ಮುಂಬೈನ ಭಂಡೂಪ್ ಪ್ರದೇಶದ ಡ್ರೀಮ್ಸ್ ಮಾಲ್‌ನಲ್ಲಿರುವ ಸನ್‌ರೈಸ್ ಖಾಸಗಿ ಕೊರೊನಾ ಆಸ್ಪತ್ರೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಹತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೃತಪಟ್ಟವರ ಕುಟಂಬದವರ ಬಳಿ ನಾನು ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಗುರುವಾರ ತಡರಾತ್ರಿ ಮಾಲ್‌ನಲ್ಲಿರುವ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಸಂಭವಿಸಿದೆ. ಈವರೆಗೆ ಹತ್ತು ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 70 ಕೊರೊನಾ ವೈರಸ್ ಸೋಂಕಿತ ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, “ಘಟನೆಯಲ್ಲಿ ಏನಾದರೂ ಕೊರತೆ ಅಥವಾ ನಿರ್ಲಕ್ಷ್ಯ ಇದ್ದರೆ, ಅದನ್ನು ತನಿಖೆ ಮಾಡಲಾಗುವುದು ಮತ್ತು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಂಬಂಧಿಕರನ್ನು ಕಳೆದುಕೊಂಡ ಕುಟುಂಬದವರ ಬಳಿ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಶಕಗಳಿಂದ ದುಡಿದರೂ ಕನಿಷ್ಟ ಭದ್ರತೆಯಿಲ್ಲ: ಕೂಲಿ ನೇಕಾರ ಕಾರ್ಮಿಕರ ಗೋಳು ಕೇಳುವವರ್ಯಾರು?
ಮಾಲ್‌ನಲ್ಲಿ ಆಸ್ಪತ್ರೆಯನ್ನು ನಡೆಸಲು ಅನುಮತಿ ನೀಡಿರುವ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸಿದ ಸಿಎಂ, “ಕೆಲವು ಸ್ಥಳಗಳಲ್ಲಿ, ಅಗತ್ಯಕ್ಕೆ ಅನುಗುಣವಾಗಿ ಕಳೆದ ವರ್ಷ ಕೊರೊನಾ ಪರಿಸ್ಥಿತಿಯಿಂದಾಗಿ ನಾವು ತಾತ್ಕಾಲಿಕ ಆಸ್ಪತ್ರೆಗಳಿಗೆ ಅನುಮತಿ ನೀಡಿದ್ದೇವೆ. ಅಂತಹ ತಾತ್ಕಾಲಿಕ ಆಸ್ಪತ್ರೆಗಳಲ್ಲಿ ಡ್ರೀಮ್ಸ್ ಮಾಲ್‌ನಲ್ಲಿರುವ ಆಸ್ಪತ್ರೆ ಒಂದು. ಆಸ್ಪತ್ರೆಯಲ್ಲಿದ್ದ ಎಲ್ಲರನ್ನು ರಕ್ಷಿಸುವ ಪ್ರಯತ್ನಗಳು ನಡೆದವು ಆದರೆ ವೆಂಟಿಲೇಟರ್ ಬೆಂಬಲದಲ್ಲಿದ್ದ ಕೆಲವು ರೋಗಿಗಳನ್ನು ಉಳಿಸಲು ನಮಗೆ ಸಾಧ್ಯವಾಗಲಿಲ್ಲ” ಎಂದಿದ್ದಾರೆ.
ಅಗ್ನಿಶಾಮಕ ದಳದಿಂದ ರೋಗಿಗಳನ್ನು ಸ್ಥಳಾಂತರಿಸಿ ಮುಂಬೈ ಮತ್ತು ಥಾಣೆಯ ವಿವಿಧ ಆಸ್ಪತ್ರೆಗಳು ಮತ್ತು ಸಿಒವಿಐಡಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್, ಮಾಲ್ ಒಳಗೆ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. “ನಾನು ಮೊದಲ ಬಾರಿಗೆ ಮಾಲ್‌ನಲ್ಲಿ ಆಸ್ಪತ್ರೆಯನ್ನು ನೋಡಿದ್ದೇನೆ” ಎಂದು ಮೇಯರ್ ಹೇಳಿದ್ದಾರೆ.
ಇದನ್ನೂ ಓದಿ: ‘ಸೀರೆ ಧರಿಸಿ ಕಾಲು ಪ್ರದರ್ಶಿಸುವುದು ಬಂಗಾಳಿ ಸಂಸ್ಕೃತಿಯಲ್ಲ’- ‘ಬರ್ಮುಡಾ’ ಹೇಳಿಕೆ ಸಮರ್ಥಿಸಿದ ಬಿಜೆಪಿ ಅಧ್ಯಕ್ಷ


