ನಾಗ್ಪುರ ವಿಶ್ವವಿದ್ಯಾನಿಲಯವು ಎಂಎ ನಾಲ್ಕನೇ ಸೆಮಿಸ್ಟರ್ ಪಠ್ಯಪುಸ್ತಕದಲ್ಲಿ ಬಿಜೆಪಿಯ ಇತಿಹಾಸ ಮತ್ತು ರಾಮಜನ್ಮ ಭೂಮಿ ವಿವಾದದ ಕುರಿತು ಪಠ್ಯವನ್ನು ಸೇರ್ಪಡೆ ಮಾಡಲು ಮುಂದಾಗಿದೆ.
ವರದಿ ಪ್ರಕಾರ, ಕಮ್ಯುನಿಸ್ಟ್ ಪಕ್ಷದ ಇತಿಹಾಸವನ್ನು ರಾಷ್ಟ್ರೀಯ ಪಕ್ಷದಿಂದ ತೆಗೆದುಹಾಕಲಾಗಿದೆ ಮತ್ತು ಬಿಜೆಪಿಯ ಇತಿಹಾಸವನ್ನು ಸೇರಿಸಲಾಗುತ್ತಿದೆ.
ನಾಗಪುರ ವಿವಿ ಎಂದು ಕರೆಯಲ್ಪಡುವ ರಾಷ್ಟ್ರಸಂತ್ ತುಕ್ಡೋಜಿ ಮಹಾರಾಜ್ ವಿಶ್ವವಿದ್ಯಾನಿಲಯದಲ್ಲಿ ನಾಲ್ಕನೇ ಸೆಮಿಸ್ಟರ್ MAನಲ್ಲಿ ವಿದ್ಯಾರ್ಥಿಗಳಿಗೆ ಭಾರತೀಯ ಜನತಾ ಪಕ್ಷ ಮತ್ತು ರಾಮ ಜನ್ಮಭೂಮಿ ಕುರಿತ ಪಠ್ಯವನ್ನು ಇತಿಹಾಸ ಪಾಠಪುಸ್ತಕದಲ್ಲಿ ಸೇರಿಸಲಾಗುವುದು ಎಂದು ವಿವಿಯ ಇತಿಹಾಸ ವಿಭಾಗ ಹೇಳಿದೆ. ಈ ಕುರಿತ ಪ್ರಸ್ತಾವನೆಗೆ ನಾಗಪುರ ವಿವಿ ಇತಿಹಾಸ ವಿಭಾಗ ಸಮ್ಮತಿಯನ್ನು ನೀಡಿದೆ.
ಇದೇ ಮೊದಲ ಬಾರಿಗೆ ನಾಗ್ಪುರ ವಿಶ್ವವಿದ್ಯಾನಿಲಯವು ಹೊಸ ಪಠ್ಯಕ್ರಮದ ಮೂಲಕ ಬಿಜೆಪಿಯ ಇತಿಹಾಸವನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಮುಂದಾಗಿದೆ.
ಇನ್ನು ಮುಂದೆ ನಾಗ್ಪುರ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಪಕ್ಷದ ಇತಿಹಾಸದ ಪಠ್ಯದಲ್ಲಿ ಕಮ್ಯುನಿಸ್ಟ್ ಪಕ್ಷದ ಇತಿಹಾಸವನ್ನು ಕಲಿಸಲಾಗುವುದಿಲ್ಲ. ಬದಲಿಗೆ ಬಿಜೆಪಿ ಇತಿಹಾಸವನ್ನು ಬೋಧಿಸಲಿದ್ದಾರೆ.
ಇದೇ ವಿವಿಯಲ್ಲಿ 2019ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಇತಿಹಾಸವನ್ನು ಬಿಎ ಪಠ್ಯಕ್ರಮದಲ್ಲಿ ಸೇರಿಸಲಾಗಿತ್ತು.
ಹೊಸ ಪಠ್ಯದಲ್ಲಿ ಜನಸಂಘ, ಭಾರತೀಯ ಜನತಾ ಪಕ್ಷದ ಕೆಲಸ ಏನು? ಪಕ್ಷವನ್ನು ಹೇಗೆ ರಚಿಸಲಾಯಿತು? ಅದು ಹೇಗೆ ಸ್ಥಿರ ಸರ್ಕಾರವನ್ನು ನೀಡಿದೆ ಇತ್ಯಾದಿಗಳನ್ನು ಬೋಧಿಸಲಾಗುತ್ತಿದೆ. ಈ ಕೋರ್ಸ್‌ನ್ನು ವಿದ್ಯಾರ್ಥಿಗಳಿಗೆ ಐಚ್ಛಿಕವಾಗಿ ಇರಿಸಲಾಗಿದೆ.
ನಾಗಪುರ ವಿವಿಯ ಈ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಭಾರತೀಯ ಜನತಾ ಪಕ್ಷದ ಇತಿಹಾಸವು ಓದಲು ಅಥವಾ ಬರೆಯಲು ಯೋಗ್ಯವಾಗಿಲ್ಲ ಎಂದು ಹೇಳಿದೆ.
ಇದನ್ನು ಓದಿ: ಮಧ್ಯಪ್ರದೇಶ: ಮಹಿಳೆಗೆ ಥಳಿಸಿದ ಗುಂಪು


