Homeಕರ್ನಾಟಕರಾಷ್ಟ್ರೀಯ ಶಿಕ್ಷಣ ನೀತಿ 2020; ಶಿಕ್ಷಕರ ಮೇಲಿನ ಪರಿಣಾಮ

ರಾಷ್ಟ್ರೀಯ ಶಿಕ್ಷಣ ನೀತಿ 2020; ಶಿಕ್ಷಕರ ಮೇಲಿನ ಪರಿಣಾಮ

- Advertisement -
- Advertisement -

ಇತ್ತೀಚಿನ ಕಾಲಘಟ್ಟದಲ್ಲಿ, ಪ್ರಪಂಚದಾದ್ಯಂತ ಶಿಕ್ಷಣವನ್ನು ಮಾನವ ಬಂಡವಾಳದ ದೃಷ್ಟಿಯಿಂದ ನೋಡಲಾಗುತ್ತಿರುವುದರಿಂದ, ಶಿಕ್ಷಣ ನೀತಿಗಳು ವಿದ್ಯಾರ್ಥಿಗಳನ್ನು ಹೊಸ ರೀತಿಯ ಕೆಲಸಗಳು ಮತ್ತು ಕಾರ್ಮಿಕ ಸಂಬಂಧಗಳಿಗಾಗಿ ತಯಾರಿಸುವ ತವಕವನ್ನು ಹೊಂದಿರುತ್ತವೆ. ಈ ರೀತಿಯಾಗಿ, ಶೈಕ್ಷಣಿಕ ನೀತಿಗಳು ಸಾಮುದಾಯಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಾದ ನ್ಯಾಯ ಮತ್ತು ಪ್ರಜಾಪ್ರಭುತ್ವಕ್ಕಿಂತ ಮಿಗಿಲಾಗಿ ಮಾರುಕಟ್ಟೆಯ ಮೌಲ್ಯಗಳು ಮತ್ತು ವ್ಯವಸ್ಥೆಯ ಸಾಮರ್ಥ್ಯದ ಮೇಲೆಯೇ ಹೆಚ್ಚು ಆಧಾರಿತವಾಗಿವೆ. (ರಿಜ್ವಿ ಮತ್ತು ಲಿಂಗಾರ್ಡ್, ’ಗ್ಲೋಬಲೈಸಿಂಗ್ ಎಜುಕೇಷನಲ್ ಪಾಲಿಸೀಸ್’ನಲ್ಲಿ, ಪುಟ 116). ಇತ್ತೀಚಿಗಿನ ಶಿಕ್ಷಣ ನೀತಿಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದಾದರೆ ನವಉದಾರವಾದಿ ಮತ್ತು ನವಸಂಪ್ರದಾಯವಾದದಲ್ಲಿ, ಆಯಾ ದೇಶಕ್ಕೆ ಸಂಬಂಧಿಸಿದಂತೆ ಪ್ರಭುತ್ವವು ಹೊಂದಿರುವ ಕೆಲವು ನಿರ್ದಿಷ್ಟ ಗುಣಲಕ್ಷಣಗಳನ್ನು ನಾವು ಮನದಲ್ಲಿ ಇರಿಸಿಕೊಳ್ಳಬೇಕು ಎಂಬುದು ಇದರರ್ಥ. ಉದಾಹರಣೆಗೆ, ಭಾರತದ ಪ್ರಭುತ್ವದಲ್ಲಾಗುತ್ತಿರುವ ಬದಲಾವಣೆಗಳಲ್ಲಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತದರ ಕವಲುಗಳನ್ನು ತೊಡಗಿಸಿಕೊಳ್ಳುವಲ್ಲಿ, ಫ್ಯಾಸಿಸ್ಟ್ ಮತ್ತು ಮೂಲಭೂತವಾದದ ಚಹರೆಗಳನ್ನು ಗಮನಿಸಬೇಕಾಗುತ್ತದೆ.

ಇತ್ತೀಚಿಗಿನ ಅಧ್ಯಯನಗಳಲ್ಲಿ, ರಾಷ್ಟ್ರಗಳು ನೇಶನ್ ಸ್ಟೇಟ್‌ನಿಂದ (nation state) ಪಾಲಿಸೆಂಟ್ರಿಕ್ ಸ್ಟೇಟ್‌ನೆಡೆಗೆ (polycentric state) ನಿರಂತರ ಬದಲಾವಣೆ ಕಾಣಸಿಗುತ್ತಿವೆ ಎಂದು ವಾದಿಸಲಾಗಿದೆ. ಇದರಿಂದಾಗಿ, ಅಂತಾರಾಷ್ಟ್ರೀಯ ಕಂಪನಿಗಳು, ಇಂಟೆರ್ ಗವರ್ನಮೆಂಟಲ್ ಸಂಸ್ಥೆಗಳೂ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆಗಳು ಹೆಚ್ಚಾಗಿ ತಮ್ಮನ್ನು ತಾವು ಆಡಳಿತ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುತ್ತಿವೆ.

ಪ್ರಭುತ್ವದ ಬಗೆಗಿನ ಈ ತಿಳುವಳಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಮತ್ತು ಶಿಕ್ಷಕರ ಮೇಲೆ ಅದರ ಪರಿಣಾಮವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

ನಮ್ಮೆಲ್ಲರಿಗೂ ತಿಳಿದಿರುವಂತೆ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜುಲೈ 29, 2020ರಂದು ಸಚಿವ ಸಂಪುಟದ ಅನುಮೋದನೆಯ ನಂತರ ಒಕ್ಕೂಟ ಸರ್ಕಾರವು ಘೋಷಿಸಿತು. ಈ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಚರ್ಚೆಗಾಗಿ ದೇಶದ ಸಂಸತ್ತಿನಲ್ಲಿ ಮಂಡಿಸದೆ, ಅಂತೆಯೇ, ಇದನ್ನು ರೂಪಿಸುವ ಪ್ರಕ್ರಿಯೆಯಲ್ಲಿ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಂಡಿಸಲಾಗಿದೆ. ಪ್ರಜಾಪ್ರಭುತ್ವದ ಪ್ರಕಿಯೆಗಳನ್ನು ಪಾಲಿಸದ ಹೊರತಾಗಿಯೂ ಈ ನೀತಿಯು, ಶಿಕ್ಷಣವನ್ನು ಸಮಗ್ರವಾಗಿ ಮತ್ತು ಚಿಕ್ಕ-ಪುಟ್ಟ ರೀತಿಯಲ್ಲಿ ಪುನರುಜ್ಜೀವನಗೊಳಿಸುತ್ತದೆ ಎಂದು ಹೇಳಲಾಗಿದೆ.

ರಾ.ಶಿ.ನೀ 2020ನ್ನು ಸಾಕಷ್ಟು ವಿಚಾರಗಳಿಗೆ ವಿಮರ್ಶಾತ್ಮಕ ಟೀಕೆಗೆ ಒಳಪಡಿಸಿ, ಸರ್ಕಾರವು ಹಾಡ-ಹಗಲಿನಲ್ಲೇ ಜನರಿಗೆ ಎಸಗುತ್ತಿರುವ ದ್ರೋಹವನ್ನು ದೇಶದ ಜನತೆಯ ಮುಂದೆ ಬಹಿರಂಗಪಡಿಸಬೇಕಿದೆಯಾದರೂ ಈ ಲೇಖನವು, ರಾ.ಶಿ.ನೀ 2020 ಶಿಕ್ಷಕರ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂಬುದಕ್ಕೆ ಸೀಮಿತವಾಗಿದೆ.

ಶಿಕ್ಷಕರು ಕನಿಷ್ಠ ಪಕ್ಷ ರಾ.ಶಿ.ನೀ 2020ರಲ್ಲಿ, ವಿದ್ಯಾರ್ಥಿಗಳು ಮತ್ತು ಪೋಷಕರ ನಂತರದ ಮೂರನೇ ಅತಿಮುಖ್ಯ ಪಾಲುದಾರರಾಗಿದ್ದಾರೆ. ಅವರ ಮೇಲೆ ಈ ನೀತಿ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ 1950ರ ದಶಕದಲ್ಲಿ ಹೆರಾಲ್ಡ್ ಲಾಸ್‌ವೆಲ್ ರಾಜಕೀಯದ ಬಗ್ಗೆ ನೀಡಿದ ’ಯಾರಿಗೆ ಏನು? ಯಾವಾಗ? ಮತ್ತು ಹೇಗೆ ಸಿಗುತ್ತದೆ ಎನ್ನುವುದೇ ರಾಜಕೀಯ’ ಎಂಬ ವ್ಯಾಖ್ಯಾನವನ್ನು ಬಳಸಿಕೊಳ್ಳಬಹುದಾಗಿದೆ.

ರಾ.ಶಿ.ನೀ 2020ರಲ್ಲಿ ಶಿಕ್ಷಕರ ಸೇವಾ ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಲಾಗಿದೆ? ಶಿಕ್ಷಕರಿಗೆ ಇದು ಕೆಲಸದ ಖಾಯಮಾತಿಯನ್ನು ಒದಗಿಸುತ್ತದೆಯೆ? ಶಿಕ್ಷಕರಿಗೆ ಇದು ಸುಗಮ ಹಣಕಾಸು ವ್ಯವಸ್ಥೆಯನ್ನು ಒದಗಿಸುತ್ತದೆಯೇ? ಶಿಕ್ಷಕರಿಗೆ ಇದು ಪಾರದರ್ಶಕ ಮತ್ತು ಅಡೆತಡೆಯಿಲ್ಲದ ಮುಂಬಡ್ತಿ ವ್ಯವಸ್ಥೆಯನ್ನು ನೀಡುತ್ತದೆಯೇ? ಶಿಕ್ಷಕರಿಗೆ ಶೈಕ್ಷಣಿಕ ಸ್ವಾತಂತ್ರ್ಯವನ್ನು ಒದಗಿಸುತ್ತದೆಯೇ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಆಡಳಿತಾತ್ಮಕ ಅಧಿಕಾರಿಗಳ ನಿಗ್ರಹದಿಂದ ಇದು ಶಿಕ್ಷಕರನ್ನು ರಕ್ಷಿಸುತ್ತದೆಯೇ? ರಾ.ಶಿ.ನೀ 2020ರಲ್ಲಿರುವ, ಶಿಕ್ಷಕರಿಗೆ ಸಂಬಂಧಿಸಿದ ನಿಬಂಧನೆಯನ್ನು ಈಗ ನಾವು ಪರಿಶೀಲಿಸೋಣ.

ಈ ಹಿಂದಿನ ಶಿಕ್ಷಣ ನೀತಿಗಳೂ ಶಿಕ್ಷಕರ ಮಹತ್ವವನ್ನು ಒಪ್ಪಿಕೊಂಡಿವೆ ಎಂಬ ವಾಸ್ತವವನ್ನು ಗುರುತಿಸದೆ, ರಾ.ಶಿ.ನೀ 2020ರಲ್ಲಿ ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ಮೊಟ್ಟ ಮೊದಲ ಬಾರಿಗೆ ಶಿಕ್ಷಕರಿಗೆ ಅತ್ಯಂತ ಮುಖ್ಯವಾದ ಸ್ಥಾನವನ್ನು ನೀಡಿದೆ ಎಂದು ತೋರ್ಪಡಿಸಲು ಹವಣಿಸುತ್ತದೆ. ರಾ.ಶಿ.ನೀ 2020ರಲ್ಲಿ ಉಲ್ಲೇಖಿಸಿದಂತೆ “ಶಿಕ್ಷಣ ವ್ಯವಸ್ಥೆಯ ಸುಧಾರಣೆಯಲ್ಲಿ ಶಿಕ್ಷಕರು ಕೇಂದ್ರ ಬಿಂದು ಆಗಿರಬೇಕಾಗುತ್ತದೆ. ಶಿಕ್ಷಕರು ಮುಂದಿನ ಪೀಳಿಗೆಯನ್ನು ರೂಪಿಸುವುದರಿಂದ ಹೊಸ ಶಿಕ್ಷಣ ನೀತಿಯು ಎಲ್ಲಾ ಸ್ಥರದ ಶಿಕ್ಷಕರನ್ನು, ಸಮಾಜದ ಅತ್ಯಂತ ಗೌರವಯುತ ಮತ್ತು ಪ್ರಮುಖವಾದ ವ್ಯಕ್ತಿಗಳನ್ನಾಗಿ ಪುನರ್ ಸ್ಥಾಪಿಸಬೇಕಿದೆ. ಶಿಕ್ಷಕರನ್ನು ಸಬಲೀಕರಿಸಲು ಮತ್ತು ಅವರು ತಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲಿಕ್ಕೆ ಈ ಶಿಕ್ಷಣ ನೀತಿಯು ಎಲ್ಲವನ್ನೂ ಮಾಡಬೇಕಿದೆ. ಹೊಸ ಶಿಕ್ಷಣ ನೀತಿಯು ಅತ್ಯುತ್ತಮರು ಮತ್ತು ಪ್ರತಿಭಾವಂತರು ಎಲ್ಲಾ ಸ್ಥರದ ಶಿಕ್ಷಣ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು, ಅವರಿಗೆ ಜೀವನೋಪಾಯ, ಘನತೆ-ಗೌರವ, ಸ್ವಾಯತ್ತತೆಯನ್ನು ನೀಡುತ್ತಾ ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಉತ್ತರದಾಯಿತ್ವವನ್ನು ಬೆಳಸುವ ಮೂಲಕ ಪೂರಕವಾದ ವ್ಯವಸ್ಥೆಯನ್ನು ಕಟ್ಟಿಕೊಡಬೇಕಿದೆ”.

ಇದು ಬಹಳ ಪ್ರಗತಿಪರವಾಗಿ ಮತ್ತು ಶಿಕ್ಷಕ ವೃತ್ತಿಯ ಘನತೆಯನ್ನು ಎತ್ತಿಹಿಡಿಯಲಿಕ್ಕೆ ಪ್ರಯತ್ನಿಸಿದಂತೆ ಕಂಡುಬರುತ್ತದೆ.

ಆದರೆ ಇದನ್ನು ಒಳಹೊಕ್ಕು ನೋಡಿದಾಗ, ಶಿಕ್ಷಕರನ್ನು ರಾಜಕಾರಣಿಗಳ, ಅಧಿಕಾರಿಗಳ (bureaucrat), ಖಾಸಗಿ ಮತ್ತು ಕಾರ್ಪೊರೇಟ್‌ಗಳ ಅಧೀನಕ್ಕೊಳಪಡಿಸಲು ಹೆಣೆಯಲಾಗಿರುವ ಒಳಸಂಚು ತೆರೆದುಕೊಳ್ಳುತ್ತದೆ. ಮೇಲಿನ ಉಲ್ಲೇಖದಲ್ಲೇ ಗುಣಮಟ್ಟ ಎಂಬ ಪದವು ಕಾರ್ಪೊರೇಟ್ ಶೈಲಿಯ ಆಡಳಿತವನ್ನು ಸೂಚಿಸುತ್ತದೆ. ಇದರಲ್ಲಿ ಎಲ್ಲರೂ ಕೇವಲ ಯಂತ್ರದ ಒಂದೊಂದು ಭಾಗಗಳು ಮಾತ್ರ, ಹೆಚ್ಚೇನೂ ಅಲ್ಲ!

ಶಿಕ್ಷಕರನ್ನು ಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳುವುದು ಮತ್ತು ಅವರ ಸೇವೆಯನ್ನು ಅತ್ಯಂತ ಅಮಾನವೀಯವಾದ ನಿಯಮಗಳಿಗೆ ಒಳಪಡಿಸುವ ಧೋರಣೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇದೆಲ್ಲದರ ಬಗ್ಗೆ ರಾ.ಶಿ.ನೀ 2020 ಮೌನವಹಿಸಿದ್ದು, ಯಥಾಸ್ಥಿತಿ ಮುಂದುವರೆಯುವ, ಮತ್ತು ಶಿಕ್ಷಕರ ಜೀವನದಲ್ಲಿ ಇಂದಾಗುತ್ತಿರುವ ಮತ್ತು ಮುಂದೆ ಹೆಚ್ಚಲಿರುವ ಮಾನಸಿಕ ಸಮಸ್ಯೆಗಳನ್ನು ಸೂಚಿಸುವಂತಿದೆ.

ರಾ.ಶಿ.ನೀ 2020ರಲ್ಲಿ, ಶಿಕ್ಷಕರ ಸೇವೆಗಳ ಪಾತ್ರ, ಷರತ್ತು ಹಾಗು ನಿಬಂಧನೆಗಳನ್ನು ಚರ್ಚಿಸಲು ಮೂರು ಅಧ್ಯಾಯಗಳನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ. ಅವುಗಳಲ್ಲಿ ಎರಡು ಅಧ್ಯಾಯಗಳಾದ ’ಪ್ರೇರೇಪಿತ, ಶಕ್ತಿಯುತ ಮತ್ತು ಸಮರ್ಥ ಅಧ್ಯಾಪಕರು’ಎಂಬ ಹದಿಮೂರನೇ ಅಧ್ಯಾಯ ಮತ್ತು ’ಶಿಕ್ಷಕರ ಶಿಕ್ಷಣ’ ಎಂಬ ಹದಿನೈದನೇ ಅಧ್ಯಾಯವನ್ನು ಉನ್ನತ ಶಿಕ್ಷಣದ ವಿಭಾಗದಲ್ಲಿ ಹಾಗು ’ಶಿಕ್ಷಕರು’ ಎಂಬ ಐದನೇ ಅಧ್ಯಾಯವನ್ನು ಶಾಲಾ ಶಿಕ್ಷಣದ ವಿಭಾಗದಲ್ಲಿ ಇರಿಸಲಾಗಿದೆ. ಈ ಅಧ್ಯಾಯಗಳನ್ನು ಸೂಕ್ಷ್ಮವಾಗಿ ಗಮನಿಸಿದಲ್ಲಿ ಮೇಲೆ ತಿಳಿಸಿದ ಮೂರೂ ಅಧ್ಯಾಯಗಳಲ್ಲಿ ’ಶಿಕ್ಷಕರು’ ಎಂಬ ಐದನೆಯ ಅಧ್ಯಾಯದ ಗಣನೀಯ ಭಾಗಗಳನ್ನು ಪುನರಾವರ್ತಿಸಲಾಗಿದೆ ಎಂಬುದು ತಿಳಿಯುತ್ತದೆ. ಇದರಲ್ಲಿ ಶಿಕ್ಷಕರ ಸೇವೆಗಳಿಗೆ ಸಂಬಂಧಿಸಿದ ಕೆಲವು ನಿರ್ದಿಷ್ಟ ನಿಬಂಧನೆಗಳಿವೆ ಮತ್ತು ಇವುಗಳಲ್ಲಿ ಶಿಕ್ಷಕರ ವೃತ್ತಿಯ ಬಗ್ಗೆ ಇರುವ ಹುಂಬತನದ ಪೂರ್ವಾಗ್ರಹ ಖಂಡಿತವಾಗಿಯೂ ಶಿಕ್ಷಕರ ಜೀವನದಿಂದ ಮಾನಸಿಕ ಶಾಂತಿಯನ್ನು ದೂರ ಮಾಡುವಂತಹದ್ದಾಗಿದೆ.

ಉದಾಹರಣೆಗೆ, ರಾ.ಶಿ.ನೀ 2020ರಲ್ಲಿ ಪಾಯಿಂಟ್ 5.5 ರನಲ್ಲಿ ಹೀಗೆ ಪ್ರಸ್ತಾಪಿಸಲಾಗಿದೆ: “ವಿಷಯಗಳಾದ್ಯಂತ ಅಗತ್ಯವಿರುವಷ್ಟು ಶಿಕ್ಷಕರ ಸಂಖ್ಯೆಯನ್ನು ಖಾತ್ರಿಪಡಿಸಿಕೊಳ್ಳಲು ಅದರಲ್ಲೂ ವಿಶೇಷವಾಗಿ ಕಲೆ, ದೈಹಿಕ ಶಿಕ್ಷಣ, ಔದ್ಯೋಗಿಕ ಶಿಕ್ಷಣ ಮತ್ತು ಭಾಷೆಗಳು ಮುಂತಾದ ವಿಷಯಗಳಲ್ಲಿ – ಶಾಲೆ ಅಥವಾ ಶಾಲಾ ಸಂಕೀರ್ಣಗಳಿಗೆ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಮತ್ತು ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ನಿಗದಿ ಮಾಡುವಂತೆ ಶಾಲಾ-ಗುಂಪುಗಳಿಗೆ ಅನುಗುಣವಾಗಿ ಶಿಕ್ಷಕರ ಹಂಚಿಕೆ ಆಗಬೇಕು”. ಅಂದರೆ, ಕಲೆ, ಕೌಶಲ್ಯ ಮತ್ತು ದೈಹಿಕ ಶಿಕ್ಷಣ, ಮತ್ತು ಭಾಷೆಗಳು ಸೇರಿದಂತೆ ಕೆಲವು ವಿಷಯಗಳ ಶಿಕ್ಷಕರು ಶಾಲಾ ಸಂಕೀರ್ಣ ಅಥವಾ ಶಾಲಾ-ಗುಂಪುಗಳ ಮಟ್ಟದಲ್ಲಿ ನೇಮಕಗೊಳ್ಳುತ್ತಾರೆ ಮತ್ತು ಅವರು ವಿವಿಧ ಶಾಲೆಗಳಿಗೆ ಅಲೆಯಬೇಕಾಗುತ್ತದೆ. ಇದರಿಂದಾಗಿ, ಅವರು ಯಾವೊಂದೂ ಶಾಲೆಯ ಮಕ್ಕಳೊಂದಿಗೆ ನಿರಂತರ ಸಂಪರ್ಕವನ್ನು ಸಾಧಿಸಲಾಗುವುದಿಲ್ಲ. ಇದು ಮಕ್ಕಳ ಶಿಕ್ಷಣವನ್ನು ಕುಂದಿಸುವುದು ಖಚಿತವಾಗಿದೆ ಮತ್ತು ಶಿಕ್ಷಕರ ನೌಕರಿಯ ಕೆಲಸದೊತ್ತಡ ನಿರಂತರವಾಗಿರುತ್ತದೆ.

ರಾ.ಶಿ.ನೀ 2020ರ ಪಾಯಿಂಟ್ 5.10ರಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪರಿಣಾಮಕಾರಿ ಶಾಲಾ ಆಡಳಿತಕ್ಕಾಗಿ, ಸಂಪನ್ಮೂಲಗಳನ್ನು ಹಂಚಿಕೊಳ್ಳುವುದ್ದಕ್ಕಾಗಿ, ಸಮುದಾಯ ನಿರ್ಮಾಣಕ್ಕಾಗಿ, ಪ್ರವೇಶಾವಕಾಶವನ್ನು ಕಡಿತಗೊಳಿಸದೆ ಶಾಲಾ ಸಂಕೀರ್ಣ, ಸ್ಕೂಲ್ ರಾಷನಲೈಸೇಷನ್ ಸೇರಿದಂತೆ ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ವಾಸ್ತವವಾಗಿ ಸ್ಕೂಲ್ ರಾಷನಲೈಸೇಷನ್ ಎಂದರೆ ಶಾಲೆಗಳನ್ನು ಸ್ಥಳಾಂತರಿಸುವುದು ಮತ್ತು ಮುಚ್ಚುವುದೇ ಆಗಿದೆ. ಇದರಿಂದಾಗಿ ಬಹಳಷ್ಟು ಶಿಕ್ಷಕರು ಕೆಲಸ ಕಳೆದುಕೊಳ್ಳುತ್ತಾರೆ ಅಥವಾ ಅರೆ ನೌಕರರಾಗಬೇಕಾಗುತ್ತದೆ. ಇದಲ್ಲದೆ, ಈ ನೀತಿ ಸ್ಕೂಲ್ ರಾಷನಲೈಸೇಷನ್ ವರ್ಗಾವಣೆಯನ್ನು ಪದೇ ಪದೇ ಒತ್ತಾಯಿಸುತ್ತದೆ ಮತ್ತು ಶಿಕ್ಷಕರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಖಿನ್ನರನ್ನಾಗಿಸುತ್ತದೆ.

ಶಿಕ್ಷಕರಿಗೆ, ’ಸದೃಢವಾದ – ಅರ್ಹತೆಯಾಧಾರಿತ ಅಧಿಕಾರಾವಧಿ, ಬಡ್ತಿ ಮತ್ತು ವೇತನವನ್ನು ನೀಡಲಾಗುವ ವ್ಯವ್ಯಸ್ಥೆಯೊಂದನ್ನು ಕಟ್ಟಿಕೊಳ್ಳುವುದನ್ನು ರಾ.ಶಿ.ನೀ 2020, ತನ್ನ ಪ್ರಸ್ತಾಪಕ್ಕೆ ನವೀನ ಕಲ್ಪನೆಯ ಕೇಂದ್ರಬಿಂದುವನ್ನಾಗಿ ಪರಿಗಣಿಸಿದೆ. ಅರ್ಹತೆ ಆಧಾರಿತವಾಗಿ ಸಂಬಳ ಮತ್ತು ಅತ್ಯುತ್ತಮ ಕೆಲಸ ಮಾಡುವ ಶಿಕ್ಷಕರು ಅದೇ ಕೇಡರ್‌ನಲ್ಲಿ ಉಳಿದು ಹೆಚ್ಚಿನ ಸಂಬಳ ಪಡೆಯಬಹುದು ಎಂದು ಹೇಳುತ್ತದೆ. (ಇದರಲ್ಲಿ ಹೇಳಿರುವ ಪ್ರಕಾರ ಈಗಿನ ವ್ಯವಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಕರಿಗೆ ಮುಂಬಡ್ತಿ ನೀಡಲು ವ್ಯವಸ್ಥೆಯೇ ಇಲ್ಲ ಎಂದು ಬಿಂಬಿಸುತ್ತದೆ. ಈ ನೀತಿಯ ಹೊಗಳುಭಟ್ಟರು ಈ ನೀತಿಯು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಹಳ ಉಪಯುಕ್ತವಾದದ್ದು ಎಂದು ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.) ಆದರೆ, ಇದಕ್ಕೆ ಪೂರಕವಾಗಿ, ಈ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ಹೇಗೆ ತರಲಾಗುತ್ತದೆ ಎಂದು ರಾ.ಶಿ.ನೀ 2020 ತಿಳಿಸಿಲ್ಲ.

ಈ ನೀತಿಯು ಶಿಕ್ಷಕರಿಗೆ ಸೀನಿಯಾರಿಟಿ ಆಧಾರಿತ ಮುಂಬಡ್ತಿ ಮತ್ತು ವೇತನ ಹೆಚ್ಚಳಕ್ಕೆ ಬದಲಾಗಿ ಕೆಲಸ ನಿರ್ವಹಣೆಯ ಮೌಲ್ಯಮಾಪನ ಆಧಾರಿತ ವ್ಯವಸ್ಥೆಯನ್ನು ಪ್ರಸ್ತಾಪಿಸುತ್ತದೆ. ಇದರ ಪ್ರಕಾರ, “ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ಅನೇಕ ಮಾನದಂಡ ಆಧಾರಿತ ಮೌಲ್ಯಮಾಪನ ವ್ಯವಸ್ಥೆಯನ್ನು ಪೀರ್ ರಿವ್ಯೂ (ಒಬ್ಬರಿಗೆ ಸಹೋದ್ಯೋಗಿಗಳು ನೀಡುವ ಅಂಕಗಳು), ಹಾಜರಾತಿ, ಬದ್ಧತೆ, Continuous Professional Developmentಗಾಗಿ ವ್ಯಯಿಸಿದ ಘಂಟೆಗಳು ಮತ್ತು ಶಾಲೆಗೆ ಅಥವಾ ಸಮುದಾಯಕ್ಕೆ ನೀಡಿದ ಕೊಡುಗೆಯ
ಆಧಾರದಲ್ಲಿ ಅಥವಾ National Professional Standards for Teachersನ ಆಧಾರದ ಮೇಲೆ ರೂಪಿಸುತ್ತವೆ. ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ ಮೇಲೆ ಗುರುತಿಸಲಾದ ಬಹಳಷ್ಟು ಮಾನದಂಡಗಳು ವಸ್ತುನಿಷ್ಠತೆಗೆ ಸಂಬಂಧಿಸಿಲ್ಲ.

ಬದಲಿಗೆ, ಸಂಪೂರ್ಣವಾಗಿ ತಕ್ಷಣದ ಮೇಲಧಿಕಾರಿಗಳು ಮತ್ತು ಅಧಿಕಾರಶಾಹಿಗಳ ಹುಚ್ಚಾಟಿಕೆಯ ಅನಿಸಿಕೆಗಳ ಮೇಲೆ ಆಧಾರಿತವಾಗಿದೆ. ಇಲ್ಲಿ, ಮೇಲಾಧಿಕಾರಿಗಳು ಶಿಕ್ಷಕರನ್ನು ತಮ್ಮಿಚ್ಛೆಯಂತೆ ಮೌಲ್ಯಮಾಪನಕ್ಕೊಳಪಡಿಸಿ ತಮ್ಮ ಅಧೀನಕ್ಕೆ ಒಳಪಡಿಸಲು ಎಡೆ ಮಾಡಿಕೊಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಶಿಕ್ಷಕರ ಬಗ್ಗೆ ಅಸಮಾಧಾನ ಹೊಂದಿದ್ದರೆ, ಈ ನೀತಿಯನ್ನು ಬಳಸಿ ಅವರ ಮುಂಬಡ್ತಿ ಮತ್ತು ವೇತನ ಹೆಚ್ಚಳವನ್ನು ತಡೆ ಹಿಡಿಯಬಹುದಾಗಿರುತ್ತದೆ. ಇಂದು ಅಸ್ತಿತ್ವದಲ್ಲಿರುವ ಸರ್ವಾಧಿಕಾರಿ ಧೋರಣೆಯ ಹಿನ್ನೆಲೆಯಲ್ಲಿ ಪ್ರಭುತ್ವವು ಮತ್ತು ಮೇಲಾಧಿಕಾರಿಗಳು ತನ್ನ ಸಿದ್ಧಾಂತವನ್ನು ಒಪ್ಪದ, ಪಾಲಿಸದ ಯಾವುದೇ ಶಿಕ್ಷಕರನ್ನು ಈ ನೀತಿ ಬಳಸಿ ಶಿಕ್ಷಿಸಬಹುದಾಗಿದೆ. ಅಲ್ಲದೆ, ಪಾಯಿಂಟ್ 5.20ಯು, ಈ ರೀತಿಯ ಮೌಲ್ಯಮಾಪನವನ್ನು ಎಲ್ಲಾ ಸ್ಥರದಲ್ಲೂ ರೂಪಿಸಲಾಗುತ್ತದೆ ಎಂದು ತಿಳಿಸುತ್ತದೆ.

ಇನ್ನೂ ಮುಂದೆ ಸಾಗಿ, ’ಮುಂಬಡ್ತಿಗಳು ಮತ್ತು ವೇತನ ಹೆಚ್ಚಳವು ಅಧಿಕಾರಾವಧಿ ಅಥವಾ ಸೀನಿಯಾರಿಟಿಗಳ ಆಧಾರದ ಮೇಲೆ ಸಂಭವಿಸುವುದಿಲ್ಲ, ಬದಲಿಗೆ ಇಂತಹ ಮೌಲ್ಯಮಾಪನದ ಆಧಾರದ ಮೇಲೆ ಮಾತ್ರ ಆಧಾರಿತವಾಗಿರುತ್ತವೆ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಇದು ಸ್ಪಷ್ಟವಾಗಿ ಶಿಕ್ಷಕರು ಶಾಶ್ವತ ಸೇವಾ ಅವಧಿಯನ್ನು ಹೊಂದಿದ ದಿನಗಳು ಕಳೆದು ಹೋಗಿವೆ ಮತ್ತು ಶಿಕ್ಷಕರ ಹೊಸ ವೃತ್ತಿ ನಿರ್ವಹಣಾ ವ್ಯವಸ್ಥೆಯು ಸಂಪೂರ್ಣವಾಗಿ ಕಾರ್ಪೊರೇಟ್ ಶೈಲಿಯ ನಿರ್ವಹಣೆಗೆ ಅನುಗುಣವಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ. ಇದು ವಾಸ್ತವವಾಗಿ ಪ್ರತಿಯೊಬ್ಬ ಶಿಕ್ಷಕರನ್ನು ದಿನಗೂಲಿ ಕಾರ್ಮಿಕರನ್ನಾಗಿಸುತ್ತದೆ. ಇದು, ಇಂದು ಆಡಳಿತ ನಡೆಸುತ್ತಿರುವ ಹಿಂದೂ ಶ್ರೇಷ್ಠತೆಯ ಸಿದ್ಧಾಂತದ ಜೊತೆಗೂಡಿ ಶಿಕ್ಷಕರನ್ನು ಇನ್ನೂ ಹೆಚ್ಚು ಶೋಷಿಸುತ್ತದೆ. ಇದೆಲ್ಲಕ್ಕಿಂತ ಹೆಚ್ಚು ಗಂಭೀರವಾದ ವಿಷಯವೆಂದರೆ, ರಾ.ಶಿ.ನೀ 2020 ನೇರವಾಗಿಯಾಗಲೀ ಅಥವಾ ಪರೋಕ್ಷವಾಗಿಯಾಗಲೀ ಶಿಕ್ಷಕರ ಸಂಘಟನೆಗಳು ಮತ್ತು ಶಿಕ್ಷಕರ ಒಕ್ಕೂಟಗಳ ಅಸ್ತಿತ್ವವನ್ನು ಗುರುತಿಸಿಯೂ ಇಲ್ಲ. ಬದಲಿಗೆ, ಈ ನೀತಿಯನ್ನು ಬಳಸಿ ಈಗಿನ ಅಧಿಕಾರಶಾಹಿ ವರ್ಗವು ಇವೆಲ್ಲಾ ಒಕ್ಕೂಟ ಮತ್ತು ಸಂಘಟನೆಗಳನ್ನು ಒಂದೇ ಬಾರಿಗೆ ನಿರ್ಬಂಧಿಸುವ ಅಪಾಯವಿದೆ.

ಈ ರೀತಿಯಲ್ಲಿ, ರಾ.ಶಿ.ನೀ 2020 ಎಂಬ ಬಹಳ ಅಪಾಯಕಾರಿ ವಿಷದುಂಡೆಗೆ, ಸುಳ್ಳು ಭರವಸೆಗಳೆಂಬ ಸಕ್ಕರೆಯನ್ನು ಲೇಪಿಸಿ ಶಿಕ್ಷರಿಗೆ, ಮಕ್ಕಳಿಗೆ ಮತ್ತು ಇಡೀ ದೇಶಕ್ಕೆ ಉಣಬಡಿಸಲಾಗುತ್ತಿದೆ.

ಕನ್ನಡಾನುವಾದ: ಶಶಾಂಕ್ ಎಸ್ ಆರ್

ರಾಮಮೂರ್ತಿ ಶರ್ಮ

ರಾಮಮೂರ್ತಿ ಶರ್ಮ
ಇವರು ದೆಹಲಿ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದು ಅವರ ವೈಯಕ್ತಿಕ ನಿಲುವಾಗಿದೆ.


ಇದನ್ನೂ ಓದಿ: ರಾಶ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020: ಹಿಂದು-ಮುಂದು

ಇದನ್ನೂ ಓದಿ: ಬಹುಜನ ಭಾರತ; ದಲಿತ ಬರೆಹಗಳ ಹೊರದಬ್ಬಿದ ದೆಹಲಿ ವಿವಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...