ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಅವಶೇಷಗಳ ರಾಶಿಯಲ್ಲಿ ಪುರಾತತ್ವ ಇಲಾಖೆ ಪತ್ತೆ ಮಾಡಿದೆ ಎನ್ನಲಾದ ವಿಗ್ರಹಗಳ ತುಂಡುಗಳು ಈ ಕಟ್ಟಡದ ಬಾಡಿಗೆ ಮಳಿಗೆಗಳಲ್ಲಿ ವಹಿವಾಟು ನಡೆಸುತ್ತಿದ್ದ ಶಿಲ್ಪಿಗಳು ಹಾಕಿರುವ ಸಾಧ್ಯತೆ ಇದೆ ಎಂದು ಮಸೀದಿಯ ಪರಿಪಾಲನೆ ನಿರ್ವಹಿಸುತ್ತಿರುವ ಅಂಜುಮನ್ ಇಂತಿಝಾಮಿಯಾ ಮಸಾಜಿದ್ (ಎಐಎಂ) ಸಮಿತಿ ಶುಕ್ರವಾರ ಸಂಶಯ ವ್ಯಕ್ತಪಡಿಸಿದೆ.
ಮಸೀದಿ ಸಮಿತಿ ಹೇಳಿಕೆ ನೀಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಹಿಂದೂ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್, ಇಂಥ ವಾದಕ್ಕೆ ಯಾವ ಆಧಾರವೂ ಇಲ್ಲ ಎಂದಿದ್ದಾರೆ. ಜ್ಞಾನವಾಪಿ ಎಎಸ್ಐನ ವೈಜ್ಞಾನಿಕ ಸಮೀಕ್ಷೆ ವರದಿಯು ಆವರಣದ ಒಳಗಡೆ ಇದ್ದ ಅವಶೇಷಗಳ ರಾಶಿಯಲ್ಲಿ ಪತ್ತೆಯಾದ ಪ್ರತಿ ವಿಗ್ರಹ ಮತ್ತು ಕಲಾಕೃತಿಗಳ ವಯಸ್ಸು, ಯುಗ, ಗಾತ್ರ ಮತ್ತು ಇತರ ಎಲ್ಲ ಸೂಕ್ತ ವಿವರಗಳನ್ನು ನಿರ್ದಿಷ್ಟಪಡಿಸಿದೆ ಎಂದು ಅವರು ಹೇಳಿದ್ದಾರೆ.
ಎಎಸ್‌ಐ ಸಮೀಕ್ಷೆ ವರದಿಯ ಪ್ರತಿಯನ್ನು ಹಿಂದೂ ಮತ್ತು ಮುಸ್ಲಿಂ ಎರಡೂ ಕಡೆಯ ಅರ್ಜಿದಾರರಿಗೆ ನೀಡಿದ ಬೆನ್ನಲ್ಲೇ ಪರಸ್ಪರ ವಾಗ್ವಾದ ಶುರುವಾಗಿದೆ. 17ನೇ ಶತಮಾನದಲ್ಲಿ ಮಸೀದಿ ನಿರ್ಮಾಣ ಮಾಡುವ ಮೊದಲು ಜ್ಞಾನವಾಪಿ ಜಾಗದಲ್ಲಿ ಹಿಂದೂ ಮಂದಿರ ಇತ್ತು ಎಂದು ಎಎಸ್ಐ ಸಮೀಕ್ಷೆ ತಿಳಿಸಿದೆ.
ಎಎಸ್ಐ ಸಮೀಕ್ಷೆ ವರದಿಯ ಅಧ್ಯಯನಕ್ಕೆ ಕಾನೂನು ತಜ್ಞರನ್ನು ನೇಮಕ ಮಾಡಲಾಗುವುದು ಎಂದು ಮಸೀದಿ ಸಮಿತಿ ಹೇಳಿದೆ. ಇಲ್ಲಿ ದೇವಾಲಯ ಇತ್ತು ಎನ್ನುವ ಬಗ್ಗೆ ಹಿಂದೂಗಳು ಮಾಡಿರುವ ಪ್ರತಿಪಾದನೆಗೆ ಯಾವುದೇ ಹೊಸ ಶೋಧನೆಯ ಆಧಾರ ಇಲ್ಲ ಎಂದು ಸಮಿತಿಯ ವಕೀಲ ಅಖ್ಲಾಕ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
ನಾವು ವರದಿಯನ್ನು ಅಧ್ಯಯನ ಮಾಡಿದ ಬಳಿಕ ಹೇಳಿಕೆ ನೀಡುತ್ತೇವೆ. ಎಎಸ್‌ಐ ಸಮೀಕ್ಷೆಯಲ್ಲಿ, ಮೇ 2022 ರಲ್ಲಿ ನ್ಯಾಯಾಲಯದ ಕಮಿಷನರ್ ಸಮೀಕ್ಷೆಯಲ್ಲಿ ಹೇಳಿದ್ದನ್ನೇ ಹೇಳಲಾಗಿದೆ. ಹೊಸತೇನು ಇಲ್ಲ ಎಂದು ಅಖ್ಲಾಕ್ ಅಹ್ಮದ್ ತಿಳಿಸಿದ್ದಾರೆ.
1993ರಲ್ಲಿ ಕಬ್ಬಿಣದ ಪಟ್ಟಿಗಳಿಂದ ಮಸೀದಿಯ ದಕ್ಷಿಣ ಭಾಗವನ್ನು ಮುಚ್ಚುವ ಮೊದಲು ಮಸೀದಿ ಸಮಿತಿಯಿಂದ ಅಂಗಡಿಗಳನ್ನು ಐದರಿಂದ ಆರು ಶಿಲ್ಪಿಗಳು ಬಾಡಿಗೆಗೆ ಪಡೆದಿದ್ದರು. ಆ ವೇಳೆ ಅವರು ವಿಗ್ರಹಗಳು ಮತ್ತು ತ್ಯಾಜ್ಯವನ್ನು ಎಸೆದಿರುವ ಬಲವಾದ ಸಂಶಯ ನಮಗಿದೆ. ಎಎಸ್‌ಐ ಸಮೀಕ್ಷೆ ಸಮಯದಲ್ಲಿ ಅದೇ ವಿಗ್ರಹಗಳನ್ನು ದೊರತಿರುವ ಸಾಧ್ಯತೆ ಇದೆ ಎಂದು ಅಖ್ಲಾಕ್ ಅಹ್ಮದ್ ಹೇಳಿದ್ದಾರೆ.
ಇದನ್ನೂ ಓದಿ: ನಿತೀಶ್ ಕುಮಾರ್ ‘ಇಂಡಿಯಾ’ ಬಣದಲ್ಲೆ ಉಳಿದಿದ್ದರೆ ಪ್ರಧಾನಿಯಾಗಬಹುದಿತ್ತು: ಅಖಿಲೇಶ್ ಯಾದವ್


