗಾಯತರೇ ಜಾಸ್ತಿಯಿದ್ದು, ಇವರೆಲ್ಲರ ತಲೆಯಲ್ಲಿ ಮೀಸಲಾತಿಯಿಂದ ತಮಗೆ ಅನ್ಯಾಯ ಆಗುತ್ತಿದೆ, ಅದನ್ನು ಬಿಜೆಪಿ ಸರಿ ಮಾಡುತ್ತದೆ ಎಂಬ ಭ್ರಮೆಯನ್ನು ಬಿತ್ತಲಾಗಿದೆ. ಪಾಕಿಸ್ತಾನ ದ್ವೇಷವನ್ನೇ ದೇಶಭಕ್ತಿ ಎಂಬಂತೆ ಬಿಂಬಿಸಲಾಗಿದೆ. ಮುಸ್ಲಿಮರೆಲ್ಲ ಹಿಂದೂ ವಿರೋಧಿಗಳು ಮತ್ತು ಅವರೆಲ್ಲ ಪಾಕ್ ಪರ ಎಂಬ ಸುಳ್ಳನ್ನು ಪದೇ ಪದೇ ಹೇಳಿ ಬ್ರೇನ್‍ವಾಶ್ ಮಾಡಲಾಗಿದೆ…

ಈ ಸಲದ ಚುನಾವಣೆಯಲ್ಲಂತೂ ಬೂತ್ ಲೆವೆಲ್ಲಿಗೆ ಇಂತಹ ಮನಸ್ಥಿತಿಯವರಿಗೆ ಉಸ್ತುವಾರಿ ಕೊಡುವ ಮೂಲಕ ಬಿಜೆಪಿ ಬರಗಾಲದಲ್ಲೂ ಮತಗಳ ಭರಪೂರ ಬೆಳೆ ತೆಗೆದಿದೆ…

ಎಲ್ಲೋ ಇರುವ ಕೆಲವರು ಇಲ್ಲಿನ ಮೆದುಳುಗಳನ್ನು ಹೇಗೆ ಟ್ಯಾಂಪರಿಂಗ್ ಮಾಡುತ್ತಿದ್ದಾರೆ ನೋಡಿ. ಕೂಡಲ ಸಂಗಮದಂತಹ ಪರಿಸರದಲ್ಲಿ ಬೆಳೆದ, ಅಲ್ಲಿನ ದೇವಸ್ಥಾನದ ಪೂಜಾರಿ ಕುಟುಂಬವೊಂದರಿಂದ ಬಂದ ವ್ಯಕ್ತಿ ಈಗ ಉನ್ನತ ಸ್ಥಾನದಲ್ಲಿ ಇದ್ದುಕೊಂಡು ಮೋದಿ ಗೆಲುವನ್ನು ಬಣ್ಣಿಸಲು ಬಸವಣ್ಣನ ವಚನ ಬಳಸಿ, ಮೋದಿಯನ್ನು ಬಸವಣ್ಣನಿಗೆ ಹೋಲಿಸಲು ಯತ್ನಿಸುತ್ತಾರೆಂದರೆ, ಅದೆಂತಹ ಬ್ರೇನ್ ಟ್ಯಾಂಪರಿಂಗ್ ಆಗಿರನೇಕು? ಇದೆಲ್ಲ ನಮಗೆಲ್ಲ ಗೊತ್ತಿಲ್ಲದಂತೆ 2-3 ದಶಕಗಳಿಂದ ನಡೆದ ಒಂದು ಷಡ್ಯಂತ್ರ…
ಇನ್ನು ನಮ್ಮ-ನಿಮ್ಮ ಕೆಲಸದ ಸಮಯ ಹೆಚ್ಚಬೇಕಿದೆ, ಮಾರ್ಗಗಳೂ ಬದಲಾಗಬೇಕಿದೆ…

(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮೈಂಡ್ ಟ್ಯಾಂಪರಿಂಗ್ ವಿಡಂಬನೆ ಲೇಖನವನ್ನು ಮಲ್ಲನಗೌಡರ್ ಅವರು ತುಂಬಾ ಚೆನ್ನಾಗಿ ಬರೆದಿದ್ದಾರೆ. ಧನ್ಯವಾದಗಳು ಸರ್.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...