ಚಿತ್ರೋದ್ಯಮದಲ್ಲಿ ಸ್ವಜನ ಪಕ್ಷಪಾತಕ್ಕಿಂತ ಜನಾಂಗೀಯ ದ್ವೇಷ ಹೆಚ್ಚಾಗಿದೆ ಎಂದು ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಹೇಳಿದ್ದಾರೆ. ನಟ ಸಿದ್ದಿಕಿ, ಸುಧೀರ್ ಮಿಶ್ರಾ ಅವರ ಸೀರಿಯಸ್ ಮೆನ್ (Serious Men) ಚಿತ್ರದಲ್ಲಿನ ನಟನೆಗಾಗಿ ಅಂತಾರಾಷ್ಟ್ರೀಯ EMMY ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಸೀರಿಯಸ್ ಮೆನ್ (Serious Men) ಚಿತ್ರದ ಮತ್ತೊಂದು ಪ್ರಮುಖ ಪಾತ್ರಧಾರಿ ಇಂದಿರಾ ತಿವಾರಿ ಬಗ್ಗೆ ನವಾಜುದ್ದೀನ್ ಮಾತನಾಡುತ್ತಿದ್ದರು. ಆಕೆಗೆ ಮತ್ತೊಂದು ಚಿತ್ರದಲ್ಲಿ ಪ್ರಮುಖ ಪಾತ್ರ ದೊರೆತರೆ ಅದು ಚಿತ್ರದ ನಿಜವಾದ ಗೆಲುವು ಎಂದು ಹೇಳಿದ್ದಾರೆ.
“ಸುಧೀರ್ ಮಿಶ್ರಾ ಅವರಿಗೆ ಸಿನಿಮಾ ಬಗ್ಗೆ ಅಪಾರ ಜ್ಞಾನವಿದೆ. ಅವರ ಚಿಂತನೆಯ ಪ್ರಕ್ರಿಯೆಯು ತುಂಬಾ ಪ್ರಾಯೋಗಿಕವಾಗಿದೆ. ಹೀಗಾಗಿ ಅವರು ಆಕೆಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ನಮ್ಮ ಉದ್ಯಮದಲ್ಲಿ ಜನಾಂಗೀಯ ದ್ವೇಷ (racism) ಹೆಚ್ಚಾಗಿದೆ ಎಂದು ನಿಮಗೆ ಖಾತರಿ ನೀಡಬಲ್ಲೆ” ಎಂದಿದ್ದಾರೆ.
ಇದನ್ನೂ ಓದಿ: ಜನಾಂಗೀಯತೆಯ ಬಗ್ಗೆ ಬಾಲಿವುಡ್ ತಾರೆಗಳ ಇಬ್ಬಂದಿತನವನ್ನು ಬಯಲಿಗೆಳೆದ ನೆಟ್ಟಿಗರು
“ಆಕೆ ಅವಳು ಮತ್ತೊಮ್ಮೆ ನಾಯಕಿಯಾಗಿ ನಟಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ. ಸುಧೀರ್ ಮಿಶ್ರಾ ಅದನ್ನು ಮಾಡಿದ್ದಾರೆ. ಆದರೆ, ಬೇರೆ ದೊಡ್ಡ ದೊಡ್ಡ ಚಿತ್ರ ನಿರ್ಮಾಪಕರು, ನಿರ್ದೇಶಕರು, ಜವಾಬ್ದಾರಿ ಸ್ಥಾನದಲ್ಲಿರುವವರ ವಿಷಯಗಳು ಏನು? ನಮ್ಮಲ್ಲಿ ಸ್ವಜನ ಪಕ್ಷಪಾತಕ್ಕಿಂತ ಹೆಚ್ಚಾಗಿ, ಜನಾಂಗೀಯತೆಯ ಸಮಸ್ಯೆ ಇದೆ” ಎಂದಿದ್ದಾರೆ.

ಮುಂದುವರೆದು, “ನಾನು ಜನಾಂಗೀಯತೆ ವಿರುದ್ಧ ಹಲವು ವರ್ಷಗಳ ಕಾಲ ಹೋರಾಡಿದ್ದೇನೆ. ಕಪ್ಪು ಚರ್ಮದ ನಟಿಯರನ್ನು ನಾಯಕಿಯರನ್ನಾಗಿ ಮಾಡಬೇಕೆಂದು ನಾನು ಆಶಿಸುತ್ತೇನೆ. ಏಕೆಂದರೆ ಇದು ಚಿತ್ರರಂಗದಲ್ಲಿ ಬಹಳ ಮುಖ್ಯವಾಗಿದೆ. ನಾನು ಕೇವಲ ಚರ್ಮದ ಬಣ್ಣದ ಬಗ್ಗೆ ಮಾತನಾಡುತ್ತಿಲ್ಲ. ಉದ್ಯಮದಲ್ಲಿ ಒಂದು ಪಕ್ಷಪಾತವಿದೆ. ಉತ್ತಮ ಚಲನಚಿತ್ರಗಳನ್ನು ಮಾಡಲು ಅದು ಕೊನೆಗೊಳ್ಳಬೇಕು” ಎಂದಿದ್ದಾರೆ.
’ನಾನು ಕುಳ್ಳಗಿರುವುದು ಮತ್ತು ನೋಡಲು ಬೇರೆ ರೀತಿಯಲ್ಲಿ ಕಾಣುತ್ತೇನೆ ಎಂದು ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ತಿರಸ್ಕರಿಸಲ್ಪಟ್ಟಿದ್ದೇನೆ. ಆದರೂ ನಾನು ಈಗ ದೂರು ನೀಡಲು ಸಾಧ್ಯವಿಲ್ಲ. ಆದರೆ, ಈ ರೀತಿಯ ಪಕ್ಷಪಾತಕ್ಕೆ ಬಲಿಯಾಗುವ ಇತರ ಅನೇಕ ದೊಡ್ಡ ದೊಡ್ಡ ನಟರಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅನುರಾಗ್ ಕಶ್ಯಪ್ ಅವರ ಗ್ಯಾಂಗ್ಸ್ ಆಫ್ ವಾಸೇಪುರ್ ಪಾರ್ಟ್ -2 ನಲ್ಲಿ ತಮ್ಮ ಪಾತ್ರದಿಂದ ಹೆಚ್ಚು ಪ್ರಸಿದ್ಧಿ ಪಡೆದ ನವಾಜುದ್ದೀನ್ ಸಿದ್ದಿಕಿ, ನಂತರ ಸೇಕ್ರೆಡ್ ಗೇಮ್ಸ್, ರಾತ್ ಅಕೇಲಿ ಹೈ, ಸೀರಿಯಸ್ ಮೆನ್ ನಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಸೇಕ್ರೆಡ್ ಗೇಮ್ಸ್ ಕೂಡ ಅಂತಾರಾಷ್ಟ್ರೀಯ EMMY ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
ಇದನ್ನೂ ಓದಿ: ಚರಂಡಿ ಕ್ಲೀನ್ ಮಾಡುವವರ ಪಾತ್ರ ಮಾಡಬೇಕು, ಸಮಾಜದಲ್ಲಿ ಕ್ಲೀನ್ ಮಾಡುವುದು ಬಹಳಷ್ಟಿದೆ: ನಟ ಶಿವರಾಜ್ ಕುಮಾರ್


