Homeಮುಖಪುಟಹಿಂದಿನ ತಪ್ಪುಗಳಿಂದ ಕಲಿತಿಲ್ಲವೆಂದು ತೋರಿಸಿಕೊಟ್ಟ ಮೋದಿಯ ಎರಡನೇ ವೈರಸ್ ಭಾಷಣ

ಹಿಂದಿನ ತಪ್ಪುಗಳಿಂದ ಕಲಿತಿಲ್ಲವೆಂದು ತೋರಿಸಿಕೊಟ್ಟ ಮೋದಿಯ ಎರಡನೇ ವೈರಸ್ ಭಾಷಣ

ನಾವು ಹಾನಿಕಾರಕ ಮೋದಿಯನ್ನು ಸುಲಭವಾಗಿ ತೋರಿಸಬಹುದು. ಆದರೆ, ನಿಜವಾಗಿಯೂ ಎಲ್ಲಾ ವಾಸ್ತವಾಂಶಗಳನ್ನು ಒಟ್ಟುಸೇರಿಸಿದಲ್ಲಿ ಒಬ್ಬ ಅದಕ್ಷ ಮೋದಿ ನಮಗೆ ಕಾಣುತ್ತಾರೆ.

- Advertisement -
- Advertisement -

-ಅಭಿಜಿತ್ ಅಯ್ಯರ್-ಮಿತ್ರ

ಅನುವಾದ: ನಿಖಿಲ್ ಕೋಲ್ಪೆ

ಕೊರೋನಾ ಬಿಕ್ಕಟ್ಟನ್ನು ಉಂಟುಮಾಡಿರುವ ಕೋವಿಡ್-19 ವಿರುದ್ಧ ಹೋರಾಟಕ್ಕಾಗಿ ಘೋಷಿಸಲಾಗಿರುವ 21 ದಿನಗಳ ದಿಗ್ಭಂದನ ಅಥವಾ ಲಾಕ್‌ಡೌನ್ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾಡಿದ ಎರಡನೇ ಭಾಷಣವು ಅವರು ಹಿಂದಿನ ತಪ್ಪುಗಳಿಂದ ಕಲಿತಿಲ್ಲ ಅಥವಾ ಅವರಿಗೆ ಕಲಿಯುವ ಮನಸ್ಸೇ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಅವರು ಚುನಾವಣೆಗಳನ್ನು ಗೆಲ್ಲಬಹುದು; ಬೇರೇನನ್ನೂ ಮಾಡಲು ಅಸಮರ್ಥ ಎಂದೂ ಈ ಭಾಷಣ ತೋರಿಸಿಕೊಟ್ಟಿದೆ.

ದೇಶದ ನಾಡಿ ಮಿಡಿತವನ್ನು ಕಂಡುಕೊಂಡ ವ್ಯಕ್ತಿಯೊಬ್ಬರು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಅದನ್ನು ಸಂಪೂರ್ಣ ಕಳೆದುಕೊಳ್ಳುವುದಾದರೂ ಹೇಗೆ? ಆದರೆ, 21 ದಿನಗಳ ಕೊರೋನಾ ವೈರಸ್ ಲಾಕ್‌ಡೌನ್ ಕುರಿತು ನರೇಂದ್ರ ಮೋದಿಯ ಮಂಗಳವಾರದ ಭಾಷಣ ಅದು ಸಾಧ್ಯ ಎಂದು ತೋರಿಸಿದೆ.

ಬಿಕ್ಕಟ್ಟಿನ ಸಮಯದಲ್ಲಿ ಎರಡು ರೀತಿಯ ಭಾಷಣಗಳನ್ನು ಮಾಡಲಾಗುತ್ತದೆ. ಮೊದಲನೆಯದು- ವಿನ್‌ಸ್ಟನ್ ಚರ್ಚಿಲ್‌ರ ಯುದ್ಧಕಾಲದ ಭಾಷಣಗಳಂತೆ ಮನೋಬಲ ಹೆಚ್ಚಿಸುವಂತವುಗಳು ಮತ್ತು ಎರಡನೆಯವು ನಿರ್ದಿಷ್ಟವಾಗಿ ಏನು ಮಾಡಬೇಕು ಎಂದು ಸೈನಿಕರಿಗೆ ಸ್ಪಷ್ಟ ನಿರ್ದೇಶನ ನೀಡುವಂತವುಗಳು. ಮೊದಲನೆಯದು ಅಸ್ಪಷ್ಟವಾಗಿದ್ದರೆ, ಎರಡನೆಯದು ನಿಖರ ಮತ್ತು ನಿರ್ದಿಷ್ಟ ವಿವರಗಳನ್ನು ಒಳಕೊಡಿರುವಂತದ್ದಾಗಿರುತ್ತದೆ. ಸಮಸ್ಯೆಯೆಂದರೆ ನೋವೆಲ್ ಕೊರೋನಾ ವೈರಸ್ ಅಥವಾ ಕೋವಿಡ್-19 ಸಂದರ್ಭದಲ್ಲಿ ನಾವು ಪ್ರಜೆಗಳಲ್ಲಿ ಪ್ರತಿಯೊಬ್ಬರೂ ಸೈನಿಕರಾಗಬೇಕಾಗುತ್ತದೆ. ನಮಗೆ ಮಾನೋಬಲ ಹೆಚ್ಚಿಸುವಂತವುಗಳೂ ಬೇಕು; ನಿರ್ದಿಷ್ಟ ವಿವರ, ನಿರ್ದೇಶನ ನೀಡುವಂತವುಗಳೂ ಬೇಕು. ಈ ನಿಟ್ಟಿನಲ್ಲಿ ಮೋದಿಯವರ ಮಂಗಳವಾರದ ಭಾಷಣ ದಯನೀಯವಾಗಿ ಸೋತಿತು.

ಅವರ ಹಿಂದಿನ ಭಾಷಣ “ಒಗ್ಗಟ್ಟಿನ ದಿನ” ಅಥವಾ “ಜನತಾ ಕರ್ಫ್ಯೂ”- ಸ್ಥೈರ್ಯದ ಕುರಿತು ಇದ್ದರೆ, ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಿದ ಎರಡನೇ ಭಾಷಣವು ಮಿಲಿಟರಿ ಮಾದರಿ ಕಾರ್ಯಾಚರಣೆಯ ಕುರಿತಂತೆ ಇತ್ತು. ಇದನ್ನು ಅವರು ದಿಲ್ಲಿ ಗಲಭೆಗಳನ್ನು ಹೇಗೆ ನಿಭಾಯಿಸಿದರು ಎಂಬುದರ ಜೊತೆ ಜೋಡಿಸಿಕೊಂಡರೆ, ಒಂದು ನಿರ್ದಿಷ್ಟ ಮಾದರಿಯು ಗೋಚರಿಸುತ್ತದೆ. ಅದು ಈ ಮೂರು ವಿಷಯಗಳಲ್ಲಿ ಒಂದನ್ನು ತೋರಿಸುತ್ತದೆ: ಕೆಟ್ಟ ನಿರ್ವಹಣೆ, ಸೋಮಾರಿತನ ಅಥವಾ ದುರಂಹಂಕಾರ.

ಗುಜರಾತ್ ಗಲಭೆಗಳು

ಈ ಮಾದರಿ ಹೀಗಿದೆ: ಸಂದೇಶ ನೀಡುವುದು, ಕಾನೂನು ಮತ್ತು ಶಿಸ್ತು ಹಾಗೂ ಕೈಕಾಲು ಬಿಡುವುದು. ಪ್ರತಿಯೊಂದು ಸಂದರ್ಭದಲ್ಲಿ ಹಿಂದಿನ ತಪ್ಪುಗಳನ್ನು ಮತ್ತೆಮತ್ತೆ ಮಾಡಲಾಗುತ್ತಿರುವುದನ್ನು ನಾವು ನೋಡುತ್ತೇವೆ. ಹೀಗಿದ್ದರೂ, ಇವು ವಾಸ್ತವವಾಗಿ ತಪ್ಪುಗಳಲ್ಲ; ಉದ್ದೇಶಪೂರ್ವಕವಾಗಿ ಮಾಡಿದಂತವುಗಳು ಎಂಬ ಕಂಗೆಡಿಸುವ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ.

ಮೋದಿ ಸಂದೇಶ ನೀಡುವುದರಲ್ಲಿ ನಿಷ್ಣಾತರು ಮತ್ತು ತನ್ನ ವಿಚಾರಗಳನ್ನು ಹೇಗೆ ಪ್ಯಾಕೇಜ್ ಮಾಡಿ ಮಾರಬೇಕು ಎಂಬುದು ಅವರಿಗೆ ಗೊತ್ತಿದೆ ಎಂಬುದಕ್ಕೆ ಸಂಸತ್ತಿನಲ್ಲಿ 303 ಸ್ಥಾನಗಳನ್ನು ಗೆದ್ದಿರುವುದೇ ಸಾಕ್ಷಿ. ಹೀಗಿದ್ದರೂ ಅವರ ಸಂದೇಶ ಪ್ರಭಾವ ಬೀರುವುದು ಮುಖ್ಯವಾಗಿ ಕೆಳಹಂತದ ಜನಸಾಮಾನ್ಯರ ಮೇಲೆ ಮಾತ್ರ.

ಗುಜರಾತ್ ಗಲಭೆಯ ಚಿತ್ರ

ಇದನ್ನು ಪರಿಗಣಿಸಿ: ಮೋದಿ ಮುಖ್ಯಮಂತ್ರಿಯಾಗಿದ್ದಾಗ ನಡೆದ 2002ರ ಗೋದ್ರಾ ಗಲಭೆಗಳ ನಂತರ ಎರಡು ಹಂತಗಳ ಸಂದೇಶಗಳನ್ನು ನೀಡಲಾಗಿತ್ತು. ವಿದೇಶಿ ಮತ್ತು ದೇಶಿ ಮಾಧ್ಯಮಗಳ ಮಟ್ಟಿಗೆ ಈ ಗಲಭೆಗಳಲ್ಲಿ ಸರಕಾರದ ಶಾಮೀಲಾತಿ ಇತ್ತು. ಆದರೆ, ಮಾಧ್ಯಮಗಳನ್ನು ನಂಬದವರಿಗೆ (ತೀವ್ರವಾದ ಜಾತಿ ಸಂಘರ್ಷದ ಪ್ರದೇಶವಾದ ದಕ್ಷಿಣ ಆರ್ಕಾಟ್‌ನಲ್ಲಿ ನಡೆದ ಗಲಭೆಗಳನ್ನು ಬಾಲ್ಯದಲ್ಲಿ ಕಂಡ ನಾನು, ನನ್ನನ್ನು ಈ ಗುಂಪಿನಲ್ಲಿ ಸೇರಿಸುತ್ತೇನೆ) ಇದು ಯಾವುದೇ ಸುಳಿವಿಲ್ಲದ, ತಿಳುವಳಿಕೆ ಇಲ್ಲದ ಮಾಧ್ಯಮಗಳಿಂದ ದಾಳಿಗೊಳಗಾದ ವ್ಯಕ್ತಿಯೊಬ್ಬನ ಕತೆಯಾಗಿತ್ತು.

ದಿಲ್ಲಿ ಗಲಭೆಗಳು

ಈ ಎರಡು ರೀತಿಯ ತದ್ವಿರುದ್ಧ ನಿರೂಪಣೆಯು ಮೋದಿಗೆ ಚೆನ್ನಾಗಿ ಉಪಯೋಗಕ್ಕೆ ಬಂತು. ಅದು ಆತನಿಗೆ 2020ರ ಈಶಾನ್ಯ ದಿಲ್ಲಿ ಗಲಭೆಗಳಿಗೆ ದಾರಿ ತೋರಿಸಿತು. ಗುಜರಾತ್ ಗಲಭೆಗಳು ಭಾರತ, ಗುಜರಾತ್ ಮತ್ತು ಸ್ವತಃ ಮೋದಿಗೆ ಉಂಟುಮಾಡಿದ ಗೌರವಹಾನಿಯು ಮೋದಿ ದಿಲ್ಲಿ ಗಲಭೆಗಳನ್ನು ನಿಭಾಯಿಸಿದ ರೀತಿಯಲ್ಲಿ ಯಾವುದೇ ಬದಲಾವಣೆಗಳನ್ನು ತರಲಿಲ್ಲ. ಸುರಕ್ಷಾ ಬಲಗಳನ್ನು ನಿಯೋಜಿಸುವುದರಲ್ಲಿ ಅದೇ ವಿಳಂಬ, ಅದೇ ರೀತಿಯಲ್ಲಿ ಪೊಲೀಸರು ಒಂದೇ ಪಕ್ಷವನ್ನು ವಹಿಸಿ ಸಕ್ರಿಯವಾಗಿ ದೊಂಬಿಯಲ್ಲಿ ಭಾಗವಹಿಸಿದುದು ಮತ್ತು ಅದೇ ಹತ್ಯಾಕಾಂಡದ ಅರೋಪಗಳು. ವ್ಯತ್ಯಾಸಗಳೇನಿಲ್ಲ.

ಇಲ್ಲೊಂದು ಮಾದರಿ ಗಮನಿಸಿ

ಒಮ್ಮೆ ಮುಖ್ಯಮಂತ್ರಿಯಾಗಿ, ಮತ್ತೊಮ್ಮೆ ಪ್ರಧಾನಿಯಾಗಿ ಎರಡು ಗಲಭೆಗಳ ಅಧ್ಯಕ್ಷತೆ ವಹಿಸಿದ ಹೊರತಾಗಿಯೂ ಮೋದಿ ಮಾಡದೇ ಇರುವ ಅಚ್ಚರಿಕಾರಕ ವಿಷಯವೊಂದಿದೆ. ಅದೆಂದರೆ, ಯಾವುದೇ ರೀತಿಯ ಪೊಲೀಸ್ ಸುಧಾರಣೆ ಆರಂಭಿಸದಿರುವುದು ಅಥವಾ ನಿರ್ದಿಷ್ಟ ಕಾರ್ಯಸೂಚಿಯನ್ನು ರೂಪಿಸದೇ ಇರುವುದು. ಗುಂಪನ್ನು ನಿಯಂತ್ರಿಸಲು ಅತೀ ಮುಖ್ಯವಾದುದೆಂದರೆ, ಮೊತ್ತ ಮೊದಲಾಗಿ ಗುಂಪು ಸೇರುವುದನ್ನು ತಡೆಯುವುದು ಎಂದು ಯಾವುದೇ ವೃತ್ತಿಪರ ಕಾನೂನು ಮತ್ತು ಶಿಸ್ತು ತಜ್ಞರು ನಿಮಗೆ ಹೇಳುತ್ತಾರೆ. ಒಮ್ಮೆ ಗುಂಪು ಸೇರಿಬಿಟ್ಟರೆ ಮುಗಿಯಿತು; ಆಗಲೇ ಆಟ ಸೋತಂತೆ. ಹೀಗಿದ್ದರೂ, ನಾವು ಯಾವುದೇ ಗುಪ್ತಚರ ಅಥವಾ ಕಣ್ಗಾವಲು ಸುಧಾರಣೆಗಳನ್ನು ಮೋದಿ ಅಡಿಯಲ್ಲಿ ನೋಡಿಲ್ಲ.

ಒಂದೋ ಮೋದಿ ಆಲಿಸುವುದಿಲ್ಲ, ಇಲ್ಲವೇ ಅವರಿಗೆ ಅದು ಬೇಕಾಗಿಲ್ಲ. ಇನ್ನೊಂದು ಕಳವಳಕಾರಿ ತೀರ್ಮಾನಕ್ಕೆ ಬರಬಹುದು: ಅದೆಂದರೆ, ಅವರುಗೆ ಬೇಕಾಗಿರುವುದು ಅದೇ. ದಿಲ್ಲಿಯಲ್ಲಿ ಏನು ನಡೆಯಿತು ಎಂಬ ಬಗ್ಗೆ ನಮಗೆ ಇನ್ನೂ ಯಾವುದೇ ಸರಿಯಾದ ಸರಕಾರಿ ವಿವರಣೆ ದೊರೆತಿಲ್ಲ ಎಂಬ ವಾಸ್ತವವು, ಮೋದಿಗೆ ಈಗ ನೀಡಲಾಗುತ್ತಿರುವ ಹತ್ಯಾಕಾಂಡದ ವಿವರಣೆಯಿಂದ ಸಾಕಷ್ಟು ಸಂತೋಷವಾಗಿದೆ ಎಂಬುದನ್ನು ಸೂಚಿಸುವಂತಿದೆ. ಆತ ಇದರ ಲಾಭವನ್ನು ಬಾಚಿಕೊಳ್ಳಬಹುದು. ಆದರೆ, ಭಾರತ ಮಾತ್ರ ನಷ್ಟ ಅನುಭವಿಸಬೇಕಾಗುತ್ತದೆ.

ಒಂದು ಸ್ಥಾಪಿತ ಮಾದರಿ

ಮೋದಿಯ ಭಾಷಣದ ನಂತರ ರಾತ್ರಿ ಭಾರತದಾದ್ಯಂತ ಜನರು ಭಯದಿಂದ ಸರಕುಗಳನ್ನು ಕೊಳ್ಳಲು ನುಗ್ಗಿದುದರಲ್ಲಿ ನಾವು ಇದೇ ಮಾದರಿಯನ್ನು ನೋಡುತ್ತೇವೆ. 2016ರಲ್ಲಿ ತನ್ನ ನಾಯಕತ್ವದಲ್ಲೇ ನಡೆದ ನೋಟು ಅಮಾನ್ಯೀಕರಣವು ಉಂಟುಮಾಡಿದ ಭಯ ಮತ್ತು ಗೊಂದಲವನ್ನು ಕಂಡಿರುವ ಮೋದಿಗೆ ತನ್ನ ಭಾಷಣವು ಯಾವ ರೀತಿಯ ಭಯ ಮತ್ತು ಗೊಂದಲ ಉಂಟುಮಾಡುವುದು ಎಂಬುದು ಗೊತ್ತಿರಬೇಕಿತ್ತು ಮತ್ತು ಗೊತ್ತಿರಬೇಕಾದುದು ಅವರ ಕರ್ತವ್ಯವೂ ಆಗಿತ್ತು. ಮೋದಿ ಭಾಷಣವನ್ನು ಲೈವ್ ಟ್ವೀಟ್ ಮಾಡುತ್ತಿದ್ದಂತೆಯೇ ಭದ್ರತೆ ಮತ್ತು ಗುಂಪು ನಿಯಂತ್ರಣದಲ್ಲಿ ನನಗಿರುವ ಅಲ್ಪ ತರಬೇತಿಯೂ, ಭಯದ ಖರೀದಿ ಅನಿವಾರ್ಯ ಎಂದು ಸೂಚಿಸಿತ್ತು. ಹೀಗಿದ್ದರೂ ಭದ್ರತೆ ಮತ್ತು ಸಾಮಾಜಿಕ ತಜ್ಞರ ವಸ್ತುಶಃ ದಂಡಿನಿಂದಲೇ ಸುತ್ತುವರಿಯಲ್ಪಟ್ಟಿರುವ ಈ ಮನುಷ್ಯನಿಗೆ ಇದನ್ನು ಊಹಿಸಲು ಸಾಧ್ಯವಾಗಿಲ್ಲವೆ? ಒಂದೋ ಆತ ಆಲಿಸುವುದಿಲ್ಲ ಇಲ್ಲವೇ ಆತನಿಗೆ ಚಿಂತೆಯಿಲ್ಲ ಅಥವಾ ಆತನಿಗೆ ನಿಜಕ್ಕೂ ಬೇಕಾಗಿರುವುದು ಇದೇ.

ನಮಗೆ ಇನ್ನೊಂದು ಮಾದರಿಯ ಪರಿಚಯವಿದೆ. ಅದೆಂದರೆ, ‘ಮೊದಲ ದಿನ ಗರಿಷ್ಟ ಆಘಾತ’ ಎಂಬಂತಹ, ಹೆಚ್ಚು ಮಹತ್ವ ಇರುವ ಎರಡನೇ ಮತ್ತು ಮೂರನೇ ಹಂತದ ಪರಿಣಾಮಗಳನ್ನು ಸಂಪೂರ್ಣ ಕಡೆಗಣಿಸುವ ಮನೋಭಾವದ ಆತುರದ ಧೋರಣೆಗಳು. ಇದನ್ನು ನಾವು ಮತ್ತೆ ಮತ್ತೆ ನೋಡಿದ್ದೇವೆ- ಕೆಲವನ್ನೇ ಹೆಸರಿಸಬೇಕೆಂದರೆ: ಅಮಾನ್ಯೀಕರಣ, ಜಿಎ‌ಸ್‌ಟಿ, ಬಾಲಕೋಟ್ ಮತ್ತು ವಿಧಿ 370.

ಚುಟುಕಾಗಿ ಹೇಳುವುದಾದರೆ, ನಾವು ಹಾನಿಕಾರಕ ಮೋದಿಯನ್ನು ಸುಲಭವಾಗಿ ತೋರಿಸಬಹುದು. ಆದರೆ, ನಿಜವಾಗಿಯೂ ಎಲ್ಲಾ ವಾಸ್ತವಾಂಶಗಳನ್ನು ಒಟ್ಟುಸೇರಿಸಿದಲ್ಲಿ ಒಬ್ಬ ಅದಕ್ಷ ಮೋದಿ ನಮಗೆ ಕಾಣುತ್ತಾರೆ. ಅಕಾಡೆಮಿಕ್ ಆಗಿ ಒಂದು ಮಾದರಿಯನ್ನು ನಿರೂಪಿಸಿಲು ಮೂರು ನಿದರ್ಶನಗಳು ಬೇಕಾಗುತ್ತವೆ. ಈಗ ನಮ್ಮ ಬಳಿ ನಾಲ್ಕು ಇವೆ: ಗೋದ್ರಾ, ಅಮಾನ್ಯೀಕರಣ, ದಿಲ್ಲಿ ಗಲಭೆಗಳು ಮತ್ತು ಇದೀಗ ಕೊರೋನಾ ವೈರಸ್ ಲಾಕ್‌ಡೌನ್. ಮೋದಿ ಚುನಾವಣೆಗಳನ್ನು ಗೆಲ್ಲಬಹುದು, ಬೇರೇನನ್ನೂ ಮಾಡಲು ಅಸಮರ್ಥ.

(ಲೇಖಕರು ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಎಂಡ್ ಕಾನ್‌ಫ್ಲಿಕ್ಟ್ ಸ್ಟಡೀಸ್ ಸಂಸ್ಥೆಯಲ್ಲಿ ಸೀನಿಯರ್ ಫೆಲೋ ಆಗಿದ್ದಾರೆ. ಅಭಿಪ್ರಾಯಗಳು ಲೇಖಕರವು.)

ಕೃಪೆ: ದಿ ಪ್ರಿಂಟ್ ಡಾಟ್ ಇನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...