ಪ.ಬಂಗಾಳ ಚುನಾವಣೆ: ಫ್ಯಾಸಿಸಂ ವಿರುದ್ಧದ ಕಲಾವಿದರ ಹಾಡು ವೈರಲ್
PC: The Wire

ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ 3 ದಿನಗಳು ಬಾಕಿಯಿರುವಾಗ, ಬಂಗಾಳಿ ನಟರು ಮತ್ತು ರಂಗಭೂಮಿ ಕಲಾವಿದರು ಒಟ್ಟಾಗಿ ಸೇರಿ ರಚಿಸಿರುವ ವಿಡಿಯೋದಲ್ಲಿ, ಬಂಗಾಳ ಚುನಾವಣೆಯಲ್ಲಿ ದ್ವೇಷ ಹರಡುವವರಿಗೆ ಮತ ನೀಡಬೇಡಿ ಎಂದು ಮನವಿ ಮಾಡಿದ್ದಾರೆ. ಆ ಹಾಡು ವೈರಲ್ ಆಗಿದ್ದು ಫ್ಯಾಸಿಸ್ಟ್ ಶಕ್ತಿಗಳನ್ನು ನಿರ್ಮೂಲನೆ ಮಾಡುವ ಅಗತ್ಯತೆಯನ್ನು ಅರ್ಥಪೂರ್ಣ ಹಾಡಿನ ಮೂಲಕ ವ್ಯಕ್ತಪಡಿಸಿದ್ದಾರೆ ಎಂಬ ಮೆಚ್ಚುಗೆ ವ್ಯಕ್ತವಾಗಿದೆ.

ಬಿಜೆಪಿಯ ಹೆಸರನ್ನು ನೇರವಾಗಿ ಹೆಸರಿಸದ ಕಲಾವಿದರು ‘ನಿಜೇದಿರ್ ಮೋತೆ, ನಿಜೇದಿರ್ ಗಾನ್’ (ನಮ್ಮ ಅಭಿಪ್ರಾಯಗಳ ಬಗ್ಗೆ ನಮ್ಮ ಹಾಡು) ಎಂದು ದ್ವೇಷ ಬಿತ್ತುವ ಸಿದ್ಧಾಂತದ ವಿರುದ್ಧ ನಿಲುವನ್ನು ತೆಗೆದುಕೊಂಡಿದ್ದಾರೆ. ವೈರಲ್ ಹಾಡು ನೋಡಿ.

ಈ ವೀಡಿಯೊದಲ್ಲಿ ಪರಂಬ್ರತಾ ಚಟರ್ಜಿ, ಅನಿರ್ಬನ್ ಭಟ್ಟಾಚಾರ್ಯ, ಸಬಿಯಾಸಾಚಿ ಚಕ್ರವರ್ತಿ, ರುದ್ರಪ್ರಸಾದ್ ಸೇನ್‌ಗುಪ್ತಾ, ಅನುಪಮ್ ರಾಯ್, ರೂಪಂಕರ್ ಬಾಗ್ಚಿ, ರಿದ್ಧಿ ಸೇನ್ ಮತ್ತು ಸುಮನ್ ಮುಖೋಪಾಧ್ಯಾಯ ಸೇರಿದಂತೆ ಸಿನಿಮಾ, ನಾಟಕ ಮತ್ತು ಸಂಗೀತ ಕ್ಷೇತ್ರಗಳ ಕಲಾವಿದರು ಇದ್ದಾರೆ.

ಈ ಹಾಡು ಮಂಗಳವಾರ ರಾತ್ರಿ ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಕರನ್ನು ಸೆಳೆದಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಓವೈಸಿ ಬಿಜೆಪಿಗೆ ನೆರವಾಗಲಿದ್ದಾರೆ: ಸ್ಪೋಟಕ ಹೇಳಿಕೆ ನೀಡಿದ ಸಾಕ್ಷಿ ಮಹರಾಜ್

ರಾಷ್ಟ್ರೀಯ ನಾಗರಿಕರ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಎನ್‌ಆರ್‌ಸಿ-ಸಿಎಎ) ವಿರುದ್ಧದ ಪ್ರತಿಭಟನೆಗಳು, ದೇಶದಲ್ಲಿ ನಿರುದ್ಯೋಗ ದರ ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳಂತಹ ವಿಷಯಗಳನ್ನು ವೀಡಿಯೊದಲ್ಲಿ ಹೇಳಲಾಗಿದೆ. ಜೊತೆಗೆ ಈ ವಿಡಿಯೋದಲ್ಲಿ ಧರ್ಮದ ಹೆಸರಿನಲ್ಲಿ ನಡೆದಿರುವ, ನಡೆಯುತ್ತಿರುವ ರಕ್ತಪಾತ ಮತ್ತು ಹಿಂಸೆಯ ನಿದರ್ಶನಗಳನ್ನು ಖಂಡಿಸಲಾಗಿದೆ.

“ಪ್ರಜಾಪ್ರಭುತ್ವದ ನಿಯಮಗಳನ್ನು ಧಿಕ್ಕರಿಸುವ ವಿಭಜಕ ರಾಜಕೀಯಕ್ಕೆ ಅವಕಾಶ ನೀಡುವುದಿಲ್ಲ. ಯಾವುದೇ ರಾಜಕೀಯ ಪಕ್ಷವು ಸಾಧುವಲ್ಲ. ಆದರೆ ನಿರಂಕುಶಾಧಿಕಾರಿಗಳನ್ನು ತಡೆದು, ಇರುವುದರಲ್ಲಿ ಕಡಿಮೆ ಅಪಾಯಕಾರಿಯಾದ ಪಕ್ಷವನ್ನು ಆರಿಸಬೆಕಿದೆ” ಎಂದು ನಟ-ನಿರ್ದೇಶಕ ಪರಂಬ್ರತಾ ಚಟರ್ಜಿ ತಿಳಿಸಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

“ಹಾಡಿನ ಸಂದೇಶವು ಬಿಜೆಪಿ ವಿರೋಧಿಯಾದದ್ದು. ಆದರೆ, ಕಲಾವಿದರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಬೆಂಬಲಿಗರಲ್ಲ. ಹಾಡಿನ ಸಂದೇಶವು ಸ್ಪಷ್ಟವಾಗಿದೆ. ನಾಗರಿಕ ಸಮಾಜವು ಯಾವುದೇ ಒಂದು ಪಕ್ಷದ ಪರವಾಗಿ ಕುರುಡಾಗಿ ಮಾತನಾಡದೇ ವಾಸ್ತವದ ಸ್ಥಿತಿಗತಿಗಳ ಕುರಿತು ಸಂವೇದನೀಯವಾಗಿರಬೇಕು” ಎಂದು ಚಟರ್ಜಿ ಸ್ಪಷ್ಟಪಡಿಸಿದರು.

‘ನಾನು ಬೇರೆಲ್ಲಿಯೂ ಹೋಗುವುದಿಲ್ಲ, ಈ ದೇಶದಲ್ಲಿಯೇ ಇರುತ್ತೇನೆ’ ಎಂಬ ಅರ್ಥವನ್ನು ಹೊಂದಿರುವ ‘ಅಮಿ ಅನ್ಯೋ ಕೊಥಾವೊ ಜಬೊನಾ, ಅಮಿ ಇ ದೇಶೆ ಟೀ ಥಕ್ಬೋ’ ಎಂಬ ಹಾಡಿನ ಪಲ್ಲವಿಯನ್ನು ನಟ ಅನಿರ್ಬನ್ ಚಟರ್ಜಿ ಬರೆದಿದ್ದಾರೆ. ಈ ವಿಡಿಯೋವನ್ನು ಯುವ ನಟರಾದ ರಿದ್ಧಿ ಸೇನ್ ಮತ್ತು ರ್‌ವಿಟೋಬ್ರೋಟೊ ಮುಖರ್ಜಿ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ‘ಸೀರೆ ಧರಿಸಿ ಕಾಲು ಪ್ರದರ್ಶಿಸುವುದು ಬಂಗಾಳಿ ಸಂಸ್ಕೃತಿಯಲ್ಲ’- ‘ಬರ್ಮುಡಾ’ ಹೇಳಿಕೆ ಸಮರ್ಥಿಸಿದ ಬಿಜೆಪಿ ಅಧ್ಯಕ್ಷ

“ಪಶ್ಚಿಮ ಬಂಗಾಳದ ಹಲವಾರು ನಟರು ಮತ್ತು ಸಂಗೀತಗಾರರನ್ನು ಒಟ್ಟುಗೂಡಿಸಿದ ಈ ಹಾಡನ್ನು 2019 ರ ಅಂತ್ಯದಿಂದ ಸಿಎಎ ವಿರುದ್ಧ ದೇಶಾದ್ಯಂತ ಪ್ರತಿಭಟನೆಯ ಸಂದರ್ಭದಿಂದ ನಿರ್ಮಿಸಲಾಗುತ್ತಿದೆ. ಹಾಗಾಗಿ ಜನರಿಗೆ ಅಂತರ್ಗತ ಅಪಾಯದ ಬಗ್ಗೆ ಅರಿವು ಮೂಡಿಸಲು ಮತ್ತು ಈ ಹಾಡನ್ನು ಬಿಡುಗಡೆ ಮಾಡಲು ಇದಕ್ಕಿಂತಲೂ ಸೂಕ್ತ ಸಮಯ ಮತ್ತೊಮ್ಮೆ ಒದಗಿ ಬರುವುದಿಲ್ಲ ಎಂದು ನಾವು ಭಾವಿಸಿದ್ದೇವೆ” ಎಂದು ರಿದ್ಧಿ ಸೇನ್ ಹೇಳಿದ್ದಾರೆ.

ಈ ವೀಡಿಯೊವನ್ನು ಐಕಾನಿಕ್ ಕಾಲೇಜ್ ಸ್ಟ್ರೀಟ್ ಮತ್ತು ಟ್ಯಾಂಗ್ರಾದ ಚೈನೀಸ್ ಕಾಳಿ ಬ್ಯಾರಿ ಸೇರಿದಂತೆ ಕೋಲ್ಕತ್ತಾದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ಇದರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರ ಪುಸ್ತಕ ಮತ್ತು ಡಾ ಬಿ ಆರ್ ಅಂಬೇಡ್ಕರ್ ಬರೆದಿರುವ ಸಂವಿಧಾನದ ಪುಸ್ತಕಗಳನ್ನು ತೋರಿಸಲಾಗಿದೆ.


ಇದನ್ನೂ ಓದಿ: ಎನ್‌ಸಿಪಿ ನಾಯಕ ಶರದ್ ಪವಾರ್‌‌ ಬಂಗಾಳದಲ್ಲಿ ತೃಣಮೂಲ ಪರ ಪ್ರಚಾರ!

1 COMMENT

LEAVE A REPLY

Please enter your comment!
Please enter your name here