Homeಕರ್ನಾಟಕಮೈಸೂರು: ಜ.25ರಿಂದ ‘ನಿರಂತರ ರಂಗ ಉತ್ಸವ’, ಐದು ನಾಟಕಗಳ ಪ್ರದರ್ಶನ

ಮೈಸೂರು: ಜ.25ರಿಂದ ‘ನಿರಂತರ ರಂಗ ಉತ್ಸವ’, ಐದು ನಾಟಕಗಳ ಪ್ರದರ್ಶನ

ಉತ್ಸವದಲ್ಲಿ ಪ್ರದರ್ಶನವಾಗುವ ಐದು ನಾಟಕಗಳ ಪರಿಚಯ ಇಲ್ಲಿದೆ

- Advertisement -
- Advertisement -

ಮೈಸೂರು: ನಿರಂತರ ಫೌಂಡೇಶನ್ ಆಯೋಜಿಸುತ್ತಾ ಬರುತ್ತಿರುವ ಪ್ರತಿಷ್ಟಿತ ‘ನಿರಂತರ ರಂಗ ಉತ್ಸವ’ ಈ ಬಾರಿ ಜನವರಿ 25ರಿಂದ ಜ.29ರವರೆಗೆ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ನಡೆಯಲಿದೆ.

ಪ್ರತಿದಿನ ಸಂಜೆ ಏಳು ಗಂಟೆಗೆ ಒಂದೊಂದು ನಾಟಕವನ್ನು ಪ್ರದರ್ಶಿಸಲಾಗುತ್ತದೆ. ಜ.25ರಂದು ಸಂಜೆ 6.15ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ನಿರಂತರ ಸಂಸ್ಥೆಯ ಪ್ರಸಾದ್ ಕುಂದೂರು ಪಾಲ್ಗೊಳ್ಳಲಿದ್ದಾರೆ.

ಜ.26ರಂದು ಪ್ರಜಾವಾಣಿ ಮೈಸೂರು ಬ್ಯುರೋ ಸಂಪಾದಕರಾದ ಕೆ.ನರಸಿಂಹಮೂರ್ತಿ, ಜ.27ರಂದು ಶಿಕ್ಷಣತಜ್ಞ ನಾ.ದಿವಾಕರ್‌, ಹಿರಿಯ ರಂಗಕರ್ಮಿ ಇಂದಿರಾ ನಾಯರ್‌, ಜ.28ರಂದು ಡಾ.ಡಿ.ಬಿ.ನಟೇಶ್‌, ಬೆಂಗಳೂರು ಹಸಿರು ಫೌಂಡೇಷನ್‌ನ ಹೊನ್ಗಳ್ಳಿ ಗಂಗಾಧರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಜ.29ರಂದು ಸಂಜೆ 6.15ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು ಕವಿ ಆರಿಫ್ ರಾಜ್‌, ಬಿಬಿಎಂಪಿ ವಿಶೇಷ ಆಯುಕ್ತ, ಮಂತ್ರಿಮಂತ್ರಿಯವರ ಕಾರ್ಯದರ್ಶಿ ಜಯರಾಮ್ ರಾಯಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ನಿರಂತರ ಸಂಸ್ಥೆಯ ಶ್ರೀನಿವಾಸ್ ಪಾಲಹಳ್ಳಿ ಹಾಜರಿರುವರು.

ಪ್ರದರ್ಶನವಾಗುವ ನಾಟಕಗಳ ವಿವರ

ಜನವರಿ 25
ನಾಟಕ: ಶಾಂತಕವಿಗಳ ವಿಶ್ರಾಂತಿ
ತಂಡ: ಗೊಂಬೆಮನೆ, ಧಾರವಾಡ
ರಚನೆ & ನಿರ್ದೇಶನ: ಪ್ರಕಾಶ್ ಗರುಡ

ನಾಟಕದ ಬಗ್ಗೆ: ಇದು ಕನ್ನಡದ ಆದ್ಯ ನಾಟಕಕಾರ ಎಂದು ಹೆಸರಾದ ಸಕ್ಕರಿ ಬಾಳಾಚಾರ್ಯ ‘ಶಾಂತಕವಿ’ಗಳ ಜೀವನ-ಸಾಧನೆಗಳ ಕುರಿತಾದ ನಾಟಕ. ಹೆಸರೇ ಸೂಚಿಸುವಂತೆ ಶಾಂತಕವಿಗಳು ಉರ್ಫ್ ಸಕ್ಕರಿ ಬಾಳಾಚಾರ್ಯರೇ ಇದರ ಕೇಂದ್ರ ಪಾತ್ರ. ಐತಿಹಾಸಿಕ ವಿವರಗಳನ್ನು ಒಳಗೊಂಡಿರುವುದರಿಂದ ಇದನ್ನು ದಾಖಲಾತೀ ನಾಟಿಕೆ ಎಂದು ಕರೆಯಲಾಗಿದೆ. ನಾಟಿಕಾ ಎಂಬ ಪದದ ಪ್ರಯೋಗವು ಭರತಮುನಿಯ ನಾಟ್ಯಶಾಸ್ತ್ರ (ಅಧ್ಯಾಯ 20)ದಲ್ಲಿಯೂ ಮತ್ತು ಧನಂಜಯನ ದಶರೂಪಕ (ಪ್ರಕಾಶ- 3)ದಲ್ಲಿಯೂ ಕಂಡುಬರುತ್ತದೆ. ಈ ನಾಟಕ ಶಾಂತಕವಿಗಳ ಕನ್ನಡತ್ವದ ಶೋಧನೆಗಾಗಿ ಹೊಸ ರಂಗಭೂಮಿಯನ್ನು ಕಟ್ಟಲು ಅವರು ಪಟ್ಟಶ್ರಮ ಎದುರಿಸಿದ ಬಿಕ್ಕಟ್ಟುಗಳನ್ನು ಅವರ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳ ಹಿನ್ನೆಲೆಯಲ್ಲಿ ಕಟ್ಟಿಕೊಡಲು ಪ್ರಸ್ತುತ ಪ್ರಯೋಗದಲ್ಲಿ ಪ್ರಯತ್ನಿಸಲಾಗಿದೆ.

***

ಜನವರಿ 26
ನಾಟಕ: ವಾರಸುದಾರಾ
ರಚನೆ: ಜಯರಾಂ ರಾಯಪುರ
ತಂಡ: ನಿರಂತರ, ಮೈಸೂರು
ನಿ: ಪ್ರಸಾದ್ ಕುಂದೂರು

ನಾಟಕದ ಬಗ್ಗೆ: ಹಿಂದೂಸ್ತಾನದ ಚರಿತ್ರೆಯಲ್ಲಿ ಮೊಘಲ್ ಸಾಮ್ರಾಜ್ಯದ ಇತಿಹಾಸ ಎಂದೂ ಮರೆಯಲಾಗದ ಅಧ್ಯಾಯ. ಟರ್ಕಿಯಿಂದ ಬಂದ ತೈಮೂರ್ ವಂಶಸ್ಥರಾದರೂ, ಈ ಭಾರತೀಯ ನೆಲದ ಸಂಸ್ಕೃತಿ-ಸಂಘರ್ಷಗಳನ್ನು, ಭಾವೈಕ್ಯತೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ, ಬೃಹತ್ ಸಾಮ್ರಾಜ್ಯದ ಒಡೆತನ ಹೊಂದಿದ್ದ ಮೊಘಲರು, ಮೌರ್ಯರ ನಂತರ ಅಖಂಡ ಹಿಂದೂಸ್ತಾನವನ್ನು ಆಳಿದವರು. ಸರ್ವ ಧರ್ಮಗಳ ಗೌರವಿಸಿ ಪೊರೆಯುವ ಅಕ್ಬರ್‌ನ ಧಾರ್ಮಿಕ ಮತ್ತು ರಾಜಕೀಯ ಚಿಂತನೆಗಳು ಶಹಜಹಾನ್ ಮತ್ತು ಅವನ ಅತ್ಯಂತ ಪ್ರೀತಿಯ ಹಿರಿಯ ಮಗ ದಾರಶಿಕೋನ ಮರಣದಲ್ಲಿ ಪರ್ಯಾವಸನಗೊಳ್ಳುತ್ತದೆ. ಶಹಜಹಾನನ ನಾಲ್ಕು ಮಕ್ಕಳಾದ ದಾರಶಿಕೋ, ಮುರಾದ್, ಶೂಜ, ಜೌರಂಗಜೇಬನಿಗೆ ಮೊಘಲ್ ಹಾಗೂ ಹಿಂದುಸ್ತಾನದ ಬಾದಶಹ ಆಗಬೇಕಾದರೆ ತಮ್ಮ ಅಣ್ಣತಮ್ಮಂದಿರನ್ನೇ ಕೊಂದು ಗಾದಿ ಹಿಡಿಯಬೇಕು. ಇಲ್ಲವಾದರೆ ಪ್ರಾಣ ಕಳೆದುಕೊಂಡು ಪಟ್ಟ ಏರುವವನಿಗೆ ಮೆಟ್ಟಿಲಾಗಬೇಕು. ಹೀಗೆ ತೈಮೂರ್ ವಂಶವಳಿಯ ಈ ರಾಜಕೀಯ ದುರಂತದ ಚರಿತ್ರೆಯೊಳಗೆ ಯಾರು ಶಹಜಹಾನನ ನಂತರ ಮಯೂರ ಸಿಂಹಾಸನದ ಮೇಲೆ ಕೂತು ಅಖಂಡ ಹಿಂದೂಸ್ತಾನವನ್ನು ಆಳಲು ಯೋಗ್ಯರೋ ಎಂದು ಯುದ್ಧವೇ ನಿರ್ಧರಿಸಬೇಕಾಗುತ್ತದೆ. ಇಂತಹ ಮೊಘಲ್ ಸುಲ್ತಾನತ್ತಿಗಾಗಿ ನಡೆದ ರೋಚಕ ಕಾಳಗದ ಕಥನವೇ “ವಾರಸುದಾರಾ”.

****

ಜನವರಿ 27
ನಾಟಕ: ನವಿಲು ಪುರಾಣ
ರಚನೆ: ಪ್ರೊ.ಕೆ.ಈ.ರಾಧಾಕೃಷ್ಣ
ತಂಡ: ಅನೇಕ, ಬೆಂಗಳೂರುನಿ: ಸುರೇಶ್ ಆನಗಳ್ಳಿ

ನಾಟಕದ ಬಗ್ಗೆ: ಮಹಾನ್ ಉರ್ದು ಲೇಖಕ ಇನ್ತಿಜಾರ್ ಹುಸೇನರ ಕತೆಯಿಂದ ಪ್ರೇರಿತವಾದ ‘ನವಿಲು ಪುರಾಣ’ವನ್ನು ಕನ್ನಡದಲ್ಲಿ ಕಥಾರೂಪಕವಾಗಿ ರಚಿಸಿದವರು- ಸಾಂಸ್ಕೃತಿಕ ಲೋಕದಲ್ಲಿ ಕ್ರಿಯಾಶೀಲವಾಗಿರುವ ಪ್ರೊ.ಕೆ.ಈ.ರಾಧಾಕೃಷ್ಣ ಅವರು. ರಂಗ ಪ್ರದರ್ಶನಕ್ಕೆ ಪರಿಕಲ್ಪಿಸಿ ಅಳವಡಿಸಿದವರು ಮತ್ತು ನಿರ್ದೇಶಿಸಿದವರು, ನಾಡಿನ ಶ್ರೇಷ್ಠ ರಂಗತಪಸ್ವಿ ಸುರೇಶ್ ಅನಗಳ್ಳಿಯವರು.

ವಿನಾಶಕಾರಿ ಯುದ್ಧದ ಪರಿಣಾಮವಾಗಿ ನೆಲೆ ಕಳೆದುಕೊಂಡು ನಿರಾಶ್ರಿತವಾದ ನವಿಲು – ಈ ನಾಟಕದ ಕೇಂದ್ರ ರೂಪಕ. ಈ ರೂಪಕದ ಸುತ್ತ – ಪುರಾಣ, ಇತಿಹಾಸ, ವರ್ತಮಾನ ಕಾಲಘಟ್ಟಗಳ ಹಲವಾರು ಘಟನೆಗಳು ಬಿಚ್ಚಿಕೊಳ್ಳುತ್ತವೆ. ಯುದ್ಧವೆಂದರೆ ಪರರ ನೆಲವನ್ನು, ಸಂಪತ್ತನ್ನು ಕಸಿದುಕೊಳ್ಳುವ ದುಷ್ಟರ ಹುನ್ನಾರವೇ ತಾನೇ? ಬಲಾಢ್ಯರು ಸೃಷ್ಟಿಸುವ ಇಂತಹ ಯುದ್ಧೋನ್ಮಾದ ಹಾಗೂ ಅದರ ಪರಿಣಾಮವಾಗಿ ದುರ್ಬಲರು ತಮ್ಮ ನೆಲೆ ಕಳೆದುಕೊಂಡು ನಿರಾಶ್ರಿತರಾಗುವ ಧಾರುಣ ವಿದ್ಯಮಾನಗಳಿಗೆ ಮೂಕ ಸಾಕ್ಷಿಯಾಗಿ ನಿಲ್ಲುತ್ತದೆ- ಸ್ವತ: ತನ್ನ ನೆಲವನ್ನೇ ಕಳೆದುಕೊಂಡ ನವಿಲು! ನವಿಲು ಪುರಾಣವು ಯುದ್ಧದ ಪರಿಣಾಮವಾಗಿ ನೆಲವಿಹೀನರಾಗುವ ನಾಗರಿಕರ ಸಂಕಟದ ಕಥೆ ಮಾತ್ರವಲ್ಲ; ಸಕಲ ಜೀವ ಸಂಕುಲವನ್ನು ಒಳಗೊಂಡ ಪರಿಸರ ವಿನಾಶದ ಕಥೆಯೂ ಹೌದು. ಹಿಂದೊಮ್ಮೆ ತಿಳಿನೀರ ಕೊಳದಲ್ಲಿ ವಿಹರಿಸುತ್ತಿದ್ದ ರಾಜಹಂಸವು ಇಂದು ಬಡಕಲು ಬಾತುಕೋಳಿಯಾಗಿ ರೂಪಾಂತರಗೊಂಡ ವಿಷಾದದ ಎಳೆಯೂ ಈ ನಾಟಕದ ಕಥಾ ನೇಯ್ಗೆಯಲ್ಲಿದೆ.

ನವಿಲು ಪುರಾಣ ಪ್ರಯೋಗ ವಿನ್ಯಾಸದ ಕುರಿತು: ಈ ನಾಟಕದಲ್ಲಿ ರಂಗಭೂಮಿಗೆ ವಿಶಿಷ್ಟವಾದ ನಾಟಕೀಯ ಸಂಭಾಷಣೆಯ ಬದಲಿಗೆ, ಸಣ್ಣ ಕಥಾ ಸಾಹಿತ್ಯ ಪ್ರಕಾರದಲ್ಲಿ ಬಳಕೆಯಾಗುವ ಕಥನ ನಿರೂಪಣಾ ಶೈಲಿಗೆ ಒತ್ತು ಕೊಡಲಾಗಿದೆ. ಅಂದರೆ, ನಟನು ತಾನು ನಿರ್ವಹಿಸಬೇಕಾದ ಕ್ರಿಯೆಗಳನ್ನು ಪಾತ್ರದ ಹೊರ ನಿಂತು ನಿರೂಪಿಸಲಾಗುತ್ತದೆ ಹಾಗೂ ಮರುಕ್ಷಣವೇ ಪಾತ್ರವಾಗಿ ಮಾರ್ಪಟ್ಟು ಪಾತ್ರದ ಸಂಭಾಷಣೆಯನ್ನು ಹೇಳುತ್ತಾನೆ. ಈ ರೀತಿ ಏಕಕಾಲದಲ್ಲೇ ನಟ-ಪಾತ್ರ ದ್ವಂದ್ವ ಪ್ರಸ್ತುತಿಯ ಜೊತೆಗೆ ಸಾಕ್ಷ ಚಿತ್ರಗಳ ನೈಜ ಬಿಂಬಗಳ ತುಣುಕು; ಸಮೂಹ ನಟನೆಯ ನಾಟಕೀಯತೆ; ಅತಿ- ವಾಸ್ತವತೆಗಳ ಬೃಹತ್ ಬೊಂಬೆಗಳ ಆಟ – ಇತ್ಯಾದಿ ಹಲವು ಮಾಧ್ಯಮಗಳ ಮಿಶ್ರಣದ ಪಾಕವನ್ನು ನವಿಲು ಪುರಾಣದ ದೃಷ್ಟಾಂಶಗಳಲ್ಲಿ ಪ್ರಯೋಗಿಸಲಾಗಿದೆ.

***

ಜನವರಿ 28
ನಾಟಕ: ಮಿಸ್. ಸದಾರಮೆ
ರಚನೆ: ಬೆಳ್ಳಾವೆ ನರಹರಿ ಶಾಸ್ತ್ರಿ
ತಂಡ: ಸಮಷ್ಟಿ, ಬೆಂಗಳೂರು
ನಿ: ಮಂಜುನಾಥ ಎಲ್ ಬಡಿಗೇರ

ನಾಟಕದ ಬಗ್ಗೆ: ಮಿಸ್ ಸದಾರಮೆ ನಾಟಕವು ಬೆಳ್ಳಾವೆ ನರಹರಿ ಶಾಸ್ತ್ರಿಗಳಿಂದ ವಿರಚಿರ್ತವಾದ ಮೂಲ “ಸದಾರಮಾ ನಾಟಕಂ”ನ ಪರಿಷ್ಕೃತ ಆವೃತ್ತಿ. ಮೂಲತಃ ಈ ನಾಟಕವು ಗುಬ್ಬಿ ಕಂಪೆನಿಯಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಂಡು ನಂತರ ಹಿರಣ್ಣಯ್ಯನವರಿಂದ ಹಲವಾರು ಪ್ರಯೋಗಗಳನ್ನು ಕಂಡು ಪ್ರಸಿದ್ದವಾಗಿದೆ. ನಂತರ ಇದನ್ನು ಕೆ ವಿ ಸುಬ್ಬಣ್ಣನವರು ಪ್ರಸ್ತುತ ಸನ್ನಿವೇಷಕ್ಕೆ ಬದಲಾಯಿಸಿ “ಮಿಸ್ ಸದಾರಮೆ” ಎಂದು ಬಿ ವಿ ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನು ಮಾಡಿಸಿದರು. ಈ ನಾಟಕವು ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಪ್ರಯೋಗವಾದ ದಾಖಲೆಗಳಿವೆ.

ವರ್ತಕ ಬಂಗಾರ ಶೆಟ್ಟಿಯ ಮಗಳಾದ ಸದಾರಮೆಯಿಂದ ಆಕರ್ಷಿತನಾದ ರಾಜಕುಮಾರ ರಾಜ್ಯ ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ, ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ. ವಿಧಿಯ ವೈಪರೀತ್ಯದಿಂದಾಗಿ ಗಂಡ-ಹೆಂಡತಿಯರು ಒಬ್ಬರಿಂದೊಬ್ಬರು ಅಗಲಿ ಮುಗ್ದೆಯಾದ ಸದಾರಮೆ ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲ ಯಶಸ್ವಿಯಾಗಿ ಎದುರಿಸಿ ಕೊನೆಗೆ ಅವರು ಮತ್ತೆ ಒಂದಾಗುತ್ತಾರೆ.
ನಾಟಕ ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪೆನಿ ನಾಟಕ ಶೈಲಿಯ ಹಾಡುಗಳಿಂದ ವೈಭವೀಕರಿಸಲ್ಪಟ್ಟಿದೆ. ನಿರ್ದೇಶಕರು ನಾಟಕದ ಮೂಲ ಕಥೆಗೆ ಹೊಸ ವ್ಯಾಖ್ಯಾನವನ್ನು ನೀಡುವ ಪ್ರಯತ್ನವನ್ನು ಮಾಡಿದ್ದಾರೆ.

****

ಜನವರಿ 29
ನಾಟಕ: ದಕ್ಲಕಥಾ ದೇವಿಕಾವ್ಯ
ತಂಡ: ಜಂಗಮ ಕಲೆಕ್ಟಿವ್, ಬೆಂಗಳೂರು
ರಚನೆ & ನಿರ್ದೇಶನ: ಲಕ್ಷ್ಮಣ ಕೆ.ಪಿ.

ನಾಟಕದ ಬಗ್ಗೆ: ‘ದಕ್ಲ ಕಥಾ ದೇವಿ ಕಾವ್ಯ’ ಕನ್ನಡ ಮಹತ್ವದ ಬರಹಗಾರರು ಮತ್ತು ಕರ್ನಾಟಕ ‘ದಲಿತ ಸಂಘರ್ಷ ಸಮಿತಿ’ಯ ಸ್ಥಾಪಕ ಸದಸ್ಯರು ಆದ ಕೆ.ಬಿ.ಸಿದ್ಧಯ್ಯ ಅವರ ಖಂಡಕಾವ್ಯ ಮತ್ತು ಕಥನಗಳನ್ನು ಒಟ್ಟಿಗೆ ಹೊಸೆದು ಕಟ್ಟಿರುವ ರಂಗಪ್ರಯೋಗ. ತಳಾತೀತಳ ಸಮುದಾಯಗಳ ಕಲ್ಪನೆಯಲ್ಲಿ ಅರಳಿರುವ ಭೂಮಿ ಹುಟ್ಟಿದ, ಜೀವ ಹುಟ್ಟಿದ ಕಥನದಿಂದ ಆರಂಭವಾಗುವ ಈ ಪ್ರಯೋಗ, ಈ ಸಮುದಾಯಗಳ ಆಚರಣೆ ನಂಬುಗೆ, ಹಸಿವು, ಬಯಕೆ, ಹಾಡು-ಪಾಡನ್ನು ಬಿಚ್ಚಿಡುತ್ತಾ ಹರಿಯುತ್ತದೆ. ‘ನುಡಿ’ ಎನ್ನುವುದು ಈ ಸಮುದಾಯಗಳಿಗೆ ಮೈಯ್ಯನ್ನು ಬಿಟ್ಟಿರಲಾಗದ ಉಸುರಿದ್ದಂತೆ. ಅರೆ, ತಮಟೆಯಂತಹ ವಾದ್ಯಗಳು ಆ ನುಡಿಬಳ್ಳಿಯ ಕುಡಿಗಳು. ಹೀಗೆ ಅಸ್ಪೃಶ್ಯ ಜಗತ್ತು ನಾದ ಜಗತ್ತು ಕೂಡ ಹೌದು. ಹೀಗಿರುವಾಗ ಶತಮಾನಗಳಿಂದ ದೂರವಿದ್ದ ‘ಅಕ್ಷರ’ವೆಂಬ ಮತ್ತೊಂದು ಅಂಗ ಅಸ್ಪೃಶ್ಯ ಮೈ ಪ್ರಜ್ಞೆಗೆ ತಾಕಿಕೊಂಡಾಗ ಅಲ್ಲಿ ಉಂಟಾಗುವ ಪ್ರೀತಿ, ಹಗೆಯ ಸಂಬಂಧವನ್ನು ಪ್ರಯೋಗ ಎದುರಾಗುತ್ತದೆ. ಹೀಗೆ ‘ಅಸ್ಪೃಶ್ಯತೆ ಮತ್ತು ಅಕ್ಷರದ ಅನುಭವದಿಂದ ದಕ್ಕಿದ ಅರಿವಿನ ಮೂಲಕ ನಮ್ಮಾಳದ ಮನುಷ್ಯನನ್ನು ಎದುರುಗೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...