ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್‍ಗೆ ಟಿಕೆಟ್ ನೀಡುವ ಮೂಲಕ ಸಮಾಜವಾದಿ ಪಕ್ಷ ಅಚ್ಚರಿ ಮೂಡಿಸಿದೆ. ಆ ಮೂಲಕ ಮೋದಿ ವಿರುದ್ಧದ ಹೋರಾಟವನ್ನು ಮತ್ತಷ್ಟು ತ್ರೀವ್ರಗೊಳಿಸಿದೆ. ಈಗಾಗಲೇ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ತೇಜ್ ಬಹದ್ದೂರ್‍ರವರು ಸಮಾಜವಾದಿ ಪಕ್ಷದ ಸೈಕಲ್ ಗುರುತಿಗೆ ಬದಲಿಸಿಕೊಳ್ಳಲಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಬಿಎಸ್‍ಪಿ ಕೂಡ ಈ ಮೊದಲು ಶಾಲಿನಿ ಯಾದವ್‍ರವರನ್ನು ತನ್ನ ಅಭ್ಯರ್ಥಿಯನ್ನಾಗಿ ಪ್ರಕಟಿಸಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಮೋದಿಗೆ ಮತ್ತಷ್ಟು ಕಠಿಣ ಎನಿಸುವಂತೆ ಮಾಡಲು ತನ್ನ ಪಕ್ಷದ ಟಿಕೆಟ್‍ನ್ನು ಬದಲಿಸಿ ಮಾಜಿ ಯೋಧನಿಗೆ ನೀಡಲಾಗಿದೆ. ಈಗಾಗಲೇ ರಂಗೇರಿರುವ ವಾರಣಾಸಿ ಚುನಾವಣಾ ಕಣ ಎಸ್ಪಿಯ ಈ ನಡೆಯಿಂದ ಮತ್ತಷ್ಟು ರಣರಂಗವಾಗಲಿದೆ.
ಇದನ್ನೂ ಓದಿ: ಮೋದಿ ವಿರುದ್ಧ ಕಣಕ್ಕಿಳಿದಿರುವ ಮಾಜಿ ಯೋಧನ ಮನದಾಳದ ಮಾತುಗಳನ್ನು ಕೇಳಿ.
ಬಿಬಿಸಿಗೆ ಈಗಾಗಲೇ ನೀಡಿರುವ ಸಂದರ್ಶನದಲ್ಲಿ ಯಾದವ್ ಇದು ಅಸಲಿ ಮತ್ತು ನಕಲಿ ಚೌಕಿದಾರರ ನಡುವಿನ ಕದನ ಎಂದು ಬಣ್ಣಿಸಿದ್ದಾರೆ. ಈ ಹಿಂದೆ ಹಲವು ಪಕ್ಷಗಳು ಟಿಕೆಟ್ ನೀಡುತ್ತೇವೆ ಪಕ್ಷ ಸೇರಿ ಎಂದಿದ್ದರೂ ಒಪ್ಪದೇ ಪಕ್ಷೇತರನಾಗಿ ಸ್ಪರ್ಧಿಸಿದ್ದ ಯಾದವ್ ಈಗ ಮನಸ್ಸು ಬದಲಿಸಿ ಸಮಾಜವಾದಿ ಪಕ್ಷದ ಸೈಕಲ್ ತುಳಿಯಲು ಮುಂದಾಗಿದ್ದಾರೆ.
ಕಾಂಗ್ರೆಸ್ ಪಕ್ಷವೂ ಅಜಯ್ ರಾಯ್ ಎನ್ನುವವರಿಗೆ ಟಿಕೇಟ್ ನೀಡಿದ್ದು ಅವರು ಕಳೆದ ಚುನಾವಣೆಯಲ್ಲಿಯೂ ಸಹ ಮೋದಿ ವಿರುದ್ಧ ಸ್ಪರ್ಧಿಸಿ ಕೇವಲ 70 ಸಾವಿರದಷ್ಟು ಮತಗಳನ್ನು ಪಡೆದಿದ್ದರು. ಅದಕ್ಕಾಗಿ ಅವರು ಟಿಕೆಟ್ ವಾಪಸ್ ಪಡೆದು ಸೈನಿಕನಿಗೆ ಬೆಂಬಲ ನೀಡಬೇಕೆಂಬ ಒತ್ತಡವೂ ಕೇಳಿಬಂದಿದೆ. ವಾರಣಾಸಿಯಲ್ಲಿ ಕೊನೆಯ ಹಂತದ ಮೇ 19 ರಂದು ಚುನಾವಣೆ ನಡೆಯಲಿದೆ.
ಆಧಾರ: ಇಂಡಿಯನ್ ಎಕ್ಸ್ಪ್ರೆಸ್


