ನಕಲಿ ಲಸಿಕೆ ಜಾಲದಿಂದ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಮೋಸ ಹೋಗಿದ್ದಾರೆ. ಮಂಗಳವಾರ ಕಾಸ್ಬಾ ಪ್ರದೇಶದಲ್ಲಿ ನಡೆದಿದ್ದ ಲಸಿಕಾ ಅಭಿಯಾನದಲ್ಲಿ ಸಂಸದೆ ಕೊರೊನಾ ಲಸಿಕೆ ತೆಗೆದುಕೊಂಡಿದ್ದರು.
ಈ ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಐಎಎಸ್ ಅಧಿಕಾರಿಯಂತೆ ನಟಿಸಿ ಕೊಲ್ಕತ್ತಾದಲ್ಲಿ ಹಲವು ವ್ಯಾಕ್ಸಿನೇಷನ್‌ಗಳ ಮೇಲ್ವಿಚಾರಣೆ ನಡೆಸುತ್ತಿದ್ದ ವ್ಯಕ್ತಿಯನ್ನು ಬುಧವಾರ ಬಂಧಿಸಲಾಗಿದೆ. ನೂರಾರು ಜನರಿಗೆ ನಕಲಿ ಲಸಿಕೆಗಳನ್ನು ನೀಡಿರುವ ಸಾಧ್ಯತೆ ಹಿನ್ನೆಲೆ ಕೊಲ್ಕತ್ತಾ ಪೊಲೀಸರು ತೀವ್ರ ತನಿಖೆಗೆ ಆರಂಭಿಸಿದ್ದಾರೆ.
ಕೊಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನ ಜಂಟಿ ಆಯುಕ್ತರಂತೆ ಸೋಗು ಹಾಕಿಕೊಂಡು ಲಸಿಕಾ ಶಿಬಿರವನ್ನು ಆಯೋಜಿಸಿದ ಹೊಸೆನ್‌ಪುರದ ದೇಬಂಜನ್ ದೇಬ್ ಎಂಬ 28 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿಬಿರದಲ್ಲಿದ್ದ ಜನರಿಗೆ ನಿಜವಾದ ಅಥವಾ ನಕಲಿ ಲಸಿಕೆಗಳನ್ನು ನೀಡಲಾಗಿದೆಯೇ ಎಂದು ಕಂಡುಹಿಡಿಯಲು ಪೊಲೀಸರು ಲಸಿಕಾ ಸ್ಯಾಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ‘ಕೇಂದ್ರ ಸರ್ಕಾರ’ ಅಲ್ಲ, ‘ಒಕ್ಕೂಟ ಸರ್ಕಾರ’: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್!
ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಲಸಿಕೆ ತೆಗೆದುಕೊಂಡ ನಂತರ ಯಾವುದೇ ಅಧಿಕೃತ ಪ್ರಮಾಣಪತ್ರ ದೊರೆಯದೆ ಇದ್ದಾಗ ನಟಿ, ಸಂಸದೆ ಮಿಮಿ ಚಕ್ರವರ್ತಿ ಪೊಲೀಸರಿಗೆ ದೂರು ನೀಡಿದ್ದಾರೆ. ಶಿಬಿರದಲ್ಲಿ ಸುಮಾರು 250 ಜನರಿಗೆ ಲಸಿಕೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಶಿಬಿರಕ್ಕೆ ಆಹ್ವಾನಿಸಿದಾಗ ದೇಬಂಜನ್ ದೇವ್ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡಿದ್ದಾರೆ. ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಷನ್ ಈ ಇನಾಕ್ಯುಲೇಷನ್ ಪ್ರಯತ್ನವನ್ನು ಆಯೋಜಿಸಿದೆ ಎಂದು ಅವರು ಹೇಳಿದರು.
ಕೋಲ್ಕತಾ ಮುನ್ಸಿಪಲ್ ಕಾರ್ಪೊರೇಶನ್‌ನ ಜಂಟಿ ಆಯುಕ್ತರು ಟ್ರಾನ್ಸ್ಜೆಂಡರ್ ಮತ್ತು ವಿಶೇಷ ಸಾಮರ್ಥ್ಯ ಹೊಂದಿರುವ ಜನರಿಗೆ ಲಸಿಕೆ ಶಿಬಿರವನ್ನು ಆಯೋಜಿಸುತ್ತಿದ್ದಾರೆ ಎಂದು ನಾನು ಶಿಬಿರದಲ್ಲಿ ಭಾಗವಹಿಸಿದ್ದೆ. ಜನರು ಲಸಿಕೆ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಲು ಮತ್ತು ಕೊರೊನಾ ವೈರಸ್ ಹರಡುವುದನ್ನು ತಡೆಯಲು ನಾನು ಶಿಬಿರದಲ್ಲಿ ಲಸಿಕೆ ತೆಗೆದುಕೊಂಡೆ ಎಂದು ಹೇಳಿದ್ದಾರೆ.
ಆರೋಪಿತ ವ್ಯಕ್ತಿಯು ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರತಿನಿಧಿಸುವ ನೀಲಿ ಬೀಕನ್ ಲೈಟ್, ಲಾಂಛನ ಮತ್ತು ಸ್ಟಿಕ್ಕರ್ ಹೊಂದಿರುವ ಧ್ವಜವನ್ನು ಅಳವಡಿಸಿಕೊಂಡಿದ್ದ ಕಾರನ್ನು ಬಳಸುತ್ತಿದ್ದರು ಎಂದು ಸಂಸದೆ ತಿಳಿಸಿದ್ದು, ಪೊಲೀಸರು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರು ವಶಪಡಿಸಿಕೊಂಡಿರುವ ಲಸಿಕಾ ಬಾಟಲ್‌ಗಳ ಮೇಲೆ ಅವಧಿ ಮುಗಿತದ ದಿನಾಂಕ ಇಲ್ಲ ಎಂಬುದು ತಿಳಿದು ಬಂದಿದ್ದು, ಈ ಬಾಟಲುಗಳು ನಿಜವಾದವೋ ಅಥವಾ ನಕಲಿಯೋ ಎಂದು ಕಂಡುಹಿಡಿಯಲು ಪರೀಕ್ಷೆಗೆ ಕಳುಹಿಸಲಾಗುವುದು. ಈ ನಿಟ್ಟಿನಲ್ಲಿ ಆರೋಪಿತರನ್ನು ವಿಚಾರಣೆ ನಡೆಸಲಾಗುವುದು ಎಂದು ಕೋಲ್ಕತಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೋನಾ 3ನೇ ಅಲೆ ನಿರ್ವಹಣೆಗೆ 10 ಜನ ತಜ್ಞರ ಸಮಿತಿ ರಚಿಸಿದ ಪಶ್ಚಿಮ ಬಂಗಾಳ ಸರ್ಕಾರ


