ದೆಹಲಿ ಹೋರಾಟದಲ್ಲಿ ಮೃತಪಟ್ಟ ಹೆಚ್ಚಿನ ರೈತರು 3 ಎಕರೆಗಿಂಲೂ ಕಡಿಮೆ ಜಮೀನು ಹೊಂದಿರುವವರು! | NaanuGauri
PC: AP

ಒಕ್ಕೂಟ ಸರ್ಕಾರದ ಹೊಸ ಕೃಷಿ ನೀತಿಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ಬೀಡು ಬಿಟ್ಟಾಗ, ಶ್ರೀಮಂತ ರೈತರು ಇದರ ಹಿಂದೆ ಇದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ಹೇಳಿಕೆಗೆ ವಿರುದ್ಧವಾಗಿ, ಪಾಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಇಬ್ಬರು ಅರ್ಥಶಾಸ್ತ್ರಜ್ಞರು ನಡೆಸಿದ ಅಧ್ಯಯನದಲ್ಲಿ ಕಂಡು ಬಂದಿದೆ. ಪ್ರತಿಭಟನೆಯ ಸಮಯದಲ್ಲಿ ಮೃತಪಟ್ಟ ರೈತರು ಸರಾಸರಿ 2.94 ಎಕರೆ ಜಮೀನಿಗಿಂತ ಹೆಚ್ಚು ಕೃಷಿ ಮಾಡಿಲ್ಲ ಎಂದು ಅಧ್ಯಯನವು ಬಹಿರಂಗಪಡಿಸಿದೆ.

ರೈತ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದ್ದು, ಇದುವರೆಗೂ ಅಲ್ಲಿ ಸುಮಾರು 600 ರೈತರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗದೆ.

ಪಂಜಾಬಿ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಮಾಜಿ ಪ್ರಾಧ್ಯಾಪಕ ಲಖ್ವಿಂದರ್ ಸಿಂಗ್ ಮತ್ತು ಬಟಿಂಡಾದಲ್ಲಿರುವ ಪಂಜಾಬಿ ವಿಶ್ವವಿದ್ಯಾಲಯದ ಗುರು ಕಾಶಿ ಕ್ಯಾಂಪಸ್‌ನಲ್ಲಿ ಸಮಾಜ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಬಲ್ದೇವ್ ಸಿಂಗ್ ಶೆರ್ಗಿಲ್ ಅವರು ಸಿದ್ದಪಡಿಸಿದ ಅಧ್ಯಯನವು, “ಗುತ್ತಿಗೆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದ ಭೂರಹಿತ ಮೃತ ರೈತರನ್ನು ಇದಕ್ಕೆ ಸೇರಿಸಿದರೆ ಕೃಷಿ ಭೂಮಿಯ ಸರಾಸರಿ ಗಾತ್ರವು 2.26 ಎಕರೆಗಳಿಗೆ ಇಳಿಯುತ್ತದೆ” ಎಂದು ಹೇಳಿದೆ.

ಇದನ್ನೂ ಓದಿ: ರೈತ ಹೋರಾಟ ಬಿಜೆಪಿಯ ಕಪಾಳಕ್ಕೆ ಭಾರಿಸಿದೆ: ರೈತ ಮುಖಂಡ ಹರ್ನೇಕ್ ಸಿಂಗ್

ಅವರ ಪ್ರಕಾರ, ಕಳೆದ 11 ತಿಂಗಳ ಪ್ರತಿಭಟನೆಯಲ್ಲಿ ಸಾವನ್ನಪ್ಪಿದ 600 ರೈತರಲ್ಲಿ 460 ರೈತರ ಮಾಹಿತಿಯನ್ನು ಆಧರಿಸಿ ಈ ಅಧ್ಯಯನವನ್ನು ಮಾಡಲಾಗಿದೆ. ಅಧ್ಯಯನ ನಡೆಸುವಾಗ ಮೃತರ ಕುಟುಂಬಗಳನ್ನು ವೈಯಕ್ತಿಕವಾಗಿ ಸಂಪರ್ಕಿಸಲಾಗಿದೆ ಎಂದು ಅವರು ದಿ ವೈರ್‌ಗೆ ತಿಳಿಸಿದ್ದಾರೆ.

ಅಧ್ಯಯನವು, ಪ್ರತಿಭಟನೆಯ ಸಮಯದಲ್ಲಿ ಪ್ರಾಣ ಕಳೆದುಕೊಂಡವರು ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಭೂರಹಿತ ಕೃಷಿಕರು ಎಂದು ಸೂಚಿಸುತ್ತದೆ.

ಅಧ್ಯಯನವು ಪ್ರತಿಭಟನೆಯಲ್ಲಿ ಪಂಜಾಬ್‌ನ ಪ್ರದೇಶವಾರು ಭಾಗವಹಿಸುವಿಕೆ ಮತ್ತು ಸಾವುಗಳ ಮಾಹಿತಿಯನ್ನೂ ಕಳೆ ಹಾಕಿದೆ. ರಾಜ್ಯದ ಮಾಲ್ವಾ ಪ್ರದೇಶವು ಪ್ರತಿಭಟನೆಗಳಲ್ಲಿ ಗರಿಷ್ಠ ಭಾಗವಹಿಸುವಿಕೆ ಮತ್ತು ಗರಿಷ್ಠ ಸಾವುಗಳನ್ನು ಕಂಡಿದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ.

ಪಂಜಾಬ್ ಮೂರು ಪ್ರದೇಶಗಳಾಗಿ ವಿಂಗಡಿಸಲಾದ 23 ಜಿಲ್ಲೆಗಳನ್ನು ಹೊಂದಿದೆ: ಮಾಲ್ವಾ 15 ಜಿಲ್ಲೆಗಳನ್ನು ಹೊಂದಿದ್ದರೆ ದೋಬಾ ಮತ್ತು ಮಜಾ ಪ್ರದೇಶಗಳು ತಲಾ ನಾಲ್ಕು ಜಿಲ್ಲೆಗಳನ್ನು ಹೊಂದಿವೆ. ಅಧ್ಯಯನದ ಪ್ರಕಾರ, ಸಾವನ್ನಪ್ಪಿದ 80% ರೈತರು ಪಂಜಾಬ್‌ನ ಮಾಲ್ವಾ ಪ್ರದೇಶದವರು. ಈ ಪ್ರದೇಶವು ತುಲನಾತ್ಮಕವಾಗಿ ಹೆಚ್ಚಿನ ಸರಾಸರಿ ಕೃಷಿ ಪ್ರದೇಶವನ್ನು ಹೊಂದಿದ್ದು, ನಂತರ ದೋಬಾ ಮತ್ತು ಮಜಾ ಬರುತ್ತದೆ.

ದೋಬಾ ಮತ್ತು ಮಜಾ ಪ್ರದೇಶದ ಕೃಷಿ ಪ್ರತಿಭಟನೆಯ ಸಾವುಗಳ ಪಾಲು ಕ್ರಮವಾಗಿ 12.83% ಮತ್ತು 7.39% ಆಗಿದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: ಬಿಜೆಪಿ ನಾಯಕರಿಗೆ ರೈತರಿಂದ ಘೇರಾವ್‌; ಕೈಮುಗಿದು ಕ್ಷಮೆಯಾಚಿಸಿದ ಮಾಜಿ ಸಚಿವ

LEAVE A REPLY

Please enter your comment!
Please enter your name here