Homeಚಳವಳಿಪಟ್ಟಭದ್ರರ ವಿರುದ್ಧ ದಿಟ್ಟ ಹೋರಾಟಕ್ಕೆ ಉಳಿದ ಮೈಸೂರಿನ ಸರ್ಕಾರಿ ಶಾಲೆ!

ಪಟ್ಟಭದ್ರರ ವಿರುದ್ಧ ದಿಟ್ಟ ಹೋರಾಟಕ್ಕೆ ಉಳಿದ ಮೈಸೂರಿನ ಸರ್ಕಾರಿ ಶಾಲೆ!

- Advertisement -
- Advertisement -

ಸರ್ಕಾರಿ ಶಾಲೆ, ಸರ್ಕಾರಿ ಆಸ್ತಿಪಾಸ್ತಿಗಳನ್ನು ಹೊಡೆಯಲು ಸಂಚುಕೋರರು ಎಲ್ಲಾ ಕಡೆಯು ಕಾದಿರುತ್ತಾರೆ. ಅವರಿಗೆ ಮಕ್ಕಳ ಶಿಕ್ಷಣ, ಅವರ ಭವಿಷ್ಯ ಯಾವುದು ಲೆಕ್ಕಕ್ಕಿಲ್ಲ.. ತಮ್ಮ ಸ್ವಾರ್ಥ ಗುರಿ ಸಾಧನೆಗಾಗಿ ಯಾವ ಹಾದಿಯನ್ನು ಬೇಕಾದರೂ ಹಿಡಿಯಲು ಸಿದ್ದರಿರುತ್ತಾರೆ.. ಆದರೆ ಇನ್ನು ಕೆಲವರಿರುತ್ತಾರೆ. ಅವರಿಗೆ ತಮ್ಮ ಜೀವನದಂತೆಯೇ ಸಮಾಜದ ಆರೋಗ್ಯವೂ ಮುಖ್ಯ. ಎಲ್ಲರಿಗೂ ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ ಸಿಗಬೇಕೆಂದು ಬಯಸುತ್ತಾರೆ ಅದಕ್ಕಾಗಿ ಎಂತಹ ಹೋರಾಟಕ್ಕೂ ಮುಂದಾಗುತ್ತಾರೆ. ಇವರಿಬ್ಬರ ನಡುವೆ ಸದಾ ತಿಕ್ಕಾಟವಿರುತ್ತದೆ.. ಮೈಸೂರಿನ ಪ್ರಕರಣವೊಂದರಲ್ಲಿ ಹಣಬಲ, ಅಧಿಕಾರ ಬಲ, ತೋಳ್ಬಲವನ್ನು ಹೊಂದಿದ್ದ ಸಂಚುಕೋರರ ವಿರುದ್ಧ ಜನಬಲ, ಪ್ರಾಮಾಣಿಕತೆ, ಬದ್ಧತೆಯಿಂದ ಹೋರಾಡಿ ಗೆದ್ದ ನಿಜಕಥೆಯೊಂದು ಇಲ್ಲಿದೆ ನೋಡಿ.

ಶತಮಾನದ ಹಿಂದೆಯೇ ಮೈಸೂರಿನ ಅರಸರು ಮಹಾರಾಣಿಯರಿಗಾಗಿ ಶಾಲೆಯೊಂದನ್ನು ತೆರೆದಿದ್ದರು. ಸ್ವಾತಂತ್ರ್ಯ ನಂತರ ಅದು ಮಹಾರಾಣಿ ಮಾದರಿ ಸರ್ಕಾರಿ ಕನ್ನಡ ಶಾಲೆಯಾಗಿ (ಎನ್‍ಟಿಎಂಎಸ್) ಕರೆಸಿಕೊಂಡು ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ ಖ್ಯಾತಿ ಪಡೆದಿದೆ. ಅದರ ಏಕೈಕ ದುರಾದೃಷ್ಟವೆಂದರೆ ಅದು ಮೈಸೂರು ನಗರದ ಹೃದಯಭಾಗದಲ್ಲಿದ್ದು ಕೋಟ್ಯಾಂತರ ಬೆಲೆ ಬಾಳುತ್ತದೆ. ಇಂತಹ ಆಯಾಕಟ್ಟಿನ ಜಾಗದ ಆ ಶಾಲೆಯಲ್ಲ್ಲಿ ಈಗ ಬಡವರ, ಕೂಲಿಕಾರರ ಮಕ್ಕಳು ಕಲಿಯುತ್ತಿದ್ದಾರೆ..

ಇಂತಹ ಶಾಲೆಯ ಮೇಲೆ ಸ್ವಾಮಿ ವಿವೇಕಾನಂದ ಟ್ರಸ್ಟ್ ಹೆಸರಿನಲ್ಲಿ ಟ್ರಸ್ಟ್ ಮಾಡಿಕೊಂಡಿರುವ ದಂಧೇಕೋರರ ಕಣ್ಣು ಬಿದ್ದಿದೆ. ಮೂಲತಃ ತಮಿಳುನಾಡು ಮೂಲದ ಈ ಟ್ರಸ್ಟ್ ಶತಾಯಗತಾಯ ಈ ಶಾಲೆಯ ಜಾಗವನ್ನು ಕಬಳಿಸಲು ಹೊಂಚುಹಾಕಿದೆ. ಈ ಶಾಲೆಗೆ ಹೊಂದಿಕೊಂಡಂತೆ ಇರುವ ದೇವಸ್ಥಾನದ ಆವರಣಕ್ಕೆ ಒಮ್ಮೆ ಸ್ವಾಮಿ ವಿವೇಕಾನಂದರು ಭೇಟಿಕೊಟ್ಟಿದ್ದರು ಎಂಬ ನೆಪವಿಟ್ಟುಕೊಂಡು ಅಲ್ಲಿ ವಿವೇಕಾನಂದರ ಸ್ಮಾರಕ ನಿರ್ಮಿಸುವ ನಾಟಕ ತೆಗೆದಿದೆ. 2013ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅವಕಾಶ ಬಳಸಿಕೊಂಡು ಶಾಲೆ ತೆರವು ಮಾಡುವ ಆದೇಶವನ್ನೇ ಮಾಡಿಸಿಬಿಟ್ಟಿದ್ದಾರೆ..

ಉತ್ತಮವಾಗಿ ನಡೆಯುತ್ತಿದ್ದ ಎನ್‍ಟಿಎಂಎಸ್ ಶಾಲೆಯನ್ನು ಮುಚ್ಚಿ ಟ್ರಸ್ಟ್‍ಗೆ ಹಸ್ತಾಂತರ ಮಾಡುತ್ತಿದ್ದಾರೆ. ಮಕ್ಕಳನ್ನು ದೇವರಾಜು ಅರಸು ಶಾಲೆಗೆ ವರ್ಗಾಹಿಸಲಾಗುತ್ತಿದೆ ಎಂಬ ಸುದ್ದಿ ಹರಡುತ್ತಲೇ ಆ ಶಾಲೆಯ ಮಕ್ಕಳ ಪೋಷಕರು ಕಂಗಾಲಾದರು.. ಹಲವರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆಡೆಗೆ ಸೇರಿಸಿದರು. ಇದನ್ನು ತಿಳಿದ ಸ.ರ ಸುದರ್ಶನ್, ಪ.ಮಲ್ಲೇಶ್, ಸಂಸ್ಕೃತಿ ಸುಬ್ರಮಣ್ಯ ಸೇರಿದಂತೆ ಹಲವು ಕನ್ನಡ ಹೋರಾಟಗಾರರು ಶಾಲೆ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸಿದರು.

ಕೂಡಲೇ ಪೋಷಕರನ್ನು ಭೇಟಿ ಮಾಡಿ ಶಾಲೆ ಉಳಿಸಿಕೊಳ್ಳುವ ಹೋರಾಟಕ್ಕೆ ಜೊತೆಯಾಗಲು ಮನವಿ ಮಾಡಿದರು. 2014ರಲ್ಲಿ ಕೇವಲ 23 ಮಕ್ಕಳು ಮಾತ್ರ ಅಲ್ಲಿದ್ದರು. ಹಲವು ಪೋಷಕರ ಮನವೊಲಿಸಿ ಅಲ್ಲಿಯೇ ತಮ್ಮ ಮಕ್ಕಳನ್ನು ಓದಿಸಲು ಮುಂದಾದರು. ನಿರಂತರ ಜನಾಂದೋಲನದ ಜೊತೆಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಶಾಲೆ ಉಳಿಸುವಂತೆ ಒತ್ತಡ ತರಲಾಯಿತು. ಅವರ ನೈಜ ಕಾಳಜಿಗೆ ಸ್ಪಂದಿಸಿದ ಸಿದ್ದರಾಮಯ್ಯನವರು ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಮೌಖಿಕ ಆದೇಶ ನೀಡಿ ಶಾಲೆ ಹಸ್ತಾಂತರಕ್ಕೆ ತಡೆವೊಡ್ಡಿದರು. ಒಂದು ಹಂತದ ಜಯಪಡೆದ ಹೋರಾಟಗಾರರು ನಿಟ್ಟುಸಿರುಬಿಟ್ಟರು.. ಸೋತ ಟ್ರಸ್ಟ್‌ನವರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅಲ್ಲಿಂದ ಆರು ವರ್ಷ ಶಾಲೆ ನಿರಾಂತಕವಾಗಿ ನಡೆಯಿತು. ಈಗ ಮಕ್ಕಳ ಸಂಖ್ಯೆ 48ಕ್ಕೆ ಏರಿದೆ. ಶಾಲೆ ಕಬಳಿಸಲು ತೆರೆಮರೆ ಪ್ರಯತ್ನ ನಡೆಸುತ್ತಿದ್ದ ಟ್ರಸ್ಟ್‍ನವರು ಮತ್ತೆ ಬಿಜೆಪಿ ಸರ್ಕಾರ ಬಂದೊಡನೆಯೇ ಸಕ್ರಿಯರಾಗಿಬಿಟ್ಟಿದ್ದಾರೆ. ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೇಲೆ ಒತ್ತಡ ತರಲಾಗಿದೆ. ಸರ್ಕಾರ ಹೇಳಿದಂತೆ ಕುಣಿಯುವ ಶಿಕ್ಷಣ ಇಲಾಖೆ ಅಧಿಕಾರಿಗಳು ಏಕಾಏಕಿ ಶಾಲೆ ಧ್ವಂಸ ಮಾಡಲು ಮುಂದಾಗಿದ್ದಾರೆ. ಹೋರಾಟಗಾರರ ಗಮನಕ್ಕೆ ಬಂದಂತೆಯೇ ಕ್ಷಣಾರ್ಧದಲ್ಲಿ ನೂರಾರು ಜನ ಸೇರಿ ಪ್ರತಿಭಟನೆ ಆರಂಭಿಸಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವಾಗ ಶಾಲೆ ಮುಚ್ಚಲು ತರಾತುರಿ ಏಕೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಕ್ಟೋಬರ್ 12,13,14ರಂದು ಹಗಲು ರಾತ್ರಿ ಶಾಲೆ ಬಳಿ ನೆರೆದು ಪ್ರತಿಭಟಿಸಿದ್ದಾರೆ.

ಸಾಹಿತಿಗಳಾದ ಜಿ.ಎಚ್ ನಾಯಕ್, ಮೀರಾ ನಾಯಕ್, ದೇವನೂರು ಮಹಾದೇವ, ಸ.ರ ಸುದರ್ಶನ್, ಪ.ಮಲ್ಲೇಶ್, ಪ್ರೊ ಪಂಡಿತಾರಾಧ್ಯ, ಶಾಸಕ ಸಾ.ರಾ ಮಹೇಶ್, ಮಾಜಿ ಸಂಸದ ಧ್ರುವನಾರಾಯಣ್ ಸೇರಿದಂತೆ ಹಲವು ಗಣ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಪೋಷಕರು ಬೆಂಗಳೂರಿನವರೆಗೆ ಹೋಗಿ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಎಚ್ಚೆತ್ತ ಯಡಿಯೂರಪ್ಪನವರು ಮೈಸೂರು ಜಿಲ್ಲಾಧಿಕಾರಿಗೆ ಪತ್ರ ಬರೆದು ಶಾಲೆ ಹಸ್ತಾರಂತರ ಮಾಡದಂತೆ ಆದೇಶ ನೀಡಿದ್ದಾರೆ. ಸಾಮೂಹಿಕ ಪ್ರಬಲ ಹೋರಾಟದಿಂದ ಕೈತಪ್ಪಿಹೋಗಲಿದ್ದ ಶಾಲೆ ಉಳಿದು ನಳನಳಿಸುತ್ತಿದೆ. ಮಕ್ಕಳ ಮೊಗದಲ್ಲಿ ಸಂತಸ ಅರಳಿದೆ.

ಶಾಲೆ ಮುಚ್ಚುವುದು ವಿವೇಕಾನಂದರಿಗೆ ಮಾಡುವ ಅಪಮಾನ

ಸ್ವಾಮಿ ವಿವೇಕಾನಂದರು ದರಿದ್ರರೇ ದೇವರು ಎಂದು ನಂಬಿದ್ದವರು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಒತ್ತಾಯಿಸಿದ್ದವರು. ಹೆಣ್ಣು ಮಕ್ಕಳು ಏನು ಕಲಿಯಬೇಕೆಂಬುದನ್ನು ಹೆಣ್ಣು ಮಕ್ಕಳೇ ನಿರ್ಧರಿಸಬೇಕೆ ವಿನಃ ಬೇರ್ಯಾರೂ ಅಲ್ಲ ಎಂದಿದ್ದರು. ಅಂತಹ ವಿವೇಕಾನಂದರ ಹೆಸರೇಳಿಕೊಂಡು ಬಡವರ, ಹೆಣ್ಣು ಮಕ್ಕಳ ಶಾಲೆ ಮುಚ್ಚಿಸಲು ಬಂದಿರುವುದು ಅವರಿಗೆ ಮಾಡುವ ಮಹಾ ಅಪಮಾನ. ನಾವು ವಿವೇಕಾನಂದರನ್ನು ಗೌರವಿಸುತ್ತೇವೆ, ಹಾಗಾಗಿಯೇ ಈ ಶಾಲೆ ಉಳಿಸಲು ಹೋರಾಡುತ್ತಿದ್ದೇವೆ ಎನ್ನುತ್ತಾರೆ ದೇವನೂರು ಮಹಾದೇವ

ಮೈಸೂರಿನಲ್ಲಿ ವಿವೇಕಾನಂದರ ಹೆಸರಿನಲ್ಲಿ ಬಡಾವಣೆಯಿದೆ. ನಾಲ್ಕೈದು ಪ್ರತಿಮೆಗಳಿವೆ. ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸುವುದಾರೆ ಬೇಕಾದಷ್ಟು ಜಾಗಗಳಿವೆ. ಅಲ್ಲಿ ನಿರ್ಮಿಸಬೇಕೆ ಹೊರತು ಸರ್ಕಾರಿ ಶಾಲೆಯನ್ನು ಮುಚ್ಚಿಸಿ ಜಾಗ ಕಬಳಿಸುವುದಲ್ಲ. ವಿವೇಕಾನಂದರ ವಿಚಾರಗಳನ್ನು ಮುದ್ರಿಸಿ ಕಡಿಮೆ ದರದಲ್ಲಿ ಜನರಿಗೆ ತಲುಪಿಸಿದಾಗ ಮಾತ್ರ ಅವರಿಗೆ ನಾವು ಗೌರವ ಸಲ್ಲಿಸಿದಂತಾಗುತ್ತದೆ ಎಂದು ನಿವೃತ್ತ ಪ್ರಾಧ್ಯಪಕರಾದ ಪ್ರೊ.ಪಂಡಿತಾರಾಧ್ಯರವರು ಅಭಿಪ್ರಾಯಪಡುತ್ತಾರೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...