Homeಕರ್ನಾಟಕನುಡಿನಮನ| ಜನಪರ ಹೋರಾಟಗಳ ಅನಭಿಷಿಕ್ತ ದೊರೆ ‘ಪ.ಮಲ್ಲೇಶ್’

ನುಡಿನಮನ| ಜನಪರ ಹೋರಾಟಗಳ ಅನಭಿಷಿಕ್ತ ದೊರೆ ‘ಪ.ಮಲ್ಲೇಶ್’

ಬಹುಶಃ ಬ್ರೆಜಿಲ್‌ನ ಪೇಲೆ ಕಾಲ್ಚೆಂಡಿನಾಟಕ್ಕಾಗಿ ಜನಿಸಿದಂತೆ ಪ. ಮಲ್ಲೇಶ್ ಮನುಕುಲದ ಎಲ್ಲ ಅನಿಷ್ಟಗಳ ವಿರುದ್ಧ ಪ್ರತಿಭಟಿಸಲೆಂದೇ ಹುಟ್ಟಿದ್ದರು ಎಂದೆನಿಸುತ್ತದೆ...

- Advertisement -
- Advertisement -

ಸಮಾಜವಾದವನ್ನೇ ಉಸಿರಾಡುತ್ತಿದ್ದ ಬೃಹತ್ ಆಲದ ಮರವೊಂದು ದಿಢೀರನೆ ಧರೆಗೆ ಒರಗಿದೆ. ಸುಮಾರು ಆರು ದಶಕಗಳ ಅವಧಿಯಲ್ಲಿ ಈ ಮರ ಅನೇಕ ಹೋರಾಟಗಳ ಬಿಲಳುಗಳಿಗೆ ಬಲ ನೀಡಿ, ಬೆನ್ನು ಕಟ್ಟಿತ್ತು. ಆದರೀಗ ಬಿಳಲುಗಳಿಗೆ ಆಸರೆ ತಪ್ಪಿದ, ಮನೆಯ ಹಿರಿಯಾತನ ನಿರ್ಗಮನವಾದಂತೆ ಅನಿಸಿ, ನಿರ್ವಾತವೊಂದು ಸೃಷ್ಟಿಯಾಗಿ, ಮುಂದೆ ನಡೆಸುವಾತ ಯಾರು ಎಂಬ ಜಿಜ್ಞಾಸೆ ಮೂಡಿಸಿದೆ. ಹೀಗೆ ತಮ್ಮ ಅನುಪಸ್ಥಿತಿ ಕಾಡುವಂತೆ ಬಾಳಿ ತಟಕ್ಕನೆ ಕಣ್ಮರೆಯಾದವರು ಸಮಾಜವಾದಿ, ತೀವ್ರ ಮಾನವತವಾದಿ ಹೋರಾಟಗಾರರಾದ ಶ್ರೀ.ಪ. ಮಲ್ಲೇಶ್ ರವರು.

ಮೈಸೂರು ನಿಜಕ್ಕೂ ಪುಣ್ಯ ಮಾಡಿತ್ತು. ಮಲೆನಾಡು, ಗಂಡು ಮೆಟ್ಟಿದ ನಾಡು, ಗದಗ, ದಾವಣಗೆರೆ , ಕೋಲಾರ ಮತ್ತಿತರ ದಿಕ್ಕುಗಳಿಂದ ಬದಲಾವಣೆಯ ಗಾಳಿ ಅರಸರ ನಾಡನ್ನರಸಿ ಬಂದು ಇಲ್ಲೇ ತುಂಬಿಕೊಂಡಿತ್ತು. ಇಲ್ಲವಾದಲ್ಲಿ ಪ್ರವಾಸಿಗ ನೋಡಿ ಕಣ್ತುಂಬಿಕೊಳ್ಳುವ ಅರಮನೆಯ ಸುಂದರಿಯಾಗಿಯಷ್ಟೇ ಉಳಿಯಬಹುದಾದ ಈ ಪ್ರಾಂತ್ಯ ನೆಲ, ಜಲ, ಜನ, ಜನ ಸಂಸ್ಕೃತಿ ಹಾಗೂ ಭಾಷೆಯ ವಿಚಾರವಾಗಿ ವಿವಿಧ ಐತಿಹಾಸಿಕ ಚಳವಳಿಗಳನ್ನು ಹುಟ್ಟು ಹಾಕಿತು. ರಾಷ್ಟೀಯ ಹೋರಾಟಗಳಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ‘ಪ್ರತಿಭಟನಾ ಕಣಜ’ಗಳ ಕಣಜವಾಗಿ ಗುರುತಿಸಿಕೊಂಡ ಈ ಮಣ್ಣಿನಲ್ಲಿ ಸ್ವಾತಂತ್ರ್ಯೋತ್ತರದ ದೇಶೀಯ ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ತತ್ವ- ಸಿದ್ಧಾಂತಗಳು ಸತ್ವ ಪಡೆದು, ಒರತೆಗಳಾಗಿ ಜೀವ ತಳೆದು ನಾಡಿನಾದ್ಯಂತ ನದಿಗಳಾಗಿ ಹರಿದು, ಹಲವು ಕಡೆ ಭೋರ್ಗರೆಯುವ ಜಲಪಾತಗಳಾಗಿ ಮೆರೆದವು ಎಂಬುವುದು ಮೈಸೂರಿಗರ ಹೆಮ್ಮೆ.

ಈ ಎಲ್ಲಾ ಹೋರಾಟಗಳಿಗೆ ಸೈದ್ದಾಂತಿಕ ನೆಲೆಗಟ್ಟನ್ನು ದೊರಕಿಸಿದ ಸಮಾಜವಾದಿ ಚಿಂತನೆ ಭಾರತದಲ್ಲಿ ತೀವ್ರತೆಯನ್ನು ಪಡೆಯುತ್ತಿದ್ದ ಅರವತ್ತರ ದಶಕದಲ್ಲಿ ರಾಮ್ ಮನೋಹರ್ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಆಚಾರ್ಯ ಕೃಪಾಲಾನಿ, ಜಾರ್ಜ್ ಫರ್ನಾಂಡಿಸ್, ಲಾರೆನ್ಸ್ ಫರ್ನಾಂಡಿಸ್‌‌ರಂತಹ ರಾಷ್ಟ್ರೀಯ ನಾಯಕರೊಂದಿಗೆ ಒಡನಾಟವಿಟ್ಟುಕೊಂಡಿದ್ದಂತಹ ಕರ್ನಾಟಕದ ಶಾಂತವೇರಿ ಗೋಪಾಲಗೌಡ, ಜೆ. ಹೆಚ್. ಪಟೇಲ್, ರೈತ ಸಂಘದ ರೂವಾರಿ ಪ್ರೊ. ನಂಜುಂಡಸ್ವಾಮಿ, ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ಲಂಕೇಶ್, ಪ್ರೊ.ರಾಮದಾಸ್, ತೇಜಸ್ವಿ ಮೊದಲಾದವರೊಡನೆ ಸಮ ಸಮಾಜದ ಕನಸುಗಳನ್ನು ಹೊತ್ತಿದ್ದ ಪ. ಮಲ್ಲೇಶ್ ರವರು ಕರ್ನಾಟಕದಲ್ಲಿ ಒಂದು ಸಮಾಜವಾದದ ಒಂದು ಅಲೆಯನ್ನೇ ಎಬ್ಬಿಸಿದ್ದರು. ಅಷ್ಟೇ ಅಲ್ಲ. ಅದೆಷ್ಟೋ ಮಂದಿ ಸಮಾಜವಾದಿಗಳು ಮಗ್ಗಲು ಬದಲಾಯಿಸಿ, ಪಕ್ಷ ರಾಜಕೀಯದಲ್ಲಿ ತೊಡಗಿಕೊಂಡು, ವೈಯಕ್ತಿಕ ತೃಪ್ತತೆಯನ್ನು ಕಂಡುಕೊಂಡು ಮೂಲ ಸಿದ್ಧಾಂತವನ್ನು ಮರೆತಂತೆ ನಟಿಸಿದರೂ ತಾವು ಮಾತ್ರ ನಂಬಿದ್ದ ತತ್ವವನ್ನು ಜೀವಂತವಾಗಿಟ್ಟು, ಕೊನೆಯವರೆಗೂ ಅದನ್ನೇ ಉಸಿರಾಡಿ, ಅದನ್ನೇ ಬಾಳಿದವರು ಪ.ಮಲ್ಲೇಶ್ ಎಂದರೆ ಅತಿಶಯೋಕ್ತಿಯಾಗಲಾರದು. ಅನೇಕ ಕೋನಗಳಿಂದ ನನಗವರು ಜ್ಯೋತಿ ಬಸುರವರಂತೆ ಕಾಣಿಸಿದ್ದರು.

ಬಹುಶಃ ಮುರುಘಾ ಮಠದ ಶ್ರೀಗಳ ಲೈಂಗಿಕ ಹಗರಣದ ವಿರುದ್ಧ ಒಡನಾಡಿ ಸಂಘಟಿಸಿದ್ದ ಪ್ರತಿಭಟನಾ ಮೆರವಣಿಗೆ ಪ.ಮಲ್ಲೇಶ್‌ರವರ ಕೊನೆಯ ಧಿಕ್ಕಾರವನ್ನು ದಾಖಲಿಸಿರಬೇಕು. ನಿಂತುಕೊಳ್ಳಲೂ ತ್ರಾಣವಿಲ್ಲದಷ್ಟು ಆರೋಗ್ಯ ಹದಗೆಟ್ಟಿದ್ದಾಗ್ಯೂ ಆ ಮೆರವಣಿಗೆಯಲ್ಲಿ ತಮ್ಮ ಪ್ರತಿಭಟನೆ ದಾಖಲಾಗಿರಬೇಕು ಎಂದು ಹಂಬಲಿಸಿ, ಬಿಸಿಲನ್ನೂ ಲೆಕ್ಕಿಸದೆ ಪಾಲ್ಗೊಂಡಿದ್ದರವರು. ಅಲ್ಲೂ ತಮ್ಮ ಆರೋಗ್ಯ ಸಮಸ್ಯೆಯ ಸುಳಿವು ನೀಡದೆ ಆರೋಪಿಗಳ ವಿರುದ್ಧ ಘರ್ಜಿಸಿದ್ದರು ಪ.ಮಲ್ಲೇಶ್.

ಸುಮಾರು 33 ವರ್ಷಗಳಿಂದ ನಾನು ಕಂಡಂತೆ ಪ.ಮಲ್ಲೇಶ್‌ರವರು ಹೋರಾಟದ ಹಾದಿಯಲ್ಲಿ ಯಾವುದೇ ರಾಜಿ ಸೂತ್ರ ಅನುಸರಿಸಿದವರಲ್ಲ. ತಮ್ಮ ನಡೆ ಹಾಗೂ ನುಡಿಗೆ ಬದ್ಧರಾಗಿ, ಎದುರಾಳಿ ಎಂತಹ ಭಲಾಡ್ಯನಾಗಿದ್ದರೂ, ಸ್ನೇಹಿತರೇ ಆಗಿದ್ದರೂ ಮುಲಾಜಿಲ್ಲದೆ ಹೇಳಬೇಕಾಗಿದ್ದನ್ನು ಹೇಳಿ, ಕೇಳಬೇಕಾಗಿದ್ದನ್ನು ಕೇಳಿ ಮುಗಿಸುತ್ತಿದ್ದ ಖಡಕ್ ವ್ಯಕ್ತಿ ಅವರಾಗಿದ್ದರು. “ನಮಗೇನ್ರಿ ಮುಲಾಜು? ಸಂವಿಧಾನದ ಕೆಳಗೆ ಎಲ್ಲರೂ ಒಂದೇ. ಕೇಳೋದು, ಹೇಳೋದು ನ್ಯಾಯಬದ್ಧವಾಗಿರಬೇಕು ಅಷ್ಟೇ!” ಎನ್ನುವುದು ಅವರ ನಿತ್ಯದ ನಿಷ್ಠುರ ಮಾತು.

ಪ. ಮಲ್ಲೇಶರ ಜೀವನದಲ್ಲಿ ಗಾಂಧಿ, ಅಂಬೇಡ್ಕರ್, ಲೋಹಿಯಾ, ಬುದ್ಧ, ಬಸವಣ್ಣ, ಸದಾ ಜೀವಂತವಾಗಿದ್ದುದ್ದನ್ನು ನಾವು ಕಾಣುತಿದ್ದೆವು. ಅಂದ ಮಾತ್ರಕ್ಕೆ ಅವರು ಯಾರ ಆರಾಧಕನೂ ಆಗಿರಲಿಲ್ಲ. ಆ ಮಟ್ಟಕ್ಕೆ ದಿಗ್ದರ್ಶಕರೂ ಕೂಡ ಅವರ ಕಟು ವಾಸ್ತವದ ವಿಮರ್ಶೆಗೆ ಒಳಪಡುತ್ತಿದ್ದರು. ಹಾಗೆಯೇ ಅವರು ಯಾವುದೋ ಒಂದು ವಿಚಾರಕ್ಕೆ ಬ್ರಾಂಡ್ ಆಗಿರಲಿಲ್ಲ. ಅದೊಂದು ವಿರಳಾತಿವಿರಳವಾದ ವ್ಯಕ್ತಿತ್ವ. ಬಹುತ್ವವನ್ನು ಬಹುವಾಗಿ ಪ್ರೀತಿಸುತ್ತಿದ್ದ ಪ.ಮಲ್ಲೇಶ್‌ರವರಲ್ಲಿ ಗಾಂಧಿ, ಅಂಬೇಡ್ಕರ್ ಹಾಗೂ ಲೋಹಿಯಾರವರನ್ನು ಸಮಾನವಾಗಿ ಕಾಣಬಹುದಾಗಿದೆ. ಸಮಷ್ಟಿ ಪ್ರಜ್ಞೆಯಲ್ಲಿ ಬಾಳುತ್ತಾ, ಪ್ರತಿಯೊಂದನ್ನೂ ಮಾನವೀಯ ಮಸೂರದಲ್ಲಿ ಕಾಣುತ್ತಾ, ಮನುಕುಲವನ್ನು, ಪ್ರಕೃತಿಯನ್ನು, ಬಹು ಸಂಸ್ಕೃತಿ, ಮಾತೃಭಾಷೆಯನ್ನು ಬಾಧಿಸುವ ಯಾವುದೇ ಸಮಸ್ಯೆಗಳಿಗೆ ಉತ್ತರ ಪಡೆಯಲು ಮುಂಚೂಣಿಯಲ್ಲಿ ನಿಲ್ಲುತ್ತಿದ್ದ
ಪ.ಮಲ್ಲೇಶ್‌ರದ್ದು ಸ್ಪಷ್ಟವಾದ ವ್ಯಕ್ತಿತ್ವ. ದಿಟ್ಟವಾದ, ನ್ಯಾಯಪರ ನಿಲುವು. ಪ್ರಾಮಾಣಿಕ ನಡೆ. ಅವರು ಧರಿಸುತ್ತಿದ್ದ ಶ್ವೇತ ವರ್ಣದ ಖಾದಿಯಷ್ಟೇ ಸ್ವಚ್ಛ ಬಾಳು. ಸ್ವಲ್ಪ ಹೆಚ್ಚು ಎನಿಸಬಹುದಾದ ಸಿಡುಕು ಇದ್ದರೂ ಅದು ಸಮಾಜದ ಬಗೆಗಿನ ಕಾಳಜಿ ಹಾಗೂ ಮಾನವ ಪ್ರೀತಿ ಪ್ರೇರಿತವಾದದ್ದು ಎಂಬುದನ್ನು ಮರೆಯುವಂತಿಲ್ಲ.

ಬಹುತೇಕ ಹೋರಾಟಗಾರರಿಗೆ ಇದ್ದಿರಬಹುದಾದ ಯಾವೊಂದೂ ದೌರ್ಬಲ್ಯವೂ ಅವರಿಗೆ ಇದ್ದಂತಿರಲಿಲ್ಲ. ಇದ್ದರೂ ಸಮಾಜಕ್ಕೆ ಎಂದೂ ಕಾಣಿಸಲಿಲ್ಲ. ನ್ಯಾಯಕ್ಕೆ, ನೋವಿಗೆ ಸೋಲುವ ತಾಯಿ ಹೃದಯ ಅವರ ತಲೆ ತಗ್ಗಿಸದ ಗಡಸು ವ್ಯಕ್ತಿತ್ವದೊಳಗಿತ್ತು ಎಂಬುದು ಅವರನ್ನು ಹತ್ತಿರದಿಂದ ಅನುಭವಿಸಿದ ನನ್ನಂಥವರಿಗೆ ತಿಳಿದ ಸತ್ಯ. ಅವರಿಗಿದ್ದ ಒಂದೇ ಒಂದು ದೌರ್ಬಲ್ಯವೆಂದರೆ ನ್ಯಾಯಪರ ಹೋರಾಟ. ಹೋರಾಟಕ್ಕೆ ಇಳಿದೊಡನೆ ಅವರು ಇಪ್ಪತ್ತರ ಹರೆಯದ ಯುವಕನಾಗಿಬಿಡುತ್ತಿದ್ದರು. ಬದುಕಿನುದ್ದಕ್ಕೂ ಪಾಲ್ಗೊಂಡ ಚಳುವಳಿಗಳು ಅವರನ್ನು ಆರೋಗ್ಯವಂತನನ್ನಾಗಿ ಇರಿಸಿದ್ದವು ಎಂಬುದು ನನ್ನ ಭಾವನೆ. ಬಹುಶಃ ಬ್ರೆಜಿಲ್‌ನ ಪೇಲೆ ಕಾಲ್ಚೆಂಡಿನಾಟಕ್ಕಾಗಿ ಜನಿಸಿದಂತೆ ಪ. ಮಲ್ಲೇಶ್ ಮನುಕುಲದ ಎಲ್ಲ ಅನಿಷ್ಟಗಳ ವಿರುದ್ಧ ಪ್ರತಿಭಟಿಸಲೆಂದೇ ಹುಟ್ಟಿದ್ದರು ಎಂದೆನಿಸುತ್ತದೆ. ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗಲೆಲ್ಲ ಕಠೋರವಾಗಿ ಖಂಡಿಸುತ್ತಿದ್ದ ಪ.ಮಲ್ಲೇಶ್‌ರ ಮಾತುಗಳನ್ನು ಚಳವಳಿಕಾರರು ಹಾಗೂ ಸರ್ಕಾರದ ಪ್ರತಿನಿಧಿಗಳು ತೂಕವಾಗಿ ಪರಿಗಣಿಸುತ್ತಿದ್ದರು. ಅಷ್ಟೊಂದು ಪಕ್ವತೆ, ವೃತ್ತಿಪರತೆ ಹೋರಾಟದಲ್ಲಿ ಅವರಿಗಿತ್ತು.

ಅನುಸರಿಸಲು ಯೋಗ್ಯರಾದ, ಆದರೆ ಅನುಸರಿಸಲು ಸುಲಭವಲ್ಲದ ವ್ಯಕ್ತಿತ್ವ ಪ.ಮಲ್ಲೇಶ್. ಪ್ರೊ. ಡಿ. ಎಲ್.ನರಸಿಂಹಾಚಾರ್, ಪ್ರೊ.ತೀ.ನಂ.ಶ್ರೀಕಂಠಯ್ಯರಂತಹ ದಿಗ್ಗಜರ ಗರಡಿಯಲ್ಲಿ ಪಳಗಿದ್ದ ಪ.ಮಲ್ಲೇಶ್ ಅವರಿಗಿದ್ದ ಭಾಷಾ ಪ್ರೇಮ ಹಾಗೂ ಪಾಂಡಿತ್ಯ ಗಣನೆಗೆ ತೆಗೆದುಕೊಂಡರೆ, ಒಂದೊಮ್ಮೆ ಅವರೇನಾದರೂ ಬೀದಿ ಹೋರಾಟಗಳಲ್ಲಿ ದಣಿಯದೆ, ಕೋಣೆಯಲ್ಲಿ ಕುಳಿತು ಬರೆಯತೊಡಗಿದ್ದಿದ್ದರೆ ಬಹುಶಃ ಮುಂಚೂಣಿಯ ಸಾಹಿತಿಗಳಲ್ಲಿ ಒಬ್ಬರಾಗಿರುತ್ತಿದ್ದರೇನೋ! ಹಾಗೆಯೇ ರಾಜಕೀಯ ವಲಯದಲ್ಲಿ ಸುದೀರ್ಘ ಒಡನಾಟ ಇಟ್ಟುಕೊಂಡಿದ್ದಾಗ್ಯೂ, ಒಮ್ಮೆ ಚುನಾವಣಾ ಕಣಕ್ಕೆ ಇಳಿದರೂ ಮುಂದೆ ಹೋರಾಟಗಳಿಗಷ್ಟೇ ಸೀಮಿತರಾಗಿ ಉಳಿದುಬಿಟ್ಟರು. ಅವರ ಶಿಷ್ಯರುಗಳು, ಸ್ನೇಹಿತರು ಮುಖ್ಯಮಂತ್ರಿಯ ಗಾದಿಯವರೆಗೂ ಪಯಣಿಸಿದ್ದ ಉದಾಹರಣೆಗಳಿದ್ದರೂ ಯಾವುದೇ ಪ್ರಶಸ್ತಿ, ಪುರಸ್ಕಾರ ಅಥವಾ ರಾಜಕೀಯ ಅಧಿಕಾರದ ಫಲಾಪೇಕ್ಷೆ ಹೊಂದಿರಲಿಲ್ಲ ಎಂಬುದು ಅವರ ಗರಿಮೆಯಾಗಿ ಉಳಿಯಿತು.

ಜೆಪಿ ಚಳವಳಿ, ಗೋಕಾಕ್ ಚಳವಳಿ, ಜಾತಿ ವಿನಾಶದ ಚಳವಳಿ, ಕರ್ನಾಟಕ ನವ ನಿರ್ಮಾಣ ಕ್ರಾಂತಿಯ ಚಳವಳಿ, ‘ಎನ್‌ಟಿಎಂಎಸ್ ಕನ್ನಡ ಶಾಲೆ ಉಳಿಸಿ’, ಕಾವೇರಿ ಉಳಿಸಿ, ರಂಗಾಯಣ ಉಳಿಸಿ, ದಲಿತ- ರೈತ- ಮಹಿಳಾಪರ ಚಳವಳಿಗಳಾದಿಯಾಗಿ ಚಾಮಲಾಪುರದ ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣದ ವಿರುದ್ಧ ನಡೆದ ಹೋರಾಟ ಹಾಗೂ ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಯಿಂದ ನಡೆದ ಲೈಂಗಿಕ ಹಗರಣದ ವಿರುದ್ಧ ನಡೆದ ಪ್ರತಿಭಟನೆಯವರೆಗೂ ಪ.ಮಲ್ಲೇಶ್‌ರವರು ಮುಂಚೂಣಿಯಲ್ಲಿ ನಿಂತವರು. ಕನ್ನಡಕ್ಕಾಗಿ ‘ನೃಪತುಂಗ ಕನ್ನಡ ಶಾಲೆ’ಯನ್ನು ಪ್ರಾರಂಭಿಸಿ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಾಧ್ಯಮ ವಿಜ್ಞಾನ ಕಾಲೇಜನ್ನೂ ಆರಂಭಿಸಿದ್ದರು. ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್, ಕರ್ನಾಟಕ ಬರಹಗಾರರ ಒಕ್ಕೂಟ, ಕರ್ನಾಟಕ ವಿಚಾರವಾದಿ ಒಕ್ಕೂಟ, ಗಾಂಧಿ ವಿಚಾರ ಪರಿಷತ್ ಮೊದಲಾದ ಸಂಸ್ಥೆಗಳ ಬೆಳವಣಿಗೆಯಲ್ಲಿ ಶ್ರೀಯುತರ ಪ್ರಮುಖ ಪಾತ್ರವಿದೆ. ಜೀವಿತಾವಧಿಯಲ್ಲಿ ಅನೇಕ ಚಳವಳಿಗಾರರಿಗೆ ಆಶ್ರಯ ನೀಡಿ ಪೋಷಿಸಿದ್ದ ಪ.ಮಲ್ಲೇಶ್‌ರವರು ಶ್ರೀ ರಾಜಶೇಖರ ಕೋಟಿಯವರ ಸಂಪಾದಕತ್ವದ ಆಂದೋಲನ ದಿನಪತ್ರಿಕೆಯ ಬೆಳವಣಿಗೆಗೆ ನೀಡಿದ ಮಾರ್ಗದರ್ಶನ ಮತ್ತು ಕೊಡುಗೆ ಗಣನೀಯವಾದದ್ದು.

ಕೊನೆಕೊನೆಯಲ್ಲಿ ಪ.ಮಲ್ಲೇಶ್‌ರವರು ಅತೀವ ಚಿಂತಾಕ್ರಾಂತರಾದಂತೆ ಕಂಡುಬಂದಿದ್ದರು. ಅದಕ್ಕೆ ಅವರ ಮಾಗಿದ ಜೀವನ, ಜೀವನ ಸಂಗಾತಿಯ ನಿರ್ಗಮನ ಎಷ್ಟು ಕಾರಣವೋ, ಜೀವಪರ ಕಾರಣಗಳಿಗಾಗಿ ಜನರು ಒಗ್ಗೂಡುತ್ತಿಲ್ಲ ಎಂಬ ಕೊರತೆಯೂ ಕಾಡತೊಡಗಿತ್ತು. ವಿದ್ಯಾರ್ಥಿ ಚಳವಳಿಗಳು ಮಕಾಡೆ ಮಲಗಿರುವುದರ ಬಗ್ಗೆ ಅವರಿಗೆ ಬೇಸರವಿತ್ತು. ರಾಜಿ ಸಂಧಾನಗಳಲ್ಲಿ ಮುಕ್ತಾಯವಾಗುವ ಹೋರಾಟಗಳ ಬಗ್ಗೆ ಸಾತ್ವಿಕ ಸಿಟ್ಟು ಹೊರಹಾಕುತ್ತಿದ್ದರು. ಆದರೂ ಪ್ರಾಮಾಣಿಕ ಹೋರಾಟಗಳು ಹುಟ್ಟಿಕೊಂಡಾಗ ಕೆಲವು ಬಾರಿ ಗಾಂಧಿಯಂತೆ ಮುಂಚೂಣಿಯಲ್ಲಿ ನಿಂತು, ಹಲವು ಬಾರಿ ಮಾವೋನಂತೆ ಮುನ್ನುಗ್ಗುವ ಜನಸಾಗರದ ಬೆನ್ನಿಗೆ ನಿಂತು ಸಂಭ್ರಮಿಸಿದ್ದನ್ನು ಕಂಡಿದ್ದೇನೆ. ಇಂದು ಹೋರಾಟದ ಬಾನಿನಂಗಳದಲ್ಲಿ ಸದಾ ಪ್ರಜ್ವಲಿಸುತ್ತಿದ್ದ ಪ.ಮಲ್ಲೇಶ್ ಎಂಬ ಶುಭ್ರ ಶ್ವೇತ ಬೆಳಕಿನ ಪಂಜು ಉರಿದುರಿದು ತಟ್ಟನೆ ನಂದಿದೆ! ಬೆಳಕಿಗಾಗಿ ಹಾತೊರೆದ ಕಂಗಳಿಗೆ ಮಬ್ಬುಗತ್ತಲು ಆವರಿಸಿದೆ. ಪ.ಮಲ್ಲೇಶ್‌ರ ಹೋರಾಟದ ಕಿಡಿ ಮುಂದೆಯಾದರೂ ಯುವ ಎದೆಗಳಲ್ಲಿ ಹೊತ್ತಿ ಉರಿದಲ್ಲಿ ಸಮಾಜವಾದದ ಹಾಗೂ ಸಂವಿಧಾನದ ಆಶಯಗಳನ್ನು ಜೀವಂತವಾಗಿ ಇರಿಸಿಕೊಳ್ಳಬಹುದಾಗಿದೆ. ಜೊತೆಗೂಡಿ ಹೋರಾಡಲು ಬಹಳಷ್ಟು ಜನ ತಯಾರಿದ್ದರೂ ಅವರಿಗೆ ದಿಗ್ದರ್ಶನ ಮಾಡುವ, ಕಠೋರ ನಿಲುವು, ಗರುಡನ ದೃಷ್ಟಿ ಹಾಗೂ ಪಾರಿವಾಳದಂತಹ ಕೋಮಲ ಹೃದಯದ ಹಿರಿಯನೊಬ್ಬನ ಅಗತ್ಯತೆಯನ್ನು ಪ.ಮಲ್ಲೇಶ್‌ರ ನಿರ್ಗಮನ ಸೃಷ್ಟಿಸಿದೆ. ಈ ನಿರ್ವಾತವನ್ನು ಕಳೆದು, ಮುಂದಿನ ಹೋರಾಟಗಳಲ್ಲಿ ನೀವು ತೊಟ್ಟಿದ್ದ ಖಾದಿಗೆ ಘನತೆ ತಂದು, ಮನೆ ಹಿರಿಯನ ಸ್ಥಾನವನ್ನು ತುಂಬಿಕೊಡಬಲ್ಲ ಪ್ರೇರಣಾ ಶಕ್ತಿಯ ನಿರೀಕ್ಷೆಯಲ್ಲಿದ್ದೇನೆ ಪ್ರೀತಿಯ ಪ. ಮಲ್ಲೇಶ್ ಸರ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...