ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ವಿದ್ಯಾರ್ಥಿನಿಯೊರ್ವಳ ಮೇಲೆ ಅಮಾನವೀಯ ಸಾಮೂಹಿಕ ಅತ್ಯಾಚಾರದ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು ಮನನೊಂದು ನಾನು ಈ ರೀತಿ ಹೇಳಿಕೆ ನೀಡಿದ್ದೆ, ಆ ಮಾತನ್ನು ವಾಪಸ್ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
“ಯುವಕ-ಯುವತಿ 7, 7:30ಯ ಸಮಯಕ್ಕೆ ಅಲ್ಲಿಗೆ ಹೋಗಿದ್ದಾರೆ. ಅದು ನಿರ್ಜನವಾದ ಪ್ರದೇಶ. ಅವರು ಹೋಗಬಾರದಿತ್ತು. ಯಾರನ್ನು ಅಲ್ಲಿಗೆ ಹೋಗಬೇಡಿ ಎಂದು ತಡೆಯಲು ನಮಗೆ ಆಗುವುದಿಲ್ಲ. ಅವರು ಹೋಗಿದ್ದಾರೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಯುವತಿ ಅಲ್ಲಿಗೆ ಹೋಗಿದ್ದೆ ತಪ್ಪು, ಸಂಜೆಯ ವೇಳೆ ಹೊರ ಬಂದಿದ್ದೆ ತಪ್ಪು ಎನ್ನುವಂತೆ ಮಾತನಾಡಿದ್ದರು.
ಗೃಹ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಮಾತನಾಡಿರುವ ಅವರು, “ಮನನೊಂದು ನಾನು ಈ ರೀತಿ ಹೇಳಿಕೆ ನೀಡಿದ್ದೆ. ಸಂತ್ರಸ್ತ ಯುವತಿ ನನ್ನ ಮಗಳಿದ್ದಂತೆ ನಾನು ಆತಂಕದಿಂದ ಆ ಮಾತನ್ನು ಹೇಳಿದ್ದೇನೆ. ಆ ಮಾತನ್ನು ಹಿಂತೆಗೆದುಕೊಳ್ಳುತ್ತೇನೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ” ಎಂದಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಪ್ರಕರಣ ದಾಖಲು
“ಮೈಸೂರು ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಯಾರಿಗೆ ತೊಂದರೆ ಆಗಿದೆ ಅವರು ಶಾಕ್ನಿಂದ ಹೊರಬಂದಿಲ್ಲ. ಅವರ ಹೇಳಿಕೆ ನಮಗೆ ಮುಖ್ಯವಾಗಿದೆ. ಈ ಹಿನ್ನಲೆಯಲ್ಲಿ ಅದನ್ನು ಪತ್ತೆ ಹಚ್ಚುವ ಎಲ್ಲಾ ಪ್ರಯತ್ನ ನಡೆಯುತ್ತಿವೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ಆ ಬಗ್ಗೆ ವಿಷಾದಿಸುತ್ತೇನೆ. ಎಲ್ಲಾ ಹೆಣ್ಣು ಮಕ್ಕಳ ಬಗ್ಗೆ ನಮಗೆ ಗೌರವವಿದೆ” ಎಂದಿದ್ದಾರೆ.
ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತು ತನಿಖೆ ಚುರುಕು ಗೊಳಿಸಲಾಗಿದೆ, ಮೈಸೂರು ಪೊಲೀಸರ ಜೊತೆಗೆ ಬೆಂಗಳೂರಿನ ಹಿರಿಯ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಮುಂದಾಗಲಾಗಿದೆ. ಶೀಘ್ರ ಆರೋಪಿಗಳ ಬಂಧಿಸಲಾಗುವುದು ಎಂದರು.
ಗೃಹ ಸಚಿವರ ವಿವಾದಾತ್ಮಕ ಹೇಳಿಕೆ ಟೀಕಿಸಿದ ಕಾಂಗ್ರೆಸ್, “ರಾತ್ರಿ 7.30ರ ಸಮಯದಲ್ಲಿ ಅವರು ಅಲ್ಲಿಗೆ ಹೋಗಲೇಬಾರದಿತ್ತು! ರಾಜ್ಯದ ರಕ್ಷಣೆ ಹೊತ್ತ ಗೃಹಸಚಿವರೇ, ಇಂತಹ ಅಯೋಗ್ಯತನದ ಹೇಳಿಕೆ ಕೊಡಲು ನಾಚಿಕೆ ಆಗುವುದಿಲ್ಲವೇ..? ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ 7.30ರ ಸಂಜೆಯೂ ಅಪಾಯಕಾರಿ ಎಂದು ಸ್ವತಃ ಅವರೇ ಒಪ್ಪಿದ್ದಾರೆ. ಇಂತಹ ಅಸಮರ್ಥ ಬಿಜೆಪಿಯಿಂದ ರಾಜ್ಯದ ಜನತೆಯ ರಕ್ಷಣೆ ಸಾಧ್ಯವೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿತ್ತು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಇಲ್ಲಿದೆ.
ಕಾಂಗ್ರೆಸ್ನವರು ನನ್ನ ಮೇಲೆ ರೇಪ್ ಮಾಡುತ್ತಿದ್ದಾರೆ: ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
ಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡಬಾರದು ಎಂದು ತಾಕೀತು ಮಾಡಿದ್ದಾರೆ.#GangRape #AragaJnanendra pic.twitter.com/pv17Yz3Dp4
— Naanu Gauri (@naanugauri) August 26, 2021
ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಪ್ರಕರಣ: ಯುವತಿ ಅಲ್ಲಿಗೆ ಹೋಗಬಾರದಿತ್ತು ಎಂದು ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆ


