ಆತ್ಮ ಮತ್ತು ಪರಮಾತ್ಮ ಎಂಬುದು ಅಸ್ತಿತ್ವದಲ್ಲಿಲ್ಲ, ಅದು ಕೇವಲ ಜನರ ನಂಬಿಕೆಯಷ್ಟೇ ಎಂದು ಬಿಹಾರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಹೇಳಿದ್ದಾರೆ. ಮುಸ್ಲಿಮರು ಲಕ್ಷ್ಮೀ ಪೂಜೆ ಮಾಡುವುದಿಲ್ಲ, ಅವರಲ್ಲಿ ಶ್ರೀಮಂತರಿಲ್ಲವೇ? ಎಂಬ ತಾರ್ಕಿಕ ಪ್ರಶ್ನೆಗಳನ್ನು ಎತ್ತಿದ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಲಕ್ಷ್ಮೀ ಪೂಜೆ ಮಾಡಿದರೆ ಮಾತ್ರ ಸಂಪತ್ತು ದೊರಕುತ್ತದೆ ಎನ್ನುವುದಾದರೆ ಮುಸ್ಲಿಮರಲ್ಲಿ ಬಿಲಿಯನೇರ್‌ಗಳು ಇರಬಾರದಿತ್ತು. ಏಕೆಂದರೆ ಅವರು ಲಕ್ಷ್ಮೀ ಪೂಜೆ ಮಾಡುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವರಲ್ಲಿ ಶ್ರೀಮಂತರಿಲ್ಲವೇ? ಮುಸ್ಲಿಮರು ಸರಸ್ವತಿ ದೇವಿಯನ್ನು ಸಹ ಪೂಜಿಸುವುದಿಲ್ಲ. ಅವರಲ್ಲಿ ವಿದ್ವಾಂಸರಿಲ್ಲವೇ? ಐಎಎಸ್, ಐಪಿಎಸ್ ಅಧಿಕಾರಿಗಳಿಲ್ಲವೇ ಎಂದು ಲಾಲನ್ ಪಾಸ್ವಾನ್ ಪ್ರಶ್ನಿಸಿದ್ದಾರೆ.
ನೀವು ನಂಬಿದ್ದರೆ ಅದು ದೇವರಾಗುತ್ತದೆ, ಇಲ್ಲವಾದರೆ ಕೇವಲ ಕಲ್ಲಿನ ವಿಗ್ರಹವಾಗುತ್ತದೆ. ನಾವು ದೇವರು ಮತ್ತು ದೇವತೆಗಳನ್ನು ನಂಬುತ್ತೇವೆಯೋ ಇಲ್ಲವೋ ಎಂಬುದು ನಮಗೆ ಬಿಟ್ಟದ್ದು. ತಾರ್ಕಿಕ ತೀರ್ಮಾನಕ್ಕೆ ಬರಲು ನಾವು ವೈಜ್ಞಾನಿಕ ತಳಹದಿಯ ಮೇಲೆ ಯೋಚಿಸಬೇಕು. ನೀವು ನಂಬುವುದನ್ನು ನಿಲ್ಲಿಸಿದರೆ, ನಿಮ್ಮ ಬೌದ್ಧಿಕ ಸಾಮರ್ಥ್ಯವು ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ.
"मुसलमान लक्ष्मी की पूजा नहीं करते, तो क्या वे अमीर नहीं होते"
"मुसलमान सरस्वती को नहीं पूजते, तो क्या मुसलमान शिक्षित नहीं होते" – BJP MLA Lalan Paswan from Bhagalpur,Bihar pic.twitter.com/RDoSM0jMEY— Muktanshu (@muktanshu) October 19, 2022
“ಬಜರಂಗಬಲಿ ಶಕ್ತಿಯುಳ್ಳ ದೇವತೆ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಬಜರಂಗಬಲಿ ಪೂಜೆ ಮಾಡುವುದಿಲ್ಲ. ಅವರು ಶಕ್ತಿವಂತರಲ್ಲವೇ? ನೀವು ನಂಬುವುದನ್ನು ನಿಲ್ಲಿಸಿದ ದಿನ, ಇವೆಲ್ಲವೂ ಕೊನೆಗೊಳ್ಳುತ್ತದೆ” ಎಂದು ಬಿಹಾರದ ಪರ್ಪೈಂಟಿ ವಿಧಾನ ಸಭಾ ಕ್ಷೇತ್ರದ ಶಾಸಕರು ಹೇಳಿದ್ದಾರೆ.
ಅವರ ಹೇಳಿಕೆಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿವೆ ಎಂದು ಆರೋಪಿಸಿ ಕೆಲವರು ಪ್ರತಿಭಟನೆ ನಡೆಸಿದ್ದಾರೆ. ಭಾಗಲ್‌ಪುರದ ಶೇರ್ಮಾರಿ ಬಜಾರ್‌ನಲ್ಲಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪೆರೋಲ್‌ನಲ್ಲಿ ಹೊರಗಿರುವ ರೇಪ್ ಪ್ರಕರಣದ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಆನ್‌ಲೈನ್‌ನಲ್ಲಿ ಪ್ರವಚನ!: ಬಿಜೆಪಿ ಮುಖಂಡರ ಭಾಗಿ


