ಮುಂಡಗೋಡದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅನೈರ್ಮಲ್ಯ, ಅಶುದ್ದ ಊಟ ಮತ್ತು ನೀರಿನಿಂದ ವಿದ್ಯಾರ್ಥಿಗಳ ಆರೋಗ್ಯ ಕೆಡುವ ಭಯ ಮೂಡಿದೆಯೆಂದು ಪಾಲಕರು ತಹಶೀಲ್ದಾರ್‌ಗೆ ದೂರು ಕೊಟ್ಟ ದಿನದ ರಾತ್ರಿಯೇ 9 ವಿದ್ಯಾರ್ಥಿಗಳು ವಾಂತಿ ತಲೆ ನೋವು, ಹೊಟ್ಟೆ ನೋವು ಬಾಧಿಸಿ ಆಸ್ಪತ್ರೆಗೆ ದಾಖಲಾಗಬೇಕಾದ ಘಟನೆ ನಡೆದಿದೆ. ಸಂಭವನೀಯ ಅನಾಹುತದಿಂದ ವಿದ್ಯಾರ್ಥಿಗಳು ಪಾರಾಗಿ ಮನೆ ಸೇರಿದ್ದಾರಾದರೂ ಶಾಲೆಯ ಅವ್ಯವಸ್ಥೆ ಬಗ್ಗೆ ಆತಂಕ, ಆಕ್ರೋಶ ಭರಿತ ಟೀಕೆ-ಟಿಪ್ಪಣಿ ವ್ಯಕ್ತವಾಗುತ್ತಿದೆ.
ಶುಕ್ರವಾರ ರಾತ್ರಿ ವಿದ್ಯಾರ್ಥಿಗಳು ಊಟ ಮುಗಿಸಿ ತಮ್ಮ ತಮ್ಮ ಕೊಠಡಿ ಸೇರಿಕೊಂಡಿದ್ದರು. ಆಗ ಇದ್ದಕ್ಕಿದ್ದಂತೆಯೆ 7 ಮತ್ತು 8ನೇ ತರಗತಿಗೆ ಸೇರಿದ ಓರ್ವ ಹುಡುಗ ಹಾಗು 8 ಹುಡುಗಿಯರಿಗೆ ವಾಂತಿ ಶುರುವಾಗಿದೆ. ಇನ್ನು ಕೆಲವರು ಹೊಟ್ಟೆ ನೋವು ಮತ್ತು ತಲೆ ನೋವಿನಿಂದ ಬಳಲತೊಡಗಿದರು. ಹಾಸ್ಟೇಲ್ ನರ್ಸ್ ರಾತ್ರಿಯೇ ಸರ್ಕಾರಿ ಆಸ್ಪತ್ರೆಗೆ 9 ವಿದ್ಯಾರ್ಥಿಗಳನ್ನು ದಾಖಲಿಸಿದ್ದಾರೆ. ಇವರಲ್ಲಿ 8 ವಿದ್ಯಾರ್ಥಿಗಳು ಗುಣಮುಖರಾಗಿ ಹಾಸ್ಟೇಲ್ ಸೇರಿದರೆ, ಒಬ್ಬ ವಿದ್ಯಾರ್ಥಿನಿ ಮಾತ್ರ ಹೆಚ್ಚು ಅಸ್ವಸ್ಥಳಾಗಿದ್ದರಿಂದ ಶನಿವಾರ ಸಂಜೆ ತನಕವೂ ಆಸ್ಪತ್ರೆಯಲ್ಲೆ ಇರಬೇಕಾಯಿತು.
ಕಲುಷಿತ ಆಹಾರದಿಂದ ತಮ್ಮ ಮಕ್ಕಳ ಆರೋಗ್ಯ ಹದಗೆಟ್ಟಿದೆಯೆಂದು ಪಾಲಕರು ಆಕ್ರೋಶಿತರಾಗಿದ್ದರು. ಪಾಲಕರ ಈ ಅನುಮಾನಕ್ಕೂ ಕಾರಣವಿತ್ತು. ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳಿಗೆ ಕೊಟ್ಟ ಊಟದಲ್ಲಿ ಹುಳುಗಳು ಕಂಡುಬಂದಿತ್ತು. ಈ ಕುರಿತು ತಹಶೀಲ್ದಾರ್‌ರಿಗೆ ದೂರು ಸಹ ನೀಡಲಾಗಿತ್ತು. ಆಹಾರ ಪದಾರ್ಥ ಸರಿಯಾಗಿ ಶುಚಿಗೊಳಿಸದೆ ಅಡಿಗೆ ತಯಾರಿಸದ್ದರಿಂದ ಹುಳುಗಳು ಊಟದಲ್ಲಿ ಬರಲು ಕಾಣವಾಗಿತ್ತೆಂದು ವಾರ್ಡನ್ ಹೇಳಿದ್ದರು.
ಆದರೆ ಈ ಬಾರಿ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಲು ಕಲುಷಿತ ನೀರು ಕಾರಣವಾಗಿತ್ತು. ಶಾಲೆಯ ಕುಡಿಯುವ ನೀರನ್ನು ಶುದ್ದ ಮಾಡಲೆಂದು ಟ್ಯಾಂಕಿಗೆ ಬೆರೆಸಿದ ಕ್ಲೋರಿನ್‌ನಿಂದ ಸಮಸ್ಯೆಯಾಗಿದೆಯೆಂದು ತಾಲ್ಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ. ಎಚ್.ಎಫ್.ಇಂಗಳೆೆ ತಿಳಿಸಿದ್ದಾರೆ. ಮಿತಿ ಮೀರಿ ಕ್ಲೋರಿನ್ ಬೆರೆಸಿದ್ದು ಅಥವಾ ಕ್ಲೋರಿನ್ ಪರಿಣಾಮ ಕಡಿಮೆಯಾಗಿ ಕುಡಿಯಲು ಯೋಗ್ಯವಾಗುವ ಮೊದಲೆ ಹೊಣೆಗೇಡಿತನದಿಂದ ವಿದ್ಯಾಥಿಗಳಿಗೆ ನೀಡಿದ್ದರಿಂದ ಆರೋಗ್ಯ ಹದಗೆಟ್ಟಿದೆಯೆನ್ನಲಾಗಿದೆ.
ಶುದ್ದ ಕುಡಿಯುವ ನೀರಿನ ಘಟಕ ಶಾಲೆಗೆ ಮಂಜೂರಾಗಿ ಹಲವು ದಿನವಾಗಿದ್ದರೂ ಅದಿನ್ನು ಸ್ಥಾಪಿಸಲಾಗಿಲ್ಲ. ಘಟಕಕ್ಕೆ ಬೇಕಾದ ಸಾಮಗ್ರಿಗಳು ಬಂದಿವೆ. ಆದರೆ ಅದನ್ನು ಜೋಡಿಸಲಾಗಿಲ್ಲ. ಹೀಗಾಗಿ ಮಕ್ಕಳು ಶುದ್ದ ನೀರಿನಿಂದ ವಂಚಿತರಾಗಿ ಕಷ್ಟ ಎದುರಿಸುವಂತಾಗಿದೆಯೆಂದು ಪಾಲಕರು ಹೇಳುತ್ತಾರೆ. ಈ ಸಲ ಬಟ್ಟೆ, ಪುಸ್ತಕ ವಿತರಣೆಯಾಗಿಲ್ಲವೆಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಕರಿಗೆ ಮಕ್ಕಳ ಬಗ್ಗೆ ಕಾಳಜಿಯಿಲ್ಲವೆಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, 9 ವಿದ್ಯಾರ್ಥಿಗಳು ಅಸ್ವಸ್ಥರಾದಾಗ ಆಸ್ಪತ್ರೆ ಸೇರಿಸಲು ನರ್ಸ್‌ಗೆ ಯಾವ ಶಿಕ್ಷಕರೂ ನೆರವಿಗೆ ಬರಲಿಲ್ಲವೆಂದು ಹೇಳಿದ್ದಾರೆ. ಶಾಲೆಯ ಹಿಂಬದಿಯ ವಸತಿ ಗ್ರಹದಲ್ಲೆ ಇದ್ದರು ಶಿಕ್ಷರು ಉದಾಸೀನ ತೋರಿಸಿದ್ದು ಅಮಾನವೀಯವೆಂದು ಪಾಲಕರು ಹೇಳುತ್ತಿದ್ದಾರೆ.
ಇದನ್ನೂ ಓದಿ: ’ಸಂಗೀತ ಕದನವನ್ನು ತಪ್ಪಿಸುತ್ತದೆ, ಸರಿಗಮಪಕ್ಕೆ ಬೇಗ ಬಂದು ಸೇರಿಕೊಳ್ಳುತ್ತೇನೆ’: ಡಾ. ಹಂಸಲೇಖ


